More

    ಚಾರ್ಮಾಡಿ ಘಾಟ್ ಹೆದ್ದಾರಿಯ ಕಣ್ಣೀರ ಕಥೆ – ವ್ಯಥೆ

    -ನಂದೀಶ್ ಬಂಕೇನಹಳ್ಳಿ

    ಬಣಕಲ್: ವಿಲ್ಲುಪುರಂ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಚಾರ್ಮಾಡಿ ಘಾಟ್ ಭಾಗದ ರಸ್ತೆಯ ಶಾಶ್ವತ ಅಭಿವೃದ್ಧಿ ಕಾರ್ಯ ವರ್ಷ ಕಳೆದರೂ ಪ್ರಾರಂಭವಾಗಿಲ್ಲ.

    2019ರ ಮಳೆಗಾಲದಲ್ಲಿ ಚಾರ್ಮಾಡಿ ಘಾಟ್‌ನ ಹಲವೆಡೆ ಗುಡ್ಡ ಕುಸಿದು ಹೆದ್ದಾರಿಯಲ್ಲಿ ಕೆಲ ತಿಂಗಳ ಕಾಲ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ನಂತರ ತಾತ್ಕಾಲಿಕವಾಗಿ ದುರಸ್ತಿ ಕಾಮಗಾರಿ ಆರಂಭಿಸಿದ ರಾ.ಹೆ.ಇಲಾಖೆ, ರಸ್ತೆ ಇಕ್ಕೆಲಗಳಲ್ಲಿ ತಡೆಗೋಡೆ ನಿರ್ಮಿಸಿ ಸೂಚನಾ ಲಕ ಅಳವಡಿಸಿ ಲಘು ವಾಹನ ಸಂಚರಿಸುವ ಮಟ್ಟಿಗೆ ಅವಕಾಶ ಮಾಡಿಕೊಟ್ಟಿತ್ತು. ಆದರೆ ಶಾಶ್ವತ ಅಭಿವೃದ್ಧಿ ಕಾಮಗಾರಿ ನಡೆಸದ ಕಾರಣ ಕೆಎಸ್‌ಆರ್‌ಟಿಸಿ ಬಸ್ ಸೇರಿದಂತೆ ಭಾರಿ ವಾಹನ ಸಂಚಾರ ಮರೀಚಿಕೆಯಾಗಿದೆ. ಮಿನಿ ಬಸ್‌ಗಳ ಸಂಚಾರಕ್ಕೆ ಅವಕಾಶವಿದ್ದರೂ, ಅವುಗಳ ಓಡಾಟ ಕಡಿಮೆ. ಸಂಜೆ 6 ಗಂಟೆ ನಂತರ ಮಿನಿ ಬಸ್‌ಗಳ ಸಂಚಾರವೂ ಇಲ್ಲ. ಹಾಗಾಗಿ ಆಸ್ಪತ್ರೆ, ಶಾಲೆ, ಕಾಲೇಜುಗಳಿಗೆ ಕರಾವಳಿ ಭಾಗಕ್ಕೆ ಹೋಗಿ ಬರುವ ಪ್ರಯಾಣಿಕರಿಗೆ ತೊಂದರೆಯಾಗಿದೆ. ಚಾರ್ಮಾಡಿ ಘಾಟ್ ಹೆದ್ದಾರಿ ಅಭಿವೃದ್ಧಿಪಡಿಸದ ಕಾರಣ ಈ ಮಾರ್ಗದಲ್ಲಿ ಪ್ರವಾಸಿ ವಾಹನಗಳ ಸಂಚಾರ ಕಡಿಮೆ. ಹೆದ್ದಾರಿ ಬದಿ ಅಂಗಡಿಗಳಲ್ಲಿ ವ್ಯಾಪಾರ ಕುಸಿದಿದೆ. ಕೆಲ ಹೋಟೆಲ್, ಅಂಗಡಿಗಳು ಬಾಗಿಲು ಹಾಕಿವೆ.

    ಸಾಗಾಟ ವೆಚ್ಚದಲ್ಲಿ ಏರಿಕೆ
    ವ್ಯಾಪಾರಸ್ಥರು ಕರಾವಳಿ ಭಾಗದಿಂದ ಮನೆ ನಿರ್ಮಾಣ ಸಾಮಗ್ರಿ, ರಾಸಾಯನಿಕ ಗೊಬ್ಬರ, ಗ್ಯಾಸ್, ಸಿಮೆಂಟ್ ಮುಂತಾದ ವಸ್ತು ಗಳನ್ನು ಮಲೆನಾಡಿಗೆ ತರಲು ಈ ಹಿಂದೆ ಚಾರ್ಮಾಡಿ ಘಾಟ್ ಮಾರ್ಗ ಬಳಸುತ್ತಿದ್ದರು. ಈಗ ಸುತ್ತಿ ಬಳಸಿ ಶಿರಾಡಿ ಘಾಟ್ ಮಾರ್ಗದಲ್ಲಿ ತರಬೇಕಿದ್ದು, ಸಾಗಾಟ ವೆಚ್ಚ ಹೆಚ್ಚಿದೆ. ಹೆಚ್ಚಿದ ಕಾರಣ ಸಹಜವಾಗಿ ಈ ವಸ್ತುಗಳ ಬೆಲೆಯೂ ಹೆಚ್ಚಳವಾಗಿದೆ. ಉದಾಹರಣೆಗೆ ಚಾರ್ಮಾಡಿ ಘಾಟ್‌ನಲ್ಲಿ ಘನ ವಾಹನಗಳು ಸಂಚರಿಸುವಾಗ ಮಂಗಳೂರು ಕಡೆಯಿಂದ ಬರುವ ಮಂಗಳೂರು ಇಟ್ಟಿಗೆ ಬೆಲೆ ರೂ.43-44 ಇತ್ತು. ಸಾಗಾಟ ವೆಚ್ಚ ಹೆಚ್ಚಾಗಿ, ಈಗ ಇಟ್ಟಿಗೆ ಬೆಲೆ 54 ರೂ. ಆಗಿದೆ, ಈ ಮೊದಲು ಒಂದು ಲಾರಿ ಎಂ ಸ್ಯಾಂಡ್ ಬೆಲೆ 17 ಸಾವಿರ ರೂ ಇತ್ತು. ಈಗ 23ರಿಂದ 24 ಸಾವಿರ ರೂ. ಆಗಿದೆ. ಜಲ್ಲಿ, ಹೆಂಚು ಮುಂತಾದ ವಸ್ತುಗಳ ಬೆಲೆಯೂ ಏರಿದೆ.

    ಸದ್ಯಕ್ಕೆ ಡಾಂಬರೀಕರಣ, ತಡೆಗೋಡೆ ನಿರ್ಮಾಣ
    19.3 ಕೋಟಿ ರೂ.ವೆಚ್ಚದಲ್ಲಿ ಚಾರ್ಮಾಡಿ ಘಾಟ್ ಹೆದ್ದಾರಿಯಲ್ಲಿ 6 ತಡೆಗೋಡೆ ನಿರ್ಮಿಸಲು ಅ.5ರಂದು ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಚಿಕ್ಕಮಗಳೂರು ವ್ಯಾಪ್ತಿಯ 13 ಕಿ.ಮಿ ಹಾಗೂ ದ.ಕ.ಜಿಲ್ಲೆಯ 12 ಕಿ.ಮೀ. ಸೇರಿ ಚಾರ್ಮಾಡಿ ಗ್ರಾಮದಿಂದ ಕೊಟ್ಟಿಗೆಹಾರದವರೆಗೆ (25 ಕಿ.ಮಿ ಹೆದ್ದಾರಿ)9.9 ಕೋಟಿ ವೆಚ್ಚದಲ್ಲಿ ಡಾಂಬರೀಕರಣ ಕಾಮಗಾರಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಕಾಮಗಾರಿ ಆರಂಭಿಸಿದ್ದರೂ, ಮಳೆಯ ಕಾರಣ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ರಾ.ಹೆ.ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇಂದು ಮ್ಯಾರಥಾನ್
    ವರ್ಷ ಕಳೆದರೂ ಚಾರ್ಮಾಡಿ ಘಾಟ್ ಹೆದ್ದಾರಿ ಅಭಿವೃದ್ಧಿಪಡಿಸಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡದ ಕಾರಣ ಚಾರ್ಮಾಡಿ ಹಾಗೂ ಕೊಟ್ಟಿಗೆಹಾರ ಭಾಗದ ಸ್ಥಳೀಯರು, ವರ್ತಕರು, ವಾಹನ ಚಾಲಕರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಯುವಕರು ಸೇರಿದಂತೆ ಸಾರ್ವಜನಿಕರು ಚಾರ್ಮಾಡಿ ಘಾಟ್ ಹೆದ್ದಾರಿ ಉಳಿಸಿ ಅಭಿಯಾನ ಪ್ರಾರಂಭಿಸಿದ್ದಾರೆ. ಹೆದ್ದಾರಿ ಉಳಿಸಿ ಅಭಿಯಾನದ ಭಾಗವಾಗಿ ಅ.4ರಂದು ಮ್ಯಾರಾಥಾನ್ ಹಮ್ಮಿಕೊಳ್ಳಲಾಗಿದೆ. ದ.ಕ.ಭಾಗದ ಜನರು ಚಾರ್ಮಾಡಿ ಗ್ರಾಮದಿಂದ ಚಾರ್ಮಾಡಿ ಘಾಟ್‌ನ ದಕ್ಷಿಣ ಕನ್ನಡ ಗಡಿವರೆಗೆ, ಚಿಕ್ಕಮಗಳೂರು ಭಾಗದ ಸಾರ್ವಜನಿಕರು ಕೊಟ್ಟಿಗೆಹಾರದಿಂದ ಚಾರ್ಮಾಡಿ ಘಾಟ್‌ನ ಚಿಕ್ಕಮಗಳೂರು ಗಡಿವರೆಗೆ ಮ್ಯಾರಾಥಾನ್ ನಡೆಸಲಿದ್ದಾರೆ.

    ಚಾರ್ಮಾಡಿ ಘಾಟ್ ಶಾಶ್ವತ ಅಭಿವೃದ್ಧಿಗೆ ಬೇಕಾದ ದೊಡ್ಡ ಮಟ್ಟದ ಕಾಮಗಾರಿ ಪ್ರಾರಂಭವಾಗಿಲ್ಲ. ತಡೆಗೋಡೆ, ಡಾಂಬಾರೀಕರಣದಂತಹ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಲಾಗಿದ್ದು, ಡಾಂಬರೀಕರಣ ಕಾಮಗಾರಿ ಪ್ರಾರಂಭ ಮಾಡಲಾಗಿತ್ತು. ಮಳೆ ಕಾರಣ ತಾತ್ಕಾಲಿಕವಾಗಿ ನಿಂತಿದೆ. ತಡೆಗೋಡೆ ನಿರ್ಮಾಣಕ್ಕೆ ಅ.5ರಂದು ಟೆಂಡರ್ ಪ್ರಕ್ರಿಯೆ ನಡೆಯಲಿದೆ.
    – ಹೆಸರು ಬಹಿರಂಗ ಪಡಿಸಲಿಚ್ಛಿಸದ ರಾ.ಹೆ.ಪ್ರಾಧಿಕಾರದ ಅಧಿಕಾರಿ

    ಸಕಲೇಶಪುರ-ಸುಬ್ರಹ್ಮಣ್ಯ ರೈಲ್ವೆ ಮಾರ್ಗಕ್ಕೆ ಹೊಸ ಟೆಕ್ ಸ್ಪರ್ಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts