More

    ಜಿಲ್ಲೆಯಲ್ಲೂ ಕರೊನಾದೆಡೆ ಮುನ್ನೆಚ್ಚರಿಕೆ

    ಚಿತ್ರದುರ್ಗ: ಜಗತ್ತಿನಾದ್ಯಂತ ಸದ್ದು ಮಾಡುತ್ತಿರುವ ಮಾರಣಾಂತಿಕ ಕರೊನಾ ವೈರಸ್ ಕುರಿತು ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಿದೆ.

    ಶಂಕಿತ ಸೋಂಕು ಪ್ರಕರಣಗಳಿಗೆಂದೇ ಜಿಲ್ಲಾಸ್ಪತ್ರೆಯಲ್ಲಿ 2 ಹಾಸಿಗೆಗಳ ಪ್ರತ್ಯೇಕ ವಾರ್ಡ್ ಸಿದ್ಧಪಡಿಸಲಾಗಿದೆ. ಸಂಶಯಾಸ್ಪದ ಪ್ರಕರಣಗಳೆಡೆ ನಿಗಾ, ಸೋಂಕು ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ, ಪ್ರವಾಸ ವಿವರ ಪಡೆಯಬೇಕು. ಗ್ಲೌಸ್, ಮಾಸ್ಕ್ ಇತ್ಯಾದಿ ಅವಶ್ಯ ವಸ್ತುಗಳ ಸಮರ್ಪಕ ದಾಸ್ತಾನು ಇರುವಂತೆ ನೋಡಿಕೊಳ್ಳ ಬೇಕೆಂದು ವೈದ್ಯರು ಹಾಗೂ ಸಿಬ್ಬಂದಿಗೆ ಇಲಾಖೆ ಸೂಚಿಸಿದೆ.

    ಔಷಧವಿಲ್ಲ: ಸೋಂಕಿಗೆ ನಿರ್ದಿಷ್ಟ, ಪರಿಣಾಮಕಾರಿ ಔಷಧ ಅಥವಾ ಲಸಿಕೆ ಇಲ್ಲ. ಆದ್ದರಿಂದ ವೈಯಕ್ತಿಕ ಸ್ವಚ್ಛತೆಗೆ ಗಮನ ಕೊಡಬೇಕು. ಕೆಮ್ಮು, ಸೀನು ಸಂದರ್ಭ ಕರವಸ್ತ್ರ ಅಥವಾ ಟಿಶ್ಯೂ ಪೇಪರ್‌ನಿಂದ ಮೂಗನ್ನು ಮುಚ್ಚಿ, ಬಳಸಿದ ಬಳಿಕ ಸಮರ್ಪಕವಾಗಿ ವಿಲೇ ಮಾಡಬೇಕು. ಸೋಂಕು ಪೀಡಿತರ ಸಮೀಪ ಹೋಗಬಾರದು.

    ನೆಗಡಿ, ಶ್ವಾಸಕೋಶದ ಸೋಂಕಿಗೆ ಕಾರಣವಾಗುವ ವೈರಸ್‌ನ ಹೊಸ ತಳಿಯಾದ ನೊವೆಲ್ ಕರೊನಾ ವೈರಸ್ ಈ ಹಿಂದೆ ಮನುಷ್ಯರಲ್ಲಿ ಕಂಡು ಬಂದಿರಲಿಲ್ಲ. ಇದು ವೈರಸ್‌ಗಳಲ್ಲೇ ದೊಡ್ಡ ಪ್ರಭೇದವಾಗಿದೆ. ಈಗ ಮನುಷ್ಯನ ಅನಾರೋಗ್ಯಕ್ಕೂ ಕಾರಣವಾಗುತ್ತಿದೆ. 2002ರಲ್ಲಿ ಮೊದಲ ಬಾರಿಗೆ ಸಾರ್ಸ್ ವೈರಸ್‌ಗೆ ತುತ್ತಾಗಿದ್ದ ಚೀನಾದಲ್ಲಿ ಅಂದಾಜು 18 ವರ್ಷಗಳ ನಂತರ ಅಲ್ಲಿಯ ವುಹಾನ್ ನಗರದಲ್ಲಿ ಮೊದಲ ಬಾರಿಗೆ ಕಾಣಿಸಿರುವ ಕರೊನಾ ವಿಶ್ವದೆಲ್ಲೆಡೆ ಹರಡಲು ಆರಂಭವಾಗಿರುವುದು ಆತಂಕಕ್ಕೆ ಕಾರಣವಾಗಿದೆ.

    ಲಕ್ಷಣಗಳು: ಸೋಂಕು ತಗುಲಿದ ವ್ಯಕ್ತಿಯಲ್ಲಿ ಜ್ವರ, ನೆಗಡಿ, ಕೆಮ್ಮು, ಉಸಿರಾಟ ತೊಂದರೆ ಹಾಗೂ ಭೇದಿ ಕಾಣಿಸಿಕೊಳ್ಳುತ್ತದೆ. ಕಳೆದ 14 ದಿನದೊಳಗೆ ಚೀನಾ ಅಥವಾ ಕೇರಳಕ್ಕೆ ಹೋಗಿ ಬಂದಿದ್ದರೆ ಅಥವಾ ರೋಗದ ಲಕ್ಷಣಗಳಿದ್ದಲ್ಲಿ ಕೂಡಲೇ ಚಿಕಿತ್ಸೆ ಪಡೆಯಬೇಕು.

    ಅನಾರೋಗ್ಯ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕ ಹಾಗೂ ಪ್ರಾಣಿಗಳ ಒಡನಾಟ, ಬೇಯಿಸದ ಮಾಂಸ ಸೇವನೆ ಬೇಡ. ಪ್ರಾಣಿಗಳ ಸಾಕಣೆ, ಮಾರಾಟ ಕೇಂದ್ರಗಳು ಹಾಗೂ ಪ್ರಾಣಿಗಳ ಹತ್ಯೆ ಸ್ಥಳಗಳಿಗೆ ಹೋಗಬಾರದು. ನೆಗಡಿ, ಕೆಮ್ಮು ಇದ್ದರೆ ಮಾಸ್ಕ್ ಧರಿಸಬೇಕು. ಚಿಕಿತ್ಸೆ ವೇಳೆ ಪ್ರವಾಸದ ವಿವರ ವನ್ನು ವೈದ್ಯರಿಗೆ ತಿಳಿಸಬೇಕು ಹಾಗೂ ಮನೆಯಲ್ಲಿ ಪ್ರತ್ಯೇಕತೆ ಕಾಯ್ದು ಕೊಳ್ಳಬೇಕು.

    ಸಹಾಯವಾಣಿ: ಬೆಂಗಳೂರಿನ ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆ, ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗಳನ್ನು ಈ ಸೋಂಕು ಚಿಕಿತ್ಸೆಗೆ ಗುರುತಿಸಲಾಗಿದೆ. ಶಂಕಿತ ಪ್ರಕರಣಗಳಲ್ಲಿ ರೋಗಿ ರಕ್ತ ಹಾಗೂ ಗಂಟಲು ದ್ರವವನ್ನು ಬೆಂಗಳೂರಿನ ಎನ್‌ಐವಿ ಘಟಕದಿಂದ ಪುಣೆ ಎನ್‌ಐವಿಗೆ ಕಳಿಸಿ ಪರೀಕ್ಷಿಸಿ ಸೋಂಕನ್ನು ಖಚಿತ ಪಡಿಸಿಕೊಳ್ಳಬೇಕಿದೆ. ತುರ್ತು ಸಂದರ್ಭದಲ್ಲಿ ಸಹಾಯವಾಣಿ 104 ಅಥವಾ ಜಿಲ್ಲಾ ಆರೋಗ್ಯ ಕಚೇರಿ ದೂರವಾಣಿ ಸಂಖ್ಯೆ 08194-235464 ಸಂಪರ್ಕಿಸುವಂತೆ ಇಲಾಖೆ ನಾಗರಿಕರಿಗೆ ಸಲಹೆ ನೀಡಿದೆ.

    ಅನಗತ್ಯ ಆತಂಕ ಪಡಬೇಕಿಲ್ಲ: ಜನತೆ ಈ ಬಗ್ಗೆ ವಿನಾಕಾರಣ ಆತಂಕ ಪಡಬೇಕಿಲ್ಲ. ಜಿಲ್ಲೆಯಲ್ಲಿ ಯಾವುದೇ ಪ್ರಕರಣ ವರದಿ ಆಗಿಲ್ಲ. ನಗರದ ಕೋಟೆ ಸಹಿತ ಜಿಲ್ಲೆ ಪ್ರಮುಖ ಪ್ರವಾಸಿ ತಾಣಗಳಿಗೆ ಬರುವವರ ಹಾಗೂ ವಲಸಿಗರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ಸಿದ್ಧಪಡಿಸಲಾಗಿದೆ ಎಂದು ಡಿಎಚ್‌ಒ ಡಾ.ಸಿ.ಎಲ್.ಪಾಲಾಕ್ಷ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts