

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೋಮವಾರ (ಆಗಸ್ಟ್ 10) ಚೆನ್ನೈ- ಅಂಡಮಾನ್ ಮತ್ತು ನಿಕೋಬಾರ್ ನಡುವಿನ ಸಮುದ್ರದಾಳದ ಇಂಟರ್ನೆಟ್ ಕೇಬಲ್ ಯೋಜನೆಯನ್ನು ಉದ್ಘಾಟಿಸಿದರು. ಇದು ಸ್ವಾವಲಂಬಿ ಭಾರತಕ್ಕೆ ಮಹತ್ಸಾಧನೆ ಎಂದು ಅವರು ಬಣ್ಣಿಸಿದ್ದಾರೆ.
ಭಾರತದ ಪ್ರಪ್ರಥಮ ಸಾಗರದಾಳದ ಇಂಟರ್ನೆಟ್ ಕೇಬಲ್ ಯೋಜನೆಯಾಗಿದೆ. ಇದು ಕೇಂದ್ರಾಡಳಿತ ಪ್ರದೇಶಕ್ಕೆ ಹೈಸ್ಪೀಡ್ ಇಂಟರ್ನೆಟ್ ಸೌಲಭ್ಯ ಹಾಗೂ ಇತರ ಅನುಕೂಲಗಳನ್ನು ಒದಗಿಸಲಿದೆ.
ಒಟ್ಟು 1,224 ಕೋಟಿ ರೂ.ಗಳ ವೆಚ್ಚದ 2,313 ಕಿ.ಮೀ ದೂರದ ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಕೆ ಯೋಜನೆಗೆ ಮೋದಿ 2018ರ ಡಿಸೆಂಬರ್ನಲ್ಲಿ ಶಿಲಾನ್ಯಾಸ ನೆರವೇರಿಸಿದ್ದರು. ಇದು ಚೆನ್ನೈಯಿಂದ ಪೋರ್ಟ್ಬ್ಲೇರ್, ಪೋರ್ಟ್ಬ್ಲೇರ್ನಿಂದ ಲಿಟಲ್ ಅಂಡಮಾನ್ ಹಾಗೂ ಅಲ್ಲಿಂದ ಸ್ವರಾಜ್ ದ್ವೀಪ್ಗೆ ಇಂದಿನಿಂದಲೇ ಸಂಪರ್ಕ ಕಲ್ಪಿಸಲಿದೆ.
ಆನ್ಲೈನ್ ತರಗತಿಗಳು, ಪ್ರವಾಸೋದ್ಯಮ, ಬ್ಯಾಂಕಿಂಗ್, ಶಾಪಿಂಗ್ ಅಥವಾ ಟೆಲಿಮೆಡಿಸಿನ್ ಕ್ಷೇತ್ರವೇ ಇರಲಿ... ಎಲ್ಲದ್ದಕ್ಕೂ ಅನುಕೂಲವಾಗಲಿದೆ. ಇದರಿಂದ ಸ್ಥಳೀಯರಿಗೆ ಹಾಗೂ ಪ್ರವಾಸಿಗರಿಗೆ ಅತ್ಯುತ್ತಮ ಸಂಪರ್ಕ, ಸಂವಹನ ಸಾಧ್ಯವಾಗಲಿದೆ.
ಅಂಡ್ಮಾನ್ ನಿಕೋಬಾರ್ನ ಏಳು ದ್ವೀಪಗಳಿಗೆ ಇದರಿಂದ ಸಂವಹನ ಸಾಧ್ಯವಾಗಲಿದೆ. ಪೋರ್ಟ್ಬ್ಲೇರ್ನಲ್ಲಿ 400 ಜಿಬಿ ಹಾಗೂ ಇತರ ದ್ವೀಪಗಳಲ್ಲಿ 200 ಜಿಬಿ ಸ್ಪೀಡ್ನ ಇಂಟರ್ನೆಟ್ ಸೌಲಭ್ಯ ದೊರೆಯಲಿದೆ. ಸಾಗರದಾಳದಲ್ಲಿ ಕೇಬಲ್ ಹಾಕುವ ಕೆಲಸವನ್ನು ಬಿಎಸ್ಎನ್ಎಲ್ ಕಂಪನಿ 24 ತಿಂಗಳ ದಾಖಲೆ ಅವಧಿಯಲ್ಲಿ ಪೂರ್ಣಗೊಳಿಸಿದೆ.