More

    ಮೊದಲ ಚೆಂಡಿನಲ್ಲೇ ಬೌಂಡರಿ ಬಾರಿಸಿದ ಸಿಎಂ ಬೊಮ್ಮಾಯಿ: ಸಂಪುಟ ರಚನೆಯ ಇನ್​ಸೈಡ್​ ಸ್ಟೋರಿ ಇದು..!

    ಅಂತೂ-ಇಂತೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಸಂಪುಟ ಗರಿಬಿಚ್ಚಿದೆ. ಹೊಸ ಹುಮ್ಮಸ್ಸಿನಲ್ಲಿ ಬೊಮ್ಮಾಯಿ ಸಂಪುಟದ ಬಸ್ ಮುಂದೆ ಸಾಗಿದೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದ್ರೆ, ಒಬ್ಬರು ಉತ್ತರವಿದ್ರೆ, ಮತ್ತೊಬ್ಬರು ದಕ್ಷಿಣ ಎಂಬಂತಿರೋ ಬಿಜೆಪಿಯಲ್ಲಿ ಬೊಮ್ಮಾಯಿ ಇಷ್ಟು ಸುಲಭವಾಗಿ ಪಾಸ್ ಆಗಿದ್ಹೇಗೆ? ಇತ್ತ ಗುರು ಬಿಎಸ್​ವೈ ಹಿತರಕ್ಷಣೆ ಜತೆಗೆ ಅತ್ತ ದಿಲ್ಲಿ ವರಿಷ್ಠರಿಗೂ ಸಂತೃಪ್ತಿಗೊಳಿಸೋದು ಸುಲಭದ ಮಾತಲ್ಲ. ಆದ್ರೆ, ಇಲ್ಲಿ ಗೆಲ್ಲೋ ಮೂಲಕ ಬೊಮ್ಮಾಯಿ ಮೊದಲ ಚೆಂಡಿನಲ್ಲೇ ಬೌಂಡರಿ ಬಾರಿಸಿದ್ದಾರೆ.

    ಎಲ್ಲರನ್ನೂ ಮ್ಯಾನೇಜ್ ಮಾಡಿದ್ಹೇಗೆ ಚಾಣಕ್ಯ?
    ಇದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರಂಭದಲ್ಲೇ ಹೇಗೆ ಎಚ್ಚರಿಕೆಯಿಂದ ಹೆಜ್ಜೆ ಇಡ್ತಿದ್ದಾರೆ ಅನ್ನೋದಕ್ಕೆ ಸಾಕ್ಷಿ. ಒಂದು ಕಡೆ ನಮ್ಮ ನಾಯಕ ಬಿಎಸ್ ಯಡಿಯೂರಪ್ಪ ಅಂತಾ ಪದೇ ಪದೇ ನಿಷ್ಠೆ ಪ್ರದರ್ಶನ. ಇದರ ಜತೆ ಜತೆಗೇ ಕೇಂದ್ರ ಬಿಜೆಪಿ ವರಿಷ್ಟರ ಆದೇಶಕ್ಕೆ ತಲೆ ಬಾಗೋ ಬಗೆಗಿನ ವಿನೀತ ನುಡಿ. ಈ ರೀತಿ ಡಿಫೆನ್ಸ್ ಪೊಲಿಟಿಕ್ಸ್ ಆಡುತ್ತಲೇ ಶುರುವಿನಲ್ಲೇ ಬೆಳೆಯೋ ಪೈರು ಮೊಳಕೆಯಲ್ಲೇ ಗಾದೆ ನೆನಪಿಸಿದ್ದಾರೆ ಸಿಎಂ ಬಸವರಾಜ ಬೊಮ್ಮಾಯಿ. ಇದನ್ನೆಲ್ಲಾ ಏಕೆ ಹೇಳಬೇಕಾಯ್ತು ಅಂತಾ ಅಂದ್ರೆ, ಸಿಎಂ ಆಗಿ 8 ದಿನ ಕೂಡ ಆಗಿಲ್ಲ. ಅಷ್ಟರೊಳಗೆ ಬೊಮ್ಮಾಯಿ ನಡೆ-ನುಡಿ ನೋಡಿದ್ರೆ ಓರ್ವ ಪಕ್ವ ರಾಜಕಾರಣಿ ಅಂತಾ ಅನಿಸದೇ ಇರದು. ಏಕೆಂದರೆ ರಾಜ್ಯದಲ್ಲಿ ಸದ್ಯದ ರಾಜಕೀಯ ಪರಿಸ್ಥಿತಿ ಹೇಗಿದೆ ಎಂದ್ರೆ ಮಾತು ಆಡಿದ್ರೆ ಹೋಯ್ತು.. ಮುತ್ತು ಒಡೆದ್ರೆ ಹೋಯ್ತು ಅನ್ನುವಂತೆ. ಇಲ್ಲಿ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗೋ ಚಾಲಾಕಿತನ ಇರದಿದ್ರೆ, ಸಿಎಂ ಗಾದಿ ಅಕ್ಷರಶಃ ಹೂವಿನ ಸುಪ್ಪತ್ತಿಗೆ ಖಂಡಿತಾ ಅಲ್ಲ.!

    ಯಾವಾಗ ಜನನಾಯಕ ಬಿಎಸ್ ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿದ್ರೋ, ತಮ್ಮ ನಂತರ ಯಾರು ಅಂತಾ ಯೋಚಿಸಿದಾಗ ಕಂಡಿದ್ದು ಸೌಮ್ಯ ಸ್ವಭಾವದ ಬಸವರಾಜ ಬೊಮ್ಮಾಯಿ. ಈ ಹಿಂದಿನ ಎರಡು ಅನುಭವಗಳಿಂದ ಪಾಠ ಕಲಿತಿದ್ದ ಬಿಎಸ್ ಯಡಿಯೂರಪ್ಪ ಹೈಕಮಾಂಡ್​​ಗೆ ಈ ಸಲ ಸಿಎಂ ಹೆಸರು ಸೂಚಿಸುವಾಗ ಆತುರ ತೋರಲಿಲ್ಲ. ಈ ಸಲ ಸಿಎಂ ಉತ್ತರಾಧಿಕಾರಿ ಆಯ್ಕೆ ಬಗ್ಗೆ ಬಹಳ ಎಚ್ಚರಿಕೆಯಿಂದಲೇ ಹೆಜ್ಜೆ ಮುಂದಡಿ ಇಟ್ಟರು ಬಿಎಸ್ ಯಡಿಯೂರಪ್ಪ. ಈ ಸಂದರ್ಭದಲ್ಲಿ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ನಂಬಿಕಸ್ತರಂತೆ ಕಂಡಿದ್ದು ಬಸವರಾಜ ಬೊಮ್ಮಾಯಿ.! ಅದರಂತೆ ಬಸವರಾಜ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರತಿಷ್ಠಾಪನೆಯೂ ಆಯಿತು. ಇಲ್ಲೀವರೆಗೂ ಅತಿ ವಿನಯದ, ಸಹನಾ ಮೂರ್ತಿಯಂತೆ ಮಾತ್ರ ಕಾಣಿಸಿದ್ದ ಬೊಮ್ಮಾಯಿ, ಅಧಿಕಾರ ವಹಿಸಿಕೊಂಡ ಕೇವಲ ಒಂದು ವಾರದೊಳಗೆ ತಮ್ಮ ಶಕ್ತಿ ಏನೆಂಬುದನ್ನು ನಿರೂಪಿಸಿದ್ದಾರೆ. ಏಕೇಂದ್ರೆ, ರಾಜ್ಯ ಬಿಜೆಪಿಯಲ್ಲಿರೋ ಎಲ್ಲಾ ಬಣಗಳನ್ನ ಒಗ್ಗೂಡಿಸಿಕೊಂಡು, ಎಲ್ಲರ ವಿಶ್ವಾಸ ಗಳಿಸಿಕೊಂಡು, ಹೈಕಮಾಂಡ್​​ ಹೇಳಿದಂತೆ ಕೇಳಿಕೊಂಡು, ಯಾರಿಗೂ ನಿಷ್ಠುರವಾಗದೇ ಸರ್ಕಾರ ಮುನ್ನಡೆಸೋದು ಸುಲಭದ ಕೆಲಸವಲ್ಲ. ಅಂತಹದರಲ್ಲಿ ಆರಂಭದಲ್ಲೇ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಿಕ್ಸರ್ ಬಾರಿಸಿದ್ದಾರೆ ಬಸವರಾಜ ಬೊಮ್ಮಾಯಿ.

    ನೀವು ಕಳೆದ ಸಲ ಬಿಎಸ್ ಯಡಿಯೂರಪ್ಪ ಹೊಸ ಸರ್ಕಾರ ರಚನೆ ಸಂದರ್ಭಕ್ಕೆ ಫ್ಲ್ಯಾಶ್​ ಬ್ಯಾಕ್​​ಗೆ ಹೋಗಬೇಕು. 17 ಶಾಸಕರ ರಾಜೀ ನಾಮೆಯಿಂದಾಗಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನ ಬೆನ್ನಲ್ಲೇ ಹೊಸ ಸರ್ಕಾರ ರಚಿಸಿದ ಬಿಎಸ್ ಯಡಿಯೂರಪ್ಪ, ಆಗಲೂ ಶುರುವಿನಲ್ಲಿ ಒಬ್ಬರೇ ಪ್ರಮಾಣವಚನ ಸ್ವೀಕರಿಸಿದರು. ಆಗ ರಾಜ್ಯದಲ್ಲಿ ಕಂಡುಕೇಳರಿಯದಂತಹ ಪ್ರವಾಹ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ನೆರೆ ರೌದ್ರನರ್ತನ ಮಾಡುತ್ತಿದ್ದ ಸಮಯ. ಯಡಿಯೂರಪ್ಪಗೆ ಸಾಥ್ ನೀಡಲು ಆಗ ನಿಜಕ್ಕೂ ಅನುಭವೀ ಸಂಪುಟ ಸದಸ್ಯರ ಅಗತ್ಯವಿತ್ತು. ಆದ್ರೆ, ಯಡಿಯೂರಪ್ಪಗೆ ಫ್ರೀಹ್ಯಾಂಡ್ ಬಿಡದ ಹೈಕಮಾಂಡ್​, ತಕ್ಷಣ ಸಂಪುಟ ವಿಸ್ತರಣೆಗೆ ಕೊಡಲೇ ಇಲ್ಲ ಗ್ರೀನ್ ಸಿಗ್ನಲ್. 2019ರ ಜುಲೈ 26ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಯಡಿಯೂರಪ್ಪಗೆ ಸಂಪುಟ ವಿಸ್ತರಣೆಗೆ ಅವಕಾಶ ಸಿಕ್ಕಿದ್ದು ಆಗಸ್ಟ್​ 20ಕ್ಕೆ. ಅಂದ್ರೆ ಸಿಎಂ ಆಗಿ ಪದಗ್ರಹಣವಾದ ಬರೋಬರಿ 25 ದಿನಗಳ ಬಳಿಕ.! ಅಲ್ಲೀವರೆಗೂ ರಾಜ್ಯ ಸರ್ಕಾರದಲ್ಲಿ ಯಡಿಯೂರಪ್ಪ ಒನ್ ಮ್ಯಾನ್ ಆರ್ಮಿ.! ಈ ಬಾರಿ ಕೂಡ ಯಾವಾಗ ಬೊಮ್ಮಾಯಿ ಒಬ್ಬರೇ ಸಿಎಂ ಆಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರೋ, ರಾಜಕೀಯ ಪಡಸಾಲೆಯಲ್ಲಿ ಕೇಳಿಬಂದ ಮಾತು..ಸದ್ಯಕ್ಕೆ ಸಂಪುಟ ವಿಸ್ತರಣೆಗೆ ಚಾನ್ಸ್ ಸಿಗೋದು ಡೌಟ್ ಅಂತಾನೇ.

    ಕಾಕತಾಳೀಯ ಎಂಬಂತೆ ಬೊಮ್ಮಾಯಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಬಿಎಸ್​ವೈ ಕಾಲದಲ್ಲಾದಂತೆ ರಾಜ್ಯದಲ್ಲಿ ಎದುರಾಗಿತ್ತು ಪ್ರವಾಹ. ಸಂಪುಟ ವಿಸ್ತರಣೆ ಸರ್ಕಸ್ ಮಧ್ಯೆಯೂ ಎರಡು ದಿನಗಳ ಕಾಲ ಪ್ರವಾಹಪೀಡಿತ ಪ್ರದೇಶಗಳತ್ತ ತೆರಳಿದ ಬೊಮ್ಮಾಯಿ, ನೆರೆ ಪರಿಹಾರ ಕಾರ್ಯಕ್ಕೆ ಮುಂದಾದರು. ಇದರ ಜತೆ ಜತೆಗೇ ಸರ್ಕಾರ ಟೇಕ್ ಆಫ್​ಗೆ ಬೇಕಿದ್ದ ಸಂಪುಟ ವಿಸ್ತರಣೆ ಬಗ್ಗೆ ಸಮಾನಾಂತರವಾಗಿ ದೆಹಲಿ ನಾಯಕರ ಜತೆ ಸತತ ಸಂಪರ್ಕ ಇಟ್ಕೊಂಡರು. ಸಿಎಂ ಆದ ಬಳಿಕ ದೆಹಲಿಗೆ ತೆರಳಿ ವರಿಷ್ಠರಿಗೆ ಥ್ಯಾಂಕ್ಸ್ ಹೇಳಿಬಂದ ಬೊಮ್ಮಾಯಿ, ಎರಡು ದಿನಗಳ ಬಳಿಕ ಮತ್ತೆ ದೆಹಲಿಯತ್ತ ಮುಖ ಮಾಡಿದರು. ರಾಷ್ಟ್ರರಾಜಧಾನಿಯಲ್ಲಿ ಎರಡು ದಿನ ಮೊಕ್ಕಾಂ ಹೂಡಿದ ಬೊಮ್ಮಾಯಿ, ತಕ್ಷಣಕ್ಕೆ ಸಂಪುಟ ವಿಸ್ತರಣೆ ಅಗತ್ಯ ಬಗ್ಗೆ ನಾಯಕರ ಮನವೊಲಿಸೋದು ಈಸಿಯಂತೂ ಆಗಿರಲಿಲ್ಲ.

    ದೆಹಲಿಗೆ 2ನೇ ಸಲ ತೆರಳಿದ ಬೊಮ್ಮಾಯಿಗೆ ಸಂಪುಟ ಲಿಸ್ಟ್ ಫೈನಲ್ ಸುಲಭವಾಗಿರಲಿಲ್ಲ. ಒಂದೆಡೆ, ಬಿಎಸ್ ಯಡಿಯೂರಪ್ಪಗೆ ನಿಷ್ಠೆ. ಇದರಂತೆ ಬಿಎಸ್​ವೈ, ಈ ಹಿಂದೆ ವಲಸಿಗರಿಗೆ ಕೊಟ್ಟ ಮಾತು ಉಳಿಸಿಕೊಳ್ಳಬೇಕಾದ ಜರೂರತ್ತು. ಇದಲ್ಲದೇ, ಯಡಿಯೂರಪ್ಪ ಸಂಪುಟದಲ್ಲಿದ್ದ ಬಹುತೇಕರನ್ನ ಉಳಿಸಿಕೊಳ್ಳಬೇಕಾದ ಸಂದಿಗ್ನತೆ, ಇದರೊಂದಿಗೆ ಹೈಕಮಾಂಡ್​ ಕೊಡೋ ಲಿಸ್ಟ್​​ಗೆ ಮನ್ನಣೆ ಕೊಡಬೇಕಾದ ಅನಿವಾರ್ಯತೆ. ಜತೆಗೆ, ದೆಹಲಿಮಟ್ಟದಲ್ಲಿ ಪ್ರಭಾವ ಹೊಂದಿದ, ರಾಜ್ಯ ರಾಜಕಾರಣದಲ್ಲೂ ಆಗಾಗ್ಗೇ ಪಗಡೆ ಉರುಳಿಸೋ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್​​ರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ನಡೆ. ಹೀಗೆ ಸಚಿವ ಸಂಪುಟ ವಿಸ್ತರಣೆ, ಸಿಎಂ ಬೊಮ್ಮಾಯಿ ಎದುರಿಸಬೇಕಾಗಿದ್ದ ಸಾಲುಸಾಲು ಸವಾಲುಗಳಲ್ಲಿ ಮೊದಲನೇಯದ್ದು. ಈ ಹಂತ ದಲ್ಲಿ ನಿಮಗೆ ಗೊತ್ತಿರಲಿ..ಸಿಎಂ ಬಸವರಾಜ ಬೊಮ್ಮಾಯಿ ಕೈಲಿದ್ದ ಲಿಸ್ಟ್ಒಂದಲ್ಲ..ಎರಡಲ್ಲ.. ಮೂರು. ದೆಹಲಿಯಲ್ಲಿ ಮೊದಲ ದಿನ ಜೆಪಿ ನಡ್ಡಾ ಜತೆಗಿನ ಭೇಟಿಯಲ್ಲಿ ಸಂಪುಟಕ್ಕೆ ಸಿಗಲಿಲ್ಲ ಹಸಿರುನಿಶಾನೆ.! ಆದ್ರೂ ಧೃತಿಗೆಡದ ಬೊಮ್ಮಾಯಿ, ಅಮಿತ್ ಷಾ, ನಡ್ಡಾ ಜತೆ ಸತತ ಚರ್ಚೆ ನಡೆಸಿದರು. ಇತ್ತ ಬೆಂಗಳೂರಿನಲ್ಲಿದ್ದ ಬಿಎಸ್​ ಯಡಿಯೂರಪ್ಪ ಜತೆಗೂ ಸಂವಹನ.. ಒಂದು ಪಟ್ಟಿ ಪಕ್ಕಾ ಆದ್ರೆ, ಮತ್ತೆ ಅಲ್ಲೇನೋ ಕೊಕ್ಕೆ.! ಹೀಗೆ ಹಲವಾರು ಚೌಕಾಸಿಗಳ ಬಳಿಕ ಒಂದು ಹಂತಕ್ಕೆ ಬಂದುನಿಂತಿತು ಸಂಪುಟ ಪಟ್ಟಿ . ಆಗ ಬೆಂಗಳೂರಿಗೆ ಮರಳಲು ವಿಮಾನ ಟಿಕೆಟ್ ಬುಕ್ ಮಾಡಿದ್ದ ಬೊಮ್ಮಾಯಿಗೆ ಕೊನೇ ಕ್ಷಣದಲ್ಲಿ ಎದುರಾಯ್ತು ದೊಡ್ಡ ಹರ್ಡಲ್.!

    ದಿಲ್ಲಿಯಲ್ಲಿ ವರಿಷ್ಠರ ಮನವೊಲಿಕೆಗೆ ಬೊಮ್ಮಾಯಿ ಅನುಸರಿಸಿದ ಸೂತ್ರ ಎಂಥಹವರನ್ನ ಅಚ್ಚರಿಗೊಳಿಸುತ್ತೆ. ಬಿಎಸ್​ವೈ ವಿರೋಧಿಗಳಿಗೆ ಹೆಡೆಮುರಿ ಕಟ್ಟೋ ಜತೆಗೇ, ವಿಜಯೇಂದ್ರಗೆ ಯಾವುದೇ ಕ್ಷಣದಲ್ಲೂ ಸಂಪುಟ ಸೇರ್ಪಡೆಗೆ ಡೋರ್ ಓಪನ್ ಮಾಡಿಟ್ಟಿರೋದು ಬೊಮ್ಮಾಯಿ ಚಾಣಾಕ್ಷತೆಗೆ ಸಾಕ್ಷಿ.

    ಹೈಕಮಾಂಡ್​​​-ಬಿಎಸ್​ವೈ ಜತೆ ಸಮಾನ ಹೆಜ್ಜೆ !
    ದೆಹಲಿಯಲ್ಲಿ ಮೊದಲೇ ದಿನ ಸಂಪುಟ ಪಟ್ಟಿ ಫೈನಲ್ ಆಗಲಿಲ್ಲ. ಎಲ್ಲವೂ ಸರಿ ಹೋಯ್ತು ಅಂತಾ ಅನ್ಕೊಳ್ಳೋ ಸಮಯದಲ್ಲಿ ಮತ್ತೆ ಎದುರಾಯ್ತು ಪ್ರಾಬ್ಲಂ. ಎಲ್ಲವೂ ಫೈನಲ್ ಆದ್ರೆ, ಸಂಪುಟ ಲಿಸ್ಟ್​ಗೆ ತೊಡಕಾಗಿದ್ದು ಎರಡು ಇಶ್ಯೂಗಳು. ಇದರಲ್ಲಿ ಒಂದು ಬಿವೈ ವಿಜ ಯೇಂದ್ರ ಸೇರ್ಪಡೆ..ಎರಡನೇಯದ್ದು ಬಿಎಸ್​ವೈಗೆ ಕಾಟ ಕೊಟ್ಟ ಅತೃಪ್ತರಿಗೆ ಚಾನ್ಸ್ ಕೊಡಬೇಕೋ ಬೇಡವೋ ಎಂಬುದು. ವಿಜಯೇಂದ್ರಗೆ ಸಚಿವ ಸ್ಥಾನ ಅವಕಾಶಕೊಟ್ರೆ, ದಿಲ್ಲಿ ಟೀಂನಿಂದ ಅತೃಪ್ತರಿಗೂ ಮಂತ್ರಿಗಿರಿ ಕೊಡಬೇಕೆಂಬ ಷರತ್ತು. ಅಂತಿಮ ಕ್ಷಣದವರೆಗೂ ಬಿವೈ ವಿಜಯೇಂದ್ರ ಪರ ಬ್ಯಾಟ್ ಬೀಸಿದ ಬೊಮ್ಮಾಯಿ, ಇದಕ್ಕೆ ಆಸ್ಪದ ಸಿಗದಿದ್ದಾಗ, ಕಡೆಗೆ ಒಂದು ಫಾರ್ಮುಲಾ ಮುಂದಿಟ್ಟರು. 3 ಸ್ಥಾನ ಖಾಲಿ ಉಳಿಸೋ ಮೂಲಕ, ಆಪ್ಷನ್ ಓಪನ್ ಆಗಿಡೋ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಬಳಿ ಪ್ರಸ್ತಾವನೆ ಇಟ್ಟರು ಬ್ರಿಲಿಯಂಟ್ ಬೊಮ್ಮಾಯಿ. ಸದ್ಯಕ್ಕೆ ಇದೇ ಸರಿಯಾದ ಉಪಾಯ ಎಂದುಕೊಂಡ ಜೆಪಿ ನಡ್ಡಾ, ಸಂಪುಟ ಲಿಸ್ಟಿಗೆ ಅಸ್ತು ಎಂದರು.

    ಇಲ್ಲಿ ಬೊಮ್ಮಾಯಿ, ತಮ್ಮ ಗುರು ಬಿಎಸ್ ಯಡಿಯೂರಪ್ಪ ಸಂಪುಟವನ್ನ ಹೆಚ್ಚಿನ ಮಟ್ಟದಲ್ಲಿ ಡಿಸ್ಟರ್ಬ್​ ಮಾಡಲು ಹೋಗಲಿಲ್ಲ. ಬಿಎಸ್​ವೈ ಕೊಟ್ಟ ಮಾತಿನಿಂತೆ ವಲಸಿಗರನ್ನೂ ಕೈಬಿಡಲಿಲ್ಲ. ಆಪರೇಷನ್ ಆಪತ್ಬಾಂಧವ ಮುನಿರತ್ನರನ್ನು ಮರೆಯಲಿಲ್ಲ. ಹಾಗೆಯೇ ಯಡಿಯೂರಪ್ಪರನ್ನ ಕಾಡಿದ ವಿರೋಧಿಗಳನ್ನೂ ಸಂಪುಟದಿಂದ ದೂರವಿಡದೇ ಬಿಡಲಿಲ್ಲ. ಸಂಘಪರಿವಾರ, ದೆಹಲಿ ಟೀಂ ಕೊಟ್ಟ ಲಿಸ್ಟ್​​ ಅನ್ನೂ ನೆಗ್ಲೆಕ್ಟ್ ಮಾಡಲಿಲ್ಲ. ಜತೆಗೆ ವಿಜಯೇಂದ್ರಗೆ ಮುಂದಿನ ದಿನಗಳಲ್ಲಿ ಕ್ಯಾಬಿನೆಟ್ ಚಾನ್ಸ್ ಕೊಡೋ ಭರವಸೆ ಮೂಡಿಸೋ ಮೂಲಕ ನಿರಾಸೆ ತರಲಿಲ್ಲ. ಇಲ್ಲಿ ಬೊಮ್ಮಾಯಿ ಆಡಿದ ಆಟದಂತೆ ಹಾವೂ ಸಾಯಲಿಲ್ಲ..ಕೋಲೂ ಮುರಿಯಲಿಲ್ಲ.!

    ಬೊಮ್ಮಾಯಿ ಸಂಪುಟ ವಿಸ್ತರಣೆಯಲ್ಲಿ ಮತ್ತೊಂದು ಜಾದೂ ಮಾಡಿದ್ದಾರೆ. ಯಾರು ಏನೇ ಹೇಳಲಿ..ಡಿಸಿಎಂ ಹುದ್ದೆ ಸಿಎಂಗೆ ಪರ್ಯಾಯ ಶಕ್ತಿಕೇಂದ್ರ ಅಂತಾನೇ ಬಿಂಬಿತ. ಕೆಲವೊಮ್ಮೆ ಹಿರಿತನಕ್ಕೆ ಗೌರವ, ಜಾತಿ ಸಮೀಕರಣ ಉದ್ದೇಶವಿದ್ರೂ, ಬಹಳಷ್ಟು ಸಲ, ಇದು ಸಿಎಂ ವೇಗಕ್ಕೆ ಬ್ರೇಕ್ ಮೆಷೀನ್​​​ ಕೂಡ ಹೌದು. 2019ರಲ್ಲಿ ಯಡಿಯೂರಪ್ಪ ಸಂಪುಟದಲ್ಲಿ ಮೂವರು ಡಿಸಿಎಂಗಳ ನೇಮಕ ಮಾಡಿದಂತೆ ಬೊಮ್ಮಾಯಿ ಕ್ಯಾಬಿನೆಟ್​​​ನಲ್ಲಿ 3, 4 ಅಥವಾ5 ಡಿಸಿಎಂಗಳ ನೇಮಕಕ್ಕೆ ಹೈಕಮಾಂಡ್​ ಮುಂದಾಗಿತ್ತು ಎನ್ನಲಾಗಿದೆ. ಆದ್ರೆ, ಸಾಂವಿಧಾನಿಕ ಮಾನ್ಯತೆಯೇ ಇಲ್ಲದ ಡಿಸಿಎಂ ನೇಮಕದಿಂದ ವೃಥಾ ಸಂಘರ್ಷ ಹೆಚ್ಚಿ, ವೈಮನಸ್ಯಕ್ಕೆ ಕಾರಣವಾಗಲಿದೆ. ಇದರಿಂದ ಸರ್ಕಾರ ಹಾಗೂ ಸುಲಲಿತ ಆಡಳಿತ ಕ್ಕೂ ತೊಂದರೆ ಎಂಬುದನ್ನ ಬೊಮ್ಮಾಯಿ ಮನದ್ಟಟ್ಟು ಮಾಡಿದ ಬಳಿಕ ವರಿಷ್ಠರು ಡಿಸಿಎಂ ಪ್ರಸ್ತಾವನೆಯಿಂದ ಹಿಂದೆಸರಿದರು ಎನ್ನಲಾಗಿದೆ.

    ಮೂಲತಃ ಸೌಮ್ಯ ಸ್ವಭಾವದ ಬೊಮ್ಮಾಯಿಗೆ ಸಂಘರ್ಷಕ್ಕೆ ಮುಂದಾಗದೇ ಕನ್​ವಿನ್ಸ್​​ ಮಾಡೋ ಕಲೆ ಕರಗತ. ಹೀಗಾಗಿಯೇ ಬೊಮ್ಮಾಯಿ ಈ ಹಿಂದೆ ಕೆಜೆಪಿಗೆ ತೆರಳದೇ ಬಿಜೆಪಿಯಲ್ಲೇ ಉಳಿದ ನಂತರವೂ ಯಡಿಯೂರಪ್ಪರ ಜತೆ ಸಂಬಂಧ ಕೆಡಿಸಿಕೊಳ್ಳಲಿಲ್ಲ. ಕಳೆದ ಸಂಪುಟದಲ್ಲೂ ಯಡಿಯೂರಪ್ಪಗೆ ನೆರಳಂತೆ ಸುತ್ತಮುತ್ತ ಸುಳಿದಾಡುತ್ತಲೇ ಜಾಕ್​ಪಾಟ್ ಹೊಡೆದರು ಬಸವರಾಜ ಬೊಮ್ಮಾಯಿ. ಸಿಎಂ ಸ್ಥಾನ ಇನ್ನೂ ಫೈನಲ್ ಆಗದ ಸಂದರ್ಭದಲ್ಲೂ ಸೈಲೆಂಟ್ ಆಗಿರದ ಬೊಮ್ಮಾಯಿ, ತಮ್ಮದೇ ಆದ ಒಳಹಾದಿಗಳ ಮೂಲಕ ಹೈ ಕದ ತಟ್ಟಿ ದ್ದರು. ಜೋಷಿ ಬಳಿಯೂ, ನಿಮ್ಮ ಹೆಸರು ಚಾಲ್ತಿಗೆ ಬಂದ್ರೆ ನಾನು, ಯಡಿಯೂರಪ್ಪರ ಮನವೊಲಿಸ್ತೀನಿ..ನನ್ನ ಹೆಸರು ಚಾಲ್ತಿಗೆ ಬಂದ್ರೆ, ನೀವು ಹೈಕಮಾಂಡ್​ ಗೆ ರೆಕಮಂಡ್ ಮಾಡಿ ಅಂತಾ ಸದ್ದಿಲ್ಲದೇ ಕಾರ್ಡ್​ ಪ್ಲೇ ಮಾಡಿದ್ದರಂತೆ ಬೊಮ್ಮಾಯಿ.!

    ಅಷ್ಟಕ್ಕೂ ರಾಜಕೀಯ ವಲಯದಲ್ಲಿ ಪ್ರಚಲಿತದಲ್ಲಿರುವಂತೆ ಬೊಮ್ಮಾಯಿ ಬದ್ಧತೆ, ವಿಶ್ವಾಸಾರ್ಹತೆ ಕೆಡಿಸಿಕೊಂಡವರಲ್ಲ. ನಂಬಿದರ ಹಿಂದೆ ಚೂರಿ ಇರಿಯುವವರೂ ಅಲ್ಲ..ಮೂರು-ಮೂರೂವರೆ ದಶಕಗಳ ರಾಜಕೀಯ ಅನುಭವ, ತಂದೆ ಸಿಎಂ ಆಗಿದ್ದ ಸಂದರ್ಭದಲ್ಲಿ ಜನತಾ ಪರಿವಾರದಲ್ಲಿನ ದೊಡ್ಡವರ ಒಡನಾಟ.. ಬಸವರಾಜ ಬೊಮ್ಮಾಯಿರನ್ನ ಪಕ್ವ ಮಾಡಿದೆ. ಇವತ್ತಿಗೂ ಬೊಮ್ಮಾಯಿ ಪಕ್ಷ ಬದಲಿಸಿದರೂ, ಈ ಹಿಂದಿನ ಪಕ್ಷಗಳಲ್ಲಿನ ನಾಯಕರ ನಂಬಿಕೆ ಕಳೆದುಕೊಂಡಿಲ್ಲ. ದೇವೇಗೌಡರು, ಸಿದ್ದರಾಮಯ್ಯ, ಕುಮಾರಸ್ವಾಮಿರಂತಹವರ ಜತೆ ಈಗಲೂ ಸುಮಧುರ ಸಂಬಂಧವಿದೆ. ನಾನಾ ರಾಜಕೀಯ ಪಟ್ಟುಗಳು ಸಿದ್ಧಿಸಿವೆ. ಇವುಗಳೇ ಬೊಮ್ಮಾಯಿಗೆ ಮೇಲೆದ್ದರೆ ಬೀಗದೇ, ಕೆಳ ಬಿದ್ದಾಗ ನಲುಗದೇ ಇರೋ ಸಮತೂಕ..ತಾಳ್ಮೆ ಕಲಿಸಿಕೊಟ್ಟಿರೋದು. ನಿಷ್ಠೆಯ ಜತೆಗೇ ಎಲ್ಲರ ಜತೆಯೂ ಹೊಂದಿಕೊಂಡು..ಎಲ್ಲರನ್ನೂ ಸಮಭಾವದಿಂದ ಕರೆದೊಯ್ಯೋ ಗುಣಗಳು ಮೈಗೂಡಿರೋದು.

    ಇನ್ನ, ಬಿಜೆಪಿಯಲ್ಲಿ ಈಗ ಇರೋ ಬಣಗಳು ಹಲವಾರು..ಸಂಘಪರಿವಾರ, ಮೂಲ ಬಿಜೆಪಿ, ಹೈಕಮಾಂಡ್, ಯಡಿಯೂರಪ್ಪ ಆಪ್ತರು.. ವಲಸಿಗರು, ಹಿರಿಯರು-ಕಿರಿಯರು..ಪ್ರಾಂತ್ಯವಾರು, ಜಾತಿವಾರು ಸೂಕ್ತ ಪ್ರಾತಿನಿಧ್ಯ ಬಯಸಿದವರು. ಹೀಗೆ ಈ ಪಟ್ಟಿ ದೊಡ್ಡದಿದೆ. ಇದರ ಜತೆಗೆ, ಬಿಜೆಪಿಯಲ್ಲಿ ಸದ್ಯಕ್ಕೆ ಮೋದಿ, ಅಮಿತ್ ಷಾ, ನಡ್ಡಾ ಎಂಬ ಶಕ್ತಿಕೇಂದ್ರಗಳಲ್ಲದೇ, ರಾಜ್ಯದ ಮಟ್ಟಿಗಿರೋ ಯಡಿಯೂರಪ್ಪ, ದಿಲ್ಲಿ ಪ್ರಭಾವಿ ಸಂತೋಷ್​ ಮುಂತಾದ ಘಟಾನುಘಟಿ ನಾಯಕರ ಕಾನ್ಫಿಡೆನ್ಸ್ ಅನ್ನ ಸಿಎಂ ಉಳಿಸಿಕೊಳ್ಳಬೇಕಿದೆ. ​ಈ ಎಲ್ಲವನ್ನೂ ಸರಿಸಮಾನ ವಾಗಿ ತೂಗಿಸಿ ಕೊಂಡುಹೋಗಬೇಕಿದೆ. ಇವೆಲ್ಲವನ್ನೂ ಮೀರಿನಿಲ್ಲೋ ಛಾತಿ ಬೊಮ್ಮಾಯಿಗಿದೆ ಅನ್ನೋದು ಕಳೆದೊಂದು ವಾರದೀಚೆಗಿನ ಬೆಳವಣಿಗೆಗಳು ದೃಢಪಡಿಸುತ್ತಿವೆ.

    ಬಸವರಾಜ ಬೊಮ್ಮಾಯಿ ಮುಂದೆ ಸವಾಲುಗಳ ಬೆಟ್ಟವೇ ಇದೆ. ಇದನ್ನ ಮೆಟ್ಟಿನಿಲ್ಲೋ ಛಾತಿ ಬೊಮ್ಮಾಯಿಗಿದ್ಯಾ? ಇದು ಬಹಳಷ್ಟು ಮಂದಿ ಕುತೂಹಲ. ಕಳೆದ ಒಂದುವಾರದಿಂದ ಬೊಮ್ಮಾಯಿ ಇಟ್ಟ ಹೆಜ್ಜೆ ಗಮನಿಸಿದ್ರೆ, ಇವೆಲ್ಲಾ ದೊಡ್ಡ ಗುರಿ ಅಲ್ಲವೇ ಅಲ್ಲ.! ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊದಲ ಯುದ್ಧ ಗೆದ್ದ ಸಂತಸದಲ್ಲಿದ್ದಾರೆ. ಹಾಗೂಹೀಗೂ ರಾಜ್ಯ ಸಚಿವ ಸಂಪುಟ ವಿಸ್ತರಣೆ ಸು ಸೂತ್ರವಾಗಿ ನೆರವೇರಿದೆ. ಇನ್ನ, ಉಳಿದ 20 ಪ್ಲಸ್ ತಿಂಗಳ ಅವಧಿಯಲ್ಲಿ ದಕ್ಷ ಆಡಳಿತ ಮೂಲಕ ಪಕ್ಷಕ್ಕೆ ಬಲ ತುಂಬೋದು ಬೊಮ್ಮಾಯಿ ಮುಂದಿನ ಟಾಸ್ಕ್.!

    ಆದ್ರೆ, ಬೊಮ್ಮಾಯಿ ಈಗ ಗೆದ್ದಿದ್ರೂ ಮುಂದಿನ ಹಾದಿ ಸುಲಭವಾಗಿದ್ದೇನಲ್ಲ. ಕಲ್ಲುಮುಳ್ಳುಗಳಲ್ಲೇ ಕೂಡಿದ ರಸ್ತೆಯಲ್ಲಿ ಬಹುದೂರ ಪಯಣ ಬೆಳಸಬೇಕಾದ ಅನಿವಾರ್ಯತೆ ಬೊಮ್ಮಾಯಿಗಿದೆ. ಏಕೇಂದ್ರೆ ಸಿಎಂ ಬೊಮ್ಮಾಯಿಗಿರೋ ಸವಾಲುಗಳನ್ನ ನೋಡಿದ್ರೆ, ಇದು ಕಬ್ಬಿಣದ ಕಡಲೆ ಅನಿಸದೇ ಇರೋದಿಲ್ಲ.!

    ಸಚಿವ ಸ್ಥಾನ ವಂಚಿತರಿಗೆ ‘ಮುಲಾಮು’!
    ಸಚಿವ ಸ್ಥಾನ ನಿರೀಕ್ಷೆಯಲ್ಲಿದ್ದ ಹಲವು ಶಾಸಕರು, ಅವಕಾಸ ಸಿಗದೇ ಕೊತ ಕೊತ ಕುದಿಯುತ್ತಿದ್ದಾರೆ. ಇಂತಹ ಶಾಸಕರ ಮನವೊಲಿಕೆ ಸುಲಭವಲ್ಲ. ಆದ್ರೂ, ಇಂತಹ ಶಾಸಕರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನದ ಅಭಯ ಮೂಲಕ ಆಕ್ರೋಶ ಶಮನ ಮಾಡ ಬೇಕಿದೆ. ಇದರ ಜತೆಗೆ ಈಗ ಸಚಿವ ಸ್ಥಾನ ಪಡೆದವರಿಗೂ ಸೂಕ್ತ ಖಾತೆ ಹಂಚಿಕೆ ಮೂಲಕ ಅಸಮಾಧಾನಕ್ಕೆ ಆಸ್ಪದವಾಗದಂತೆ ನೋಡಿ ಕೊಳ್ಳಬೇಕಿದೆ. ಎಲ್ಲರ ವಿಶ್ವಾಸ ಗೆಲ್ಲಬೇಕಿದೆ.

    ಕರೊನಾ ವಿರುದ್ಧ ಹೋರಾಟ
    ಇನ್ನ, ಕರೊನಾ ಮೂರನೇ ಅಲೆ ಭೀತಿ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮಗಳ ಮೂಲಕ ಸೋಂಕಿನ ಪ್ರಮಾಣ ತಗ್ಗಿಸಬೇಕಾದ ಹೊಣೆಗಾರಿಕೆ ಸಿಎಂ ಮೇಲೆ ಇದೆ. ಇದಲ್ಲದೆ, ಮುಂಜಾಗೃತೆಯಾಗಿ ಅಗತ್ಯ ಹಾಸಿಗೆ, ಆಕ್ಸಿಜನ್, ಜತೆಗೆ ಲಸಿಕೆ ಹೊಂದಿಸೋ ಮೂಲಕ ಕರೊನಾ ಮಣಿಸೋ ಜವಾಬ್ದಾರಿ ಸಿಎಂಗಿದೆ.

    ಆರ್ಥಿಕ ಸಬಲೀಕರಣ
    ಇನ್ನ, ಸರ್ಕಾರ ಸುಲಲಿತವಾಗಿ ನಡೆಯೋಕೆ ಹಣಕಾಸು ಮುಖ್ಯ. ಆದ್ರೆ, ಕರೊನಾ ಕಾರಣದಿಂದ ಆರ್ಥಕತೆ ನೆಲಕಚ್ಚಿದೆ. ಇಂಥಾ ಸಂದರ್ಭ ದಲ್ಲಿ ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ಕೂಡ ಸವಾಲೇ ಸರಿ.

    ಜಿ.ಪಂ., ತಾ.ಪಂ. ಚುನಾವಣೆ
    ಸದ್ಯಕ್ಕೆ ಪಕ್ಷದ ಲೆಕ್ಕದಲ್ಲಿ ನೋಡಿದ್ರೆ, ಮುಂಬರೋ ಜಿಲ್ಲಾ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆಗಳಲ್ಲಿ ಪಕ್ಷಕ್ಕೆ ಯಶಸ್ಸು ತಂದುಕೊಡಬೇಕಾದ ದೊಡ್ಡ ಗುರಿ ಬೊಮ್ಮಾಯಿ ಮೇಲಿದೆ. ಗ್ರಾಮೀಣ ಪ್ರದೇಶದಲ್ಲಿ ಪಕ್ಷ ಬಲವಾಗಿ ಬೇರೂರಿಲ್ಲದ ಸಂದರ್ಭದಲ್ಲಿ ಪಕ್ಷಕ್ಕೆ ವಿಜಯ ತಂದುಕೊಡಬೇಕಾದ ಟಾರ್ಗೆಟ್ ಬೊಮ್ಮಾಯಿಗಿದೆ.

    ವಿಧಾನಸಭಾ ಚುನಾವಣೆ ಮೇಲೆ ಕಣ್ಣು
    ಇನ್ನ, ಇನ್ನ 20 ತಿಂಗಳ ಬಳಿಕ ಎದುರಾಗೋ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಗೆಲ್ಲುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಕೂಡ ಬೊಮ್ಮಾಯಿ ಆಡಳಿತದ ಮೇಲಿದೆ. ಜನಪರ ಆಡಳಿತ ಮೂಲಕ ಮತದಾರರ ಮನಗೆಲ್ಲಬೇಕಾದ ಹೊಣೆಗಾರಿಕೆ ಬೊಮ್ಮಾಯಿ ಹೆಗಲಿಗೆ ಬಿದ್ದಿದೆ. ಇದಲ್ಲದೇ, ಇದಾದ ಬಳಿಕ ಬರೋ ಲೋಕಸಭಾ ಚುನಾವಣೆಯಲ್ಲೂ ರಾಜ್ಯದಿಂದ ಹೆಚ್ಚಿನ ಸಂಸದರನ್ನ ಗೆಲ್ಲಿಸಿಕೊಡೋ ರೆಸ್ಪಾನ್ಸಿ ಬಿಲಿಟಿ ಕೂಡ ಬೊಮ್ಮಾಯಿಗಿದೆ.

    ಕಮಲ ಬಣಗಳ ಮಧ್ಯೆ ಸಮನ್ವಯ
    ಇನ್ನ, ರಾಜ್ಯ ಬಿಜೆಪಿಯಲ್ಲಿ ನಾನಾ ಬಣಗಳಿರೋದು ರಹಸ್ಯವೇನಲ್ಲ. ಎತ್ತು ಏರಿಗೆಳೀತು..ಕೋಣ ನೀರಿಗೆಳೀತು ಅನ್ನುವಂತಾಗದ ರೀತಿ ಎಲ್ಲರನ್ನೂ ಸಮಾನವಾಗಿ ಕಾಣೋ ಮೂಲಕ, ಸಂಭಾಳಿಸಿಕೊಂಡು ಹೋಗಬೇಕಾಗಿರೋದೇ ದೊಡ್ಡ ಸವಾಲು. ಸಿಎಂ ಸ್ಥಾನಕ್ಕೇರಿಸಿದ ಬಿಎಸ್​ವೈ ವಿಶ್ವಾಸ ಉಳಿಸಿಕೊಂಡು, ಪಕ್ಷದ ಇತರೆ ಬಣಗಳ ಪ್ರೀತಿ ಗಳಿಸಬೇಕಾಗಿರೋದು ಹಗ್ಗದ ಮೇಲಿನ ನಡಿಗೆ. ಇದರ ಜತೆಗೆ ಯಾರ ನೆರಳಲ್ಲೂ ಇಲ್ಲದೇ ಸ್ವಂತಿಕೆಯ ಛಾಪು ಮೂಡಿಸಬೇಕಾದ ಚಾಲೆಂಜ್ ಕೂಡ ಸಿಎಂಗೆ ಇದೆ. ಈ ಎಲ್ಲಾ ಸವಾಲುಗಳನ್ನ ಮೆಟ್ಟಿನಿಲ್ಲೋದರಲ್ಲಿ ಬೊಮ್ಮಾಯಿ ಸಫಲರಾಗುತ್ತಾರಾ? ಇದೇ ಈಗ ಎಲ್ಲರ ತಲೆಯಲ್ಲಿ ಗಿರಕಿಹೊಡೆಯುತ್ತಿರೋ ಪ್ರಶ್ನೆ. ಅನುಭವದಿಂದ ಹೇಳಬೇಕಂದ್ರೆ ಬ್ಯಾಲೆನ್ಸ್ ಕಲೆ ರೂಢಿಸಿಕೊಂಡ ಬೊಮ್ಮಾಯಿಗೆ ಇದು ದೊಡ್ಡ ಕಷ್ಟವೇನಲ್ಲ.!

    ಗೆಲುವಿಗೆ ಶಕ್ತಿ ಮಾತ್ರ ಅಲ್ಲ..ಯುಕ್ತಿ ಕೂಡ ಮುಖ್ಯ.! ಇದು ಸಿಎಂ ಬಸವರಾಜ ಬೊಮ್ಮಾಯಿ ಫಾರ್ಮುಲಾ ಹಾಗೂ ಶಕ್ತಿ.! ಬಸವರಾಜ ಬೊಮ್ಮಾಯಿ ಚಾಕಚಕ್ಯತೆ ಏನು ಅನ್ನೋದು ಕಳೆದ ವಾರದಲ್ಲೇ ಪ್ರೂವ್ ಆಗಿದೆ. ಹೈಕಮಾಂಡ್​ ಅನ್ನ ಬೊಮ್ಮಾಯಿ ಕನ್​ವಿನ್ಸ್ ಮಾಡಿದ ರೀತಿ..ಗುರು ಬಿಎಸ್​ವೈ ವಿರೋಧಿಗಳನ್ನ ಮಟ್ಟಹಾಕಿದ ಧಾಟಿ..ಎಲ್ಲಾ ನಾಯಕರನ ವಿಶ್ವಾಸ ಗಳಿಸೋ ನಿಟ್ಟಿನಲ್ಲಿ ಅನುಸರಿಸಿದ ಸೂತ್ರ ಬೊಮ್ಮಾಯಿ, ಬಿಜೆಪಿ ಸರ್ಕಾರಕ್ಕೆ ಸೂಕ್ತ ಸರದಾರ ಅನ್ನೋದನ್ನ ಸಾಬೀತು ಮಾಡಿದೆ. ಬೊಮ್ಮಾಯಿ ಎಲ್ಲರನ್ನೂ ಸಂಭಾಳಿಸಿಕೊಂಡು ಸಾಗುತ್ತಿರೋ ರೀತಿ ನೋಡಿದ್ರೆ, ಖಂಡಿತಾ ಹೈಕಮಾಂಡ್ ಹಾಘೂ ಬಿಎಸ್​ವೈ ಇಬ್ಬರ ಪ್ರೀತಿ ಗೆಲ್ಲೋದು ಗ್ಯಾರೆಂಟಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts