More

    ಚೀನಾ ವೈರಸ್ ಬಗ್ಗೆ ಸರ್ಕಾರದ ಮುಂಜಾಗ್ರತಾ ಕ್ರಮ;ಆಸ್ಪತ್ರೆ ಸಿಬ್ಬಂದಿಗಳಿಗೆ ಮಾಸ್ಕ್

    ಬೆಂಗಳೂರು:
    ಚೀನಾ ವೈರಸ್ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದು, ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳಿಗೂ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಿದೆ.
    ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೋವಿಡ್ ನಂತರದಲ್ಲಿ ಚೀನಾದಲ್ಲಿ ಮತ್ತೆ ಆತಂಕ ಸೃಷ್ಟಿಸಿರುವ ಮಕ್ಕಳ ಉಸಿರಾಟದ ಕಾಯಿಲೆ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಲಾಗಿದೆ.
    ಈಗಾಗಲೇ ಕೇಂದ್ರ ಸರ್ಕಾರ ನೀಡಿರುವ ಮಾರ್ಗಸೂಚಿ ಅನ್ವಯ ರಾಜ್ಯ ಸರ್ಕಾರ ಕೂಡ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದ್ದು, ಇದನ್ನು ಕಟ್ಟುನಿಟ್ಟಾಗಿ ಆಸ್ಪತ್ರೆ ಮತ್ತು ಆರೋಗ್ಯ ಸಿಬ್ಬಂದಿಗಳು ಪಾಲಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.
    ಸಾರ್ವಜನಿಕರು ಈಗಲೇ ಈ ಬಗ್ಗೆ ಆತಂಕಪಟ್ಟುಕೊಳ್ಳುವುದು ಬೇಡ. ಮುಂಜಾಗ್ರತೆಯಾಗಿ ಸರ್ಕಾರ ಆಗಿಂದಾಗ್ಗೆ ತೆಗೆದುಕೊಳ್ಳುವ ನಿರ್ಣಯಯಗಳ ಬಗ್ಗೆ ಗಮನಹರಿಸಿ, ಅದನ್ನು ಪರಿಪಾಲನೆ ಮಾಡಲು ಸೂಚಿಸುವಂತೆ ಸಭೆಯಲ್ಲಿ ನಿರ್ಣಯಿಸಲಾಗಿದೆ.
    ಕೆಲವು ಆಸ್ಪತ್ರೆಗಳಲ್ಲಿ ಉಸಿರಾಟದ ಕಾರಣಕ್ಕಾಗಿ ದಾಖಲಾಗುವವರ ಸಂಖ್ಯೆ ಹೆಚ್ಚಳವಾಗುತ್ತಿರುವ ಬಗ್ಗೆ ಬರುತ್ತಿರುವ ವರದಿಗಳ ಬಗ್ಗೆಯೂ ಪರಿಶೀಲನೆ ಮಾಡಲಾಗುವುದು. ಸಾಧಾರಣವಾಗಿ ನವೆಂಬರ್, ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಚಳಿಗಾಲದ ಕಾರಣಕ್ಕಾಗಿ ಉಸಿರಾಟದ ಸಮಸ್ಯೆ ಪ್ರಕರಣಗಳು ವರದಿಯಾಗುತ್ತವೆ. ಅದನ್ನು ಚೀನಾ ವೈರಸ್‌ಗೆ ಹೋಲಿಕೆ ಮಾಡುವುದು ಸರಿಯಲ್ಲ. ಆದರೂ ಬಗ್ಗೆ ಆರೋಗ್ಯ ಇಲಾಖೆ ನಿಗಾ ಇರಿಸಿ ಮೇಲುಸ್ತುವಾರಿ ಮಾಡಲು ನಿರ್ಣಯಿಸಲಾಗಿದೆ.
    ಮಕ್ಕಳಲ್ಲಿ ಉಸಿರಾಟದ ಕಾಯಿಲೆ ಹೆಚ್ಚುತ್ತಿದ್ದು, ಇದಕ್ಕೆ ಇನ್ಫೋಯೇನ್ಝಾ , ಮೆಕೋಪ್ಲಾಸ್ಮಾ ನ್ಯುಮೋನಿಯಾ, ಸಾರ್ಸ್-ಕೋವಿಡ್ ನಂತಹ ಸಾಮಾನ್ಯ ಕಾಯಿಲೆಗಳು ಕಾರಣ ಎನ್ನಲಾಗಿದ್ದು, ರಾಜ್ಯದಲ್ಲೂ ಇನ್ಫೋಯೇನ್ಝಾ ಪ್ರಕರಣಗಳ ನಿರ್ವಹಣೆಗೆ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ.
    ಆಸ್ಪತ್ರೆಯಲ್ಲಿ ವರದಿಯಾಗುವ ಶೀತಜ್ವರ (ಐಎಲ್‌ಐ) ಮತ್ತು ಉಸಿರಾಟದ ತೊಂದರೆ (ಸಾರಿ) ಪ್ರಕರಣಗಳ ಕುರಿತು ಐಡಿಎಸ್‌ಪಿ-ಐಎಚ್‌ಐಪಿ ಪೋರ್ಟಲ್‌ನಲ್ಲಿ ದಾಖಲಿಸುವಂತೆ ತಿಳಿಸಲಾಗಿದೆ.
    ಜಿಲ್ಲಾ ಕಣ್ಗಾವಲು ಘಟಕಗಳ ಅಧಿಕಾರಿಗಳು ಐಎಲ್‌ಐ ಮತ್ತು ಸಾರಿ ಪ್ರಕರಣಗಳ ಕುರಿತು ಸೂಕ್ತ ಮೇಲ್ವಿಚಾರಣೆ ನಡೆಸುವಂತೆ, ಅಗತ್ಯ ಔಷಧಗಳ ದಾಸ್ತಾನು ಮಾಡಿಕೊಳ್ಳುವಂತೆ ಮತ್ತು ಎಲ್ಲ ಆರೋಗ್ಯ ಸೇವೆಗಳಲ್ಲಿ ಆರೋಗ್ಯ ಕಾರ್ಯಕರ್ತರನ್ನು ಬಳಸಿಕೊಳ್ಳುವಂತೆ ಜತೆಗೆ ವೈದ್ಯರು, ಶುಶ್ರೂಷಕರು ಸೇರಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಲು ನಿರ್ಧರಿಸಲಾಗಿದೆ.
    ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸಂಸ್ಥೆಗಳಲ್ಲಿ ಕೋವಿಡ್ ಪ್ರಕರಣಗಳನ್ನು ನಿರ್ವಹಿಸಲು ಗೊತ್ತುಪಡಿಸಿದ ಎಲ್ಲ ಆಸ್ಪತ್ರೆಗಳು ತಕ್ಷಣವೇ ವೈದ್ಯಕೀಯ ಮೂಲಸೌಕರ್ಯ, ವೈದ್ಯಕೀಯ ಮತ್ತು ಅರೆವೈದ್ಯಕೀಯ ಮಾನವಶಕ್ತಿ, ಆಮ್ಲಜನಕ ಹಾಸಿಗೆಗಳು, ಪ್ರತ್ಯೇಕ ಹಾಸಿಗೆಗಳು, ವೆಂಟಿಲೇಟರ್‌ಗಳು, ಪಿಎಸ್‌ಎ ಪ್ಲಾಂಟ್‌ಗಳು, ಎಲ್‌ಎಂಒ ಪ್ಲಾಂಟ್‌ಗಳ ಸಂಪನ್ಮೂಲಗಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ತಿಳಿಸಲಾಗಿದೆ.
    ಆಮ್ಲಜನಕ ಸಿಲಿಂಡರ್‌ಗಳು, ಔಷಧಗಳು, ಪಿಪಿಇ ಕಿಟ್‌ಗಳು, ಪರೀಕ್ಷಾ ಕಿಟ್‌ಗಳು ಮತ್ತು ಲ್ಯಾಬ್ ಸೌಲಭ್ಯಗಳು, ಆಂಬ್ಯುಲೆನ್ಸ್ ಸೇರಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆಯೂ ಸೂಚಿಸಲು ಸಭೆಯಲ್ಲಿ ತಿಳಿಸಲಾಗಿದೆ.
    ಕೋವಿಡ್, ಇನ್ಫೂಯೇನ್ಝಾ ವೈರಸ್, ಅಡೆನೋ ವೈರಸ್ ಸೇರಿ ಯಾವುದೇ ಸೋಂಕು ಮಾದರಿಗಳನ್ನು ಹತ್ತಿರದ ಪ್ರಯೋಗಾಲಯಗಳಿಗೆ ಕಳಿಹಿಸಬೇಕು ಹಾಗೂ ರಾಜ್ಯದ ಎಲ್ಲ ವೈರಾಣು ಸಂಶೋಧನೆ ಮತ್ತು ರೋಗಪತ್ತೆ ಪ್ರಯೋಗಾಲಯಗಳು ಐಎಚ್‌ಐಪಿ ಪೋರ್ಟಲ್‌ನಲ್ಲಿ ಪರೀಕ್ಷಾ ವರದಿ ದಾಖಲಿಸಲು ಸೂಚಿಸಲಾಗಿದೆ.

    *ಚೀನಾ ವೈರಸ್ ಬಗ್ಗೆ ಸಾರ್ವಜನಿಕರು ಆತಂಕಪಟ್ಟುಕೊಳ್ಳುವುದು ಬೇಡ. ಸರ್ಕಾರ ಈ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಸಾಧಾರಣವಾಗಿ ನವೆಂಬರ್, ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಚಳಿಗಾಲದ ಕಾರಣಕ್ಕಾಗಿ ಉಸಿರಾಟದ ಸಮಸ್ಯೆ ಪ್ರಕರಣಗಳು ವರದಿಯಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಆದರೆ, ಇದನ್ನು ಚೀನಾ ವೈರಸ್‌ಗೆ ಹೋಲಿಕೆ ಮಾಡುವುದು ಸರಿಯಲ್ಲ.
    -ದಿನೇಶ್ ಗುಂಡೂರಾವ್, ಆರೋಗ್ಯ ಸಚಿವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts