More

    ಚಿತ್ರಾವತಿ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ರಥೋತ್ಸವ ಅದ್ದೂರಿ

    ಚಿಕ್ಕಬಳ್ಳಾಪುರ: ಪುರಾಣ ಪ್ರಸಿದ್ಧ ತಾಲೂಕಿನ ಚಿತ್ರಾವತಿ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವವು ಶುಕ್ರವಾರ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು.

    ಚಿತ್ರಾವತಿ ಜಾತ್ರಾ ಮಹೋತ್ಸವ ಸೇವಾ ಸಮಿತಿಯಿಂದ ಶ್ರೀ ಸುಬ್ರಹ್ಮಣ್ಯೇಶ್ವರ, ಈಶ್ವರ, ಗಣಪತಿ, ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ದೇವರಿಗೆ ಪಂಚಾಮೃತ ಅಭಿಷೇಕ, ವಿಶೇಷ ಹೂವಿನ ಅಲಂಕಾರ ನೆರವೆರಿಸಿ ಕುಂಕುಮಾರ್ಚನೆ, ಸಹಸ್ರ ನಾಮಾರ್ಚನೆ ಸೇರಿ ಧಾರ್ಮಿಕ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳಲಾಯಿತು.

    ಬೆಳಗ್ಗೆಯಿಂದಲೇ ಭಕ್ತರು ವಿಶೇಷ ಪೂಜೆ ಸಲ್ಲಿಸಿ ಸ್ವಾಮಿಯ ದರ್ಶನ ಪಡೆದರು. ಆಲಯದ ಆವರಣದಲ್ಲಿರುವ ಹುತ್ತಗಳಿಗೆ ಹರಕೆ ಹೊತ್ತು ಹಾಲೆರೆದರು. ಕೆಲವರು ದೇವರಿಗೆ ಮುಡಿ ಸಮರ್ಪಿಸಿ, ಕಲ್ಯಾಣಿಯಲ್ಲಿ ಸ್ನಾನ ಮಾಡಿ, ಪೂಜೆ ಸಲ್ಲಿಸಿದರು.

    ಜಾತ್ರೆಯ ಹಿನ್ನೆಲೆಯಲ್ಲಿ ತಿಂಡಿ ತಿನಿಸು, ಆಟಿಕೆ ವಸ್ತುಗಳ ಅಂಗಡಿಗಳು ತಲೆ ಎತ್ತಿದ್ದು ವ್ಯಾಪಾರ ಜೋರಾಗಿತ್ತು,
    ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಚೆಂಡಿನಲ್ಲಿ ಬೆಂಕಿ ಪೊಟ್ಟಣ ಹೊಡೆಯುವುದು, ವಸ್ತುಗಳ ಮೇಲೆ ರಿಂಗ್ ಎಸೆಯುವ ಸ್ಪರ್ಧೆಗಳು ನಡೆದವು. ರಂಗಿನಾಟ, ಆಟದ ರೈಲು ಮನರಂಜನೆ ನೀಡಿದವು. ಮಕ್ಕಳು ಆಟಿಕೆ, ತಿಂಡಿ ತಿನಿಸುಗಳನ್ನು ಕೊಡಿಸಲು ಒತ್ತಾಯಿಸಿದ್ದ ದೃಶ್ಯಗಳು ಕಂಡು ಬಂದವು. ಬಿಸಿಲಿನ ಬೇಗೆಯಿಂದ ದಣಿವು ನೀಗಿಸಿಕೊಳ್ಳಲು ಬಹುತೇಕರು ಐಸ್ ಕ್ರೀಂ, ಮಜ್ಜಿಗೆ, ಪಾನಕ ಸೇವನೆಯ ಮೊರೆ ಹೋದರು.

    ತಾಲೂಕಿನ ವಿವಿಧೆಡೆ ಮಾತ್ರವಲ್ಲದೇ ಬಾಗೇಪಲ್ಲಿ, ಗೌರಿಬಿದನೂರು, ಶಿಡ್ಲಘಟ್ಟ ಸೇರಿ ವಿವಿಧೆಡೆಯಿಂದ ಭಕ್ತರು ಜಾತ್ರೆಗೆ ಆಗಮಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.

    ದೇವರ ರಥೋತ್ಸವ : ಆಲಯದ ಆವರಣದಲ್ಲಿ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ಉತ್ಸವ ಮೂರ್ತಿ ರಥದಲ್ಲಿರಿಸಿ ಮೆರವಣಿಗೆ ನಡೆಸಲಾಯಿತು. ಭಕ್ತರು ದೇವರ ನಾಮ ಘೋಷಣೆಗಳೊಂದಿಗೆ ರಥ ಎಳೆದರು. ದವನ, ಬಾಳೆಹಣ್ಣನ್ನು ರಥದ ಮೇಲೆ ಎಸೆದು ಇಷ್ಟಾರ್ಥಗಳನ್ನು ಈಡೇರಿಸುವಂತೆ ಪ್ರಾರ್ಥಿಸಿದರು. ದೇವಾಲಯ ಸಮಿತಿ ಸೇರಿ ವಿವಿಧ ಸಂಘ ಸಂಸ್ಥೆಗಳು ಭಕ್ತರಿಗಾಗಿ ಅನ್ನಸಂತರ್ಪಣೆ ಕೈಗೊಂಡಿದ್ದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts