More

    ಬೊಂಬೆನಾಡಿನಲ್ಲಿ ಸೋಂಕು ಉಲ್ಬಣ: ಕರೊನಾ ವ್ಯಾಪಿಸಲು ನಿರ್ಲಕ್ಷ್ಯವೇ ಕಾರಣ ದುಸ್ಥಿತಿಗೆ ಹೊಣೆಯಾದವೇ ಖಾಸಗಿ ಆಸ್ಪತ್ರೆಗಳು?

    ಚನ್ನಪಟ್ಟಣ :  ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಲು ಹಾಗೂ ಕೆಲಮಂದಿಯ ಆರೋಗ್ಯ ಗಂಭೀರವಾಗಿ ಹದಗೆಡಲು ಕೆಲ ಖಾಸಗಿ ಆಸ್ಪತ್ರೆಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯೇ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ.
    ತಾಲೂಕಿನಲ್ಲಿ ಕರೊನಾ 2ನೇ ಅಲೆ ವ್ಯಾಪಕವಾಗಿ ಹರಡಿಕೊಳ್ಳುತ್ತಿದೆ. ತಾಲೂಕಿನಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 500ರ ಗಡಿ ದಾಟಿದೆ. ಇತ್ತೀಚಿಗೆ ಸೋಂಕಿತರ ಆರೋಗ್ಯ ತೀವ್ರ ಹದಗೆಟ್ಟು ಸಾವುನೋವುಗಳು ಸಂಭವಿಸುತ್ತಿವೆ, ಪ್ರತಿನಿತ್ಯ ಎರಡಂಕಿಯಲ್ಲಿ ತಾಲೂಕಿನಲ್ಲಿ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿದೆ. ಯುವಕರು ಸೇರಿ ಹಲವರು ಮಸಣದ ದಾರಿ ಹಿಡಿದಿರುವುದು ಆತಂಕಕ್ಕೀಡು ಮಾಡಿದೆ.ತಾಲೂಕಿನಲ್ಲಿ ಈ ಎರಡನೇ ಅಲೆಯ ತೀವ್ರಗೊಳ್ಳಲು ಸಾರ್ವಜನಿಕರ ಅಸಡ್ಡೆ ಹಾಗೂ ಖಾಸಗಿ ಆಸ್ಪತ್ರೆಗಳ ನಿರ್ಲಕ್ಷ್ಯ ಕಾರಣ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
    ಬೇಜವಾಬ್ದಾರಿ : ಪ್ರಾಥಮಿಕ ನಿರ್ಲಕ್ಷ್ಯವೇ ಸೋಂಕಿನ ಸಮಸ್ಯೆ ಉಲ್ಬಣಕ್ಕೆ ಕಾರಣ ಎನ್ನಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳೆಂದರೆ ಮೂಗು ಮುರಿಯುವ ಬಹುತೇಕ ಮಂದಿ ನೆಚ್ಚಿಕೊಂಡಿರುವುದು ಖಾಸಗಿ ಆಸ್ಪತ್ರೆಗಳನ್ನು. ಈ ಆಸ್ಪತ್ರೆಗಳು ಸೋಂಕಿನ ಲಕ್ಷಣಗಳು ಕಂಡು ಬರುವ ಮಂದಿಗೆ, ಕೋವಿಡ್ ಪರೀಕ್ಷೆ ಮಾಡದೆ, ಚಿಕಿತ್ಸೆ ನೀಡಿ ಕಳುಹಿಸುತ್ತಿರುವುದು ಸೋಂಕಿತ ವ್ಯಕ್ತಿಗಳ ಅನಾರೋಗ್ಯ ಉಲ್ಬಣವಾಗಲು ಕಾರಣ ಎನ್ನಲಾಗುತ್ತಿದೆ.

    ರೋಗ ಲಕ್ಷಣಗಳಾದ ಜ್ವರ, ಕೆಮ್ಮು, ನೆಗಡಿ ಇನ್ನಿತರ ಸಮಸ್ಯೆಗಳಿಂದ ಬಳಲಿ ಖಾಸಗಿ ಆಸ್ಪತ್ರೆಗಳಿಗೆ ಬರುವ ರೋಗಿಗಳನ್ನು ಸಾಮಾನ್ಯ ಪರೀಕ್ಷೆ ನಡೆಸಿ, ರೋಗಶಮನ ಔಷಧ ನೀಡಿ ಕಳುಹಿಸಿಕೊಡಲಾಗುತ್ತಿದೆ. ಒಂದೆರಡು ದಿನಕ್ಕೆ ಆರಾಮ ಎನ್ನಿಸುವ ಈ ರೋಗಿಗಳು ನಂತರ ಉಸಿರಾಟ ಸೇರಿದಂತೆ ಇನ್ನಿತರ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಸರ್ಕಾರಿ
    ಆಸ್ಪತ್ರೆಗಳ ಕದ ತಟ್ಟುತ್ತಿದ್ದಾರೆ.

    ಕೋವಿಡ್ ಟೆಸ್ಟ್ ಕಡ್ಡಾಯ : ಸಾಮಾನ್ಯವಾಗಿ ರೋಗ ಲಕ್ಷಣ ಇರುವವರು ಪರೀಕ್ಷೆಗೆ ಹಿಂದೇಟು ಹಾಕುತ್ತಿರುವುದು ಸೋಂಕು ತೀವ್ರಗೊಳ್ಳಲು ಪ್ರಮುಖ ಕಾರಣವಾಗಿದೆ. ಸರ್ಕಾರಿ ಆಸ್ಪತ್ರೆಗೆ ಬಂದರೆ ಪರೀಕ್ಷೆಗೆ ಒಳಪಡಬೇಕು ಎಂದು
    ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳುತ್ತಾರೆ. ಸೋಂಕು ಹೆಚ್ಚಾದ ಮೇಲೆ ಅನೇಕ ಮಂದಿ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದಾರೆ. ಸೋಂಕಿನ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆಗೆ ಒಳಪಟ್ಟು ಚಿಕಿತ್ಸೆ ಪಡೆದುಕೊಂಡರೆ ಯಾವುದೇ ಸಮಸ್ಯೆಯಾಗುವುದಿಲ್ಲ. ಆದರೆ, ಈ ವರ್ಗದ ಜನತೆಗೆ ಖಾಸಗಿ ಆಸ್ಪತ್ರೆಗಳು ಸಾಮಾನ್ಯ ಚಿಕಿತ್ಸೆ ನೀಡಿ ಕಳುಹಿಸುತ್ತಿದ್ದು, ಐದು ಅಥವಾ ಆರನೇ ದಿನಕ್ಕೆ ಉಸಿರಾಟ ಸಮಸ್ಯೆ ಸೇರಿ ತೀವ್ರವಾಗಿ ಆರೋಗ್ಯ ಹದಗೆಡುತ್ತಿದೆ.

    ಇದಕ್ಕೆ ಕಡಿವಾಣ ಹಾಕಬೇಕಾದರೆ ಖಾಸಗಿ ಆಸ್ಪತ್ರೆಗಳು ರೋಗ ಲಕ್ಷಣ ಇರುವವರನ್ನು ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಪ್ರೇರೇಪಿಸಬೇಕು. ಅದಕ್ಕೆ ಒಪ್ಪದಿದ್ದರೆ ಚಿಕಿತ್ಸೆಗೆ ನಿರಾಕರಿಸಬೇಕು. ಈ ಕೆಲಸವಾದರೆ, ರೋಗ ಲಕ್ಷಣ ಇರುವವರು ಪ್ರಾಥಮಿಕವಾಗಿಯೆ ಟೆಸ್ಟ್‌ಗೆ ಒಳಪಟ್ಟು ಸೋಂಕಿನ ತೀವ್ರತೆ ಕಡಿಮೆಗೊಳಿಸಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

    ಪರೀಕ್ಷೆಗೂ ಅವಕಾಶ ಕೊಡುತ್ತಿಲ್ಲ : 
    ತಾಲೂಕು ಆರೋಗ್ಯ ಇಲಾಖೆ ತಮ್ಮಲ್ಲಿನ ಮೊಬೈಲ್ ಪರೀಕ್ಷಾ ವಾಹನವನ್ನು ಖಾಸಗಿ ಆಸ್ಪತ್ರೆಗಳ ಬಳಿಯೇ ಕಳುಹಿಸಿಕೊಟ್ಟು ರೋಗ ಲಕ್ಷಣ ಇರುವವರ ಪರೀಕ್ಷೆಗೆ ಅವಕಾಶ ಮಾಡಿಕೊಟ್ಟಿದ್ದರೂ ನಗರದಲ್ಲಿರುವ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಇದಕ್ಕೂ ಅವಕಾಶ ನೀಡದಿರುವುದು ತಿಳಿದುಬಂದಿದೆ. ತಮ್ಮ ಹಣದ ದಾಹ ಮತ್ತು ನಿರ್ಲಕ್ಷ್ಯದಿಂದಾಗಿ ಕೋವಿಡ್ ಸೋಂಕು ಹೆಚ್ಚಳ ಹಾಗೂ ಉಲ್ಬಣಗೊಳ್ಳಲು ಖಾಸಗಿ ಆಸ್ಪತ್ರೆಗಳು ಕಾರಣವಾಗಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

    ಸೋಂಕಿನ ಲಕ್ಷಣಗಳು ಕಂಡುಬಂದ ಆರಂಭದಲ್ಲಿ ನಿರ್ಲಕ್ಷ್ಯವಹಿಸಿ, ರೋಗ ಉಲ್ಬಣಗೊಂಡ ನಂತರ ಸರ್ಕಾರಿ ಆಸ್ಪತ್ರೆಗೆ ಆಗಮಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಸೋಂಕಿನ ಲಕ್ಷಣವಿದ್ದವರೂ ಕಡ್ಡಾಯವಾಗಿ ಕೋವಿಡ್ ಟೆಸ್ಟ್‌ಗೆ ಒಳಪಡಬೇಕು. ಇಲಾಖೆಯಿಂದ ಮೊಬೈಲ್ ಟೆಸ್ಟಿಂಗ್ ವಾಹನವನ್ನು ಖಾಸಗಿ ಆಸ್ಪತ್ರೆಗಳ ಬಳಿ ಕಳುಹಿಸಿಕೊಡುತ್ತಿದ್ದು ಜನತೆ ಸ್ವಯಂಪ್ರೇರಣೆಯಿಂದ ಪರೀಕ್ಷೆಗೆ ಒಳಗಾಗಬೇಕು. ಖಾಸಗಿ ಆಸ್ಪತ್ರೆಯವರು ಈ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಸರ್ಕಾರದೊಂದಿಗೆ ಕೈಜೋಡಿಸಬೇಕು.
    ಡಾ. ಕೆ.ಪಿ.ರಾಜು ತಾಲೂಕು ಆರೋಗ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts