More

    ತುರುವನೂರು ರಸ್ತೆ ವಿಸ್ತರಣೆ ಕಾರ‌್ಯಾಚರಣೆ ಆರಂಭ

    ಚಿತ್ರದುರ್ಗ: ನಗರದ ತುರುವನೂರು ರಸ್ತೆ ವಿಸ್ತರಣೆ ಕಾರ‌್ಯಾಚರಣೆ ಮಂಗಳವಾರ ಬೆಳಗ್ಗೆ ಆರಂಭವಾಯಿತು. ಪೊಲೀಸ್ ಕ್ವಾಟ್ರಸ್ ಕಾಂಪೌಂಡ್ ಮತ್ತಿತರ ಸರ್ಕಾರಿ ಕಟ್ಟಡಗಳ ತೆರವಿಗೆ ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆಯಿಂದ ಜಂಟಿ ಕಾರ‌್ಯಾಚರಣೆ ನಡೆಯಿತು.

    ರಸ್ತೆ ಮಧ್ಯದಿಂದ 10.50 ಮೀಟರ್ ವಿಸ್ತರಣೆ ನಡೆದಿದ್ದು, ಇದು ಹಳೆಯ ಜಿಲ್ಲಾ ರಸ್ತೆ (ಎಂಡಿಆರ್) ಆಗಿರುವುದರಿಂದಾಗಿ ನಿಗದಿತ ಅಳತೆ ಮೀರಿ ಆಗಿರುವ ಒತ್ತುವರಿ ತೆರವುಗೊಳಿಸಲಾಗುವುದು ಹಾಗೂ ಇದಕ್ಕೆ ಯಾವುದೇ ಪರಿಹಾರ ಸಿಗದು.

    ತಕ್ಷಣದಲ್ಲಿ ಸರ್ಕಾರಿ ಕಟ್ಟಡಗಳ ತೆರವು ನಡೆಯಲಿದ್ದು, ಖಾಸಗಿ ಕಟ್ಟಡ ಮಾಲೀಕರಿಗೆ ನೋಟಿಸ್ ಕೊಡಲಾಗಿದೆ ಎಂದು ನಗರಸಭೆ ಆಯುಕ್ತ ಜಿ.ಟಿ.ಹನುಮಂತರಾಜು ತಿಳಿಸಿದರು.

    ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗಳಾದ ಕೃಷ್ಣಪ್ಪ, ಜನಾರ್ದನ, ನಗರಸಭೆ ಎಇಇ ರವಿಶಂಕರ್, ಪರಿಸರ ಇಂಜಿನಿಯರ್ ಜಾಫರ್ ಮತ್ತಿತರರು ಇದ್ದರು.

    5 ಕೋಟಿ ರೂ.ವೆಚ್ಚ: ರಸ್ತೆ ಮಧ್ಯದಿಂದ ಸರ್ಕಾರಿ ಜಾಗವನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆದು ನಮ್ಮ ಕಟ್ಟಡಗಳನ್ನು ಉಳಿಸಬೇಕೆಂಬ ಕೆಲ ಆಸ್ತಿ ಮಾಲೀಕರ ಕೋರಿಕೆ ಫಲಿಸಿಲ್ಲವೆನ್ನಲಾಗಿದೆ. ಜಿಲ್ಲಾಸ್ಪತ್ರೆ ಎದುರಿಂದ ಆರ್‌ಟಿ ಕಚೇರಿಯವರೆಗೆ ಲೋಕೋಪಯೋಗಿ ಇಲಾಖೆ ಅನುದಾನದಲ್ಲಿ 5 ಕೋಟಿ ರೂ.ವೆಚ್ಚದೊಂದಿಗೆ ಸಿಮೆಂಟ್ ರಸ್ತೆ ನಿರ್ಮಾಣವಾಗಲಿದೆ. ಅಲ್ಲಿಂದ ಜಿಲ್ಲಾ ಗಡಿ ಜಗಳೂರು ತಾಲೂಕು ಮುಸ್ಟೂರುವರೆಗೆ ಅಂದಾಜು 30 ಕೋಟಿ ರೂ.ವೆಚ್ಚದಲ್ಲಿ ದ್ವಿಪಥ ನಿರ್ಮಾಣವಾಗಲಿದೆ.

    ಶೀಘ್ರ ಬಗೆ ಹರಿಸಲಾಗುವುದು: ನಗರದ ಐಬಿಯಿಂದ ಗಾಂಧಿ ಸರ್ಕಲ್‌ವರೆಗೆ ರಸ್ತೆ ವಿಸ್ತರಣೆ ಕಾಮಗಾರಿಗೆ ಟೆಂಡರ್ ತೊಡಕಾಗಿದ್ದು, ಅದನ್ನು ಶೀಘ್ರ ಬಗೆ ಹರಿಸಲಾಗುವುದು. ಗಾಂಧಿ ಸರ್ಕಲ್‌ನಿಂದ ಜೆಎಂಐಟಿ ಸರ್ಕಲ್‌ವರೆಗೆ 18 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು ಮುಂದಿನ ವಾರದೊಳಗೆ ಈ ಕಾಮಗಾರಿಗೆ ಕ್ಯಾಬಿನೆಟ್ ಒಪ್ಪಿಗೆ ಸಿಗುವ ವಿಶ್ವಾಸವಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಪತ್ರಿಕೆಗೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts