More

    ಹೂ ಬೆಳೆಗಾರರಿಗೆ ತಿಂಗಳಲ್ಲಿ ಪರಿಹಾರ

    ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ: ಲಾಕ್‌ಡೌನ್‌ನಿಂದಾಗಿ ಹೂವು ಬೆಳೆಗಾರರ ಬಾಡಿದ ಬದುಕಿಗೆ ಆಸರೆ ನೀಡಲು ಮುಂದಾಗಿರುವ ರಾಜ್ಯ ಸರ್ಕಾರ, ಇದಕ್ಕಾಗಿ ತೋಟಗಾರಿಕೆ ಇಲಾಖೆ ಮೂಲಕ 318.37 ಕೋಟಿ ರೂ. ಗಳನ್ನು ಕಾಯ್ದಿರಿಸಿದೆ.

    ಈ ನಿಟ್ಟಿನಲ್ಲಿ ಪರಿಹಾರಕ್ಕಾಗಿ ಬೆಳೆಗಾರರು ಮೇ 30 ರೊಳಗೆ ಅರ್ಜಿ ಸಲ್ಲಿಸಬೇಕಿದೆ. ರಾಜ್ಯದಲ್ಲಿ ಅಂದಾಜು 12735 ಹೆ.ಪ್ರದೇಶದಲ್ಲಿ ಬೇಸಿಗೆ ಹಂಗಾಮಿನ ಹೂವಿನ ಬೆಳೆ ಇದೆ.

    ಚೆಂಡು, ಸೇವಂತಿಗೆ, ಆಸ್ಟರ್, ಸುಗಂಧರಾಜ, ಕನಕಾಂಬರ, ಗುಲಾಬಿ, ಮಲ್ಲಿಗೆ, ಕಾಕಡಾ, ಬರ್ಡ್ ಆಫ್ ಪ್ಯಾರಡೈಸ್ ಮೊದಲಾದ ಅಂದಾಜು 37861 ಟನ್ ಹೂವಿನ ಉತ್ಪಾದನೆ ಇದೆ. 650 ಹೆ.ಸಂರಕ್ಷಿತ ಬೇಸಾಯದಲ್ಲಿ ಜರ್ಬೆರಾ, ಕಾರ್ನೇಷನ್, ಆರ್ಕಿಡ್ ಇತ್ಯಾದಿ ಹೂವುಗಳ ಬೆಳೆಯೂ ಇದೆ.

    ಲಾಕ್‌ಡೌನ್‌ನಿಂದಾಗಿ ಎಲ್ಲ ಕ್ಷೇತ್ರಗಳಲ್ಲೂ ನಷ್ಟವಾಗಿರುವಂತೆ, ಹೂವಿನ ಬೆಳೆಗಾರರು ಅಪಾರ ಪ್ರಮಾಣದಲ್ಲಿ ಕೈ ಸುಟ್ಟು ಕೊಂಡಿದ್ದಾರೆ. ಆದ್ದರಿಂದ ಸರ್ಕಾರ ಒಂದು ಗುಂಟೆ ಲೆಕ್ಕದಲ್ಲಿ (ಕ್ಕೃಣ್ಕಅಅ) ಒಂದು ಹೆಕ್ಟೇರ್‌ಗೆ ಗರಿಷ್ಠ 25 ಸಾವಿರ ರೂ. ಪರಿಹಾರ ವಿತರಿಸಲು ಮುಂದಾಗಿದೆ.

    270 ಕೋಟಿ ರೂ. ಪರಿಹಾರ: ರಾಜ್ಯದಲ್ಲಿ 10825 ಹೆ. ಹೂವಿನ ಬೆಳೆ ನಷ್ಟ ಹಾಗೂ ಪರಿಹಾರವನ್ನು ವಿತರಿಸಲು 270.06 ಕೋಟಿ ರೂ. ಬೇಕಾಗಬಹುದೆಂದು ಇಲಾಖೆ ತಾತ್ಕಾಲಿಕವಾಗಿ ಅಂದಾಜಿಸಿದೆ. ರಾಜ್ಯದಲ್ಲಿ 1.50 ಲಕ್ಷಕ್ಕೂ ಅಧಿಕ ಬೆಳೆಗಾರರು ಪರಿಹಾರ ಕೋರಿ ಅರ್ಜಿ ಸಲ್ಲಿಸುವ ನಿರೀಕ್ಷೆ ಇದೆ. ಕಳೆದ ಮಾರ್ಚ್ 24 ರ ನಂತರ ನಾಟಿ ಮಾಡಿದ್ದ ಹೂವಿನ ಬೆಳೆಗಾರರಿಗೆ ಪ್ಯಾಕೇಜ್‌ನಡಿ ಪರಿಹಾರ ಪಡೆಯಲು ಅವಕಾಶವಿಲ್ಲ.

    ಬೆಳೆ ಸಮೀಕ್ಷೆ: ಕ್ಷೇತ್ರ ಮಟ್ಟದಲ್ಲಿ ಮುಂಗಾರು/ಹಿಂಗಾರು ಬೆಳೆ ಸಮೀಕ್ಷೆಯಲ್ಲಿರುವ ಬೆಳೆಗಾರರ ಪಟ್ಟಿಯನ್ನು ಗ್ರಾಪಂ, ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಕಟಿಸಬೇಕಿದೆ. ಬೆಳೆ ಸಮೀಕ್ಷೆಯಲ್ಲಿರದ ರೈತರು ಸಲ್ಲಿಸುವ ಅರ್ಜಿಯನ್ನು ಸ್ವೀಕರಿಸಿ, ಶೇ.100 ಪ್ರಮಾಣದಲ್ಲಿ ಸ್ಥಳ ಪರಿಶೀಲನೆಯೊಂದಿಗೆ ಮಹಜರ್ ನಡೆಸಿ ಪರಿಹಾರಕ್ಕೆ ಪಟ್ಟಿ ಕಳಿಸಬೇಕಿದೆ. ಸಮೀಕ್ಷೆಯಲ್ಲಿರುವ ಬೆಳೆಗಾರರ ಕನಿಷ್ಠ ಶೇ.10 ತಾಕುಗಳನ್ನಾದರೂ ಅಧಿಕಾರಿಗಳು ಪರಿಶೀಲಿಸಬೇಕಿದೆ. ಪರಿಹಾರ ಮಂಜೂರಾತಿಗೆಂದೇ ಹೋಬಳಿ, ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ. ಇನ್ನೊಂದು ತಿಂಗಳಲ್ಲಿ ಬೆಳೆಗಾರರ ಬ್ಯಾಂಕ್ ಖಾತೆಗೆ ಪರಿಹಾರ ಮೊತ್ತ ಜಮಾ ಆಗಲಿದೆ ಎಂದು ಹೇಳಲಾಗುತ್ತಿದೆ.

    ಇಲಾಖೆ ತಾತ್ಕಾಲಿಕ ಅಂದಾಜಿಸಿರುವ ನಷ್ಟದ ವಿಸ್ತೀರ್ಣ (ಹೆ.) ಪರಿಹಾರ (ಲಕ್ಷ ರೂ.)
    ಬಾಗಲಕೋಟೆ-53-13.37
    ಬೆಂ.ಗ್ರಾಮಾಂತರ-1821-455.13
    ಬೆಂಗಳೂರು ನಗರ-938-234.39
    ಬೆಳಗಾವಿ-140-35.10
    ಬಳ್ಳಾರಿ-390-97.54
    ಬೀದರ್-82-20.39
    ವಿಜಯಪುರ-156-38.97
    ಚಾಮರಾಜನಗರ-61-15.21
    ಚಿಕ್ಕಬಳ್ಳಾಪುರ-1673-418.16
    ಚಿಕ್ಕಮಗಳೂರು-11-2.83
    ಚಿತ್ರದುರ್ಗ-966-241.45
    ದಕ್ಷಿಣಕನ್ನಡ-26-6.58
    ದಾವಣಗೆರೆ-116-28.99
    ಧಾರವಾಡ-103-25.69
    ಗದಗ-259-64.73
    ಹಾಸನ-73-18.35
    ಹಾವೇರಿ-313-78.20
    ಕಲಬುರುಗಿ-175-43.76
    ಕೊಡಗು-8-1.97
    ಕೋಲಾರ-860-215.11
    ಕೊಪ್ಪಳ-137-34.36
    ಮಂಡ್ಯ-267-191.72
    ಮೈಸೂರು-497-124.36
    ರಾಯಚೂರು-33-8.34
    ರಾಮನಗರ-261-45.24
    ಶಿವಮೊಗ್ಗ-35-8.64
    ತುಮಕೂರು-725-181.28
    ಉಡುಪಿ-85-21.25
    ಉತ್ತರ ಕನ್ನಡ-40-9.99
    ಯಾದಗಿರಿ-20-5.10

    ಬೆಳೆ ಸಮೀಕ್ಷೆಯಲ್ಲಿ ಇರಲಿ, ಇಲ್ಲದೇ ಇರಲಿ, ಒಟ್ಟಾರೆ ಎಲ್ಲ ಹೂವಿನ ಬೆಳೆಗಾರರಿಂದಲೂ ಅರ್ಜಿ ಸ್ವೀಕರಿಸಲಾಗುತ್ತಿದೆ. ಅರ್ಜಿಯೊಂದಿಗೆ ಪಹಣಿ, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಪುಸ್ತಕದ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ. ಜಿಲ್ಲೆಯ ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ ತಾಲೂಕುಗಳ ರೈತರು ಮೇ 29 ಹಾಗೂ ಚಳ್ಳಕೆರೆ, ಮೊಳಕಾಲ್ಮೂರು ಹಾಗೂ ಹಿರಿಯೂರು ರೈತರು ಮೇ 30 ರೊಳಗೆ ಅರ್ಜಿ ಸಲ್ಲಿಸಬೇಕಿದೆ. ಮೇ 26 ರ ಅಂತ್ಯಕ್ಕೆ ಜಿಲ್ಲೆಯಲ್ಲಿ 7341 ಅರ್ಜಿಗಳು ಸಲ್ಲಿಕೆಯಾಗಿವೆ.
    ಜಿ.ಸವಿತಾ, ಉಪನಿರ್ದೇಶಕಿ
    ತೋಟಗಾರಿಕೆ ಇಲಾಖೆ, ಚಿತ್ರದುರ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts