More

    ತಿಂಗಳೊಳಗೆ ನವಜಾತ ಶಿಶುಗಳ ಶ್ರವಣ ಪರೀಕ್ಷೆ ಅಗತ್ಯ

    ಚಿತ್ರದುರ್ಗ: ಕಿವುಡುತನದ ತೊಂದರೆಗೆ ಆತಂಕ ಪಡುವ ಅಗತ್ಯವಿಲ್ಲವೆಂದು ಜಿಲ್ಲಾಸ್ಪತ್ರೆ ಕಿವಿ, ಮೂಗು, ಗಂಟಲು ತಜ್ಞ ಡಾ.ರವೀಂದ್ರ ಹೇಳಿದರು. ನಗರದ ಜಿಲ್ಲಾಸ್ಪತ್ರೆ ಬಿ.ಸಿ.ರಾಯ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮದಲ್ಲಿ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು.

    3-4 ತಿಂಗಳಿನ ಭ್ರೂಣಕ್ಕೆ ಕೇಳಿಸಿಕೊಳ್ಳುವ ಸಾಮರ್ಥ್ಯವಿರುತ್ತದೆ. ನವಜಾತ ಶಿಶುಗಳಿಗೆ ಜನಿಸಿದ ಒಂದು ತಿಂಗಳೊಳಗೆ ಕಿವಿ ಪರೀಕ್ಷೆ ಆಗಬೇಕು. ಎಲ್ಲ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳು, ತಾಲೂಕು ಹಾಗೂ ಜಿಲ್ಲಾಸ್ಪತ್ರೆಗಳಲ್ಲಿ ಶ್ರವಣ ದೋಷ ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುತ್ತದೆ.

    ಶ್ರವಣ ದೋಷ ನಿಯಂತ್ರಣ ನಿಟ್ಟಿನಲ್ಲಿ ಮೂಢ ನಂಬಿಕೆಗಳನ್ನು ಅನುಸರಿಸಬಾರದು. ಕಿವಿಗೆ ಕಾಯಿಸಿದ ಎಣ್ಣೆ ಬಿಡುವುದು, ಕಡ್ಡಿ ಹಾಕಬಾರದು. ಮಕ್ಕಳು, ವಯಸ್ಕರಲ್ಲಿ ಪ್ರಾಥಮಿಕ ಹಂತದಲ್ಲೇ ದೋಷ ಪತ್ತೆಹಚ್ಚಿ ಚಿಕಿತ್ಸೆ ನೀಡಿದರೆ ಕಿವುಡುತನ ನಿವಾರಿಸಿ ಮುಖ್ಯವಾಹಿನಿಗೆ ತರಬಹುದು. ವಿಶ್ವ ಆರೋಗ್ಯ ಸಂಸ್ಥೆ ಮಾರ್ಚ್ 3 ನ್ನು ವಿಶ್ವ ಶ್ರವಣ ದಿನವೆಂದು ಘೋಷಿಸಿದೆ. ಕಿವುಡುತನ ನಿಯಂತ್ರಣ ಹಾಗೂ ಶ್ರವಣದೋಷ ಮಿತಿಗೊಳಿಸುವುದು ಕಾರ್ಯಕ್ರಮದ ಉದ್ದೇಶ.

    ಅನುವಂಶೀಯತೆ, ಡಿಜೆ ಸೌಂಡ್, ತೀವ್ರತರ ಶಬ್ದ ಆಲಿಕೆ, ಇಯರ್ ಫೋನ್ ಹೆಚ್ಚಿನ ಬಳಕೆಯಿಂದ ಶ್ರವಣ ದೋಷ ಉಂಟಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ ಪ್ರಪಂಚದಲ್ಲಿ 46 ದಶಲಕ್ಷ ಜನ ಶ್ರವಣದೋಷದಿಂದ ಬಳಲುತ್ತಿದ್ದು, ಇದು ಹೀಗೇ ಮುಂದು ವರಿದರೆ, 2050ರ ವೇಳೆಗೆ ಪ್ರತಿ 10 ಜನರಿಗೆ ಒಬ್ಬರು ಕಿವುಡುತನದಿಂದ ಬಳಲುತ್ತಾರೆ. ಭಾರತದಲ್ಲಿ ಶೇ 6.3 ಜನರಿಗೆ ಶ್ರವಣ ದೋಷ ವಿದ್ದು, ಯಂತ್ರ ಬಳಸಲು ನಾಚಿಕೆ ಬೇಡ. ಸರ್ಕಾರದಿಂದ ಲಭ್ಯವಿರುವ ಉಚಿತ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಚಿಕಿತ್ಸೆಗೆ ಅಲಸ್ಯ ಬೇಡ ಎಂದರು.

    ಡಿಎಚ್‌ಒ ಡಾ.ಸಿ.ಎಲ್.ಪಾಲಾಕ್ಷ ಮಾತನಾಡಿ, ಪಂಚೇಂದ್ರಿಯಗಳಲ್ಲಿ ಕಿವಿಯೂ ಅತ್ಯಂತ ಮುಖ್ಯವಾದದ್ದು. ಕಿವಿ ಸೋರುವುದು, ತಲೆ ನೋವು, ಜ್ವರ ಹಾಗೂ ಕಿವಿಯಲ್ಲಿ ಶಬ್ದ ಕಂಡಕೊಡಲೇ ಚಿಕಿತ್ಸೆ ಪಡೆಯಬೇಕು. ಜೀವನಕ್ಕಾಗಿ ಶ್ರವಣ ದೋಷವು ನಿಮ್ಮನ್ನು ಮಿತಿ ಗೊಳಿಸಲು ಬಿಡಬೇಡಿ ಎಂಬ ಘೋಷ ವಾಕ್ಯದೊಂದಿಗೆ ಆಯೋಜಿಸಿರುವ ಕಾರ್ಯಕ್ರಮದಡಿ ಪ್ರತಿ ಹಳ್ಳಿಯಲ್ಲೂ ಜಾಗೃತಿ ಮೂಡಿಸಲಾಗುವುದು ಎಂದರು.

    ಶ್ರವಣತಜ್ಞೆ ಚಂದನ್‌ಕುಮಾರಿ, ಡಿಎಸ್ ಡಾ.ಎಚ್.ಜೆ.ಬಸವರಾಜಪ್ಪ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಿ.ಚಿದಾನಂದಪ್ಪ, ತಾಲೂಕು ಆರೋಗ್ಯಾಧಿಕಾರಿ ಬಿ.ವಿ.ಗಿರೀಶ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಕಾರ್ಯಕ್ರಮ ನೋಡಲ್ ಅಧಿಕಾರಿ ಸಿ.ಒ.ಸುಧಾ, ನಿವೃತ್ತ ವೈದ್ಯ ಡಾ.ತಿಪ್ಪೇಸ್ವಾಮಿ ಮತ್ತಿತರರು ಇದ್ದರು. ಈ ಸಂದರ್ಭದಲ್ಲಿ ಚಿನ್ಮೂಲಾದ್ರಿ ಪ್ರೌಢಶಾಲೆಯ 564 ವಿದ್ಯಾರ್ಥಿಗಳಿಗೆ ಶ್ರವಣ ದೋಷ ತಪಾಸಣೆ ನಡೆಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts