More

    ಕೂಲಿ ಹಣ ನೀಡದೆ ಮೋಸ !

    ರೋಣ: ಕರೊನಾ ಅಟ್ಟಹಾಸದಿಂದ ಬದುಕು ಸಾಗಿಸಲು ಕಷ್ಟಪಡುತ್ತಿದ್ದ ಕಾರ್ವಿುಕರ ಅಸಹಾಯಕತೆಯನ್ನೇ ದುರುಪಯೋಗ ಮಾಡಿಕೊಂಡು ವಂಚಿಸಿರುವ ಪ್ರಕರಣ ಈಗ ಬೆಳಕಿಗೆ ಬಂದಿದೆ.

    ತಮ್ಮನ್ನು ತೆಲಂಗಾಣಕ್ಕೆ ಕರೆದೊಯ್ದು ಕೆಲಸ ಮಾಡಿಸಿಕೊಂಡು ಹಣ ನೀಡದೇ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ತಾಲೂಕಿನ ಕೊತಬಾಳ ಗ್ರಾಮದ ಕಾರ್ವಿುಕರು ರೋಣ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಿಸಿದ್ದಾರೆ.

    ಬದಾಮಿ ತಾಲೂಕಿನ ಆನಂದಗಿರಿಯ ಕರಿಯಪ್ಪ ರಾಠೋಡ ಎಂಬಾತ ಕೊತಬಾಳ ಗ್ರಾಮದ ದಲಿತ ಬಡಾವಣೆಯ ಮಹಾಂತೇಶ ಐಹೊಳ್ಳಿ, ಶೇಖಪ್ಪ ಐಹೊಳ್ಳಿ, ಸುರೇಶ ಸಂದಿಮನಿ, ಬಸಪ್ಪ ಐಹೊಳ್ಳಿ, ಸುರೇಶ ಐಹೊಳ್ಳಿ, ಯಮನಪ್ಪ ಮಾದರ, ಅನೀಲ ಐಹೊಳ್ಳಿ, ಪ್ರವೀಣ ಐಹೊಳ್ಳಿ, ರಮೇಶ ಮಾದರ, ಕೆಂಚಪ್ಪ ಪೂಜಾರ, ಯಲ್ಲಪ್ಪ ಪೂಜಾರ, ಮಹಾಬಲೇಶ್ವರ ಐಹೊಳ್ಳಿ, ಚಂದ್ರು ಸಂದಿಮನಿ, ಪರಸಪ್ಪ ರೋಣದ, ಯಶೋದಾ ಸಂದಿಮನಿ, ರೇಣವ್ವ ಐಹೊಳ್ಳಿ, ಯಮನವ್ವ ಹಿರೇಮನಿ ಭೀಮವ್ವ ಹಿರೇಮನಿ, ದುರಗವ್ವ ಐಹೊಳ್ಳಿ, ಕಾವೇರಿ ಐಹೊಳ್ಳಿ ಎಂಬುವವರನ್ನು ಕೆಲಸ ನೀಡುವುದಾಗಿ ಜ. 12ರಂದು ಕರೆದುಕೊಂಡು ಹೋಗಿದ್ದ. ಅಲ್ಲದೆ, ತೆಲಂಗಾಣದ ಸಿದ್ಧಪೇಟಿ ಜಿಲ್ಲೆಯ ದುಬಾಕ್ ಗ್ರಾಮದಲ್ಲಿ ನಡೆಯುತ್ತಿರುವ ಬೃಹತ್ ಕೆನಾಲ್ ನಿರ್ಮಾಣ ಕೆಲಸಕ್ಕೆ ಇವರನ್ನು ಹಚ್ಚಿದ್ದನು.

    ಪುರುಷರಿಗೆ ನಿತ್ಯ 550 ರೂ., ಮಹಿಳೆಯರಿಗೆ ಪ್ರತಿದಿನ 350 ರೂ. ಹಾಗೂ ಎಲ್ಲರಿಗೂ ಉಚಿತ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಲಾಗುತ್ತದೆ. ವಾರಕ್ಕೊಮ್ಮೆ ಪಗಾರ ಕೊಡಲಾಗುತ್ತದೆ ಎಂದು ಮಾತುಕತೆ ನಡೆಸಿದ್ದ. ಆದರೆ, ಅಲ್ಲಿಗೆ ಹೋದ ಮೇಲೆ ಯಾವ ಸೌಲಭ್ಯವೂ ನೀಡದೇ ಇತ್ತ ಊರಿಗೆ ಹಿಂದಿರುಗಲು ಅವಕಾಶ ನೀಡದೇ ಸತಾಯಿಸಿದ್ದನು. ಇದರಿಂದ ಬೇಸತ್ತ ಕೆಂಚಪ್ಪ ಪೂಜಾರ ಎಂಬುವವರು ಕೊತಬಾಳ ಗ್ರಾಪಂ ಅಧ್ಯಕ್ಷ ವೀರಣ್ಣ ಯಾಳಗಿ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ಅಲ್ಲಿ ಅನುಭವಿಸುತ್ತಿರುವ ಯಾತನೆ ಕುರಿತು ಮಾಹಿತಿ ನೀಡಿದ್ದರು.

    ನೆರವಾದ ವಿಶ್ವನಾಥ ಸಜ್ಜನರ

    ಹೈದರಾಬಾದ್​ನಲ್ಲಿ ಅತ್ಯಾಚಾರ ಎಸಗಿದ್ದವರನ್ನು ಎನ್​ಕೌಂಟರ್ ಮಾಡಿ ದೇಶಾದಂತ್ಯ ಹೆಸರುವಾಸಿಯಾದ ಸೈದರಾಬಾದ್ ಪೊಲೀಸ್ ಕಮಿಷನರ್ ಆಗಿರುವ ಹುಬ್ಬಳ್ಳಿ ಮೂಲದ ವಿಶ್ವನಾಥ ಸಜ್ಜನರ ಅವರು ಈ ಕೂಲಿ ಕಾರ್ವಿುಕರ ನೆರವಿಗೆ ಧಾವಿಸಿದ್ದರು. ಗ್ರಾಪಂ ಅಧ್ಯಕ್ಷ ವೀರಣ್ಣ ಅವರು, ವಿಶ್ವನಾಥ ಸಜ್ಜನರ ಅವರಿಗೆ ಕಾರ್ವಿುಕ ಕಷ್ಟದ ಕುರಿತು ವಿವರಿಸಿದ್ದರು. ಇದನ್ನು ಕೇಳಿದ ಸಜ್ಜನರ ಅವರು ಅಲ್ಲಿರುವ ಕನ್ನಡಿಗ ಪೊಲೀಸ್ ಅಧಿಕಾರಿ ಕರಬಸಪ್ಪ ಅವರಿಗೆ ವಿಷಯ ತಿಳಿಯಿಸಿ, ಅವರನ್ನು ಸ್ಥಳಕ್ಕೆ ಕಳುಹಿಸಿದರು. ಸ್ಥಳಕ್ಕೆ ತೆರಳಿದ ಕರಿಬಸಪ್ಪ ಅವರು 20 ಕೂಲಿ ಕಾರ್ವಿುಕರನ್ನು ವಾಹನದ ಮೂಲಕ ಕೊತಬಾಳಕ್ಕೆ ಕಳುಹಿಸಿಕೊಟ್ಟಿದ್ದಾರೆ. ಗ್ರಾಮಕ್ಕೆ ಬಂದ ಎಲ್ಲ ಕೂಲಿ ಕಾರ್ವಿುಕರು ರೋಣ ಠಾಣೆಯಲ್ಲಿ ಕರಿಯಪ್ಪ ರಾಠೋಡ ವಿರುದ್ಧ ದೂರು ದಾಖಲಿಸಿದ್ದಾರೆ.

    ಅಳಲು ತೋಡಿಕೊಂಡ ರೇಣವ್ವ

    ಕರೊನಾದಿಂದ ಕೆಲಸವಿಲ್ಲದೇ ಕಂಗಾಲಾಗಿದ್ದ ನಮಗೆ ಕೆಲಸದ ಜೊತೆ ಉತ್ತಮ ಸಂಬಳ ಕೊಡಿಸುತ್ತೇನೆ ಎಂದು ಕರಿಯಪ್ಪ ರಾಠೋಡ ಎರಡು ವಾಹನಗಳಲ್ಲಿ ಹೈದರಾಬಾದ್​ನ ದಬಾಕ್​ನಲ್ಲಿ ನಡೆಯುತ್ತಿದ್ದ ಕೆನಾಲ್ ಕಾಮಗಾರಿ ಸ್ಥಳಕ್ಕೆ ಕರೆದೊಯ್ದ. ವಾರಕ್ಕೊಮ್ಮೆ ಕೂಲಿ ನೀಡುತ್ತೇನೆ ಎಂದು ಹೇಳಿದವ ಇಂದಿನವರೆಗೂ ಸಂಬಳ ನೀಡಿಲ್ಲ. ಸರಿಯಾದ ವಸತಿ ಸೌಲಭ್ಯವೂ ಇಲ್ಲದೆ, ಚಳಿಯಲ್ಲಿ ಮಕ್ಕಳನ್ನು ಕಟ್ಟಿಕೊಂಡು ಗುಡಿಸಲಿನಲ್ಲಿ ವಾಸಿಸಿದ್ದೇವೆ. ಊಟದ ವ್ಯವಸ್ಥೆಯೂ ಸರಿಯಿಲ್ಲದೆ ನರಕಯಾತನೆ ಅನುಭವಿಸಿದ್ದೇವೆ ಎಂದು ರೇಣವ್ವ ಐಹೊಳ್ಳಿ ಅಳಲು ತೋಡಿಕೊಂಡಿದ್ದಾರೆ.

    ಗ್ರಾಮದ ದಲಿತ ಬಡಾವಣೆಯಲ್ಲಿರುವ ಕೂಲಿ ಕಾರ್ವಿುಕರನ್ನು ಒಳ್ಳೆಯ ಕೂಲಿ ಕೆಲಸ ಕೊಡಿಸುವುದಾಗಿ ಹೇಳಿ ದುಡಿದ ಕೂಲಿ, ಸರಿಯಾದ ಊಟ, ವಸತಿ ನೀಡದೇ ತೊಂದರೆಗೀಡು ಮಾಡಿದ್ದ ಕರಿಯಪ್ಪ ರಾಠೋಡ ವಿರುದ್ಧ ದೂರು ನೀಡಲಾಗಿದೆ. ಕೂಡಲೆ, ಆತನನ್ನು ಬಂಧಿಸಿ ಕಾರ್ವಿುಕರಿಗೆ ವೇತನ ಕೊಡಿಸುತ್ತೇವೆ ಎಂದು ಪಿಎಸ್​ಐ ಭರವಸೆ ನೀಡಿದ್ದಾರೆ.

    | ವೀರಣ್ಣ ಯಾಳಗಿ, ಗ್ರಾಪಂ ಅಧ್ಯಕ್ಷ, ಕೊತಬಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts