More

    ದಂತಪಂಕ್ತಿಯಿಂದ ಉತ್ತಮ ಆರೋಗ್ಯ ಪಡೆಯಿರಿ; ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಕೃತಕ ದಂತಪಕ್ತಿ ವಿತರಣೆ

    ಚಿತ್ರದುರ್ಗ: ಬಡತನ ರೇಖೆಗಿಂತ ಕೆಳಗಿನ 45 ವರ್ಷ ಮೇಲ್ಪಟ್ಟವರು ಉಚಿತ ದಂತ ಪಂಕ್ತಿ ಅಳವಡಿಸಿಕೊಂಡು ಆರೋಗ್ಯಯುತರಾಗಿ ಇರಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಂಗನಾಥ್ ಹೇಳಿದರು.

    ನಗರದ ಬಿ.ಸಿ.ರಾಯ್ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಬಾಯಿ ಆರೋಗ್ಯ ಮತ್ತು ದಂತ ಭಾಗ್ಯ ಯೋಜನೆಯಡಿ ಕೃತಕ ದಂತ ಪಂಕ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಹಲ್ಲುಗಳನ್ನು ಕಳೆದುಕೊಂಡು ವಯೋವೃದ್ಧರಿಗೆ ಆಹಾರ ಅಗಿದು ಸೇವಿಸಲು ಅಸಾಧ್ಯವಾಗುತ್ತದೆ. ಇಂಥವರು ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತವಾಗಿ ದಂತ ಪಂಕ್ತಿ ಅಳವಡಿಸಿಕೊಂಡು ಸಾಮಾನ್ಯರಂತೆ ಆಹಾರ ಸೇವಿಸಿ ಉತ್ತಮ ಆರೋಗ್ಯ ಹೊಂದಬೇಕು. ಜಿಲ್ಲಾಸ್ಪತ್ರೆಯ ದಂತ ವಿಭಾಗದಲ್ಲಿ ಪ್ರತಿ ದಿನ ದಂತ ಪರೀಕ್ಷೆ ಮಾಡಲಾಗುತ್ತದೆ ಎಂದು ಹೇಳಿದರು.

    ಜಿಲ್ಲಾಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ.ಎಚ್.ಜೆ.ಬಸವರಾಜ್ ಮಾತನಾಡಿ, ದಂತಪಂಕ್ತಿ ಅಳವಡಿಕೆ, ಹಲ್ಲುಗಳಿಂದ ಆರೋಗ್ಯ ಲಾಭ ಬಗ್ಗೆ ಜನಸಾಮಾನ್ಯರಲ್ಲಿ ಮಾಹಿತಿ ಕೊರತೆಯಿದೆ. ಹಾಗಾಗಿ ಹಲ್ಲುಗಳು ಬಿದ್ದು ಹೋದರೂ ಚಿಂತಿಸುವುದಿಲ್ಲ. ಹಲ್ಲುಗಳಿಂದ ಆರೋಗ್ಯ ಕುರಿತು ಅರಿವು ಮೂಡಿಸಬೇಕಿದೆ ಎಂದರು.

    ಜಿಲ್ಲಾಸ್ಪತ್ರೆಯಲ್ಲಿ ಪ್ರತಿ ತಿಂಗಳು 20ಕ್ಕೂ ಹೆಚ್ಚು ಉಚಿತ ದಂತ ಪಂಕ್ತಿ ವಿತರಣೆ ಮಾಡಲಾಗುತ್ತಿದೆ. ಸರ್ಕಾರದ ಸೌಲಭ್ಯಗಳನ್ನು ಕಡು ಬಡವರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

    45 ವರ್ಷ ಮೇಲ್ಪಟ್ಟ ಬಡತನ ರೇಖೆಗಿಂತ ಕೆಳಗಿರುವ 40 ನಾಗರಿಕರಿಗೆ ಕೃತಕ ದಂತಪಂಕ್ತಿ ವಿತರಿಸಲಾಯಿತು. ದಂತ ಭಾಗ್ಯ ನೋಡಲ್ ಅಧಿಕಾರಿ ಡಾ.ರುದ್ರೇಶ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ನಿರೂಪಿಸಿದರು. ಹಿರಿಯ ದಂತ ವೈದ್ಯೆ ಡಾ.ಸುಧಾ, ನಾಗಮಣಿ, ದಂತ ತಂತ್ರಜ್ಞರಾದ ಗುರುನಾಥ್, ರವೀಂದ್ರ ಇದ್ದರು.

    2015ರಿಂದ ದಂತ ಭಾಗ್ಯ:
    ಸರ್ಕಾರ 2015 ರಿಂದಲೇ ದಂತ ಭಾಗ್ಯ ಯೋಜನೆ ಜಾರಿಗೆ ತಂದಿದ್ದು, ಜು.11ರಿಂದ 17ರವರೆಗೆ ದಂತ ಭಾಗ್ಯ ಸಪ್ತಾಹ ಕಾರ್ಯಕ್ರಮದಲ್ಲಿ ಜಿಲ್ಲೆಯಾದ್ಯಂತ ಸಾರ್ವಜನಿಕರಿಗೆ ಮಾಹಿತಿ ನೀಡುವ ಮೂಲಕ ಫಲಾನುಭವಿಗಳನ್ನು ಗುರುತಿಸಿ ಜಿಲ್ಲಾಸ್ಪತ್ರೆಗೆ ಕರೆತಂದು ಉಚಿತ ದಂತ ಪಂಕ್ತಿ ನೀಡಲಾಗುತ್ತದೆ. ಅರ್ಹ ಫಲಾನುಭವಿಗಳು ಪಡೆದ ದಂತ ಪಂಕ್ತಿಗಳನ್ನು ವೈದ್ಯರ ಸಲಹೆಯಂತೆ ಅವಶ್ಯಕ ಸಮಯದಲ್ಲಿ ಅಳವಡಿಸಿಕೊಂಡು ಪಂಕ್ತಿ ಹಾಳಾಗದಂತೆ ನಿಗಾ ವಹಿಸಬೇಕು ಎಂದು ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ರೇಣುಪ್ರಸಾದ್ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts