More

    ಒತ್ತುವರಿಗೆ ಯಾರ ಅಂಕೆಯೂ ಇಲ್ಲ

    ಒತ್ತುವರಿಗೆ ಯಾರ ಅಂಕೆಯೂ ಇಲ್ಲ

    ಚಿಕ್ಕಮಗಳೂರು: ಪ್ರವಾಸಿ ತಾಣಗಳಿಂದ ಪ್ರಸಿದ್ಧಿ ಪಡೆದಿರುವ ಚಿಕ್ಕಮಗಳೂರು ತಾಲೂಕಿನಲ್ಲಿ 319 ಕೆರೆಗಳಿವೆ. ಕೆರೆಗಳನ್ನೂ ಪ್ರವಾಸೋದ್ಯಮಕ್ಕೆ ಕಳೆ ತಂದುಕೊಡುವ ಹಾಗೆ ಅಭಿವೃದ್ಧಿಪಡಿಸಬಹುದಿತ್ತು. ಆದರೆ ಬಹಳಷ್ಟು ಕೆರೆಗಳು ಯಾರ ಅಂಕೆಯೂ ಇಲ್ಲದಂತೆ ಒತ್ತುವರಿಯಾಗಿವೆ.

    ಬಹಳಷ್ಟು ಕೆರೆಗಳಲ್ಲಿ ಅಡಕೆ, ಬಾಳೆ, ಕಬ್ಬು, ತರಕಾರಿ ಸೇರಿ ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆದು ಸಾರ್ವಜನಿಕ ಸೊತ್ತನ್ನು ತಮ್ಮದಾಗಿಸಿಕೊಂಡಿದ್ದಾರೆ.

    ತಾಲೂಕಿನ 319 ಕೆರೆಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಇಲಾಖೆಗೆ ಸೇರಿದ 286 ಕೆರೆಗಳಿದ್ದರೆ, ಸಣ್ಣ ನೀರಾವರಿ ಇಲಾಖೆಗೆ ಸೇರಿದ 33 ಕೆರೆಗಳಿವೆ. ಇವುಗಳಲ್ಲಿ ಬರೋಬ್ಬರಿ 121 ಕೆರೆಗಳು ವಸ್ತಾರೆ ಹೋಬಳಿಯಲ್ಲಿದ್ದರೆ, ಲಕ್ಯಾ ಹೋಬಳಿಯಲ್ಲಿ ಅತಿ ಕಡಿಮೆ 5 ಕೆರೆಗಳಿವೆ.

    ಇವುಗಳಲ್ಲಿ ಸಾಕಷ್ಟು ಕೆರೆಗಳು ಇತಿಮಿತಿ ಇಲ್ಲದೆ ಒತ್ತುವರಿಯಾಗಿವೆ. ಕೆಂಪನಹಳ್ಳಿ ಕೆರೆಯಲ್ಲಿ ಮೂರು ಎಕರೆ ಜಾಗ ಕಬಳಿಕೆಯಾಗಿದೆ. ಕೆಲವೇ ಕೆಲವು ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದೆ. ಉಳಿದಂತೆ ಈಗಷ್ಟೇ ಸರ್ವೆ ನಡೆಯುತ್ತಿದ್ದು, ಇನ್ನಷ್ಟೇ ತೆರವು ಕಾರ್ಯ ನಡೆಯಬೇಕಿದೆ. ಜಿಲ್ಲಾಡಳಿತ ಸರ್ವೆ ಇಲಾಖೆ ಮೂಲಕ ಈ ಕಾರ್ಯಕ್ಕೆ ಚಾಲನೆ ನೀಡಿದೆ. ಉಪವಿಭಾಗಾಧಿಕಾರಿ ಡಾ. ಎಚ್.ಎಲ್.ನಾಗರಾಜ್ ಈ ಕಾರ್ಯದಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ.

    ಸರಣಿ ಸಂಪರ್ಕದ ಮಹತ್ವ ತಿಳಿದಿಲ್ಲ: ಕೆರೆಗಳಲ್ಲೂ ಒಂದಕ್ಕೊಂದು ಸಂಪರ್ಕವಿದೆ. ಚಿಕ್ಕಮಗಳೂರು ತಾಲೂಕಿನಲ್ಲೇ ಹಿರೇಕೊಳಲೆ ಕೆರೆ ತುಂಬಿದರೆ ರಾಮೇಶ್ವರ ಕೆರೆಗೂ ನೀರು ಬರುತ್ತದೆ. ಅದು ತುಂಬಿ ಕೋಡಿಬಿದ್ದರೆೆ ಬಸವನಹಳ್ಳಿ ಕೆರೆ, ಮುಂದೆ ಕೋಟೆಕೆರೆ, ಬಳಿಕ ಅಂಬಳೆ ಕೆರೆಗೂ ನೀರು ಹರಿಯುತ್ತದೆ. ಇವುಗಳಲ್ಲಿ ಒಂದು ಕೆರೆಯನ್ನು ಹಾಳುಮಾಡಿದರೂ ಅದು ಮಿಕ್ಕ ಕೆರೆಗಳ ಅಸ್ತಿತ್ವಕ್ಕೆ ಸಂಚಕಾರ ಒದಗುತ್ತದೆ ಎನ್ನುವ ಜ್ಞಾನ ಇಂದಿನವರಿಗಿಲ್ಲ, ಹಿರಿಯರಿಗಿತ್ತು.

    ಹಳೇ ತಲೆಮಾರಿನವರು ಅಳಿದು ಹೊಸತಲೆಮಾರಿನವರ ಕಾಲ ಬರುತ್ತಿದ್ದಂತೆ ಅವು ಪ್ರಾಮುಖ್ಯತೆ ಕಳೆದುಕೊಂಡವು. ಬೋರ್​ವೆಲ್, ಅಣೆಕಟ್ಟುಗಳು ನಿರ್ವಣವಾಗತೊಡಗಿದಂತೆ ಕೆರೆಗಳ ಮಹತ್ವ ನೇಪಥ್ಯಕ್ಕೆ ಸರಿದು ಈಗೀಗ ಅವುಗಳ ಮಹತ್ವದ ಬಗ್ಗೆ ಮತ್ತೆ ಜ್ಞಾನೋದಯವಾಗುತ್ತಿದೆ. ಅದರ ಮುಂದುವರಿದ ಭಾಗವೇ ಕೆರೆ ಒತ್ತುವರಿಯ ಗರ. ಸಾಕಷ್ಟು ಕಡೆಗಳಲ್ಲಿ ಕೆರೆಗಳನ್ನು ಮುಚ್ಚುವ ಪ್ರಕ್ರಿಯೆಯೂ ನಡೆದಿದೆ. ಅದರ ಫಲವಾಗಿಯೇ ಮಹಾನಗರಗಳು ಮಳೆಗಾಲದ ತೀವ್ರತೆಗೆ ಸಿಲುಕುತ್ತಿವೆ.

    ಅಸ್ತಿತ್ವ ಕಳೆದುಕೊಂಡ ಕೆರೆಗೆ ಕಾಯಕಲ್ಪ: ಸಂಪೂರ್ಣ ಅಸ್ತಿತ್ವವನ್ನೇ ಕಳೆದುಕೊಂಡಿದ್ದ ಕಾರೆಹಳ್ಳಿ ಕೆರೆ ಆರ್​ಟಿಸಿಯಲ್ಲೂ ಅಸ್ತಿತ್ವ ಕಳೆದುಕೊಂಡಿತ್ತು. ಬ್ರಿಟಿಷರ ಕಾಲದ ಗ್ರಾಮ ನಕಾಶೆಯಲ್ಲಿ ಕೆರೆಯನ್ನು ಗುರುತಿಸಿ ಇದೀಗ ಅದನ್ನು ತೆರವುಗೊಳಿಸಿ ಅಭಿವೃದ್ಧಿಪಡಿಸಿದ್ದು, ಅದರ ಸಂಪೂರ್ಣ ಹೆಗ್ಗಳಿಕೆ ಕೆರೆಗಳ ಅಭಿವೃದ್ಧಿಯಲ್ಲಿ ಹೆಚ್ಚು ತೊಡಗಿಸಿಕೊಂಡಿರುವ ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ಡಾ. ಎಚ್.ಎಲ್.ನಾಗರಾಜ್ ಅವರಿಗೆ ಸಲ್ಲಬೇಕು. 6.19 ಎಕರೆಯ ಲಕ್ಯಾ ಹೋಬಳಿ ಕರಿಸಿದ್ದನಹಳ್ಳಿಯ ಮೂರಕ್ಕೂ ಹೆಚ್ಚು ಎಕರೆ ಒತ್ತುವರಿಯಾಗಿದ್ದು, ಅದನ್ನು ತೆರವು ಮಾಡಲಾಗಿದೆ. 2 ಎಕರೆ 2 ಗುಂಟೆ ವಿಸ್ತೀರ್ಣದ ಉಪ್ಪಳ್ಳಿ ಕೆರೆಯಲ್ಲಿ ಒತ್ತುವರಿಯಾಗಿದ್ದ 5 ಗುಂಟೆಯನ್ನು ತೆರವುಗೊಳಿಸಿ ಇದೀಗ ಅಭಿವೃದ್ಧಿಪಡಿಸಲಾಗುತ್ತಿದೆ. ಸಣ್ಣ ನೀರಾವರಿ ಇಲಾಖೆಯ ಲಕ್ಕುಮನಹಳ್ಳಿಯ 7.37 ಎಕರೆ ಕೆರೆಯ ಪಹಣಿ ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿದ್ದು, ತೆರವಿಗೆ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಇಲಾಖೆಗೆ ಸೂಚನೆ ನೀಡಿದೆ.

    ಜಿಲ್ಲಾಡಳಿತದಿಂದ ತೆರವು: ಅಲ್ಲಂಪುರದ 45 ಎಕರೆಯಷ್ಟಿರುವ ಊರಮುಂದಿನ ಕೆರೆಯಲ್ಲಿ ಒತ್ತುವರಿಯಾಗಿದ್ದ 28 ಗುಂಟೆ, ಮತ್ತಾವರದ ಹುಣಸೆಕಟ್ಟೆಯ 13 ಎಕರೆಯಲ್ಲಿ ಒತ್ತುವರಿಯಾಗಿದ್ದ 26 ಗುಂಟೆ, ಕದ್ರಿಮಿದ್ರಿಯ 15 ಎಕರೆಯ ತಾವರೆಕೆರೆಯಿಂದ ಕಬಳಿಸಿದ್ದ 25 ಗುಂಟೆ, ಬೂದನಕೆರೆಯ 8 ಎಕರೆಯಷ್ಟಿರುವ ಕಲ್ಲನಕಟ್ಟೆಯ 16 ಗುಂಟೆ, ತಡಗಸೆ ಗ್ರಾಮದ 8 ಎಕರೆ ಕೆರೆಯಲ್ಲಿ 1 ಗುಂಟೆ, ಅಂಬಳೆ ರಾಮನಹಳ್ಳಿಯ 54 ಎಕರೆ ಕೆರೆಯಲ್ಲಿ ಒತ್ತುವರಿಯಾಗಿದ್ದ 39 ಗುಂಟೆ, ಹೆಡದಾಳು ಹೊಸಕೆರೆಯ 400 ಎಕರೆಯಲ್ಲಿ ಒತ್ತುವರಿಯಾಗಿದ್ದ 15 ಗುಂಟೆ, ಕಳಗಣೆ ಗ್ರಾಮದ 13 ಎಕರೆಯ ಕಲ್ಲುಕೆರೆಯಲ್ಲಿ ಅತಿಕ್ರಮಿಸಿಕೊಂಡಿದ್ದ 4 ಗುಂಟೆಯನ್ನು ತೆರವು ಮಾಡಲಾಗಿದೆ.

    ಮಳೆ ಬಂದರೂ ತುಂಬುತ್ತಿಲ್ಲ !: ಕೆಲವು ಕಡೆ ಕೆರೆಗೆ ಹರಿದುಬರುವ ನೀರನ್ನು ತಡೆಯುವ ಪ್ರಯತ್ನವೂ ನಡೆದಿದೆ. ಕೆರೆಯಲ್ಲಿ ನೀರು ತುಂಬಬಾರದು ಎನ್ನುವುದೇ ಆ ಜನರ ಉದ್ದೇಶ. ಒಂದೊಮ್ಮೆ ನೀರು ತುಂಬಿದರೆ ತಾವು ಒತ್ತುವರಿ ಮಾಡಿಕೊಂಡ ಜಾಗದಲ್ಲಿ ಬೆಳೆದಿರುವ ಬೆಳೆಗಳು ನಾಶವಾಗುತ್ತವೆ ಎನ್ನುವುದೇ ಇದಕ್ಕೆ ಕಾರಣ. ಕೆರೆ ತುಂಬುವಷ್ಟು ನೀರು ಹರಿದುಬರುವಂತಿದ್ದರೂ ಆ ಹರಿವನ್ನು ಬೇರೆಡೆಗೆ ತಿರುಗಿಸಲಾಗಿದೆ.

    ತಾಲೂಕಿನಲ್ಲೇ ಅತಿದೊಡ್ಡ ಕೆರೆಗಳು: ತಾಲೂಕಿನಲ್ಲೇ ಅತಿ ದೊಡ್ಡ ಕೆರೆ ಬೆಳವಾಡಿಯದು. ಬರಗಾಲ ನಿರಂತರವಾಗಿ ತಾಂಡವವಾಡುತ್ತಿರುವುದರಿಂದ ವರ್ಷವಿಡೀ ಖಾಲಿಯಾಗಿಯೇ ಇರುತ್ತದೆ. ಹೆಡದಾಳುವಿನ 400 ಎಕರೆ ವಿಸ್ತೀರ್ಣದ ಹೊಸಕೆರೆ, ಹಳೇಲಕ್ಯಾದ ಸಾದರಹಳ್ಳಿ ಕೆರೆ 213 ಎಕರೆ ವಿಸ್ತೀರ್ಣವಿದ್ದರೆ, ವಸ್ತಾರೆ ಊರ ಮುಂದಿನ ಕೆರೆ 200 ಎಕರೆಯಷ್ಟು ವಿಶಾಲವಾಗಿದೆ. ಮಾಚೇನಹಳ್ಳಿಯ ಗೌರಿಕಟ್ಟೆ 163 ಎಕರೆ, ಕರ್ತಿಕೆರೆಯ ಚಂದಾಲಕಟ್ಟೆ ಹಾಗೂ ಮೂಗ್ತೀಹಳ್ಳಿಯ ಹಳ್ಳಿಕೆರೆ ತಲಾ 150 ಎಕರೆ ಇದೆ. ವಸ್ತಾರೆಯ ಜಿಗಣೆಕಟ್ಟೆ ಕೆರೆ 100 ಎಕರೆ ವಿಸ್ತೀರ್ಣವಿದೆ. ಮಳೆ ಸರಿಯಾಗಿ ಆಗದೆ ಪ್ರತಿ ವರ್ಷ ಬರಗಾಲ ಕಾಡುತ್ತಿರುವುದರಿಂದ ಕೆರೆಗಳು ತುಂಬುವುದೇ ಇಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts