More

    ಕಾರ್ಯವೈಖರಿಯಲ್ಲಿ ಜಿಲ್ಲಾಡಳಿತ ವಿಫಲ

    ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಅಧಿಕಾರಾವಧಿಯ ಎರಡನೇ ಇನ್ನಿಂಗ್ಸ್‌ನ, 2ನೇ ವರ್ಷಕ್ಕೆ ಕಾಲಿಟ್ಟಿರುವ ಸಂದರ್ಭ ಸಂಸದ ಎ.ನಾರಾಯಣಸ್ವಾಮಿ ಚಿತ್ರದುರ್ಗ ಜಿಲ್ಲಾಡಳಿತದ ವಿರುದ್ಧ ಬಹಿರಂಗವಾಗಿ ತೀವ್ರ ಅಸಮಾಧಾನ ಹೊರಹಾಕುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನ್ನ ನಿರೀಕ್ಷೆಗೆ ತಕ್ಕಂತೆ ಜಿಲ್ಲೆಯಲ್ಲಿ ಆಡಳಿತ ನಡೆಯುತ್ತಿಲ್ಲ. ಶಾಲೆ, ಅಂಗನವಾಡಿ ಕಟ್ಟಡಗಳು ಹಾಗೂ ದುಡಿವ ಕೈಗಳಿಗೆ ಉದ್ಯೋಗ ಕೊಡಲು ಅಗತ್ಯ ಸಂಖ್ಯೆಯ ಕೈಗಾರಿಕೆಗಳು ಇಲ್ಲಿ ಇಲ್ಲ. ಅರ್ಹರಿಗೆ ಸಾಗುವಳಿ ಚೀಟಿ ಹಾಗೂ ಅರ್ಹ ಫಲಾನುಭವಿಗಳಿಗೆ ಮನೆ ಹಕ್ಕುಪತ್ರ ಕೊಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಅರ್ಧ ಎಕರೆಗೆ ಅನುಮತಿ ಪಡೆದು ಐದಾರು ಎಕರೆ ಅರಣ್ಯಭೂಮಿ ಒತ್ತುವರಿ ಮಾಡಿರುವ ಕೆಲ ಪವನ ವಿದ್ಯುತ್ ಉತ್ಪಾದನಾ ಕಂಪನಿಗಳ ವಿರುದ್ಧ ಡಿಸಿ ಅಥವಾ ಅರಣ್ಯಾಧಿಕಾರಿ ಕ್ರಮ ಜರುಗಿಸಿಲ್ಲ ಎಂದು ದೂರಿದರು.

    ಸೋಲಾರ್, ವಿಂಡ್‌ಮಿಲ್, ಗಣಿಗಾರಿಕೆ ಮತ್ತಿತರ ಕಂಪನಿಗಳು ಸಾಮಾಜಿಕ ಹೊಣೆಗಾರಿಕೆ ಮರೆತಿವೆ. ಜಿಲ್ಲಾಡಳಿತ ಹಾಗೂ ನಾನು ಕರೆದ ಸಭೆಗಳಿಗೆ ಈ ಕಂಪನಿಗಳ ಪ್ರಮುಖರು ಹಾಜರಾಗುತ್ತಿಲ್ಲ. ಜಿಲ್ಲೆಯಲ್ಲಿ ಜಮಾಬಂಧಿ ನಡೆದಿಲ್ಲ ಎಂದು ಹೇಳಿದರು.

    ಮಂಜೂರಾಗಿದ್ದರೂ ಸರ್ಕಾರಿ ಮೆಡಿಕಲ್ ಕಾಲೇಜು ಆರಂಭಕ್ಕೆ ಚಾಲನೆ ಸಿಕ್ಕಿಲ್ಲ. ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಯೋಜನೆ ಪೂರ್ಣಗೊಂಡಿಲ್ಲ. ಆದರೂ ಯಾಕೊ ಏನೋ ಎಲ್ಲರೂ ಸುಮ್ಮನಿದ್ದಾರೆ ಎಂದು ಬೇಸರಿಸಿದರು.

    ನೇರ ರೈಲು ಮಾರ್ಗ ಅನುಷ್ಠಾನಕ್ಕೆ ಸಚಿವ ಸುರೇಶ್ ಅಂಗಡಿ ಒಪ್ಪಿದ್ದಾರೆ. ಭದ್ರಾ ಮೇಲ್ದಂಡೆ, ತುಂಗಾಭದ್ರ ಹಿನ್ನೀರು ಸೇರಿ ಜಿಲ್ಲೆ ಹಾಗೂ ಶಿರಾ, ಪಾವಗಡಕ್ಕೆ ನೀರಿನ ಸಮಸ್ಯೆ ಬಗೆಹರಿಸಲು ಶ್ರಮಿಸುತ್ತೇನೆ ಎಂದು ಹೇಳಿದರು.

    ಅಭಿವೃದ್ಧಿಗೆ ಸಂಬಂಧಿಸಿದಂತೆ ಡಿಸಿಎಂ ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರೊಂದಿಗೆ ಸಭೆ ನಡೆಸಲಾಗುವುದು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗಮನಕ್ಕೂ ಇಲ್ಲಿನ ಸಮಸ್ಯೆಗಳನ್ನು ತರುವುದಾಗಿ ತಿಳಿಸಿದರು.

    ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ನಗರ ಮಂಡಲ ಅಧ್ಯಕ್ಷ ಶಶಿಕುಮಾರ್, ಗ್ರಾಮಾಂತರ ಅಧ್ಯಕ್ಷ ನಂದಿ ನಾಗರಾಜ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್, ವಕ್ತಾರರಾದ ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್, ಕಾರ್ಯದರ್ಶಿ ಮೋಹನ್ ಇದ್ದರು.

    ಮೋದಿ ವಿಶ್ವಕ್ಕೆ, ಬಿಎಸ್‌ವೈ ರಾಜ್ಯಕ್ಕೆ ಮಾದರಿ: ನರೇಂದ್ರ ಮೋದಿ ಸಾಧನೆಗಳನ್ನು ಸ್ಮರಿಸಿದ ಸಂಸದ ನಾರಾಯಣಸ್ವಾಮಿ, ಕರೊನಾ ಹತೋಟಿ ನಿಟ್ಟಿನಲ್ಲಿ ಮೋದಿ ವಿಶ್ವಕ್ಕೆ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೇಶಕ್ಕೆ ಮಾದರಿಯಾಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿಶೇಷ ಪ್ಯಾಕೇಜ್ ದುರ್ಬಳಕೆ ಆಗದಂತೆ ಎರಡೂ ಸರ್ಕಾರಗಳು ಕಟ್ಟೆಚ್ಚರ ವಹಿಸಿವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts