More

    ಬ್ರಹ್ಮ ರಥೋತ್ಸವಕ್ಕೆ ಕ್ಷಣಗಣನೆ

    ಚಿತ್ರದುರ್ಗ: ನಾನಾ ಬಿರುದು ಬಾವಲಿಗಳ ಉದ್ಘೋಷಗಳಿಂದ ನಾಮಾಂಕಿತನಾದ ಹೊಳಲ್ಕೆರೆ ತಾಲೂಕು ಎಚ್.ಡಿ.ಪುರದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯ ಜಾತ್ರೆ ಹಾಗೂ ಬ್ರಹ್ಮ ರಥೋತ್ಸವ ಮಾ.9ರ ಮಧ್ಯಾಹ್ನ 3.30ಕ್ಕೆ ಲಕ್ಷ ಭಕ್ತರ ಸಮ್ಮುಖದಲ್ಲಿ ನೆರವೇರಲಿದೆ.

    ಪುಣ್ಯಭೂಮಿ ಎನಿಸಿರುವ ಶ್ರೀ ಕ್ಷೇತ್ರದಲ್ಲಿ ಸ್ವಾಮಿ ಉತ್ಸವದ ಅಂಗವಾಗಿ ಪಾಂಚರಾತ್ರ ಆಗಮನ ಪ್ರಕಾರ ವಿಕಾರಿನಾಮ ಸಂವತ್ಸರೇ ಪಾಲ್ಗುಣ ಮಾಸ ಶುಕ್ಲಪಕ್ಷ ಸಪ್ತಮಿ ಮಾ.2ರಿಂದ ನಾನಾ ಧಾರ್ಮಿಕ ವಿಧಿಗಳು ನಡೆದಿದ್ದು, ಕ್ಷಣಗಣನೆ ಆರಂಭವಾಗಿರುವ ರಥೋತ್ಸವಕ್ಕಾಗಿ ಅಂತಿಮ ಸಿದ್ಧತೆಗಳು ಭರದಿಂದ ನಡೆದಿವೆ. ನೂರಾರು ವರ್ಷಗಳಿಂದ ನಿರಂತರ ನಡೆದು ಬಂದಿರುವ ರಥೋತ್ಸವಕ್ಕೆ ರಾಜ್ಯ,ಹೊರ ರಾಜ್ಯಗಳಿಂದ ಭಕ್ತರು ಆಗಮಿಸಲಿದ್ದಾರೆ.

    ಕರ್ಕಾಟಕ ಲಗ್ನ: ಸೋಮವಾರ ಮಧ್ಯಾಹ್ನ 3.30ರಿಂದ 4.30ರ ವರೆಗೆ ಸಲ್ಲುವ ಕರ್ಕಾಟಕ ಲಗ್ನದ ಶುಭ ಪುಬ್ಬಾ ನಕ್ಷತ್ರ ಶುಭಾಂಶದಲ್ಲಿ ಬ್ರಹ್ಮರಥೋತ್ಸವ ನಡೆಯಲಿದೆ. ರಥೋತ್ಸವದ ಸಮಯದಲ್ಲಿ ಶ್ರೀ ಸ್ವಾಮಿ ದೇವಾಲಯದಿಂದ ಹೊರಬರುವ ವೇಳೆಗೆ ಸರಿಯಾಗಿ ಆಕಾಶದಲ್ಲಿ ಗರುಡ ಪ್ರತ್ಯಕ್ಷವಾಗುವ ಪವಾಡ ನಡೆಯುತ್ತದೆ.

    ಉತ್ಸವಕ್ಕೆ ಬಂದಂಥ ಭಕ್ತರಿಗೆ ಅನ್ನಸಂತರ್ಪಣೆಗಾಗಿ ಮೊಸರನ್ನ, ವಾಂಗಿ ಬಾತ್, ಪುಳಿಯೊಗರೆಯ ಮೆನು ಸಿದ್ಧವಾಗಿದೆ. ಪಾಲ್ಗುಣ ಬಹುಳ ತದಿಗೆ ಮಾ.10ರ ಬೆಳಗ್ಗೆ ಭೂತ ಬಲಿ ಸೇವಾ ಧೋಳೋತ್ಸವ, ಪೀಠೋತ್ಸವ ಬೆಳ್ಳಿ ಪಲ್ಕಕ್ಕಿ ಉತ್ಸವ, ಚೌಕಿ ಉತ್ಸವ ನಡೆಯಲಿದೆ. 11ರಂದು ಧ್ವಜಾರೋಹಣ, ರಜತ ಪೀಠೋತ್ಸವ, ಉಯ್ಯಲೋತ್ಸವ, ಪಲಕ್ಕಿ ಉತ್ಸವ ಮೊದಲಾದ ಧಾರ್ಮಿಕ ಕಾರ್ಯಕ್ರಮ ಜುರಗಲಿವೆ.

    ಕುಡಿವ ನೀರಿಗೆ ಕ್ರಮ: ದೇವಾಲಯ ಸಮೀಪದ ಕಲ್ಯಾಣಿಯಲ್ಲಿ ನೀರಿದ್ದು, ಈ ಬಾರಿ ನೀರಿನ ಸಮಸ್ಯೆ ಇಲ್ಲ. ಲಕ್ಷಾಂತರ ಜನರ ಸೇರುವ ನಿರೀಕ್ಷೆ ಇದ್ದು, ಕುಡಿವ ನೀರು ಪೂರೈಸಲು ಪ್ರತ್ಯೇಕ ಟ್ಯಾಂಕರ್‌ಗಳ ವ್ಯವಸ್ಥೆ ಮಾಡಲಾಗಿದೆ. ಸುರಕ್ಷತೆ, ಸ್ವಚ್ಛತೆ ನಿಟ್ಟಿನಲ್ಲಿ ದೇವಾಲಯ ಆಡಳಿತ ಮಂಡಳಿಯವರೊಂದಿಗೆ ಚರ್ಚಿಸಲಾಗಿದೆ. ಪ್ರಸಾದ ವಿತರಣೆಯಲ್ಲೂ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ ಎಂದು ಹೊಳಲ್ಕೆರೆ ತಹಸೀಲ್ದಾರ್ ಕೆ.ನಾಗರಾಜ್ ತಿಳಿಸಿದ್ದಾರೆ.

    ಬಿಗಿ ಪೊಲೀಸ್ ಬಂದೋಬಸ್ತ್: ಎರಡು ಡಿ.ಎ.ಆರ್.ತುಕಡಿ ಸಹಿತ ಚಿಕ್ಕಜಾಜೂರು, ಹೊಳಲ್ಕೆರೆ ಹಾಗೂ ಚಿತ್ರಹಳ್ಳಿ ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿತರಾಗಿದ್ದಾರೆ. ಚಿತ್ರಹಳ್ಳಿ ಕಡೆಯಿಂದ ಬರುವಂಥ ವಾಹನಗಳಿಗೆ ಸಮೀಪದಲ್ಲಿ ಹಾಗೂ ಹೊಸದುರ್ಗ ಕಡೆಯಿಂದ ಬರುವಂಥ ವಾಹನಗಳ ಹೊರ ಠಾಣೆ ಬಳಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ರಥ, ದೇವಾಲಯದ ಭಕ್ತರ ಸರತಿ ಸಾಲಿಗೆ ವ್ಯವಸ್ಥೆ ಮಾಡಲಾಗಿದೆ. ಜೇಬುಕಳ್ಳತನ ಮತ್ತಿತರ ಅಪರಾಧ ಕೃತ್ಯಗಳ ತಡೆಗೆ ಮಫ್ತಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಹೊಳಲ್ಕೆರೆ ಸಿಪಿಐ ರವೀಶ್ ತಿಳಿಸಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿಯೂ ಸ್ಥಳದಲ್ಲಿ ಬೀಡು ಬಿಡಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts