More

    ವಿಶ್ವಗುರು: ಚೀನಾಕ್ಕೆ ಈಗ ಮಾಡು ಇಲ್ಲವೇ ಮಡಿ!

    ವಿಶ್ವಗುರು: ಚೀನಾಕ್ಕೆ ಈಗ ಮಾಡು ಇಲ್ಲವೇ ಮಡಿ!

    ಟ್ರಂಪ್ ಬರುವವರೆಗೂ ಜಗತ್ತು ಇದರ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಚೀನಾ ಹಣಕಾಸಿನ ನೆರವು ಕೊಡುತ್ತದೆ, ಹೂಡಿಕೆ ಮಾಡಿದರೆ ಲಾಭ ತಂದುಕೊಡುತ್ತದೆ. ಎಲ್ಲಾ ರಾಷ್ಟ್ರಗಳೂ ಇದನ್ನೇ ನೆಚ್ಚಿಕೊಂಡಿದ್ದವು. ಆದರೆ ಸಾಲ ಪಡೆದುಕೊಂಡ ರಾಷ್ಟ್ರಗಳು ಚೀನಾದೆದುರು ಮಂಡಿಯೂರಿ ಕುಳಿತುಬಿಡಬೇಕಾಗುತ್ತದೆ ಎಂಬುದನ್ನು ಅರಿಯಲಾರಂಭಿಸಿದವು.

    ‘ನಿಮ್ಮ ಬೆಳವಣಿಗೆಯನ್ನು ಸುದೀರ್ಘ ಕಾಲ ಕಾಯ್ದುಕೊಂಡು ಬಂದಿರೆಂದರೆ ಆಳುವ ನಾಯಕನನ್ನು ಬದಿಗೆ ಸರಿಸಿ ನೀವೇ ಆಳುವುದು ನಿಶ್ಚಿತ’. ಹಾಗೊಂದು ಮಾತು ರಾಜತಾಂತ್ರಿಕ ವಲಯಗಳಲ್ಲಿ ಹರಿದಾಡುತ್ತದೆ. ಸುದೀರ್ಘವಾದ ಮತ್ತು ಅಚಲವಾದ ಬೆಳವಣಿಗೆ ಹೊಂದಿರುವ ಚೀನಾ ಇಂದು ಅಮೆರಿಕಾವನ್ನು ಬದಿಗೆ ಸರಿಸುವ ಮಟ್ಟಕ್ಕೆ ನಿಂತಿರುವುದನ್ನು ನೋಡಿದರೆ ಆ ಮಾತಿಗೆ ಖಂಡಿತ ತೂಕವಿದೆ ಎನಿಸುತ್ತದೆ. ತನ್ನ ಕುರಿತಂತೆ ಜಗತ್ತು ಗೊಂದಲದಲ್ಲಿರಬೇಕೆಂಬುದನ್ನೇ ಚೀನಾ ರಣನೀತಿಯಾಗಿಸಿಕೊಂಡಿದೆ. ಅದು ಏಷ್ಯಾದ ಶಕ್ತಿಯಾಗಲು ಬಯಸುತ್ತಿದೆಯೋ ಅಥವಾ ಅಮೆರಿಕಾವನ್ನೇ ಬದಿಗೆ ಸರಿಸಲು ಯತ್ನಿಸುತ್ತಿದೆಯೋ ಈ ಕ್ಷಣಕ್ಕೂ ಯಾರಿಗೂ ಅರ್ಥವಾಗುತ್ತಿಲ್ಲ. ಚೀನಾಕ್ಕೆ ಟಿಬೆಟ್ಟು ಸಾಕೋ ಅಥವಾ ಲಡಾಖ್ ಬೇಕೋ ನಮ್ಮಲ್ಲೇ ಅನೇಕರಿಗೆ ಅರ್ಥವಾಗಿಲ್ಲ. ನೆಹರೂ ಕಾಲದಲ್ಲಿ ಭಾರತದೊಳಗೆ ನುಗ್ಗಿದ ಚೀನಾ ಆತುರಾತುರವಾಗಿ ತಾನು ಪಡಕೊಂಡಿದ್ದ ಭೂಪ್ರದೇಶವನ್ನು ಬಿಟ್ಟು ಮರಳಿಹೊರಟುಬಿಟ್ಟಿತು. ಅದಕ್ಕೆ ಒಂದು ಕಾರಣ ಭಾರತದ ವೈಮಾನಿಕ ದಾಳಿಯ ಸಿದ್ಧತೆ ಎಂದೂ ಹೇಳುತ್ತಾರೆ. ಆದರೆ ಆ ಯುದ್ಧದಲ್ಲಿ ಗೆದ್ದೆನೆನ್ನುವ ಏಕಮಾತ್ರ ಹೆಗ್ಗಳಿಕೆಯಿಂದಲೇ ಇಂದಿಗೂ ಏಷ್ಯಾದಲ್ಲಿ ಸಾರ್ವಭೌಮತೆಯಿಂದ ಬೀಗುತ್ತಿದೆ ಚೀನಾ.

    ಅದಾದ ಐದು ವರ್ಷಗಳಲ್ಲೇ ನಡೆದ ಮತ್ತೊಂದು ಕದನದಲ್ಲಿ ಭಾರತೀಯ ಸೈನಿಕರು ಚೀನಿಯರ ಗರ್ವಭಂಗ ಮಾಡಿ ಕಳಿಸಿದ್ದರಲ್ಲಾ ಅದು ಚೀನಾದ ಇತಿಹಾಸ ಪಠ್ಯಗಳಲ್ಲಂತೂ ಇರಲಾರದು, ಭಾರತದಲ್ಲಾದರೂ ಇರಬೇಕಲ್ಲ. ಏಕೋ ಮರೆಮಾಚಲಾಗಿದೆ. ಅರಬ್ಬರು ಜಗತ್ತಿನಾದ್ಯಂತ ಭೂಮಾರ್ಗವನ್ನು ಬೆಸೆದರು. ಇಂಗ್ಲೀಷರು ಹೋದೆಡೆಯಲ್ಲೆಲ್ಲಾ ವಸಾಹತುಗಳನ್ನು ನಿರ್ವಿುಸಿದರು. ಭಾರತ ಜ್ಞಾನಸಾಮ್ರಾಜ್ಯವನ್ನು ಕಟ್ಟಿತು. ಅಮೆರಿಕಾ ಮಿಲಿಟರಿ ಶಕ್ತಿಯಿಂದ ಜಗತ್ತನ್ನು ಅದುಮಿಟ್ಟುಕೊಂಡಿತು. ಚೀನಾ ಇವೆಲ್ಲಕ್ಕಿಂತಲೂ ಭಿನ್ನವಾಗಿರಬೇಕು ಎಂಬ ಆಲೋಚನೆಯಿಂದಲೇ ತನ್ನ ಯುದ್ಧನೀತಿಯನ್ನು ವಿಶೇಷವಾಗಿ ರೂಪಿಸಿಕೊಂಡಿತು. ಸ್ವಾತಂತ್ರಾ್ಯನಂತರ ಭಾರತ ಪಶ್ಚಿಮದ ಮಾರ್ಗದಲ್ಲಿಯೇ ತನ್ನನ್ನು ರೂಪಿಸಿಕೊಳ್ಳುವ ಪ್ರಯತ್ನ ಮಾಡಿತು. ಆದರೆ ಚೀನಾ ಹೊಸದೊಂದು ಮಾರ್ಗವನ್ನೇ ಹುಡುಕುವ ಸಾಹಸಕ್ಕೆ ನಿಂತುಕೊಂಡಿತು. ಅನುಸರಿಸಿದರೆ ನಾವು ಹಿಂದೆಯೇ ಇರುತ್ತೇವೆ. ಹೊಸಮಾರ್ಗವನ್ನು ಹುಡುಕಿಕೊಂಡರೆ ಮಾತ್ರ ಗೆಲ್ಲುವುದು ಸಾಧ್ಯ ಎಂಬ ತಥ್ಯ ನಮಗೂ ಅರ್ಥವಾಗಲು ಕರೊನಾವೇ ಬರಬೇಕಾಯ್ತು! ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವದೇಶಿ ಪರಿಕಲ್ಪನೆಗಳನ್ನೇ ಉಂಡುಬೆಳೆದ ನರೇಂದ್ರ ಮೋದಿ ಕೂಡ ಇಂದು ಆತ್ಮನಿರ್ಭರತೆಯ ಮಾತನ್ನಾಡುತ್ತಿದ್ದಾರೆ. ಚೀನಾ ಇದನ್ನು ಮಾವೋ ಕಾಲದಲ್ಲೇ ಕಂಡುಕೊಂಡಿತ್ತು.

    ಆನಂತರ ಬಂದ ಪ್ರತಿಯೊಬ್ಬರೂ ಆ ಯೋಜನೆಗಳ ಜಾಡಿನಲ್ಲೇ ಹೆಜ್ಜೆ ಹಾಕುತ್ತಾ ಇಂದು ಚೀನಾವನ್ನು ಈ ಹಂತಕ್ಕೆ ಬೆಳೆಸಿ ನಿಲ್ಲಿಸಿದ್ದಾರೆ. ದೊಡ್ಡಣ್ಣನೆಂದು ಬೀಗುವ ಅಮೆರಿಕಾ ನಿಜಕ್ಕೂ ಆಂತರ್ಯದಲ್ಲಿ ಚೀನಾವನ್ನೆದುರಿಸುವ ಯಾವ ಸಾಮರ್ಥ್ಯವನ್ನೂ ಹೊಂದಿಲ್ಲ. ಆರ್ಥಿಕವಾಗಿ ಬಲವಾಗಿ ನಿಂತುಕೊಂಡಂತೆ ಚೀನಾ ಗುಪ್ತವಾಗಿಯೇ ತನ್ನ ವಿಶ್ವವನ್ನಾಳುವ ಯೋಜನೆಗಳನ್ನು ಸಾಕ್ಷಾತ್ಕರಿಸಿಕೊಳ್ಳಲಾರಂಭಿಸಿತು. ಜಗತ್ತಿನ ರಾಷ್ಟ್ರಗಳೊಂದಿಗೆ ಅದರಲ್ಲೂ ಅಮೆರಿಕಾ ಉಪೇಕ್ಷಿಸಿದ ಆಫ್ರಿಕಾ, ಮಧ್ಯ ಏಷ್ಯಾದ ರಾಷ್ಟ್ರಗಳೊಂದಿಗೆ ವ್ಯಾಪಾರಿ ಸಂಬಂಧವನ್ನು ಬಲಗೊಳಿಸಿಕೊಂಡಿತು. ಹೀಗೆ ಸಂಬಂಧ ಬೆಸೆದುಕೊಳ್ಳುವಾಗ ಅಮೆರಿಕಾ ಹೇರುತ್ತಿತ್ತಲ್ಲಾ, ‘ಮಾರುಕಟ್ಟೆಯನ್ನು ಜಗತ್ತಿಗೆ ತೆರೆದುಕೊಡಿ, ಜನರಿಗೆ ಒಳ್ಳೆಯ ಆಡಳಿತ ಕೊಡಿ’ ಎಂಬೆಲ್ಲಾ ನಿಯಮಗಳನ್ನು ಹೇರಲಿಲ್ಲ. ಬದಲಿಗೆ ತಾನು ತೆಗೆದುಕೊಳ್ಳುವ ನಿರ್ಣಯಗಳಿಗೆ ಬೆಂಬಲ ಕೊಡಬೇಕು; ತೈವಾನ್ ಅನ್ನು ರಾಷ್ಟ್ರವಾಗಿ ಘೊಷಿಸಬಾರದು; ಗಡಿ ಕ್ಯಾತೆಗಳ ಹೊತ್ತಲ್ಲಿ ತನ್ನ ಪರವಾಗಿ ನಿಲ್ಲಬೇಕು ಎಂಬೆಲ್ಲಾ ವಿಚಿತ್ರವಾದ ನಿಯಮಗಳನ್ನು ಹೇರುತ್ತಿತ್ತು. ಅಕ್ಷರಶಃ ಇದು ವಿಶ್ವಸಂಸ್ಥೆಯಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಳ್ಳುವ ಉಪಾಯವೇ! ಮೊದಲೇ ಕಾಯಂ ಸದಸ್ಯತ್ವ ಹೊಂದಿರುವ ಚೀನಾ ಈಗ ಜಗತ್ತಿನ ಅರ್ಧದಷ್ಟು ರಾಷ್ಟ್ರಗಳ ಷರತ್ತುರಹಿತ ಸಹಕಾರ ಪಡೆದುಕೊಂಡುಬಿಟ್ಟಿತು. ಅಮೆರಿಕ ತಾನು ಚಾಲಕ ಸ್ಥಾನದಲ್ಲೇ ಇದ್ದೇನಲ್ಲಾ ಎಂದು ಸಂಭ್ರಮಿಸುತ್ತಿದ್ದರೆ, ಚೀನಾ ಅಮೆರಿಕ ಚಾಲಕನಾಗಿರುವ ಬಸ್ಸಿನ ಬಹುತೇಕ ನಿರ್ಣಯಗಳನ್ನು ಕೈಗೊಳ್ಳುವ ಪ್ರಮುಖ ಪ್ರಯಾಣಿಕನಾಗಿಬಿಟ್ಟಿತು. ಸ್ವಲ್ಪ ಬುಡ ಬಲಗೊಳ್ಳುತ್ತಿದ್ದಂತೆ ಅಮೆರಿಕದ ಅನೇಕ ವಿಶ್ವವಿದ್ಯಾಲಯಗಳಲ್ಲಿ ಚೀನಾ ಹಣಹೂಡಿಕೆ ಮಾಡಿ ಅಧ್ಯಯನಪೀಠಗಳನ್ನು ತೆರೆಸಿತು. ಅವುಗಳ ಮೂಲಕ ಆಂಗ್ಲಭಾಷೆಯ ಮಾಧ್ಯಮ ಸಂಕೀರ್ಣಗಳನ್ನು ತೆರೆದು ಕಮ್ಯುನಿಸ್ಟರು ಮತ್ತು ಚೀನಾದ ಕುರಿತಂತೆ ಅಮೆರಿಕನ್ನರು ಒಳ್ಳೆಯ ವಿಚಾರಗಳನ್ನು ಕೇಳುವಂತೆ ಮಾಡಲಾರಂಭಿಸಿದರು. ವಾಸ್ತವವಾಗಿ ಅಮೆರಿಕದ ಸಾರ್ವಭೌಮತ್ವವನ್ನು ನಾಶಮಾಡುವ ಪ್ರಯತ್ನ ಮಾಡುತ್ತಿದ್ದರೂ ಅದು ಅರಿವಿಗೇ ಬರದಂತೆ ನೋಡಿಕೊಳ್ಳುವ ವಿಶೇಷ ಪ್ರಯತ್ನ, ಪ್ರಾಪಗ್ಯಾಂಡ ವಾರ್. ಉರುಗ್ವೆ, ಪರಗ್ವೆ, ಪನಾಮಾ ಈ ಮುಂತಾದ ರಾಷ್ಟ್ರಗಳನ್ನು ನಾಶಮಾಡಲು ಅಮೆರಿಕ ಇದೇ ಉಪಾಯವನ್ನು ಬಳಸಿತ್ತು. ಈಗ ಚೀನಾ ಅದೇ ಅಸ್ತ್ರವನ್ನು ಅಮೆರಿಕದ ವಿರುದ್ಧ ಬಳಸಲಾರಂಭಿಸಿತು.

    ಅಮೆರಿಕದಲ್ಲಿ ಓದುತ್ತಿದ್ದ ತನ್ನದೇ ವಿದ್ಯಾರ್ಥಿಗಳನ್ನು ಗೂಢಚಾರರಾಗಿ ಬಳಸುವಲ್ಲೂ ಚೀನಾ ಹಿಂದೆ-ಮುಂದೆ ನೋಡಲಿಲ್ಲವೆಂದು ಈಗ ಎಲ್ಲರೂ ಹೇಳುತ್ತಿದ್ದಾರೆ. ಚೀನಾದ ಸಾಮರ್ಥ್ಯ ಎಂಥದ್ದೆಂದರೆ ಟ್ವಿಟರ್ ಮತ್ತು ಗೂಗಲ್​ಗಳು ತನ್ನ ತಾಳಕ್ಕೆ ಕುಣಿಯುವಂತೆ ಮಾಡಿಕೊಂಡಿದೆ. ಇತ್ತೀಚೆಗೆ ಟಿಕ್​ಟಾಕ್​ನ ರೇಟಿಂಗ್ ತೀವ್ರವಾಗಿ ಇಳಿದಾಗ ಅದನ್ನು ಮತ್ತೆ ಅಡ್ಡದಾರಿಯಲ್ಲಿ ಏರಿಸಿಕೊಂಡಿತಲ್ಲ ಚೀನಾ ಅದು ಹೀಗೆಯೇ. ಪಶ್ಚಿಮದ ರಾಷ್ಟ್ರಗಳಲ್ಲಿ ತನ್ನ ಪ್ರಭಾವವನ್ನು ಹೇಗೆ ವಿಸ್ತರಿಸಿಕೊಂಡಿತೆಂದರೆ ಅನೇಕ ಕಡೆ ತನಗೆ ಬೇಕಾದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಹಣವನ್ನೂ ಖರ್ಚು ಮಾಡಿತು ಚೀನಾ. ಬೇರೆಲ್ಲಾ ಬಿಡಿ, ಸ್ವತಃ ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಕ್ಷನ ಆಯ್ಕೆಯಲ್ಲಿ ಚೀನಾ ಯಾವ ಪರಿ ಹಸ್ತಕ್ಷೇಪ ನಡೆಸಿತೆಂದರೆ ಹಣವನ್ನೂ ಖರ್ಚು ಮಾಡಿತು, ಪ್ರಾಪಗ್ಯಾಂಡ ವಾರ್ ಅನ್ನೂ ಮಾಡಿತು. ಚೀನಾದ ನಡೆಯನ್ನು ಹತ್ತಿರದಿಂದ ಬಲ್ಲ ಭಾರತ ಕೂಡ ತನಗರಿವಿಲ್ಲದಂತೆ ಈ ಛದ್ಮಯುದ್ಧಕ್ಕೆ ಬಲಿಯಾಗಿಹೋಯ್ತು!

    ಇದನ್ನೂ ಓದಿ: ಸೆಪ್ಟೆಂಬರ್​ಗೆ ಸಿದ್ಧವಾಗಲಿದೆ ಕೋವಿಡ್​ ಚುಚ್ಚುಮದ್ದು, ಹೆಚ್ಚಿನ ಉತ್ಪಾದನೆಗೆ ಭಾರತದ ಸಾಥ್​

    ಆರ್ಥಿಕ ಶಕ್ತಿಯಾಗಿ ಬೆಳೆದುನಿಂತದ್ದಾಯ್ತು. ಇನ್ನೇನಿದ್ದರೂ ಮಿಲಿಟರಿ ಶಕ್ತಿಯಾಗಿ ಜಗತ್ತಿನ ಮುಂದೆ ತನ್ನ ಸಾಬೀತುಪಡಿಸಿ ಕೊಳ್ಳಬೇಕೆಂಬುದಷ್ಟೇ ಚೀನಾದ ಮುಂದಿದ್ದ ಸವಾಲು. ಚೀನಾದ ಮೊದಲ ಏರ್​ಕ್ರಾಫ್ಟ್ ತಯಾರಾದದ್ದೇ 2012ರಲ್ಲಿ ಎನ್ನಲಾಗುತ್ತದೆ. ಅಲ್ಲಿಂದೀಚೆಗೆ ಒಂದೇ ದಶಕದಲ್ಲಿ ಅದು ತೋರಿರುವ ಬೆಳವಣಿಗೆ ಅದ್ಭುತವಾದ್ದು. ಇದರೊಟ್ಟೊಟ್ಟಿಗೆ ಸಬ್​ವೆುರಿನ್​ಗಳ ನಿರ್ವಣದಲ್ಲಿ ಚೀನಾ ತೋರಿದ ಆಸಕ್ತಿ ಮತ್ತು ಪಡೆದ ಯಶಸ್ಸು ಮೆಚ್ಚಬೇಕಾದ್ದೇ. ದಕ್ಷಿಣ ಚೀನಾ ಸಮುದ್ರದಲ್ಲಲ್ಲದೇ ಇತರೆಡೆಗಳಲ್ಲೂ ತಾನು ಕಾದಾಡಬಲ್ಲೆನೆಂಬ ಸಂದೇಶವನ್ನು ಅದು ಜಗತ್ತಿಗೆ ಮುಟ್ಟಿಸಿತು. ಆ ವೇಳೆಯಲ್ಲೇ ಶುರುವಾದದ್ದು ‘ಒನ್ ಬೆಲ್ಟ್ ಒನ್ ರೋಡ್’ ಪ್ರಯತ್ನ. ರಾಷ್ಟ್ರ-ರಾಷ್ಟ್ರಗಳನ್ನು ರಸ್ತೆಗಳ ಮೂಲಕ ಬೆಸೆದು ವ್ಯಾಪಾರದ ಅವಕಾಶವನ್ನು ವೃದ್ಧಿಸಿಕೊಳ್ಳಬೇಕೆಂಬುದು ಮೇಲ್ನೋಟಕ್ಕೆ ಕಾಣುವ ಸಂಕಲ್ಪ. ಆದರೆ ಇದೇ ನೆಪದಲ್ಲಿ ದಾರಿಯುದ್ದಕ್ಕೂ ರಾಷ್ಟ್ರಗಳಿಗೆ ಕೊಡುವ ಸಾಲ ಅವುಗಳನ್ನು ತನ್ನಧೀನವಾಗಿಸುತ್ತದೆಯಲ್ಲದೇ ಈ ರಸ್ತೆಗಳನ್ನೇ ಮುಂದೆ ಮಿಲಿಟರಿ ಕೆಲಸಕ್ಕೂ ಬಳಸಿಕೊಳ್ಳಬಹುದೆಂಬ ಇರಾದೆ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಹಿಂದೊಮ್ಮೆ ಚೀನಾದ ಅಧ್ಯಕ್ಷ ಮಾತೊಂದನ್ನು ಹೇಳಿದ್ದ, ‘ನಿಮ್ಮ ಶಕ್ತಿಯನ್ನು ಮುಚ್ಚಿಟ್ಟುಕೊಳ್ಳಿ. ಮತ್ತು ಕಾಲಕ್ಕಾಗಿ ಕಾಯಿರಿ’ ಅಂತ. ಚೀನಾ ತನ್ನ ಶಕ್ತಿಯನ್ನು ಎಂದಿಗೂ ಹೇಳಿಕೊಂಡಿಲ್ಲ. ಸಮಯ ಬಂದಾಗ ಅದನ್ನು ಉಪಯೋಗಿಸದೇ ಬಿಟ್ಟಿಲ್ಲ. ಹೀಗಾಗಿಯೇ ಒನ್ ಬೆಲ್ಟ್ ಒನ್ ರೋಡ್ ಜಗತ್ತಿನ ಹಿತದೃಷ್ಟಿಯಿಂದ ಖಂಡಿತ ಒಳಿತಲ್ಲ ಎನ್ನೋದು.

    ಚೀನಾ ಇಷ್ಟಕ್ಕೂ ನಿಲ್ಲಲಿಲ್ಲ. ಯಾವ ಕ್ಷೇತ್ರದಲ್ಲಿ ಅಮೆರಿಕ ಹಿಡಿತ ಸಾಧಿಸಿಲ್ಲವೋ ಅಲ್ಲಿ ತಾನು ಮುಂಚೂಣಿಯಲ್ಲಿ ನಿಂತು ಜಗತ್ತನ್ನು ನಿಯಂತ್ರಿಸುವ ಅವಕಾಶವನ್ನು ಹುಡುಕಲಾರಂಭಿಸಿತು. ಆಗ ಕಂಡಿದ್ದೇ ಕೃತಕ ಬುದ್ಧಿಮತ್ತೆ ಕ್ಷೇತ್ರ. ಇಂದು ಈ ವಿಭಾಗದಲ್ಲಿ ಅತ್ಯಂತ ಹೆಚ್ಚು ಸಂಶೋಧನೆ ನಡೆಯುತ್ತಿರುವುದೇ ಚೀನಾದಲ್ಲಿ. ಹೀಗಾಗಿ ಈ ಕ್ಷೇತ್ರಕ್ಕೆ ಸಂಬಂಧಿಸಿದ ನಿಯಮಾವಳಿಗಳನ್ನು ರೂಪಿಸುವ, ನಿಯಂತ್ರಿಸುವ ಪ್ರಮುಖ ರಾಷ್ಟ್ರವಾಗಿಯೂ ಬೆಳೆದು ನಿಂತಿದೆ. ಭಾರತ ಅಂತರಿಕ್ಷ ಯುದ್ಧಕ್ಕೆ ಸಜ್ಜಾದ ದಿನ ಅಮೆರಿಕ, ರಷ್ಯಾ, ಚೀನಾಗಳೊಂದಿಗೆ ಈ ಯುದ್ಧಕ್ಷೇತ್ರಗಳಲ್ಲಿ ನಿಯಮಗಳನ್ನು ರೂಪಿಸುವ ಹೊಣೆಗಾರಿಕೆ ಪಡೆದುಕೊಂಡಿತಲ್ಲ, ಹಾಗೆಯೇ ಇದು ಕೂಡ. ಇಂದು ಸೈಬರ್ ಸೆಕ್ಯುರಿಟಿ ಕುರಿತಂತೆ ಚೀನಾದ ಮಾತು ಹೆಚ್ಚು-ಕಡಿಮೆ ಅಂತಿಮ. ಏಕೆಂದರೆ ಈ ಸೆಕ್ಯುರಿಟಿಯನ್ನು ಭೇದಿಸಬಲ್ಲ ಭಯಾನಕವಾದ ಸಾಮರ್ಥ್ಯವಿರುವುದೂ ಅವರಿಗೇ. ಹುವೈನ ನೆಟ್​ವರ್ಕ್​ನಿಂದ ಸೇನೆಯ ಅಂತರಂಗವನ್ನು ಭೇದಿಸಬಲ್ಲ ಸಾಮರ್ಥ್ಯವನ್ನು ಚೀನಾ ಪಡೆದಿರುವುದು ಅದರ ಶಾಂತಶಕ್ತಿಗೆ ಉದಾಹರಣೆ. ಈಗಂತೂ ಚೀನಾ ತನ್ನ ಮಿಲಿಟರಿ ಶಕ್ತಿಯನ್ನು ಹೇಗೆ ಬೆಳೆಸಿಕೊಂಡಿದೆ ಎಂದರೆ ಅಮೆರಿಕದಂತೆ ದೂರದ ರಾಷ್ಟ್ರಗಳಲ್ಲಿ ತನಗಾಗಿ ಸೇನಾ ನೆಲೆಯನ್ನು ಮಾಡಿಕೊಂಡಿದೆ!

    ಡೊನಾಲ್ಡ್ ಟ್ರಂಪ್ ಬರುವವರೆಗೂ ಜಗತ್ತು ಇದರ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಚೀನಾದಿಂದ ಲಾಭವಾಗುತ್ತಿದೆ ಎಂದಷ್ಟೇ ನೋಡುತ್ತಿದ್ದರು. ಚೀನಾ ಹಣಕಾಸಿನ ನೆರವು ಕೊಡುತ್ತದೆ, ಹೂಡಿಕೆ ಮಾಡಿದರೆ ಲಾಭ ತಂದುಕೊಡುತ್ತದೆ, ಬಡದೇಶಗಳಲ್ಲಿ ಮೂಲಸೌಕರ್ಯದ ಅಭಿವೃದ್ಧಿಗೆ ಕಾರಣವಾಗುತ್ತದೆ, ಕೊನೆಗೆ ರಾಜಕಾರಣಿಗಳ ಗೆಲುವಿನಲ್ಲೂ ಪಾತ್ರವಹಿಸುತ್ತದೆ. ಎಲ್ಲಾ ರಾಷ್ಟ್ರಗಳೂ ಇದನ್ನೇ ನೆಚ್ಚಿಕೊಂಡು ಕುಳಿತುಬಿಟ್ಟಿದ್ದವು. ಆದರೆ ಸಾಲ ಪಡೆದುಕೊಂಡ ರಾಷ್ಟ್ರಗಳು ಚೀನಾದೆದುರು ಮಂಡಿಯೂರಿಕುಳಿತುಬಿಡಬೇಕಾಗುತ್ತದೆ ಎಂಬುದನ್ನು ಅರಿಯಲಾರಂಭಿಸಿದವು. ಹೀಗಾಗಿಯೇ ಇತ್ತೀಚೆಗೆ ಆಫ್ರಿಕಾದ ರಾಷ್ಟ್ರಗಳಲ್ಲೊಂದಾದ ತಾಂಜಾನಿಯಾ ಚೀನಾದ ನಿಯಮಗಳಿಗೆ ಒಳಪಟ್ಟು ಸಾಲ ತೆಗೆದುಕೊಳ್ಳುವುದು ಅಸಾಧ್ಯ ಎಂದುಬಿಟ್ಟಿತ್ತು. ಆದರೇನು? ಅಮೆರಿಕದ ಸಾರ್ವಭೌಮತೆಗೆ ಧಕ್ಕೆ ತರುವಂತೆ ನಡೆದುಕೊಂಡೇ ಇಲ್ಲವಲ್ಲ. ಹೀಗಾಗಿ ಅದರ ವಿರುದ್ಧ ಮಾತನಾಡುವಂತೆಯೂ ಇರಲಿಲ್ಲ. ಟ್ರಂಪ್ ಅಮೆರಿಕದ ಸಾರ್ವಭೌಮತೆಯನ್ನುಳಿಸುವ ದೃಷ್ಟಿಯಿಂದ ತಾನೇ ಮುಂದಾಳತ್ವ ವಹಿಸಿ ವ್ಯಾಪಾರ ಸಮರದ ನೆಪದಲ್ಲಿ ಕಾಲುಕೆರೆದುಕೊಂಡು ಜಗಳಕ್ಕೆ ಬಿದ್ದರು. ಚೀನಾದಿಂದ ಅನ್ಯಾಯ ಮಾಡಿಸಿಕೊಂಡ ರಾಷ್ಟ್ರಗಳೆಲ್ಲಕ್ಕೂ ದನಿಯಾಗುವ ಮಾತನ್ನಾಡಿದರು. ಇದು ಚೀನಾದ ಸುದೀರ್ಘವಾದ ಯೋಜನೆಯನ್ನು ತರಾತುರಿಯಲ್ಲಿ ನಿರ್ವಹಿಸಬೇಕಾದ ಅನಿವಾರ್ಯತೆ ತಂದೊಡ್ಡಿತು. ಆಗಲೇ ಚೀನಾದ ಪ್ರಯೋಗಶಾಲೆಯಲ್ಲಿ ಸಿದ್ಧಗೊಳ್ಳುತ್ತಿದ್ದ ವೈರಸ್ಸು ಜಗತ್ತಿಗೆ ಹಬ್ಬಿದ್ದು. ತನ್ನನ್ನು ಪೂರ್ಣಪ್ರಮಾಣದಲ್ಲಿ ಉಳಿಸಿಕೊಳ್ಳಲಾಗದಿದ್ದರೂ ಇಡೀ ರಾಷ್ಟ್ರಕ್ಕೆ ವೈರಸ್ಸು ಹಬ್ಬದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು ಚೀನಾ. ಆದರೆ ಚೀನಾದ ವಿರುದ್ಧ ಕತ್ತಿ ಮಸೆಯುತ್ತಿದ್ದ ರಾಷ್ಟ್ರಗಳಿಗೆ ಇದು ಸಾಕಾಗಿತ್ತು.

    ಅಮೆರಿಕ ಹಠಹಿಡಿದು ಕುಳಿತುಬಿಟ್ಟಿದೆ. ಹೇಗಾದರೂ ಮಾಡಿ ಚೀನಾದ ಓಟವನ್ನು ತಡೆಯಲಿಲ್ಲವೆಂದರೆ ಕಂಟಕ ಅದಕ್ಕಷ್ಟೇ ಅಲ್ಲ, ಜಗತ್ತಿಗೂ ಕೂಡ. ಅಮೆರಿಕ ಕೊನೆಯ ಪಕ್ಷ ಪ್ರಜಾಪ್ರಭುತ್ವವನ್ನು ಹೊಂದಿರುವ ರಾಷ್ಟ್ರವಾದರೂ ಹೌದು. ಅದು ತಪ್ಪು ಮಾಡಿದಾಗ ಅಲ್ಲಿನ ಜನರೇ ಛೀಮಾರಿ ಹಾಕುತ್ತಾರೆ. ಚೀನಾದ ಕಥೆ ಹಾಗಲ್ಲ. ಅಲ್ಲಿ ಬದುಕಿರುವವರೆಗೂ ಷಿ ಜಿನ್​ಪಿಂಗ್ ಅವರೇ ಅಧ್ಯಕ್ಷ. ಅವರ ಮಾತಿಗೆ ಎದುರಾಡಿದರೆ ಯಾರೂ ಉಳಿಯಲಾರರು. ವುಹಾನ್ ವೈರಸ್ಸಿಗೆ ಸತ್ತವರೆಷ್ಟು ಮಂದಿ ಎಂದೇ ಇನ್ನೂ ನಿಖರ ಲೆಕ್ಕ ಕೊಡಲಾಗಲಿಲ್ಲ. ಹೀಗಿರುವಾಗ ಚೀನಾ ಜಗತ್ತನ್ನಾಳುವ ಹಂತಕ್ಕೆ ತಲುಪಿಬಿಟ್ಟರೆ ಜಗತ್ತಿನ ಸ್ವಾಸ್ಥ್ಯ ನಿಸ್ಸಂಶಯವಾಗಿಯೂ ಹದಗೆಡಲಿದೆ. ಅಮೆರಿಕದ ಕಥೆ ಬಿಡಿ. ಭಾರತದ ವಿಚಾರ ನೋಡಿ. ಅದಾಗಲೇ ಇಲ್ಲಿನ ಯುನಿವರ್ಸಿಟಿಗಳ ಪೊ›ಫೆಸರ್​ಗಳ ಜೇಬಿಗೆ ಹಣತುರುಕಿ ಅವರ ಮೂಲಕವೇ ಚೀನಿಪರವಾದ ವಿಚಾರ ಮಂಡಿಸುತ್ತಿದ್ದಾರೆ. ನಕ್ಸಲರು ಪೊಲೀಸರನ್ನು ಕೊಂದಾಗ ಸಂಭ್ರಮಿಸುವಂತಹ ಅನುಯಾಯಿಗಳನ್ನು ಇಲ್ಲಿ ಸೃಷ್ಟಿಸಿಬಿಟ್ಟಿದೆ. ಭಾರತ-ವಿರೋಧಿಯಾದ ವರದಿಗಳನ್ನು, ಲೇಖನಗಳನ್ನು ಬರೆಯುವ ಪತ್ರಕರ್ತರನ್ನು ಚೀನಾ ನಮ್ಮ ನಡುವೆಯೇ ಇಟ್ಟಿದೆ. ಒಳಗಿನಿಂದಲೇ ಭಾರತವನ್ನು ತುಂಡು-ತುಂಡು ಮಾಡುವ ಸಂಘಟನೆಗಳಿಗೆ ಹಣಕೊಟ್ಟು ಸಲಹುತ್ತದೆ. ಕೆಲವು ಪಕ್ಷದ ಪ್ರಮುಖರುಗಳಿಗಂತೂ ಹಿಮಾಲಯದ ಮೇಲೂ ಸಿಗುತ್ತದೆ, ದೆಹಲಿಯ ಗಲ್ಲಿಗಳಲ್ಲೂ ಸಿಗುತ್ತದೆ. ಇಂತಹ ರಾಷ್ಟ್ರದ ಕೈಯ್ಯಲ್ಲಿ ಜಗತ್ತಿನ ಸೂತ್ರ ಹೋಗುವುದು ದುರಂತವೇ ಸರಿ. ನಿಜವಾಗ್ಯೂ ಎಚ್ಚೆತ್ತುಕೊಳ್ಳಬೇಕಾದ ಕಾಲವಿದು. ಹೊರಗಿನ ಶತ್ರುವಿನೊಂದಿಗಷ್ಟೇ ಅಲ್ಲದೇ ನಾವೀಗ ಅವನ ಎಂಜಲು ತಿಂದ ಒಳಗಿನ ಶತ್ರುಗಳನ್ನೂ ಮಟ್ಟಹಾಕಬೇಕಿದೆ. ಇದೊಂದು ವಿಭಿನ್ನವಾದ ಯುದ್ಧ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts