More

    ಮೃತಪಟ್ಟ ಒಬ್ಬೊಬ್ಬರದು ಒಂದೊಂದು ಕತೆ ; ಪಾಲಕರನ್ನು ಕಳೆದುಕೊಂಡು ಮಗು ಅನಾಥ, ಮದುವೆ ಸಂಭ್ರಮ ಕಸಿದ ಜವರಾಯ

    ಚಿಕ್ಕಬಳ್ಳಾಪುರ: ಮರಿನಾಯಕನಹಳ್ಳಿಯಲ್ಲಿ ಭಾನುವಾರ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಒಬ್ಬೊಬ್ಬರದು ಒಂದೊಂದು ಕತೆ. ಜವರಾಯ ಮದುವೆಯ ಸಂಭ್ರಮವನ್ನು ಕಸಿದು, ಕುಟುಂಬವನ್ನು ದುಃಖದ ಮಡುವಿಗೆ ತಳ್ಳಿದರೆ, ಮತ್ತೊಂದೆಡೆ ದುರ್ಘಟನೆಯಲ್ಲಿ ತಂದೆ-ತಾಯಿ ಕಳೆದುಕೊಂಡು ಮಗುವೊಂದು ಅನಾಥವಾಗಿದೆ.

    ಬಸ್ ಸೌಕರ್ಯ ಇಲ್ಲದ ಹಿನ್ನೆಲೆಯಲ್ಲಿ ಪ್ರಯಾಣಿಕರು ಜೀಪು, ಟಾಟಾ ಏಸ್, ಟೆಂಪೋ ಮತ್ತು ಆಟೋಗಳನ್ನೇ ನೆಚ್ಚಿಕೊಳ್ಳುವಂತಾಗಿದೆ. ಅದರಂತೆ ರಾಯಲಪಾಡು ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಜನರು, ಜೀಪಿನ ಚಾಲಕ ರಮೇಶ್‌ನ ಮಾತು ಕೇಳಿ ಜೀಪು ಹತ್ತಿ ಆತನೊಂದಿಗೆ ಯಮನ ಊರಿಗೆ ಪಯಣಿಸಿದ್ದಾರೆ!

    ಮದುವೆ ಸಂಭ್ರಮಕ್ಕೆ ಬ್ರೇಕ್ : ಆಂಧ್ರ ಮೂಲದ ನಾರನ್ನಗಾರಪಲ್ಲಿಯ ವೆಂಕಟಲಕ್ಷ್ಮಮ್ಮ 8 ವರ್ಷದ ಮೊಮ್ಮಗನೊಂದಿಗೆ ಚಿಂತಾಮಣಿ ತಾಲೂಕಿನ ಮಿಂಡಿಗಲ್‌ನಲ್ಲಿ ನಡೆಯುತ್ತಿದ್ದ ತಮ್ಮನ ಮಗನ ಮದುವೆಗೆ ಬರುತ್ತಿದ್ದಳು. ಅದೃಷ್ಟವಶಾತ್ ಹುಡುಗನಿಗೆ ಸಣ್ಣಪುಟ್ಟ ಗಾಯವಾಗಿದ್ದು, ವೃದ್ಧೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಮದುವೆಯ ಸಂಭ್ರಮದಲ್ಲಿದ್ದ ಸಂಬಂಧಿಕರು ಆಘಾತಕ್ಕೊಳಗಾಗಿದ್ದಾರೆ. ಮದುವೆ ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ.

    ಅನಾಥವಾದ ವರ್ಷದ ಮಗು: ಅಪಘಾತದಲ್ಲಿ ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಟಿ.ಸುವರನಹಳ್ಳಿಯ ರಾಜಪ್ಪ ಮತ್ತು ಮೌನಿಕ ದಂಪತಿ ಮೃತಪಟ್ಟು, ಅವರ ಒಂದು ವರ್ಷದ ಮಗು ಅನಾಥವಾಗಿದೆ. ಜೆಸಿಬಿ ಚಾಲಕನಾಗಿದ್ದ ರಾಜಪ್ಪ ಗಣೇಶನ ಹಬ್ಬಕ್ಕೆ ಅತ್ತೆಯ ಊರು ಆಂಧ್ರದ ಚಿತ್ತೂರಿಗೆ ಪತ್ನಿ ಹಾಗೂ ಮಗುವಿನೊಂದಿಗೆ ತೆರಳಿ ಬೆಂಗಳೂರಿಗೆ ವಾಪಸಾಗುತ್ತಿದ್ದ. ರಾಯಲುಪಾಡುವಿನಲ್ಲಿ ಗಂಟೆಗಟ್ಟಲೇ ಕಾದರೂ ಬಸ್ ಬಂದಿಲ್ಲ. ಇದೇ ವೇಳೆ ಜೀಪಿನ ಚಾಲಕ ರಮೇಶ್ ಕರೆಯುತ್ತಿದ್ದಂತೆ ಚಿಂತಾಮಣಿಗೆ ತೆರಳಿ, ಅಲ್ಲಿಂದ ಬೆಂಗಳೂರಿಗೆ ಹೋಗುವ ಯೋಚನೆಯಲ್ಲಿ ಜೀಪು ಹತ್ತಿದ್ದೇ ಮುಳುವಾಗಿದೆ. ಅಪಘಾತದ ಸ್ಥಳದಲ್ಲಿಯೇ ರಾಜಪ್ಪ ಮೃತಪಟ್ಟರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೌನಿಕಾಳ ಜೀವ ಹೋಗಿದೆ. ಕಾಲು ಮುರಿದ ಹಿನ್ನೆಲೆಯಲ್ಲಿ ಮಗುವಿಗೆ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ತಂದೆ ಸಾವಿನ ನಡುವೆ ಪರೀಕ್ಷೆ: ಅಪಘಾತದಲ್ಲಿ ತಂದೆ (ಜೀಪಿನ ಚಾಲಕ ರಮೇಶ್) ಮೃತಪಟ್ಟರೂ ಮಗ ಆರ್.ವಿಜಯ್ ಕುಮಾರ್ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿ.ಎಸ್ಸಿ (ಮೈಕ್ರೋ ಬಯಲಾಜಿಯ) ಅಂತಿಮ ವರ್ಷದ ಪರೀಕ್ಷೆ ಬರೆದು, ಬಳಿಕ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದಾನೆ. 2009ರಲ್ಲಿ ರಮೇಶ್ ಸ್ವಂತ ಬಳಕೆಗಾಗಿ ಜೀಪು ಖರೀದಿಸಿದ್ದರು. ಆದರೆ, ಬದುಕಿನ ಅನಿವಾರ್ಯತೆಗಾಗಿ ಪ್ರಯಾಣಿಕರ ಸಾಗಣೆ ಮಾಡುತ್ತಿದ್ದರು. ಇತ್ತೀಚೆಗೆ ಶ್ರೀನಿವಾಸಪುರದಲ್ಲಿ ಪೊಲೀಸರು ಎಚ್ಚರಿಕೆ ನೀಡಿದ್ದರು. ಇದರಿಂದ ರಾಯಲಪಾಡು ಮತ್ತು ಚಿಂತಾಮಣಿ ಮಾರ್ಗದಲ್ಲಿ ವಾಹನ ಓಡಿಸುತ್ತಿದ್ದರು ಎನ್ನಲಾಗಿದೆ.

    ನನ್ನನ್ನು ಚೆನ್ನಾಗಿ ಓದಿಸಬೇಕೆಂಬ ಗುರಿಯೊಂದಿಗೆ ವಾಹನ ಓಡಿಸಿ ದುಡಿಯುತ್ತಿದ್ದರು. ಅವರ ಕನಸಿನಂತೆ ವಿದ್ಯಾಭ್ಯಾಸ ಮುಗಿಸಿ, ಒಳ್ಳೆಯ ಹುದ್ದೆ ಗಳಿಸಲು ಶ್ರಮಿಸುವೆ.
    ಆರ್.ವಿಜಯ್ ಕುಮಾರ್, ಮೃತ ಚಾಲಕ ರಮೇಶ್ ಪುತ್ರ

    ನಾವೆಲ್ಲರೂ ಮದುವೆಯ ಸಂಭ್ರಮದಲ್ಲಿ ತೇಲಾಡುತ್ತಿದ್ದೆವು. ಆದರೆ, ದಿಢೀರನೇ ಆಘಾತದ ಸುದ್ದಿ ಬಂತು. ದುಃಖದಲ್ಲಿ ಸಾವನ್ನು ಅರಗಿಕೊಳ್ಳಲಾಗುತ್ತಿಲ್ಲ.
    ಮನೋಜ್, ಮೃತ ವೆಂಕಟಲಕ್ಷ್ಮಮ್ಮ ಸಂಬಂಧಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts