More

    ಸಾಗುವಳಿ ಚೀಟಿ ನೀಡದೆ ಅಧಿಕಾರಿಗಳಿಂದ ಅವಿವೇಕ ಪ್ರದರ್ಶನ : ಅಧಿಕಾರಿಗಳ ವಿರುದ್ಧ ಪುಟ್ಟಸ್ವಾಮಿ ಆರೋಪ

    ಚನ್ನಪಟ್ಟಣ :  ಗೇಣಿ ಭೂಮಿ ಹಾಗೂ ಸಾಗುವಳಿ ನಿರತ ಹೋರಾಟ ಸಮಿತಿ ಹಾಗೂ ಕರ್ನಾಟಕ ರಾಜ್ಯ ರೈತಸಂಘ, ಹಸಿರು ಸೇನೆ ಅರಳಾಳುಸಂದ್ರ ವತಿಯಿಂದ ನಗರದ ತಹಸೀಲ್ದಾರ್ ಕಚೇರಿ ಎದುರು ಹಿರಿಯ ರೈತ ಹೋರಾಟಗಾರ ಸಿ. ಪುಟ್ಟಸ್ವಾಮಿ ನೇತೃತ್ವದಲ್ಲಿ ಸೋಮವಾರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.

    ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಸಿ.ಪುಟ್ಟಸ್ವಾಮಿ, ಸ್ವಾಧೀನಾನುಭವ ಹಾಗೂ ಭೂ ಮಂಜೂರಾತಿ ನಿಯಮಗಳಂತೆ ಅರ್ಹರಾಗಿದ್ದರೂ ಗ್ರಾಮದ ರೈತರಿಗೆ ಸಾಗುವಳಿ ಚೀಟಿ ನೀಡದೆ ಸತಾಯಿಸಲಾಗುತ್ತಿದೆ. ಸ್ವತಃ ಕಂದಾಯ ಇಲಾಖೆ ದೃಢಪಡಿಸಿದ, ವಿಸ್ತೀರ್ಣ ವ್ಯತ್ಯಾಸ ಸರಿಪಡಿಸಿ, ಸಾಗುವಳಿ ಚೀಟಿ ನೀಡದ ಅಧಿಕಾರಿಗಳು ಅನ್ಯಾಯ ಅವಿವೇಕಗಳನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದರು.
    ಅರಳಾಳುಸಂದ್ರ ಗ್ರಾಮ ಹಲವಾರು ರೈತಪರ ಹೋರಾಟ, ಚಳವಳಿ, ಚಿಂತನೆಗಳಿಗೆ ಅವಕಾಶ ಮಾಡಿಕೊಟ್ಟಿದೆ. ರೈತರ, ಗೇಣಿದಾರರ, ದಲಿತರ, ಜೀತ ವಿಮುಕ್ತರ ನಿವೇಶನ ರಹಿತರ ಸ್ತ್ರೀ ಶೋಷಣೆ ಮುಂತಾಗಿ ಒಟ್ಟಾರೆ ಜನಸಾಮಾನ್ಯರ ಸಂಕಷ್ಟಗಳ ವಿರುದ್ಧ ಅಹಿಂಸಾತ್ಮಕ ಹೋರಾಟಗಳನ್ನು ಈ ಹಿಂದಿನಿಂದಲೂ ನಡೆಸುತ್ತಲೇ ಬಂದಿದೆ. ಇದೀಗ, ಗ್ರಾಮದ ರೈತರು ಹಲವಾರು ವರ್ಷಗಳಿಂದ ಸಾಗುವಳಿ ಚೀಟಿ ಪಡೆದುಕೊಳ್ಳಲು ಸಾಧ್ಯವಾಗದಿದ್ದು ಹಾಗೂ ಸಾಗುವಳಿ ಚೀಟಿ ನೀಡುವಲ್ಲಿ ನಡೆದಿರುವ ತಾರತಮ್ಯ ಅಕ್ಷಮ್ಯ ಅಪರಾಧವಾಗಿದೆ ಎಂದು ತಿಳಿಸಿದರು.

    ಗ್ರಾಮದ ಸರ್ವೇ ನಂ 271 ಮತ್ತು 28ರಲ್ಲಿ 7 ದಶಕಗಳಿಂದ ಹಲವು ಕುಟುಂಬಗಳು ಗೇಣಿ ಸಾಗುವಳಿ ಮಾಡುತ್ತಿದ್ದಾರೆ. ಆದರೆ, 1975ರಿಂದಲೂ ಕೆಲ ಬಲಾಢ್ಯರ ಕುತಂತ್ರದಿಂದಾಗಿ ಗೇಣಿ ಭೂಮಿ ಹಕ್ಕುದಾರಿಕೆಗೆ ಅಡ್ಡಿಪಡಿಸಲಾಗಿತ್ತು. ಈ ಪ್ರಕರಣ ಸಂಬಂಧ ಹಲವು ವರ್ಷಗಳಿಂದ ನ್ಯಾಯಾಲಯಕ್ಕೆ ಅಲೆಯಲಾಗಿದೆ. 2012ರ ತನಕ ನಾಲ್ಕು ಬಾರಿ ಹೈಕೋರ್ಟ್ ಮೆಟ್ಟಿಲೇರಿ ಮೂಲಗೇಣಿದಾರರು ಬಳಲಿದ್ದಾರೆ. ಈ ಪ್ರಕರಣದಲ್ಲಿ ಗೇಣಿದಾರರ ಪರ ಹಲವರ ಶ್ರಮವಿದ್ದು, ಈ ಮಧ್ಯೆ 2018ರಲ್ಲಿ ಅಂದಿನ ಜಿಲ್ಲಾಧಿಕಾರಿ ಸೂಚನೆಯಂತೆ ಭೂಮಿ ಹಂಚಲಾಗಿದೆ. ಖುದ್ದು ಸಂಸದರು ಗೇಣಿಭೂಮಿಯ ಹಕ್ಕುಪತ್ರ ಹಂಚಿ ಎರಡು ವರ್ಷ ಕಳೆದಿದೆ. ಅದರೂ, ರೈತರಿಗೆ ಪಹಣಿ, ಖಾತೆ, ದುರಸ್ತಿ, ಪೋಡಿ ಸಾಧ್ಯವಾಗಿಲ್ಲ. ಈ ಸಂಬಂಧ ಅಂದಿನಿಂದ ಸಂಬಂಧಪಟ್ಟವರನ್ನು ಸಂಪರ್ಕಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

    ಇದರೊಂದಿಗೆ ಗ್ರಾಮದ ಸರ್ವೇ ನಂ.12, 99ರಲ್ಲಿನ 500ಕ್ಕೂ ಹೆಚ್ಚು ಗೋಮಾಳದ ಜಮೀನಿನಲ್ಲಿ ಹಲವು ದಶಕಗಳಿಂದ ಹಲವಾರು ರೈತರು ಸಾಗುವಳಿ ನಡೆಸುತ್ತಿದ್ದಾರೆ. ಆದರೆ, ಕೆಲ ಕಂದಾಯ ಇಲಾಖೆಯ ನೌಕರರು ಹಾಗೂ ಇತರರ ಕುತಂತ್ರದಿಂದ ಸಾಗುವಳಿದಾರರಿಗೆ ಅನ್ಯಾಯ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ನಡೆದಿರುವ ತಾರತಮ್ಯವನ್ನು ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿದರು.

     

    ತಹಸೀಲ್ದಾರ್ ಭರವಸೆ : ಧರಣಿ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಎಲ್ ನಾಗೇಶ್, ಈ ಸಂಬಂಧವಾಗಿ ಉಪವಿಭಾಗಾಧಿಕಾರಿ ಜತೆ ಮಾತನಾಡಿದ್ದೇನೆ. ಸಮಸ್ಯೆ ಪರಿಹರಿಸಲು ಸಿದ್ಧರಿದ್ದೇವೆ. ಇದಕ್ಕೆ ಸಂಬಂಧಪಟ್ಟ ಕಡತಗಳೊಂದಿಗೆ ನಮ್ಮ ಮೇಲಧಿಕಾರಿಗಳ ಜತೆ ಚರ್ಚಿಸಿ, ತ್ವರಿತವಾಗಿ ನಿಮ್ಮ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಹೋರಾಟಗಾರರು ಧರಣಿ ಕೈಬಿಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts