More

    ಮಾಜಿ ಶಾಸಕರ ಪುತ್ರಿಯೆಂದು ನಕಲಿ ದಾಖಲಿ ಸೃಷ್ಟಿಸಿ 1 ಎಕರೆ ಜಮೀನು ಪಡೆದ ಮಹಿಳೆ!

    ಗದಗ: ಮುಂಡರಗಿ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ವಸಂತಪ್ಪ ಬಸಪ್ಪ ಬಾವಿ ಅವರು ಮೃತಪಟ್ಟಿದ್ದಾರೆಂದು ಮಹಿಳೆಯೊಬ್ಬಳು ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಿದ್ದಾಳೆ. ತಾನೇ ವಸಂತಪ್ಪ ಅವರ ಪುತ್ರಿ ಎನ್ನುವ ಖೊಟ್ಟಿ ದಾಖಲೆ ಸೃಷ್ಟಿಸಿ ವಾರಸಾ ಪ್ರಮಾಣಪತ್ರವನ್ನೂ ಪಡೆದುಕೊಂಡಿದ್ದಾಳೆ. ಬಳಿಕ ವಸಂತಪ್ಪ ಅವರ ಹೆಸರಲ್ಲಿ ಇದ್ದ 1 ಎಕರೆ ಜಮೀನು ಸಹ ಪರಭಾರೆ ಮಾಡಿಸಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

    ಪೇಠಾಲೂರ ಗ್ರಾಮದ ಗಿರಿಜವ್ವ ಕೊಪ್ಪದ ಎಂಬಾಕೆ ಮಾಜಿ ಶಾಸಕರ ಪುತ್ರಿಯೆಂದು ತಹಸೀಲ್ದಾರ್ ಕಚೇರಿಗೆ ನಕಲಿ ದಾಖಲೆಗಳನ್ನು ಸಲ್ಲಿಸಿ, ವಾರಸಾ ಪ್ರಮಾಣಪತ್ರವನ್ನು ಪಡೆದು ಆಸ್ತಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಗೊತ್ತಾಗಿದೆ.

    ಮಾಜಿ ಶಾಸಕ ವಸಂತ ಬಾವಿ ಅವರು 2014, ಡಿ.20 ರಂದು ಮತ್ತು ಅವರ ಪತ್ನಿ ಗಂಗವ್ವ ಬಾವಿ ಅವರು 2014, ಫೆ. 12ರಂದು ಮೃತಪಟ್ಟಿದ್ದಾರೆಂದು ನಕಲಿ ಮರಣ ಪ್ರಮಾಣಪತ್ರಗಳನ್ನು ಸೃಷ್ಟಿಸಲಾಗಿದೆ. ಇದರಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಸದ್ಯ ಮೈಸೂರಿನಲ್ಲಿ ವಾಸವಾಗಿರುವ ಮಾಜಿ ಶಾಸಕ ವಸಂತಪ್ಪ ಬಾವಿ ಅವರು ಮೂಲತಃ ರೋಣ ತಾಲೂಕಿನ ಮಾಡಲಗೇರಿ ಗ್ರಾಮದವರಾಗಿದ್ದಾರೆ. ಅವರ ತಾಯಿಯ ತವರುಮನೆ ಮುಂಡರಗಿ ಪೇಠಾಲೂರ ಗ್ರಾಮವಾಗಿದೆ. 1978ರಿಂದ 1983ರವರೆಗೆ ವಸಂತಪ್ಪ ಬಾವಿ ಶಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ.

    ವಸಂತಪ್ಪ ಅವರ ತಂದೆಯವರಿಗೆ ಸಂಬಂಧಿಸಿದ ಆಸ್ತಿ ಪೇಠಾಲೂರಿನಲ್ಲಿತ್ತು. ಅದನ್ನು ಅವರ ತಂದೆ ಬೇರೊಬ್ಬರಿಗೆ ಮಾರಾಟ ಮಾಡಿದ್ದರು. ಆದರೆ, ಅದರಲ್ಲಿ ಒಂದು ಎಕರೆ ಜಮೀನಿನಲ್ಲಿ ಮಾತ್ರ ಮಾಜಿ ಶಾಸಕರ ಹೆಸರು ಉಳಿದುಕೊಂಡಿದೆ. ಆ ಜಾಗವನ್ನು ಕಾನೂನು ಪ್ರಕಾರ ಖರೀದಿದಾರರಿಗೆ ಕೊಡಲು ಮಾಜಿ ಶಾಸಕರು ಸಿದ್ಧರಿದ್ದಾರೆ. ಈ ಮಧ್ಯೆ ಅದೇ ಜಾಗ ಇದೀಗ ನಕಲಿ ದಾಖಲೆ ಸೃಷ್ಟಿಯಾಗಿ ಪರಭಾರೆಯಾಗಿರುವುದು ಬಯಲಿಗೆ ಬಂದಿದೆ. ಆದರೆ, ಈ ಬಗ್ಗೆ ಎಲ್ಲೂ ದೂರು ದಾಖಲಾಗಿಲ್ಲ.

    ಮುಂಡರಗಿ ತಾಲೂಕಿನ ಪೇಠಾಲೂರಿನಲ್ಲಿ ನನ್ನ ಹೆಸರಿನಲ್ಲಿರುವ 1 ಎಕರೆ ಆಸ್ತಿ ನನಗೆ ಸೇರಿದ್ದಲ್ಲ. ಹೇಗೋ ಆಸ್ತಿಯಲ್ಲಿ ನನ್ನ ಹೆಸರು ಸೇರಿದೆ. ಈ ಕುರಿತು ನನಗೆ ಯಾವುದೇ ತಕರಾರು ಇಲ್ಲ. ಕೊಪ್ಪದ ಕುಟುಂಬಕ್ಕೆ ಸಂತೋಷದಿಂದಲೇ ಆಸ್ತಿಯನ್ನು ಬಿಟ್ಟುಕೊಡುತ್ತೇನೆ. ಬಡ ಕುಟುಂಬಕ್ಕೆ ಅನುಕೂಲವಾಗಲಿ.
    |ವಸಂತಪ್ಪ ಬಾವಿ ಮಾಜಿ ಶಾಸಕ

    ಇದು ಪೇಠಾಲೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗ್ರಾಮ ಲೆಕ್ಕಾಧಿಕಾರಿ ಶಿವಕುಮಾರ ಹಲಗೇರಿ ಮಾಡಿರುವ ಅವಾಂತರವಾಗಿದೆ. ಮಾಜಿ ಶಾಸಕ ವಸಂತಪ್ಪ ಬಾವಿ ಮರಣ ಹೊಂದಿದ್ದಾರೆಂದು ಅವರ ಆಸ್ತಿಯನ್ನು ಬೇರೊಬ್ಬರಿಗೆ ವರ್ಗಾವಣೆ ಮಾಡಿದ್ದಾರೆ. ಈ ಕುರಿತು ತನಿಖೆ ನಡೆಸಿ ಜಿಲ್ಲಾಧಿಕಾರಿ ಅವರಿಗೆ ವರದಿ ಸಲ್ಲಿಸಲಾಗುವುದು. ಶಿವಕುಮಾರ ಹಲಗೇರಿ ಇಂತಹ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈಗಾಗಲೇ 2 ಸಲ ಅಮಾನತುಗೊಂಡಿದ್ದಾರೆ. ಜೈಲಿಗೂ ಹೋಗಿ ಬಂದಿದ್ದಾರೆ. ಸದ್ಯ ಅವರು ನಮ್ಮ ತಾಲೂಕಿನಲ್ಲಿ ಇಲ್ಲ.
    | ಆಶಪ್ಪ ಪೂಜಾರ, ಮುಂಡರಗಿ ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts