More

    ಜೀವನ ಬದಲಿಸಿದ ಕುಂಚಕಲೆ, ಲಾಕ್‌ಡೌನ್‌ನಲ್ಲಿ ಬದುಕು ಕಟ್ಟಿಕೊಂಡ ವಿದ್ಯಾರ್ಥಿ

    ಶ್ರೀಪತಿ ಹೆಗಡೆ ಹಕ್ಲಾಡಿ ಹಳ್ಳಿಹೊಳೆ
    ಲಾಕ್‌ಡೌನ್ ಕೆಲವರ ಬದುಕಿನ ದಾರಿ ತಪ್ಪಿಸಿದರೆ ಮತ್ತೆ ಕೆಲವರು ವಿಭಿನ್ನ ಯೋಚನೆ ಮೂಲಕ ಹೊಸ ಹಾದಿ ಕಂಡುಕೊಂಡಿದ್ದಾರೆ. ಬೈಂದೂರು ತಾಲೂಕು ಹಳ್ಳಿಹೊಳೆ ಗ್ರಾಮ ವಿದ್ಯಾರ್ಥಿ ಚೇತನ್ ಕುಮಾರ್ ಹಳ್ಳಿಂಬಳ(21) ಕುಂಚ ಕಲೆಯ ಮೂಲಕ ಬದುಕು ಕಟ್ಟಿಕೊಂಡ ಸಾಹಸಿ.

    ಕೂಲಿ ಕಾರ್ಮಿಕರಾಗಿರುವ ಚಂದ್ರಶೇಖರ ನಾಯ್ಕ- ರತ್ನಾ ದಂಪತಿಯ ಪುತ್ರ ಚೇತನ್ ಮೂಡುಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ಅಂತಿಮ ಬಿವಿಎ(ಬ್ಯಾಚುಲರ್ ಆಫ್ ವಿಶುವಲ್ ಆರ್ಟ್) ವಿದ್ಯಾರ್ಥಿ. ಇವರ ಕುಟುಂಬ ಗುಡಿ ಕೈಗಾರಿಕೆಯಲ್ಲಿ ಪರಿಣಿತರಾಗಿದ್ದು, ಕಲೆ ರಕ್ತಗತ. ಪ್ರಾಥಮಿಕ ಶಿಕ್ಷಣ ಹಳ್ಳಿಹೊಳೆ ಸುಳುಗೋಡು. ಪ್ರೌಢ ಶಿಕ್ಷಣ ಕಮಲಶಿಲೆ. ಶಂಕರನಾರಾಯಣ ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದರು.

    ಲಾಕ್‌ಡೌನ್ ಸಂದರ್ಭ ಮನೆಯಲ್ಲೇ ಬಾಕಿಯಾದಾಗ ಏನಾದರೂ ಮಾಡಬೇಕು ಎನ್ನುವ ತುಡಿತವೇ ಕುಂಚ ಕಾಯಕಕ್ಕೆ ಪ್ರೇರಣೆ. ಇವತ್ತು ತಾಲೂಕಿನಿಂದಷ್ಟೇ ಅಲ್ಲದೆ ರಾಜಧಾನಿಯಿಂದಲೂ ಚೇತನ್ ಹುಡುಕಿಕೊಂಡು ಕೆಲಸ ಬರುತ್ತಿದೆ. ವಾಲ್ ಡಿಸೈನ್, ವರ್ಲಿ ಆರ್ಟ್, ಜಲವರ್ಣ, ತೈಲವರ್ಣ, ಫೈಬರ್, ಕ್ಲೇ ಮಾಡಲಿಂಗ್, ಕ್ಲೇ ವರ್ಕ್, ಸ್ಟೋನ್, ವುಡ್ ವರ್ಕ್, ಸೋಪ್ ಆರ್ಟ್‌ನಲ್ಲಿ ಹೆಸರು ಮಾಡುತ್ತಿದ್ದಾರೆ. ಸೋಪ್ ಆರ್ಟ್‌ನಲ್ಲಿ ರಚಿಸಿದ ಡಾ.ಮೋಹನ್ ಆಳ್ವ, ಸಾಲುಮರದ ತಿಮ್ಮಕ್ಕ, ಡಾ.ಎಪಿಜೆ ಅಬ್ದುಲ್ ಕಲಾಂ ಮತ್ತಿತರರ ಚಿತ್ರಗಳಿಗೆ, ತೈಲವರ್ಣದಲ್ಲಿ ರಚಿಸಿದ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಚಿತ್ರಕ್ಕೆ ಮೆಚ್ಚುಗೆ ಲಭಿಸಿದೆ.

    ಚಿಕ್ಕಂದಿನಲ್ಲೇ ಕಲೆ ಬಗ್ಗೆ ಆಸಕ್ತನಾಗಿದ್ದು, ಹಿರಿಯರ ಕುಲ ಕಸುಬು ಗುಡಿ ಕೈಗಾರಿಕೆ ನನ್ನಲ್ಲಿರುವ ಕಲಾಸಕ್ತಿ ಜಾಗೃತಗೊಳ್ಳಲು ಕಾರಣ. ಕೋರ್ಸ್ ಮುಗಿದ ನಂತರ ಮನೆಯಲ್ಲೇ ಆರ್ಟ್ ಗ್ಯಾಲರಿ ತೆರೆದು ತರಬೇತಿ ಹಾಗೂ ಸ್ಥಳೀಯರಿಗೆ ಉದ್ಯೋಗ ನೀಡುತ್ತೇನೆ. ಪಟ್ಟಣದ ಕೆಲಸಗಳನ್ನು ಹಳ್ಳಿಗೆ ತಂದು ಮಾಡುವ ಉದ್ದೇಶವಿದ್ದು, ಕೆಲಸಕ್ಕಾಗಿ ಹಳ್ಳಿಬಿಟ್ಟು ಪಟ್ಟಣ ಸೇರಲ್ಲ.
    – ಚೇತನ್ ಕುಮಾರ್, ವಿದ್ಯಾರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts