More

    ಅಸೆಂಬ್ಲಿ ವಾರ್​ 2023| ಚಿಕ್ಕಮಗಳೂರು ಜಿಲ್ಲಾ ನೋಟ: ಕಾಫಿ ನಾಡಿನಲ್ಲಿ ಗೆಲ್ಲೋರೆ ಕಿಂಗ್

    ಇಂದಿರಾ ಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ ಜಿಲ್ಲೆ ಚಿಕ್ಕಮಗಳೂರು. ಕಾಫಿನಾಡಲ್ಲಿ ಕಾಂಗ್ರೆಸ್ ನೆಲೆ ಎಷ್ಟು ಭದ್ರವಾಗಿತ್ತು ಎಂಬುದಕ್ಕೆ ಇದೊಂದು ನಿದರ್ಶನ ಸಾಕು. ಆದರೆ ಇದೀಗ ಕಾಂಗ್ರೆಸ್​ನ ಭದ್ರಕೋಟೆ ಶಿಥಿಲಗೊಂಡಿದೆ. ಲೋಕಸಭಾ ಕ್ಷೇತ್ರ ಕೈ ತಪ್ಪಿದೆ. ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಪ್ರಾಬಲ್ಯ ಸಾಧಿಸಿದೆ. ಎಸ್.ಎಂ.ಕೃಷ್ಣ ಅವಧಿಯಲ್ಲಿ ಕಾಂಗ್ರೆಸ್​ನಿಂದ ಈ ಜಿಲ್ಲೆಯ ಮೂವರು ಮಂತ್ರಿಗಳಿದ್ದರು. 2004ರ ನಂತರ ಜಿಲ್ಲೆಯಲ್ಲಿ ಕಾಂಗ್ರೆಸ್ ದುರ್ಬಲವಾಗಿದ್ದು, ಅಂದಿನಿಂದಲೂ ಗತವೈಭವಕ್ಕೆ ಮರಳಲು ಹರಸಾಹಸ ಪಡುತ್ತಿದೆ. ಕೈ ನಾಯಕರು ಚರಿಷ್ಮಾ ಕಳೆದುಕೊಂಡಿದ್ದರೆ ದತ್ತಪೀಠ ಹೋರಾಟದ ಮೂಲಕ ಬೆಳಕಿಗೆ ಬಂದ ಸಿ.ಟಿ. ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಂತಕ್ಕೆ ಬೆಳೆದಿದ್ದಾರೆ. ಮೂಡಿಗೆರೆ ಮತ್ತು ಕಡೂರಲ್ಲಿ ಸ್ವಲ್ಪ ಮಟ್ಟಿಗೆ ಜೆಡಿಎಸ್ ಬಲ ಹೊಂದಿದೆ. ಆದರೆ ಕಳೆದ ಚುನಾವಣೆಯಲ್ಲಿ ಒಂದೂ ಸ್ಥಾನ ಪಡೆಯಲು ಆಗಿಲ್ಲ. ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್, ಇತರ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ವಿಜಯ ಪತಾಕೆ ಹಾರಿಸಿದೆ.

    ಚಿಕ್ಕಮಗಳೂರಲ್ಲಿ ಮತ್ತೆ ಬೆಳಗುವರೇ ರವಿ?
    ಅಸೆಂಬ್ಲಿ ವಾರ್​ 2023| ಚಿಕ್ಕಮಗಳೂರು ಜಿಲ್ಲಾ ನೋಟ: ಕಾಫಿ ನಾಡಿನಲ್ಲಿ ಗೆಲ್ಲೋರೆ ಕಿಂಗ್ದತ್ತಪೀಠ ಹೋರಾಟವನ್ನೇ ರಾಜಕೀಯ ಮೆಟ್ಟಿಲು ಮಾಡಿಕೊಂಡು ವಿಧಾನಸಭೆ ಪ್ರವೇಶ ಮಾಡಿದ ಸಿ.ಟಿ. ರವಿ ಹ್ಯಾಟ್ರಿಕ್ ಜಯ ಸಾಧಿಸಿ ನೆಲೆಯನ್ನು ಗಟ್ಟಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್​ನಿಂದ ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ. ವಿಜಯಕುಮಾರ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್​ನಿಂದ ಪ್ರಬಲ ಎನ್ನುವಂಥ ಅಭ್ಯರ್ಥಿ ಇಲ್ಲ. ಕಳೆದ ಚುನಾವಣೆಯಲ್ಲಿ ಸಿ.ಟಿ. ರವಿ ಅವರನ್ನು ಸೋಲಿಸಲು ಎಲ್ಲ ರೀತಿಯ ಪ್ರಯತ್ನಗಳು ನಡೆದವು. ಹ್ಯಾಟ್ರಿಕ್ ಗೆಲುವಿಗೆ ಅವಕಾಶವಾಗಬಾರದು ಎಂದು ಎಷ್ಟೇ ಪ್ರಯತ್ನ ನಡೆದರೂ ಗೆಲುವು ತಡೆಯಲು ಆಗಲಿಲ್ಲ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ನಂತರ ಮತ್ತಷ್ಟು ಪ್ರಭಾವಿಯಾಗಿದ್ದಾರೆ. ಅವರ ವಿರುದ್ಧ ಸೆಣಸಲು ಎಲ್ಲ ರೀತಿಯಿಂದಲೂ ಸಮರ್ಥರಾದವರು ಬೇಕಾಗುತ್ತದೆ.

    ಕಡೂರಲ್ಲಿ ಪ್ರಕಾಶ vs ದತ್ತ
    ಅಸೆಂಬ್ಲಿ ವಾರ್​ 2023| ಚಿಕ್ಕಮಗಳೂರು ಜಿಲ್ಲಾ ನೋಟ: ಕಾಫಿ ನಾಡಿನಲ್ಲಿ ಗೆಲ್ಲೋರೆ ಕಿಂಗ್ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಮತ್ತೆ ಶಾಸಕ ಬೆಳ್ಳಿ ಪ್ರಕಾಶ್ ಕಣಕ್ಕೆ ಇಳಿಯುವುದು ನಿಶ್ಚಿತ. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್​ನಿಂದ ಅಭ್ಯರ್ಥಿ ಯಾರಾಗಬಹುದು ಎನ್ನುವ ಪ್ರಶ್ನಾರ್ಥಕ ಚಿಹ್ನೆ ಇದೆ. ವೈಎಸ್​ವಿ ದತ್ತ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲಿದ್ದು, ಬರಲಿರುವ ಚುನಾವಣೆಯಲ್ಲಿ ಅವರೇ ಕಾಂಗ್ರೆಸ್ ಅಭ್ಯರ್ಥಿ ಎನ್ನುವ ಸುದ್ದಿ ಕ್ಷೇತ್ರದಲ್ಲಿ ಹರಡಿದೆ. ಸಿದ್ದರಾಮಯ್ಯ ಅವರೊಂದಿಗೆ ಇರುವ ಒಡನಾಟ ಈ ಬೆಳವಣಿಗೆಗೆ ಕಾರಣವಾದರೂ ಅಚ್ಚರಿ ಇಲ್ಲ. ಆದರೆ ಕ್ಷೇತ್ರದಲ್ಲಿ ಅವರಿಗೆ ಕೆಂಪುಹಾಸಿನ ಸ್ವಾಗತವೇನೂ ಸಿಗದು. ಕೆಪಿಸಿಸಿ ಸದಸ್ಯ ಕೆ.ಎಸ್. ಆನಂದ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಎನ್. ವಿನಾಯಕ್ ಮತ್ತು ಜಿಪಂ ಮಾಜಿ ಸದಸ್ಯ, ಮಾಜಿ ಶಾಸಕ ದಿ. ಕೃಷ್ಣಮೂರ್ತಿ ಅವರಪುತ್ರ ಶರತ್ ಕೃಷ್ಣಮೂರ್ತಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ದತ್ತ ಜೆಡಿಎಸ್ ತೊರೆದರೆ ಜಿಪಂ ಮಾಜಿ ಸದಸ್ಯ ಮಹೇಶ್ ಒಡೆಯರ್ ಕಣಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಒಂದು ವೇಳೆ ವೈಎಸ್​ವಿ ದತ್ತ ಕಾಂಗ್ರೆಸ್ ಅಭ್ಯರ್ಥಿಯಾದರೆ ಕೈ ಟಿಕೆಟ್ ವಂಚಿತರಲ್ಲಿ ಯಾರಾದರೂ ಜೆಡಿಎಸ್​ನಿಂದ ಕಣಕ್ಕೆ ಇಳಿಯಬಹುದು.

    ತರೀಕೆರೆಯಲ್ಲಿ ಆಕಾಂಕ್ಷಿಗಳ ದಂಡು
    ಅಸೆಂಬ್ಲಿ ವಾರ್​ 2023| ಚಿಕ್ಕಮಗಳೂರು ಜಿಲ್ಲಾ ನೋಟ: ಕಾಫಿ ನಾಡಿನಲ್ಲಿ ಗೆಲ್ಲೋರೆ ಕಿಂಗ್ತರೀಕೆರೆ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಶಾಸಕ ಡಿ.ಎಸ್. ಸುರೇಶ್ ಅವರೊಂದಿಗೆ ಇನ್ನೂ ಇಬ್ಬರು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಆದರೆ ಸುರೇಶ್ ಅವರನ್ನೇ ಮತ್ತೆ ಕಣಕ್ಕೆ ಇಳಿಸುವುದು ನಿಶ್ಚಿತ. ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಲ್ಲಿ ದೊಡ್ಡ ದಂಡೇ ಇದೆ. ಮಾಜಿ ಶಾಸಕ ಜಿ.ಎಚ್. ಶ್ರೀನಿವಾಸ್, ಎಚ್.ಎಂ. ಗೋಪಿಕೃಷ್ಣ, ದೋರನಾಳು ಪರಮೇಶ್, ಮಾಜಿ ಶಾಸಕ ಟಿ.ಎಚ್. ಶಿವಶಂಕರ್, ಎಸ್.ಎಂ. ನಾಗರಾಜ್, ಕೆ. ಆರ್ ಧ್ರುವಕುಮಾರ್ ಹೆಸರುಗಳೂ ಇವೆ. ಆದರೆ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಶ್ರೀನಿವಾಸ್ ಮತ್ತು ಬಿಜೆಪಿ ಟಿಕೆಟ್ ಸಿಗದೆ ಪಕ್ಷೇತರ ಅಭ್ಯರ್ಥಿಯಾಗಿದ್ದ ಗೋಪಿಕೃಷ್ಣ ಅವರು ಕಾಂಗ್ರೆಸ್ ಟಿಕೆಟ್​ಗೆ ತೀವ್ರ ಪ್ರಯತ್ನ ನಡೆಸಿದ್ದಾರೆ. ಯಥಾಪ್ರಕಾರ ಕಾಂಗ್ರೆಸ್ ಟಿಕೆಟ್ ವಂಚಿತರಲ್ಲಿ ಒಬ್ಬರು ಜೆಡಿಎಸ್ ಬಾಗಿಲು ತಟ್ಟಬಹುದು.

    ಶಾರದೆ ಕೃಪೆ ಯಾರಿಗೆ
    ಅಸೆಂಬ್ಲಿ ವಾರ್​ 2023| ಚಿಕ್ಕಮಗಳೂರು ಜಿಲ್ಲಾ ನೋಟ: ಕಾಫಿ ನಾಡಿನಲ್ಲಿ ಗೆಲ್ಲೋರೆ ಕಿಂಗ್ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ಇರುವ ಕ್ಷೇತ್ರ ಶೃಂಗೇರಿ. ಟಿ.ಡಿ. ರಾಜೇಗೌಡ ಅವರೇ ಮತ್ತೊಮ್ಮೆ ಇಲ್ಲಿ ಕಾಂಗ್ರೆಸ್ ಹುರಿಯಾಳು. ಬಿಜೆಪಿಯಿಂದ ಸಿ.ಎಂ. ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್ ಮತ್ತೊಮ್ಮೆ ಸ್ಪರ್ಧೆಗೆ ಸಜ್ಜಾಗಿದ್ದಾರೆ. ಆದರೆ ಅವರಿಗೆ ಸ್ಥಳೀಯವಾಗಿ ಹಿಂದು ಪರ ಸಂಘಟನೆಗಳ ವಿರೋಧ ಇದೆ. ಜೀವರಾಜ್​ಗೆ ಟಿಕೆಟ್ ಕೊಟ್ಟರೆ ನಾವು ಸ್ಪರ್ಧೆ ಮಾಡುತ್ತೇವೆ ಎಂದು ಬಿಜೆಪಿಯಲ್ಲೇ ಕೆಲವರು ಸಜ್ಜಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಜೀವರಾಜ್ ಸೋಲಿಗೆ ಕುಟುಂಬದೊಳಗಿನ ಬಿಕ್ಕಟ್ಟೇ ಕಾರಣವಾಗಿದ್ದು, ಈ ಬಿಕ್ಕಟ್ಟು ಇನ್ನೂ ಶಮನವಾಗಿಲ್ಲ. ಜೀವರಾಜ್​ಗೆ ಟಿಕೆಟ್ ಕೊಡಬೇಡಿ ಎಂದು ವಿರೋಧ ವ್ಯಕ್ತಪಡಿಸಿದ್ದ ಹಿಂದುಪರ ಸಂಘಟನೆಯ ಪ್ರವೀಣ್ ಖಾಂಡ್ಯ, ಕಡೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಖಾಂಡ್ಯ ಗಳಿಸಿದ್ದ ಮತಗಳು ಜೀವರಾಜ್​ಗೆ ಬಿದ್ದಿದ್ದರೆ ಟಿ.ಡಿ. ರಾಜೇಗೌಡರಿಗೆ ಶಾಸಕರಾಗುವ ಅವಕಾಶ ಸಿಗುತ್ತಿರಲಿಲ್ಲ. ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಡಾ. ಸುಧಾಕರ ಶೆಟ್ಟಿ ಅವರನ್ನು ಅಭ್ಯರ್ಥಿ ಎಂದು ಈಗಾಗಲೆ ಘೊಷಣೆ ಮಾಡಲಾಗಿದೆ. ಉದ್ಯಮಿ, ಮೈಸೂರಿನಲ್ಲಿ ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಡಾ. ಸುಧಾಕರ ಶೆಟ್ಟಿ ಮೂಲತಃ ಕೊಪ್ಪ ತಾಲೂಕಿನವರು. ಈಗ ಶೃಂಗೇರಿ ಕ್ಷೇತ್ರದಲ್ಲಿ ಸುತ್ತಾಟ ಆರಂಭಿಸಿದ್ದಾರೆ. ಅಡಕೆ ಮಂಡಿಯನ್ನೂ ಹೊಂದಿದ್ದಾರೆ.

    ಮೂಡಿಗೆರೆ ಯಾರ ಮುಡಿಗೆ?
    ಅಸೆಂಬ್ಲಿ ವಾರ್​ 2023| ಚಿಕ್ಕಮಗಳೂರು ಜಿಲ್ಲಾ ನೋಟ: ಕಾಫಿ ನಾಡಿನಲ್ಲಿ ಗೆಲ್ಲೋರೆ ಕಿಂಗ್ವಿಧಾನಸೌಧ ಪ್ರವೇಶದ್ವಾರದಲ್ಲಿ ಪ್ರತಿದಿನ ಪೊಲೀಸರು ತಡೆಯುವುದು, ನಾನು ಶಾಸಕ ಎಂದು ಹೇಳಿಕೊಂಡು ಹೋಗುವುದು ನಿರಂತರವಾಗಿ ನಡೆದೇ ಇತ್ತು. ಪೊಲೀಸರು ತಡೆ ಹಾಕುವುದರಿಂದ ಬೇಸತ್ತ ಅವರು ಒಮ್ಮೆ ಪೇಡ ಹಂಚಿ ನಾನು ಶಾಸಕ ಎಂದು ಪರಿಚಯ ಮಾಡಿಕೊಂಡು ಸುದ್ದಿಯಾಗಿದ್ದವರು ಎಂ.ಪಿ. ಕುಮಾರಸ್ವಾಮಿ. ನಂತರ ರೇಷನ್ ಕಾರ್ಡ್ ವಿಚಾರದಲ್ಲಿ ಮೂಡಿಗೆರೆ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತವಾದಾಗ ಆ ಕುಮಾರಸ್ವಾಮಿ ನಾನಲ್ಲ ಎಂದು ಹೇಳಿಕೊಳ್ಳುವ ಪರಿಸ್ಥಿತಿ ಬಂದಿತ್ತು. ಮತ್ತೊಮ್ಮೆ ವಿಧಾನಸೌಧದ ಬಳಿ ಸಂತ್ರಸ್ತರ ಪರವಾಗಿ ತಮ್ಮದೇ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿ ಸುದ್ದಿಯಾಗಿದ್ದರು. ಹೀಗೆ ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ಎಂ.ಪಿ. ಕುಮಾರಸ್ವಾಮಿ ಮತ್ತೆ ಸ್ಪರ್ಧೆಗೆ ಸಜ್ಜಾಗಿದ್ದಾರೆ. ಜೆಡಿಎಸ್​ನಿಂದ ಬಿ.ಬಿ. ನಿಂಗಯ್ಯ ಮತ್ತೊಮ್ಮೆ ರೆಡಿಯಾಗಿದ್ದಾರೆ. ಆದರೆ ಈ ಬಾರಿ ಜೆಡಿಎಸ್​ನಲ್ಲೂ ನಿಂಗಯ್ಯ ಅವರೊಂದಿಗೆ ಇನ್ನೂ ಕೆಲವರು ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಕಾಂಗ್ರೆಸ್​ನಿಂದ ಕೆಪಿಸಿಸಿ ಕಾರ್ಯದರ್ಶಿ ನಯನಾ ಮೋಟಮ್ಮ ಸೇರಿ ಹಲವರ ಹೆಸರು ಕೇಳಿಬರುತ್ತಿವೆ. ಚಿತ್ರದುರ್ಗದ ಮಾಜಿ ಸಂಸದ ಚಂದ್ರಪ್ಪ ಅವರೂ ಅವಕಾಶ ಸಿಕ್ಕರೆ ನೋಡೋಣ ಎನ್ನುವ ಲೆಕ್ಕಾಚಾರದಲ್ಲಿದ್ದಾರೆ.

    ಜೀವರಕ್ಷಕ ಸೀಟ್ ಬೆಲ್ಟ್​ಗಳು ಹೇಗೆ ರಕ್ಷಿಸುತ್ತವೆ? ಇಲ್ಲಿದೆ ಸಂಪೂರ್ಣ ವಿವರ…

    ಸರ್ಕಾರಿ ಕಾರ್ನರ್​: ಅನುಕಂಪದ ನೇಮಕಕ್ಕೆ ವಾರ್ಷಿಕ ಆದಾಯ

    ಜನಸೇವಕ ವೈದ್ಯ ಡಾ.ಕಾಮರೆಡ್ಡಿಗೆ ವಿಜಯರತ್ನ ಗರಿ: ವಿಜಯವಾಣಿ, ದಿಗ್ವಿಜಯ ವಾಹಿನಿಯ ಪ್ರತಿಷ್ಠಿತ ಗೌರವ ಪ್ರದಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts