More

    ಸ್ವರ್ಣ ನದಿಗೆ ಕೋಳಿ ತ್ಯಾಜ್ಯ

    ಅವಿನ್ ಶೆಟ್ಟಿ ಉಡುಪಿ
    ಸ್ವರ್ಣ ನದಿಗೆ ಕೋಳಿ ತ್ಯಾಜ್ಯ ಎಸೆಯುವ ಮೂಲಕ ಇಡೀ ಪರಿಸರವನ್ನು ಹಾಳುಗೆಡವಲಾಗುತ್ತಿದ್ದು, ಸ್ಥಳೀಯರು ರೋಗಭೀತಿಯಲ್ಲಿ ದಿನ ಕಳೆಯುವಂತಾಗಿದೆ. ಈಗಾಗಲೇ ಸಾಂಕ್ರಾಮಿಕ ರೋಗ ಭೀತಿಯಿಂದ ಜನ ಕಂಗೆಟ್ಟಿದ್ದು, ನದಿಗೆ ಈ ರೀತಿ ತ್ಯಾಜ್ಯ ಎಸೆಯುವ ಮೂಲಕ ಪರಿಸರವನ್ನು ಮತ್ತಷ್ಟು ಹಾಳುಗೆಡವಿ ಅನಾರೋಗ್ಯದ ಭಯ ಮೂಡಿಸಲಾಗುತ್ತಿದೆ ಎಂದು ಸಾರ್ವಜನಿಕರು ಆತಂಕಗೊಂಡಿದ್ದಾರೆ. ಇಲ್ಲಿನ ಕೆಮ್ಮಣ್ಣು ತೋನ್ಸೆ ಕಂಬಳ ತೋಟದ ಪಕ್ಕದಲ್ಲಿ ಹರಿಯುತ್ತಿರುವ ಸ್ವರ್ಣ ನದಿಗೆ ಕೋಳಿ, ಕುರಿ ತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತಂದು ಸುರಿಯಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

    ಸ್ಥಳೀಯಾಡಳಿತ, ಜನಪ್ರತಿನಿಧಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿಲ್ಲ. ಉಡುಪಿ ಹೆಸರು, ಪ್ರಶಸ್ತಿಗೆ ಮಾತ್ರ ಶುಚಿತ್ವದ ಪಟ್ಟ ಪಡೆದುಕೊಂಡಿದೆ. ಆದರೆ ಇಲ್ಲಿನ ಪರಿಸ್ಥಿತಿ ನೋಡಿದಲ್ಲಿ ವಾಸ್ತವ ಅರಿವಾಗಬಹುದು ಎಂಬುದು ಜನರ ಅಭಿಪ್ರಾಯ.

    ನದಿಯಲ್ಲಿ ರೆಕ್ಕೆ, ಪುಕ್ಕ: ಕೆಮ್ಮಣ್ಣು ತೋನ್ಸೆ ಕಂಬಳ ತೋಟ ಪರಿಸರದ ಸ್ವರ್ಣ ನದಿಯಲ್ಲಿ ಕೋಳಿ ತ್ಯಾಜ್ಯಗಳು ಸಾಕಷ್ಟು ಪ್ರಮಾಣದಲ್ಲಿ ಕಾಣಸಿಗುತ್ತವೆ. ಕೋಳಿ ಮಾಂಸ ವ್ಯಾಪಾರಿಗಳು ರೆಕ್ಕೆ, ಪುಕ್ಕ, ತ್ಯಾಜ್ಯ ಇಲ್ಲಿ ಎಸೆದು ಹೋಗುವುದು ಸಾಮಾನ್ಯವಾಗಿದೆ. ಪರಿಸರ, ಜನರ ಆರೋಗ್ಯ ದೃಷ್ಟಿಯಿಂದ ಸ್ಥಳೀಯ ಗ್ರಾಮ ಪಂಚಾಯಿತಿ ಇದನ್ನು ನಿಯಂತ್ರಿಸಬೇಕು ಎಂದು ಜನ ಒತ್ತಾಯಿಸಿದ್ದಾರೆ.

    ಸೇತುವೆ ಮೇಲಿಂದ ಎಸೆಯುತ್ತಾರೆ ಕಸ: ರಾತ್ರಿ ವೇಳೆ ಕಲ್ಯಾಣಪುರದ ರಾಷ್ಟ್ರೀಯ ಹೆದ್ದಾರಿ 66ರ ಸೇತುವೆ ಮೇಲಿಂದ ಕೆಲವರು ಸ್ವರ್ಣ ನದಿಗೆ ಕೋಳಿ, ಕುರಿ, ಇತರೆ ಮೀನು, ಮಾಂಸ ತ್ಯಾಜ್ಯ, ಮನೆ ಕಸಗಳನ್ನು ಮೂಟೆ, ಮೂಟೆಗಳಲ್ಲಿ ತಂದು ಎಸೆಯುತ್ತಾರೆ. ಪರಿಸರದ ಮಾಂಸ ವ್ಯಾಪಾರಿಗಳಿಗೆ ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಕೆಲವು ದಿನಗಳ ಹಿಂದೆ ಮುದಲಕಟ್ಟೆ ಹಾಗೂ ನಡುಕುದ್ರುವಿನ ಸಂಪರ್ಕ ಸೇತುವೆ ಪಕ್ಕದಲ್ಲಿ ಹಸುವಿನ ಕಳೇಬರ ಬಿದ್ದುಕೊಂಡಿತ್ತು. ಇದರ ವಿಲೇವಾರಿ ಬಗ್ಗೆ ಸ್ಥಳೀಯಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

     ಸ್ವರ್ಣ ನದಿಗೆ ತ್ಯಾಜ್ಯ ಸುರಿಯುವರ ಮೇಲೆ ಗಂಭೀರ ಕ್ರಮ ಕೈಗೊಳ್ಳಬೇಕು. ಕೋಳಿ ಇತರೆ ಮಾಂಸಗಳ ತ್ಯಾಜ್ಯ ಸುರಿದು ಪರಿಸರವನ್ನು ಸಂಪೂರ್ಣ ಹಾಳುಗೆಡವಲಾಗುತ್ತಿದೆ. ಸುತ್ತಮುತ್ತ ಪರಿಸರದ ಜನರಿಗೆ ಆನಾರೋಗ್ಯ ಆತಂಕ ಕಾಡುತ್ತಿದೆ.
    ರಿಚರ್ಡ್ ಕ್ರಾಸ್ತಾ ಕೆಮ್ಮಣ್ಣು ತೋನ್ಸೆ ನಿವಾಸಿ

    ಕಲ್ಯಾಣಪುರ, ಕೆಮ್ಮಣ್ಣು ವ್ಯಾಪ್ತಿಯಲ್ಲಿ ಸ್ವರ್ಣ ನದಿಗೆ ಕೋಳಿ ತ್ಯಾಜ್ಯ ಸೇರಿದಂತೆ ಹಲವು ರೀತಿಯ ತ್ಯಾಜ್ಯ ಎಸೆಯಲಾಗುತ್ತಿದೆ. ಈ ನದಿ ತ್ಯಾಜ್ಯ ಎಸೆಯುವ ಡಂಪಿಂಗ್ ಯಾರ್ಡ್ ಆಗಿ ಬಿಟ್ಟಿದೆ. ಸಾರ್ವಜನಿಕರಿಗೆ ಈ ಬಗ್ಗೆ ಪ್ರಜ್ಞೆ ಮೂಡಬೇಕಿದೆ. ಕೋಳಿ, ಕುರಿ ಮಾಂಸ ವ್ಯಾಪಾರಿಗಳು ನದಿಗೆ ತ್ಯಾಜ್ಯ ಎಸೆಯದಂತೆ ವರ್ತಕರ ಸಭೆ ಕರೆದು ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಇದನ್ನೂ ಕೇಳದಿದ್ದರೆ ವ್ಯಾಪಾರ ಪರವಾನಗಿ ವಾಪಸ್ ಪಡೆಯಬೇಕು ಎಂದು ಗ್ರಾಪಂ ಅಧ್ಯಕ್ಷರು, ಪಿಡಿಒಗಳಿಗೆ ಖುದ್ದು ಭೇಟಿ ನೀಡಿ ಆಗ್ರಹಿಸಲಾಗುವುದು.
    ಜನಾರ್ದನ್ ತೋನ್ಸೆ ಜಿಲ್ಲಾ ಪಂಚಾಯಿತಿ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts