More

    ಭಾರತ್ ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ

    ಚಿತ್ರದುರ್ಗ: ಕೇಂದ್ರ ಸರ್ಕಾರ ರೈತ, ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆಪಾದಿಸಿ ವಿವಿಧ ಸಂಘಟನೆಗಳು ಬುಧವಾರ ಕರೆ ನೀಡಿದ್ದ ಭಾರತ್ ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

    ಎಐಟಿಯುಸಿ, ಐಎನ್‌ಟಿಯುಸಿ,ಎಐಯು ಟಿಯುಸಿ,ಸಿಐಟಿಯು,ಎಐಕೆಎಸ್ ಮೊದಲಾದ ಕಾರ್ಮಿಕ ಸಂಘಟನೆಗಳು ,ರಾಜ್ಯ ರೈತ ಸಂಘ ಹಾಗೂ ಎಡಪಂಥೀಯ ಪಕ್ಷಗಳ ಕಾರ್ಯಕರ್ತರು ಬೆಳಗ್ಗೆಯೇ ಬಂದ್ ಬೆಂಬಲಿಸಿ ರಸ್ತೆಗೆ ಇಳಿದಿದ್ದರು.

    ಆದರೂ, ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ಬಸ್, ಆಟೋಗಳ ಸಂಚಾರ ಆರಂಭವಾಗಿತ್ತು. ಅಂಗಡಿ ಮುಂಗಟ್ಟು, ಹೋಟೆಲ್, ಸಿನಿಮಾ ಮಂದಿರಗಳಲ್ಲಿ ಎಂದಿನ ವಹಿವಾಟು ನಡೆದಿದ್ದರೇ, ಶಾಲಾ, ಕಾಲೇಜು, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿವೆ.

    ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ಹಾಗೂ ಕೆನರಾ ಬ್ಯಾಂಕ್ ಸ್ಟಾೃಫ್ ಫೆರೇಷನ್ ಮತ್ತಿತತರ ಬ್ಯಾಂಕಿಂಗ್ ವಲಯದ ಸಂಘಟನೆಗಳು ಮುಷ್ಕರ ಬೆಂಬಲಿಸಿದ್ದರಿಂದಾಗಿ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯವಾಯಿತು.

    ಎಸ್‌ಬಿಐ ಹೊರತು ಪಡಿಸಿ ಅನೇಕ ಬ್ಯಾಂಕ್‌ಗಳ ಸೇವೆಯಲ್ಲಿ ವ್ಯತ್ಯಾಸವಾಯಿತು. ನಗರದ ಎಪಿಎಂಸಿಯಲ್ಲಿ ಆಘೋಷಿತ ಬಂದ್ ವಾತಾವರಣ ಕಂಡುಬಂತು.

    ನಗರದ ಬಿಡಿ ರಸ್ತೆ ಕೆನರಾ ಬ್ಯಾಂಕ್ ಎದುರು ನೌಕರರು ಪ್ರತಿಭಟಿಸಿದರು. ನೌಕರರ ಸಂಘದ ಎಂ.ವಿರೇಶ್, ಟಿ.ವಿಜಯಕುಮಾರ್, ಎನ್.ಅರುಣ್ ಮೊದಲಾದ ಪ್ರಮುಖರು ಇದ್ದರು.

    ಪೊಲೀಸರ ವಶಕ್ಕೆ: ಪೊಲೀಸರು ಪ್ರತಿಭಟನಕಾರರಿಗೆ ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟನೆಗೆ ಅವಕಾಶ ಕೊಟ್ಟಿದ್ದರು. ಆದರೆ, ಮೆರವಣಿಗೆ ನಡೆಸುವಂತಿಲ್ಲ ಎಂದಿದ್ದರು. ಪೊಲೀಸರ ಈ ಷರತ್ತು ಉಲ್ಲಂಘಿಸಿ ಬೆಳಗ್ಗೆ ಗಾಂಧಿ ವೃತ್ತದಲ್ಲಿ ಪ್ರತಿಭಟಿಸಿದ ಎಐಟಿಯುಸಿ, ಸಿಐಟಿಯು ಮೊದಲಾದ ಕಾರ್ಮಿಕ ಸಂಘಟನೆಗಳ 20ಕ್ಕೂ ಹೆಚ್ಚು ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದರು.

    ಎಪಿಎಂಸಿ ರೈತ ಭವನದಿಂದ ಮೆರವಣಿಗೆ ಹೊರಟ ರೈತರನ್ನು ಯೂನಿಯನ್ ಪಾರ್ಕ್ ಬಳಿ ಪೊಲೀಸರು ತಡೆದರು. ಈ ವೇಳೆ 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಕ್ರಮ ಖಂಡಿಸಿದ ರೈತ, ಕಾರ್ಮಿಕ ಮುಖಂಡರು ಹಾಗೂ ಪೊಲೀಸರ ನಡುವೆ ಕೆಲ ಕಾಲ ವಾಗ್ವಾದ ನಡೆಯಿತು. ಪೊಲೀಸರ ತಡೆ ಧಿಕ್ಕರಿಸಿ ಡಿಸಿ ವೃತ್ತದೆಡೆ ಧಾವಿಸಲು ಮುಂದಾದ ರೈತ ಮುಖಂಡರ ಪೈಕಿ ಕೆಲವರು ಕೆಳಗೆ ಬಿದ್ದರು. ಈ ವೇಳೆ ಮುಖಂಡ ನಾಗರಾಜರನ್ನು ಪೊಲೀಸರು ಬೆನ್ನಟ್ಟಿ ವಶಕ್ಕೆ ಪಡೆದರು. ಬಳಿಕ ಎಲ್ಲರನ್ನೂ ಬಿಡುಗಡೆಗೊಳಿಸಿದರು.

    ಒನಕೆ ಓಬವ್ವ ವೃತ್ತದಲ್ಲಿ ಮುಷ್ಕರ ನಡೆಸಿದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಐಟಿಯುಸಿ ಗೌರವಾಧ್ಯಕ್ಷ ಸಿ.ವೈ.ಶಿವರುದ್ರಪ್ಪ ಮೊದಲಾದ ಪ್ರಮುಖರು ಕೇಂದ್ರ ಸರ್ಕಾರದ ಆರ್ಥಿಕ, ಕಾರ್ಮಿಕ ನೀತಿಗಳನ್ನು ಖಂಡಿಸಿದರು.

    ಮುಖಂಡರಾದ ಜಿ.ಸಿ.ಸುರೇಶ್‌ಬಾಬು, ಟಿ.ಶಫಿವುಲ್ಲಾ, ಸಿ.ಕೆ.ಗೌಸ್‌ಪೀರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ವಕೀಲ ಸಿ.ಶಿವುಯಾದವ್, ಬಡಗಿ ಕೆಲಸಗಾರರ ಸಂಘದ ಅಧ್ಯಕ್ಷ ಎ.ಜಾಕೀರ್‌ಹುಸೇನ್ ಸೇರಿ ವಿವಿಧ ಸಂಘಟನೆಗಳ ನೂರಾರು ಕಾರ್ಮಿಕರು ಹಾಗೂ ಕಾರ್ಮಿಕ ಮುಖಂಡರು ಇದ್ದರು.

    ಪ್ರತಿಭಟನೆ ಹಿನ್ನೆಲೆಯಲ್ಲಿ ಗಾಂಧಿ ವೃತ್ತ, ಡಿಸಿ ಕಚೇರಿ ಬಳಿ, ಒನಕೆ ಓಬವ್ವ ವೃತ್ತ, ಬಸ್ ನಿಲ್ದಾಣಗಳ ಸಹಿತ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts