More

    ತಾಯಿ ಹೊಡೆದಳೆಂದು ಮನೆ ಬಿಟ್ಟು ಹೋಗ್ತಿದ್ದ ಮೂರೂವರೆ ವರ್ಷದ ಪುಟ್ಟ ಮಗುವಿನ ರಕ್ಷಣೆ

    ಈಶ್ವರಮಂಗಲ(ಪುತ್ತೂರು): ತಾಯಿ ಹೊಡೆದರೆಂಬ ಕಾರಣಕ್ಕೆ ಮನೆಬಿಟ್ಟು ಸುಮಾರು 3 ಕಿ.ಮೀ ದೂರ ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ಮೂರೂವರೆ ವರ್ಷದ ಪುಟ್ಟ ಗಂಡು ಮಗುವನ್ನು ಸ್ಥಳೀಯರು ರಕ್ಷಿಸಿ ನೆಲ್ಲಿಕಟ್ಟೆಯ ರಾಮಕೃಷ್ಣ ಸೇವಾಶ್ರಮಕ್ಕೆ ಸೇರಿಸಿದ್ದಾರೆ. ಅಮ್ಚಿನಡ್ಕ- ನೆಟ್ಟಾರು ರಸ್ತೆಯ ಪೆರ್ಲಂಪಾಡಿ ಸಮೀಪದ ಸಿದ್ಧಮೂಲೆ ಎಂಬಲ್ಲಿ ಸೋಮವಾರ ಬೆಳಗ್ಗೆ ಬೆತ್ತಲೆಯಾಗಿ ತೆರಳುತ್ತಿದ್ದ ಮಗುವನ್ನು ಬೈಕ್‌ನಲ್ಲಿ ಸಾಗುತ್ತಿದ್ದ ಸತ್ತಾರ್ ಅಮಲ ಎಂಬುವರು ಗಮನಿಸಿ ಕೊಳ್ತಿಗೆ ಗ್ರಾಪಂ ಸದಸ್ಯ ಕೆ.ಎಸ್ ಪ್ರಮೋದ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಅದೇ ರಸ್ತೆಯಾಗಿ ಬರುತ್ತಿದ್ದ ಸಿದ್ಧಮೂಲೆ ನಿವಾಸಿ ಶೀನ ಅವರ ಪತ್ನಿ ಬೇಬಿ ಎಂಬುವರು ಮಗುವನ್ನು ಮನೆಗೆ ಕರೆದುಕೊಂಡು ಹೋಗಿ ಆಹಾರ ನೀಡಿ, ಮೈಮೇಲಿದ್ದ ಗಾಯಗಳಿಗೆ ಔಷಧ ಹಚ್ಚಿ ಉಪಚರಿಸಿದ್ದರು.

    ಅಷ್ಟರಲ್ಲಿ ಬೆಳ್ಳಾರೆ ಪೊಲೀಸ್ ಠಾಣೆ ಮತ್ತು ಕೊಳ್ತಿಗೆ ಗ್ರಾಪಂ, ಪಿಡಿಒ ಸುನೀಲ್ ಎಚ್.ಟಿ, ಅಂಗನವಾಡಿ ಮೇಲ್ವಿಚಾರಕರಿಗೆ ಪ್ರಮೋದ್ ಮಾಹಿತಿ ನೀಡಿದ್ದರು. ವಿಚಾರಿಸಿದಾಗ ಮಗು ಮಾಲೆತ್ತೋಡಿಯ ಪ್ರದೀಪಾ ಎಂಬಾಕೆಯದ್ದು ಎಂಬ ಮಾಹಿತಿ ಲಭಿಸಿತು. ಆದರೆ ಮಗುವಿನ ಹೆತ್ತವರಾಗಲಿ, ಸಂಬಂಧಪಟ್ಟ ಇಲಾಖೆಯವರು ಬಾರದ ಹಿನ್ನೆಲೆ ಮಗು ಅಂದು ರಾತ್ರಿ ಶೀನ ಅವರ ಮನೆಯಲ್ಲೇ ಉಳಿದುಕೊಂಡಿತ್ತು. ಮಂಗಳವಾರ ಕೊಳ್ತಿಗೆ ಪಿಡಿಒ ಸುನೀಲ್ ಎಚ್.ಟಿ, ಬೆಳ್ಳಾರೆ ಠಾಣೆ ಎಸ್‌ಐ ಆಂಜನೇಯ ರೆಡ್ಡಿ ಭೇಟಿ ನೀಡಿ ಮಾಹಿತಿ ಪಡೆದರು. ಮಗುವಿನ ಮನೆಗೆ ತೆರಳಿ ವಿಚಾರಿಸಿದರೂ ತಾಯಿ ಯಾವುದಕ್ಕೂ ಉತ್ತರಿಸದ ಕಾರಣ ಮರಳಿ ಬರಬೇಕಾಯಿತು.

    ಈ ನಡುವೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಸರೋಜಿನಿ ಸ್ಥಳಕ್ಕೆ ಭೇಟಿ ನೀಡಿದ್ದು, ಇಲಾಖೆಯ ಅಧಿಕಾರಿ ಶ್ರೀಲತಾಗೆ ಮಾಹಿತಿ ನೀಡಿದ್ದರು. ಮಕ್ಕಳ ರಕ್ಷಣಾ ಘಟಕದ ವಝೀರ್ ಕೂಡ ಭೇಟಿ ನೀಡಿದರು. ಈ ವಿಚಾರವನ್ನು ಸಿಡಿಪಿಒ ಮೇಲಧಿಕಾರಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಮಕ್ಕಳ ಕಲ್ಯಾಣ ಸಮಿತಿ ಗಮನಕ್ಕೆ ತಂದು ಬಳಿಕ ಅವರ ಸೂಚನೆಯಂತೆ ಮಗುವನ್ನು ಮಂಗಳವಾರ ರಾತ್ರಿ ಪುತ್ತೂರಿನ ನೆಲ್ಲಿಕಟ್ಟೆಯಲ್ಲಿರುವ ರಾಮಕೃಷ್ಣ ಸೇವಾಶ್ರಮಕ್ಕೆ ಸೇರಿಸಿದರು.

    ಪತಿ ತೊರೆದಿರುವ ಹಿನ್ನೆಲೆ ಮಗುವಿನ ತಾಯಿ ಮಾನಸಿಕ ಖಿನ್ನರಾಗಿರುವ ಸಾಧ್ಯತೆ ಇದೆ. ಅಮಲು ಪದಾರ್ಥ ಸೇವಿಸುವ ಚಟವೂ ಆಕೆಗಿದೆ ಎಂಬ ಮಾಹಿತಿ ಸಾರ್ವಜನಿಕರಿಂದ ಲಭಿಸಿದೆ. ಕೌನ್ಸೆಲಿಂಗ್ ಕೊಡಿಸಿ ಮಗುವನ್ನು ಆಕೆಯ ಸುಪರ್ದಿಗೆ ನೀಡಲಾಗುವುದು. ಇದು ಸಾಧ್ಯವಾಗದಿದ್ದಲ್ಲಿ ಮಗುವಿನ ಪಾಲನೆಗೆ ವ್ಯವಸ್ಥೆ ಮಾಡಲಾಗುವುದು.
    – ಶ್ರೀಲತಾ, ಸಿಡಿಪಿಒ ಪುತ್ತೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts