More

    ಅವ್ಯವಸ್ಥೆ ಆಗರ ರಾಮತೀರ್ಥ ನಗರ ಉದ್ಯಾನ

    ಬೆಳಗಾವಿ: ರಾಮತೀರ್ಥ ನಗರದ ಮತ್ಸೃ ಭವನದ ಬಳಿಯ ಉದ್ಯಾನ ನಿರ್ವಹಣೆ ಕೊರತೆಯಿಂದ ಬಳಲುತ್ತಿದ್ದು, ಅವ್ಯವಸ್ಥೆ ಆಗರವಾಗಿ ಮಾರ್ಪಟ್ಟಿದೆ.

    ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ)ವು 3 ವರ್ಷದ ಹಿಂದೆ ಈ ಉದ್ಯಾನ ನಿರ್ಮಿಸಿದೆ. ನಾವು ನಿತ್ಯ ಬೆಳಗ್ಗೆ ಮತ್ತು ಸಂಜೆ ವಾಯು ವಿಹಾರಕ್ಕಾಗಿ ಇದೇ ಉದ್ಯಾನಕ್ಕೆ ಹೋಗುತ್ತಿದ್ದೆವು. ಮಕ್ಕಳು ಇಲ್ಲಿ ಆಟವಾಡಿ ಸಂಭ್ರಮಿಸುತ್ತಿದ್ದರು. ಈಗ ನಿರ್ವಹಣೆ ಮಾಡುವವರು ಇಲ್ಲದ್ದರಿಂದ ಉದ್ಯಾನ ಕಸದ ಕೊಂಪೆಯಾಗಿದೆ. ಅನಿವಾರ್ಯವಾಗಿ ಕಣಬರ್ಗಿ ರಸ್ತೆಗುಂಟ ವಾಯುವಿಹಾರಕ್ಕೆ ಹೋಗುತ್ತಿದ್ದೇವೆ ಎಂದು ಸ್ಥಳೀಯರಾದ ಸುರೇಶ ಉರಬಿನಹಟ್ಟಿ, ಈರಣ್ಣ ಕಟಾವಿ, ನಾರಾಯಣ್ಣ ಹಣ್ಣಿಕೇರಿ, ಡಿ.ಎಂ. ಟೊಣ್ಣೆ ಅಳಲು ತೋಡಿಕೊಂಡರು.

    ತುಕ್ಕು ಹಿಡಿದ ಆಟಿಕೆಗಳು: ಉದ್ಯಾನದಲ್ಲಿ ಗಿಡಗಂಟಿಗಳು ಹೇರಳವಾಗಿ ಬೆಳೆದಿದ್ದು, ಆಟಿಕೆಗಳು ತುಕ್ಕು ಹಿಡಿಯುತ್ತಿವೆ. ಸುತ್ತಲಿನ ಪರಿಸರ ದುರ್ನಾತ ಬೀರುತ್ತಿದ್ದು, ವಿಷಜಂತುಗಳ ಕಾಟದಿಂದಾಗಿ ಜನರು ಉದ್ಯಾನ ದತ್ತ ಸುಳಿಯಲು ಹಿಂದೇಟು ಹಾಕುತ್ತಿದ್ದಾರೆ. ಕಿಡಿಗೇಡಿಗಳು ಕುಡಿದ ಮದ್ಯದ ಬಾಟಲಿಗಳನ್ನೂ ಇಲ್ಲಿಯೇ ಎಸೆಯುತ್ತಾರೆ. ಉದ್ಯಾನ ನಿರ್ವಹಣೆಗೆ ಒತ್ತು ನೀಡುವಂತೆ ಸಂಬಂಧಿತ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ. ಆದರೆ, ಯಾರೂ ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯರು ಅಲವತ್ತುಕೊಂಡರು.

    ರಾಮತೀರ್ಥ ನಗರದ ಜನರಿಗೆ ಅಗತ್ಯ ಮೂಲಸೌಲಭ್ಯ ಒದಗಿಸಲು ಯೋಜನೆ ರೂಪಿಸಲಾಗಿದೆ. ಶೀಘ್ರ ಉದ್ಯಾನವನ್ನೂ ಅಭಿವೃದ್ಧಿಪಡಿಸಿ, ನಿರ್ವಹಣೆಗಾಗಿ ಪಾಲಿಕೆಗೆ ಹಸ್ತಾಂತರಿಸಲಾಗುವುದು.
    | ಘೂಳಪ್ಪ ಹೊಸಮನಿ. ಅಧ್ಯಕ್ಷ, ಬುಡಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts