More

    ಬಾಲ್ಯ ವಿವಾಹ ನಿಯಂತ್ರಣದಲ್ಲಿ ಅಧಿಕಾರಿಗಳ ಲೋಪ; ನ್ಯಾ. ರಾಜಣ್ಣ ಸಂಕಣ್ಣನವರ್ ಬೇಸರ

    ಶಿವಮೊಗ್ಗ: ಬಾಲ್ಯ ವಿವಾಹ ಪ್ರಕರಣಗಳ ನಿಯಂತ್ರಣದಲ್ಲಿ ಅಧಿಕಾರಿಗಳ ಲೋಪ ಎದ್ದು ಕಾಣುತ್ತಿದ್ದು ಮಕ್ಕಳ ಸಹಾಯವಾಣಿ 112ಕ್ಕೆ ಕರೆ ಮಾಡಿದ ತಕ್ಷಣ ಸಮಸ್ಯೆ ಬಗೆಹರಿಯುವುದಿಲ್ಲ. ಅವರ ಸಂಪೂರ್ಣ ರಕ್ಷಣೆ ಮಾಡಬೇಕು. ಆದರೆ ಆ ಕೆಲಸ ಜಿಲ್ಲೆಯಲ್ಲಿ ಸಮರ್ಪಕವಾಗಿ ಆಗುತ್ತಿಲ್ಲ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾ. ರಾಜಣ್ಣ ಸಂಕಣ್ಣನವರ್ ಬೇಸರ ವ್ಯಕ್ತಪಡಿಸಿದರು.
    ಆಲ್ಕೊಳದ ಚೈತನ್ಯ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಎಸ್‌ಎಂಎಸ್‌ಎಸ್(ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ) ಆಶ್ರಯದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಅನುಷ್ಠಾನ ಹಾಗೂ ಕ್ರಮಬದ್ಧ ಕಾರ್ಯ ವಿಧಾನ ಕುರಿತಂತೆ ಭಾಗಿದಾರ ಇಲಾಖೆಗಳ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳಿಗೆ ಜಿಲ್ಲಾಮಟ್ಟದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
    ಮಕ್ಕಳಿಗೆ ಸಮಸ್ಯೆಗಳು ಎದುರಾದರೆ ಯಾರಿಗೆ ಹೇಳಬೇಕು. ಅವರ ರಕ್ಷಣೆ ಯಾರು ಮಾಡಬೇಕು. ಜವಾಬ್ದಾರಿ ಯಾರದ್ದು ಎಂಬ ಬಗ್ಗೆ ಅನೇಕ ಇಲಾಖೆಗಳ ಅಧಿಕಾರಿಗಳಿಗೆ ಮಾಹಿತಿಯಿಲ್ಲ. ಆದರೆ ಮಕ್ಕಳ ರಕ್ಷಣೆ ಪ್ರಶ್ನೆ ಬಂದಾಗ ಸರ್ಕಾರದ ಎಲ್ಲ ವಿಭಾಗದ ತಾಲೂಕು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಭಾದ್ಯಸ್ಥರಾಗಿರುತ್ತಾರೆ. ಸರ್ಕಾರ ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದು ಮಕ್ಕಳ ರಕ್ಷಣಾ ಹಕ್ಕು ಎಲ್ಲರಿಗೆ ಸೇರಿದ್ದಾಗಿದೆ ಎಂದು ಹೇಳಿದರು.
    ಬಾಲ್ಯವಿವಾಹವನ್ನು ನೂರಕ್ಕೆ ನೂರರಷ್ಟು ತಡೆಯಬೇಕು. ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಮತ್ತು ಸಾರ್ವಜನಿಕರು ಸಕ್ರಿಯವಾಗಿ ತಮ್ಮ ಪಾತ್ರ ವಹಿಸಬೇಕು. ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿ ಹೋಗಲಾಡಿಸಲು ಎಲ್ಲ ಇಲಾಖೆಗಳು ಕೈಜೋಡಿಸಬೇಕು. ಇದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಕೂಡ ಆಗಿದೆ ಎಂದರು.
    ಕರೊನಾದಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ಬ್ಯಾಗ್ ವಿತರಿಸಲಾಯಿತು. ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಕ್ಯಾಲೆಂಡರ್ ಹಾಗೂ ಬಾಲ್ಯವಿವಾಹ ನಿಷೇಧದ ಬಗ್ಗೆ ಜನರಲ್ಲಿ ಜಾಗೃತಿ ಮಾಡಿಸುವ ಕರಪತ್ರ ಬಿಡುಗಡೆ ಮಾಡಲಾಯಿತು. ಬಾಲ್ಯವಿವಾಹ ಕುರಿತಾದ ವಾಸ್ತವ ಸ್ಥಿತಿಗತಿ ಹಾಗೂ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳ ಪಾತ್ರದ ಕುರಿತು ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಶೀಲಾ ಸುರೇಶ್ ಉಪನ್ಯಾಸ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts