More

    ಮೂರೇ ದಿನದಲ್ಲಿ 8 ಸಾವಿರ ನೀರಿನ ಟ್ಯಾಂಕ್ ಸ್ವಚ್ಛ

    ಚಿತ್ರದುರ್ಗ: ಜಿಲ್ಲೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ತಿಂಗಳು, ವರ್ಷಗಳಿಂದ ಸ್ವಚ್ಛತೆಯ ಭಾಗ್ಯವನ್ನೇ ಕಾಣದ 8 ಸಾವಿರ ನೀರಿನ ಟ್ಯಾಂಕ್‌ಗಳು ಕೇವಲ ಮೂರು ದಿನದೊಳಗೆ ಸಂಪೂರ್ಣ ನಳನಳಿಸುತ್ತಿವೆ.

    ಬೇಸಿಗೆ ಮತ್ತು ಮಳೆಗಾಲದಲ್ಲಿ ನೀರಿನ ಟ್ಯಾಂಕ್‌ಗಳು ಸ್ವಚ್ಛವಾಗಿಲ್ಲದಿದ್ದರೆ ಕೀಟಜನ್ಯ ವಾಹಕದಿಂದ ರೋಗಗಳು ಹರಡುವ ಸಾಧ್ಯತೆ ಇದೆ. ಇದರಿಂದ ಜನ-ಜಾನುವಾರುಗಳ ಮೇಲೆ ಪರಿಣಾಮ ಬೀರುವ ಸಂಭವವೂ ಇದೆ. ಇದನ್ನು ತಡೆಗಟ್ಟಲು ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಲು ಜಿಲ್ಲಾ ಪಂಚಾಯಿತಿ ಮುಂದಾಗಿದೆ.

     

    ನೀರಿನಿಂದಲೇ ಅನೇಕ ಕಾಯಿಲೆ ಕಾಣಿಸಿಕೊಳ್ಳುವ ಕಾರಣಕ್ಕೆ ಜಿಲ್ಲೆಯಲ್ಲಿನ ಹಲವು ಗ್ರಾಪಂಗಳಲ್ಲಿ ನೀರು ಸರಬರಾಜು ಆಗುವ ಟ್ಯಾಂಕ್ ಮತ್ತು ತೊಟ್ಟಿಗಳ ಸ್ಥಿತಿಗತಿಯನ್ನು ಜಿಪಂ ಸಿಇಒ ಎಂ.ಎಸ್.ದಿವಾಕರ್ ಈಚೆಗಷ್ಟೇ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

    ಈ ವೇಳೆ ಹಲವೆಡೆ ಅಸ್ವಚ್ಛತೆಯಿಂದ ಕೂಡಿರುವುದು ಕಂಡು ಬಂದಿದ್ದು, ಸ್ಥಳೀಯರನ್ನು ವಿಚಾರಿಸಿದಾಗ ನೀರಗಂಟಿಗಳು ತಿಳಿದಾಗ ಮೂರೇ ದಿನದಲ್ಲಿ 8 ಸಾವಿರ ನೀರಿನ ಟ್ಯಾಂಕ್ ಸ್ವಚ್ಛಸ್ವಚ್ಛಗೊಳಿಸುತ್ತಾರೆ ಎಂಬ ವಿಷಯ ಬಯಲಾಗಿತ್ತು. ಕೂಡಲೇ ಎಲ್ಲ ಗ್ರಾಪಂಗಳಿಗೆ ಮೂರು ದಿನದೊಳಗೆ ಸ್ವಚ್ಛಗೊಳಿಸಲು ನಿರ್ದೇಶನ ನೀಡಿದ್ದು, ಅದರಂತೆ ಸ್ವಚ್ಛತಾ ಕಾರ್ಯ ಪೂರ್ಣಗೊಂಡಿದೆ.

    ಜಿಲ್ಲಾದ್ಯಂತ 189 ಗ್ರಾಪಂಗಳಿದ್ದು, ಸಾವಿರಕ್ಕೂ ಅಧಿಕ ಗ್ರಾಮಗಳಿವೆ. 10 ಲಕ್ಷದಿಂದ 12 ಲಕ್ಷ ಜನ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ನೀರು ಸರಬರಾಜಿಗೆ 961 ಓವರ್‌ಹೆಡ್, 4,269 ಸಣ್ಣ ಟ್ಯಾಂಕ್‌ಗಳು, 1,034 ಶುದ್ಧ ಕುಡಿಯುವ ನೀರಿನ ಘಟಕಗಳು, 1,600 ನೀರಿನ ತೊಟ್ಟಿಗಳಿವೆ. ಬಹುತೇಕ ಎಲ್ಲವನ್ನೂ ಸ್ವಚ್ಛಗೊಳಿಸುವ ಕಾರ್ಯ ಮುಕ್ತಾಯದ ಹಂತಕ್ಕೆ ಬಂದಿದ್ದು, ಜನ ಮತ್ತು ಜಾನುವಾರುಗಳಿಗೆ ಕುಡಿಯಲು, ಬಳಸಲು ಶುಚಿ ನೀರನ್ನು ಪೂರೈಸಲು ಒತ್ತು ನೀಡಲಾಗುತ್ತಿದೆ.

    ಹಲವು ಗ್ರಾಪಂಗಳಲ್ಲಿ ಸ್ವಚ್ಛತೆಗೆ ನೀರಗಂಟಿಗಳ ಜತೆ ಗ್ರಾಮಸ್ಥರೂ ಕೈಜೋಡಿಸಿದ್ದಾರೆ. ಇದೊಂದು ರೀತಿ ಹೊಸ ಬದಲಾವಣೆಯಾಗಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ಗಳಿಸಿದೆ. ಇದರಿಂದ ಹೆಚ್ಚು ಉತ್ಸಾಹ ತೋರಿರುವ ಜಿಪಂ, ಪ್ರತಿ 3 ಅಥವಾ 6 ತಿಂಗಳಿಗೊಮ್ಮೆ ಟ್ಯಾಂಕ್‌ಗಳ ಸ್ವಚ್ಛತೆ ಕಾರ್ಯವನ್ನು ಕಡ್ಡಾಯವಾಗಿ ಮಾಡುವಂತೆ ಪಿಡಿಒಗಳಿಗೆ ಆದೇಶಿಸಿದೆ.

    ಯಾವುದೇ ಅನುದಾನ ಬಳಸಿಲ್ಲ: ರಾಷ್ಟ್ರೀಯ ವಾಹಕದಿಂದ ಹರಡುವ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ (ಎನ್‌ವಿಬಿಡಿಸಿಪಿ) ಅನುದಾನ ಬಳಸಿಕೊಂಡು ಸ್ವಚ್ಛಗೊಳಿಸಲು ಅವಕಾಶವಿದೆ. ಆದರೆ, ಸ್ವಚ್ಛತೆ, ಸುಣ್ಣ, ಬ್ಲೀಚಿಂಗ್ ಪೌಡರ್ ಸಿಂಪಡಿಸಲು ಹೆಚ್ಚು ಹಣ ಖರ್ಚಾಗದ ಕಾರಣ ಆಯಾ ಗ್ರಾಪಂಗಳು ಈ ಅನುದಾನ ಬಳಸಿಕೊಳ್ಳದೆಯೇ ಟ್ಯಾಂಕ್, ತೊಟ್ಟಿಗಳನ್ನು ಶುಚಿಗೊಳಿಸಲು ಮುಂದಾಗಿದೆ. ಎಲ್ಲ ಕೆಲಸವೂ ಅನುದಾನದಿಂದಲೇ ಆಗಬೇಕೆಂದೇನೂ ಇಲ್ಲ. ಮಾಡುವ ಮನಸ್ಸಿದ್ದರೆ, ಜನರಿಗೆ ಸಾಧ್ಯವಾದಷ್ಟು ಅನುಕೂಲ ಮಾಡಿಕೊಡಬಹುದು ಎನ್ನುತ್ತಾರೆ ಜಿಪಂ ಅಧಿಕಾರಿಗಳು.

    ಸಕಲ ಜೀವರಾಶಿಗಳಿಗೂ ನೀರು ಜೀವಜಲ. ಅದನ್ನು ಮಲಿನಗೊಳಿಸದೆಯೇ ಶುಚಿಯಾಗಿ ಇಟ್ಟುಕೊಳ್ಳಬೇಕಾದ್ದು ಎಲ್ಲರ ಕರ್ತವ್ಯ. ಗ್ರಾಪಂಗಳ ಭೇಟಿ ವೇಳೆ ಟ್ಯಾಂಕ್, ತೊಟ್ಟಿಗಳು ಗಲೀಜಾಗಿರುವುದು ಗಮನಕ್ಕೆ ಬಂತು. ಆದ್ದರಿಂದ ಈ ಕಾರ್ಯ ಕೈಗೊಂಡಿದ್ದು, ಇನ್ಮುಂದೆ ಪ್ರತಿ 3 ಅಥವಾ 6 ತಿಂಗಳಿಗೊಮ್ಮೆ ಸ್ವಚ್ಛಗೊಳಿಸಲು ಪಿಡಿಒಗಳಿಗೆ ಸೂಚಿಸಿದ್ದೇನೆ.
    ಎಂ.ಎಸ್.ದಿವಾಕರ್, ಜಿಪಂ ಸಿಇಒ, ಚಿತ್ರದುರ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts