More

    ಬೂಕನಬೆಟ್ಟದಲ್ಲಿ ರಂಗನಾಥಸ್ವಾಮಿ ಬ್ರಹ್ಮರಥೋತ್ಸವ

    ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ

    ಚನ್ನರಾಯಪಟ್ಟಣ: ತಾಲೂಕಿನ ಪುರಾಣ ಪ್ರಸಿದ್ಧ ಕ್ಷೇತ್ರ ಬೂಕನಬೆಟ್ಟದಲ್ಲಿ 89ನೇ ಬೃಹತ್ ದನಗಳ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ರಂಗನಾಥಸ್ವಾಮಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ವಿಜೃಂಭಣೆಯಿಂದ ನಡೆಯಿತು.
    ಬೆಳಗ್ಗೆ 11.30ಕ್ಕೆ ರಂಗನಾಥಸ್ವಾಮಿಯ ಕಳಶವನ್ನು ಮಂಗಳವಾದ್ಯದೊಂದಿಗೆ ಮೆರವಣಿಗೆಯಲ್ಲಿ ತಂದು ರಥದ ತುತ್ತ ತುದಿಯಲ್ಲಿ ಪ್ರತಿಷ್ಠಾಪಿಸಲಾಯಿತು. ವಿವಿಧ ಪೂಜೆಗಳೊಂದಿಗೆ ರಥಕ್ಕೆ ಬಲಿಶಾಂತಿ ಜರುಗಿತು.
    ರಂಗನಾಥಸ್ವಾಮಿಗೆ ವಿವಿಧ ಬಗೆಯ ಅಭಿಷೇಕ, ಪುಷ್ಪಾರ್ಚನೆ ಜರುಗಿದ್ದು, ಒಡವೆ-ವಸ್ತ್ರಗಳ ಅಲಂಕಾರದ ಬಳಿಕ ಪೂಜಾ ಕೈಂಕರ್ಯಗಳು ನೆರವೇರಿದವು, ನಂತರ ಸ್ವಾಮಿಯ ಉತ್ಸವ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಲಾಯಿತು. ಮಧ್ಯಾಹ್ನ 12.05 ಕ್ಕೆ ಸಂದ ಶುಭ ಮೇಷ ಲಗ್ನದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಉತ್ಸವಕ್ಕೆ ಚಾಲನೆ ನೀಡಿದರು. ನೆರೆದಿದ್ದ ಸಹಸ್ರಾರು ಭಕ್ತರು ಗೋವಿಂದ ನಾಮ ಸ್ಮರಣೆಯೊಂದಿಗೆ ರಥವನ್ನು ಎಳೆದರು.
    ರಥ ಸಾಗಿದಂತೆಲ್ಲಾ ಭಕ್ತರು ಹಣ್ಣು-ದವನ, ಹೂವು-ತುಳಸಿಪತ್ರೆ ಎಸೆದು, ಕರ್ಪೂರ ಬೆಳಗಿಸಿ ಹರಕೆ ಸಲ್ಲಿಸಿ ಪುನೀತರಾದರು. ಬಳಿಕ ಧಾರ್ಮಿಕ ವೇದಿಕೆಯಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಭಕ್ತಿ, ಬಾವ ಹಾಗೂ ಧಾರ್ಮಿಕ ಆಚರಣೆಯಿಂದಲೇ ನಮ್ಮ ಸಂಸ್ಕೃತಿಯು ಹಿರಿಮೆ ಹೊಂದಿದೆ. ಇಂತಹ ದೈವ ಸೇವೆಗಳು ನಿರಂತರವಾಗಿ ನಡೆಯುತ್ತಿರಬೇಕು ಎಂದು ಹೇಳಿದರು.
    ಬಹುಮಾನ ವಿತರಣೆ: ನಾಲ್ಕು ದಿನಗಳ ಹಿಂದೆ ಜರುಗಿದ ಸ್ವರ್ಧೆಯಲ್ಲಿ ಆಯ್ಕೆಯಾದ ಉತ್ತಮ ರಾಸುಗಳಿಗೆ ಹಾಗೂ ಶನಿವಾರ ಸನ್ನಿಧಿಯ ಆವರಣದಲ್ಲಿ ಆಯೋಜಿಸಿದ್ದ ಗ್ರಾಮೀಣ ಕ್ರೀಡಾಕೂಟ, ರಂಗೋಲಿ ಸ್ವರ್ಧೆ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಜಯಗಳಿಸಿದವರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು.
    ಚನ್ನರಾಯಪಟ್ಟಣ ಹಾಗೂ ಹಿರೀಸಾವೆ ವ್ಯಾಪ್ತಿಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಜಿಪಂ ಮಾಜಿ ಸದಸ್ಯ ಎಚ್.ಜಿ.ರಾಮಕೃಷ್ಣ, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ಮಾಜಿ ಅಧ್ಯಕ್ಷ ತೋಟಿ ಜಯರಾಂ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಅಮಾಸೇಗೌಡ, ಉಪ ತಹಸಿಲ್ದಾರ್ ಮೋಹನ್‌ಕುಮಾರ್, ಕಸಾಪ ತಾಲೂಕು ಉಪಾಧ್ಯಕ್ಷ ಬಿ.ಸಿ.ಬೊಮ್ಮೇಗೌಡ, ಪಿಎಸ್‌ಐ ಭವಿತಾ, ದೇಗುಲದ ಪಾರುಪತ್ತೇದಾರ ರಂಗರಾಜ್ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts