More

    ಚನ್ನಪಟ್ಟಣ ಮಾಯಾ ಆರ್ಗ್ಯಾನಿಕ್ ತಯಾರಿಕಾ ಘಟಕಕ್ಕೆ ಫ್ರಾನ್ಸ್ ವಿದ್ಯಾರ್ಥಿಗಳು ಭೇಟಿ: ಬೊಂಬೆ ತಯಾರಿಕೆ ಕಂಡು ಖುಷಿಪಟ್ಟ ತಂಡ

    ಚನ್ನಪಟ್ಟಣ: ಚನ್ನಪಟ್ಟಣದಲ್ಲಿ ಬೊಂಬೆಗಳ ತಯಾರಿಕಾ ಕೌಶಲ ಕಂಡು ಫ್ರಾನ್ಸ್ ವಿದ್ಯಾರ್ಥಿಗಳು ನಿಬ್ಬೆರಗಾದರು. ನಗರದ ಸಾತನೂರು ರಸ್ತೆಯ ಮಾಯಾ ಆರ್ಗ್ಯಾನಿಕ್ ಬೊಂಬೆ ತಯಾರಿಕಾ ಘಟಕಕ್ಕೆ ಸೋಮವಾರ ಸಂಜೆ ಭೇಟಿ ನೀಡಿದ ಲೀಸಾ ಸ್ಕೂಲ್ ಆಫ್ ಡಿಸೈನ್‌ನ 21 ಫ್ರಾನ್ಸ್ ವಿದ್ಯಾರ್ಥಿಗಳು ತಂಡ, ಕುಶಲ ಕರ್ಮಿಗಳು ಸಾಂಪ್ರದಾಯಿಕ ವಿಧಾನದಲ್ಲಿ ಬೊಂಬೆ ತಯಾರಿಸುವ ವಿಧಾನ ವೀಕ್ಷಿಸಿದರು.

    ಬೊಂಬೆ ತಯಾರಿಕೆಗೆ ಬಳಸುವ ಕಚ್ಚಾ ವಸ್ತುಗಳು, ವಿಧಾನ, ಬೊಂಬೆಗಳಿಗೆ ಹಚ್ಚಲು ಬಳಸುವ ಬಣ್ಣ, ಉತ್ಪನ್ನದ ಮಾರುಕಟ್ಟೆ ವಿಧಾನ ಸೇರಿ ಉದ್ಯಮಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನು ಬೊಂಬೆ ತಯಾರಿಕಾ ಕುಶಲ ಕರ್ಮಿಗಳು ಮತ್ತು ಕೇಂದ್ರದ ಸಿಬ್ಬಂದಿಯಿಂದ ಫ್ರಾನ್ಸ್ ವಿದ್ಯಾರ್ಥಿಗಳು ತಿಳಿದುಕೊಂಡರು.

    ಬೊಂಬೆ ತಯಾರಿಕೆಗೆ ಬಳಸುವ ಮರ, ಕಚ್ಚಾ ವಸ್ತುಗಳನ್ನು ಸಂಸ್ಕರಿಸುವ ವಿಧಾನಗಳನ್ನು ಕುತೂಹಲದಿಂದ ವೀಕ್ಷಿಸಿ ಮಾಹಿತಿ ಪಡೆದುಕೊಂಡರು. ವಿದ್ಯಾರ್ಥಿಗಳಿಗೆ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ ನೀಡುವ ಉದ್ದೇಶದಿಂದ ಫ್ರಾನ್ಸ್ನ ಲೀಸಾ ಸ್ಕೂಲ್ ಆಫ್ ಡಿಸೈನ್, ತನ್ನ ಶಾಲೆಯ ವಿದ್ಯಾರ್ಥಿಗಳನ್ನು ಚನ್ನಪಟ್ಟಣಕ್ಕೆ ಕರೆತಂದು ಕುಶಲ ಕರ್ಮಿಗಳ ಜತೆ ಮಾತನಾಡುವ, ಬೊಂಬೆ ತಯಾರಿಕೆ ಬಗ್ಗೆ ತಿಳಿದುಕೊಳ್ಳುವ ಅವಕಾಶ ಕಲ್ಪಿಸಿತ್ತು. ಈ ವೇಳೆ ವಿದ್ಯಾರ್ಥಿಗಳು ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು. ಬೊಂಬೆ ತಯಾರಿಸುವ ವಿಧಾನವನ್ನು ವಿಡಿಯೋ ಚಿತ್ರೀಕರಣ ಮಾಡಿದರು.

    ಈ ಬೊಂಬೆಗಳನ್ನು ಮಹಿಳೆಯರು ಮತ್ತು ಅಂಗವಿಕಲರು ಸಿದ್ಧಪಡಿಸುತ್ತಾರೆ ಎಂದು ವಿದ್ಯಾರ್ಥಿಗಳಿಗೆ ಬೊಂಬೆ ತಯಾರಿಕೆ ಸಾಂಪ್ರದಾಯಿಕ ವಿಧಾನದ ಬಗ್ಗೆ ಮಾಹಿತಿ ನೀಡಿದ ಮಾಯಾ ಆರ್ಗಾನಿಕ್ ಸಿಇಒ ಶಾಯಿದಾ ನೂರ್ ಅವರು ಬೊಂಬೆಗಳನ್ನು ಕೊಡುಗೆಯಾಗಿ ನೀಡಿದರು. ಈ ವೇಳೆ ಲೀಸಾ ಶಾಲೆ ಸಿಬ್ಬಂದಿ, ಮಾಯಾ ಸಂಸ್ಥೆ ನೌಕರರು ಉಪಸ್ಥಿತರಿದ್ದರು.

    ಬೊಂಬೆಗಳ ಹಿಂದೆ ಇಷ್ಟೊಂದು ವಿಚಾರಗಳು ಅಡಕವಾಗಿರುತ್ತವೆ ಎಂದು ಗೊತ್ತಿರಲಿಲ್ಲ. ಈ ಭೇಟಿ ಹೊಸ ಅನುಭವ ನೀಡಿದೆ. ನೈಸರ್ಗಿಕ ಬಣ್ಣದಿಂದ ಬೊಂಬೆಗಳನ್ನು ತಯಾರಿಸುವ ವಿಚಾರ ತಿಳಿದು ಸಂತಸವಾಯಿತು. ನೆನಪಿನಲ್ಲಿ ಉಳಿಯುವಂಥಹ ಭೇಟಿ ಇದೆ.
    -ಇಲಿಸಾ ವಿದ್ಯಾರ್ಥಿನಿ, ಲೀಸಾ ಸ್ಕೂಲ್ ಆಫ್ ಡಿಸೈನ್, ಫ್ರಾನ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts