More

    ಗೌರವಧನ ಹೆಚ್ಚಳಕ್ಕೆ ಒತ್ತಾಯಿಸಿ ಮನವಿ

    ವಿಜಯಪುರ: ಮಾಸಿಕ ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘಟನೆ (ಎಐಯುಟಿಯುಸಿ) ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಜಿಪಂ ಸಿಇಒ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
    ಸಂಘಟನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಚ್.ಟಿ. ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮ ಹಲವು ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿದೆ. ಬಿಸಿಯೂಟದ ಜತೆಗೆ ಕ್ಷೀರಭಾಗ್ಯ ಯೋಜನೆಯಿಂದಾಗಿ ಮಕ್ಕಳ ಅಪೌಷ್ಠಿಕತೆ ಹಾಗೂ ಶಾಲೆ ಬಿಡುವ ಮಕ್ಕಳ ಸಂಖ್ಯೆಯೂ ಕಡಿಮೆಯಾಗಿದೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸುತ್ತವೆ ಎಂದರು.
    ಎಸ್‌ಯುಸಿಐ ಜಿಲ್ಲಾ ಕಾರ್ಯದರ್ಶಿ ಬಿ.ಭಗವಾನರೆಡ್ಡಿ ಮಾತನಾಡಿ, ಯಾವುದೇ ಕ್ಷೇತ್ರದಲ್ಲಿ ಕಾರ್ಮಿಕರು ಸರಿಯಾದ ವೇತನ ಸಿಗದೇ ಜೀವನ ನಡೆಸಲು ಕಷ್ಟಪಡುತ್ತಿದ್ದಾರೆ. ಬಿಸಿಯೂಟ ಕಾರ್ಯಕರ್ತೆಯರು ಕನಿಷ್ಠ ವೇತನದಿಂದ ವಂಚಿತರಾಗಿದ್ದಾರೆ. ಸುಮಾರು ಆರು ಗಂಟೆ ಕೆಲಸ ಮಾಡುವ ಇವರಿಗೆ ಈಗ ಕೊಡುತ್ತಿರುವ ಗೌರವಧನ ಅತ್ಯಲ್ಪ. ಅದು ಕೂಡ ಪ್ರತಿ ತಿಂಗಳು ನಿಯಮಿತವಾಗಿ ದೊರಕುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಸಂಘಟನೆ ಜಿಲ್ಲಾ ಕಾರ್ಯದರ್ಶಿ ಸುನೀಲ ಸಿದ್ರಾಮಶೆಟ್ಟಿ ಮಾತನಾಡಿ, ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆ ಹಾಸ್ಟೆಲ್‌ಗಳಲ್ಲಿ ಅಡುಗೆ ಮಾಡುವವರಿಗೆ 12 ಸಾವಿರ ರೂ. ವೇತನ ನಿಗದಿಗೊಳಿಸಿದೆ. ಆದರೆ, ಬಿಸಿಯೂಟ ಕಾರ್ಮಿಕರಿಗೆ ಅದು ಅನ್ವಯವಾಗುತ್ತಿಲ್ಲ. ಈ ಕಾರ್ಮಿಕರಿಗೆ ಪರ್ಯಾಯ ಕೆಲಸಕ್ಕೂ ಹೋಗಲು ಸಾಧ್ಯವಾಗುತ್ತಿಲ್ಲ. ಆರೋಗ್ಯ ಸೌಲಭ್ಯ, ವಿಮಾ ಸೌಲಭ್ಯಗಳಾವುವೂ ಇವರಿಗೆ ದೊರಕುತ್ತಿಲ್ಲ. ಆದುದರಿಂದ ಸರ್ಕಾರ ಇವರ ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
    ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯ ಅಧ್ಯಕ್ಷ ಶ್ರೀನಾಥ ಪೂಜಾರಿ , ಜಿಲ್ಲಾ ಸಂಘಟನಾಕಾರ್ತಿ ಶಶಿಕಲಾ ಮ್ಯಾಗೇರಿ, ಬಸಮ್ಮ ಆಲಮಟ್ಟಿ, ಲಕ್ಷ್ಮಿ ಲಕಶೆಟ್ಟಿ ಮಾತನಾಡಿದರು. ಪಾರ್ವತಿ ಮಠಪತಿ, ಗಂಗು ಉಳಾಗಡ್ಡಿ, ಜಾಮಕ್ಕ ಹಟ್ಟಿ, ಸಂಗೀತಾ ಹೊನವಾಡ, ಭಾಗೀರಥಿ ಬಡಿಗೇರ, ಸುಲೋಚನಾ ಬೆಲ್ಲದ, ಚನ್ನಮ್ಮ ಪೆಂಟರ್, ಪ್ರೇಮಾ ಇಂಗಳೆಶ್ವರ, ಅಮೀನಾ ಬಾಗೇವಾಡಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts