More

    ಚನ್ನಪಟ್ಟಣ ತಾಲೂಕಿನ 62ಕ್ಕೂ ಹೆಚ್ಚು ಗ್ರಾಮಗಳಲ್ಲಿ ದಲಿತ ಸಮುದಾಯಕ್ಕೆ ಸ್ಮಶಾನವಿಲ್ಲ

    ಚನ್ನಪಟ್ಟಣ: ತಾಲೂಕಿನ 62ಕ್ಕೂ ಹೆಚ್ಚು ಗ್ರಾಮಗಳಲ್ಲಿ ದಲಿತ ಸಮುದಾಯಕ್ಕೆ ಅಂತ್ಯಸಂಸ್ಕಾರ ನಡೆಸಲು ಸ್ಮಶಾನವಿಲ್ಲದೆ ಸಮಸ್ಯೆಯಾಗಿದೆ. ಹಲವು ಗ್ರಾಮಗಳಲ್ಲಿ ಗೋಮಾಳ, ಕಟ್ಟೆ, ನದಿಗಳ ದಂಡೆ, ಸಂಬಂಧಿಕರ ಜಮೀನುಗಳಲ್ಲಿ ಅಂತ್ಯಕ್ರಿಯೆ ನಡೆಸಬೇಕಾಗಿದೆ.

    ಈ ಹಿಂದೆ ಹಲವು ಗ್ರಾಮಗಳ ದಲಿತರು ಸ್ಮಶಾನಕ್ಕಾಗಿ ನಡೆಸಿರುವ ಪ್ರತಿಭಟನೆಗಳಿಗೆ ಲೆಕ್ಕವೇ ಇಲ್ಲ. ಕೆಲವರಂತೂ ಮೃತದೇಹವನ್ನು ತಾಲೂಕು ಕಚೇರಿ ಎದುರು ಇಟ್ಟು ಆಕ್ರೋಶ ವ್ಯಕ್ತಪಡಿಸಿರುವ ಘಟನೆಗಳೂ ನಡೆದಿವೆ. ದಲಿತ ಸಂಘಟನೆಗಳು ಸ್ಮಶಾನಕ್ಕಾಗಿ ಅರೆಬೆತ್ತಲೆ ಪ್ರತಿಭಟನೆ, ವೀರಬಾಹು ವೇಷತೊಟ್ಟು ಹೋರಾಟ ನಡೆಸಿವೆ.

    ಪ್ರತ್ಯೇಕ ಸ್ಮಶಾನ ಗುರುತಿಸಿ: ಸಮುದಾಯಕ್ಕೊಂದರಂತೆ ಪ್ರತ್ಯೇಕ ಸ್ಮಶಾನ ಮಂಜೂರಿಗೆ ಅವಕಾಶವಿಲ್ಲ. ಸಾರ್ವಜನಿಕ ರುದ್ರಭೂಮಿಗಳಲ್ಲಿ ಎಲ್ಲ ಸಮುದಾಯದವರ ಅಂತ್ಯಸಂಸ್ಕಾರ ನಡೆಯಬೇಕು ಎಂಬುದು ಸರ್ಕಾರದ ಆದೇಶ. ಆದರೆ, ಈ ಹಿಂದಿನಿಂದಲೂ ಎಲ್ಲ ಸಮುದಾಯದವರು ಪ್ರತ್ಯೇಕವಾಗಿ ಶವಸಂಸ್ಕಾರ ನಡೆಸಿಕೊಂಡು ಬರುತ್ತಿದ್ದಾರೆ. ಈ ಮಧ್ಯೆ, ಸಾರ್ವಜನಿಕ ರುದ್ರಭೂಮಿಗಳಲ್ಲಿ ಶವಸಂಸ್ಕಾರಕ್ಕೆ ಅನಗತ್ಯ ಗೊಂದಲಗಳು ಉಂಟಾಗುವುದು ಸಹಜವಾಗಿವೆ. ಆ ಕಾರಣ, ದಲಿತರು ವಾಸಿಸುತ್ತಿರುವ ಪ್ರತಿ ಗ್ರಾಮಕ್ಕೂ ಪ್ರತ್ಯೇಕ ಸ್ಮಶಾನಗಳನ್ನು ಗುರುತಿಸಿಕೊಡಬೇಕು ಎಂಬುದು ದಲಿತ ಸಮುದಾಯದ ಮುಖಂಡರ ಆಗ್ರಹವಾಗಿದೆ.

    ಈ ಮಧ್ಯೆ, ಕೆಲಗ್ರಾಮಗಳಲ್ಲಿ ಸ್ಮಶಾನ ಜಾಗಗಳ ಬಗ್ಗೆ ದಾಖಲೆಗಳಿದ್ದರೂ, ಅವು ಕಾಣದಾಗಿವೆ. ಸರ್ಕಾರಿ ಜಾಗಗಳನ್ನು ಗುರುತಿಸಿ, ದಲಿತರಿಗೆ ಸ್ಮಶಾನಗಳನ್ನು ಮಂಜೂರು ಮಾಡಿಕೊಡಬೇಕು. ಇರುವ ಸಣ್ಣಪುಟ್ಟ ವ್ಯಾಜ್ಯಗಳನ್ನು Smashanaತಹಸೀಲ್ದಾರ್ ಪರಿಹರಿಸಿಕೊಡಬೇಕು ಎಂಬುದು ತಾಲೂಕಿನ ದಲಿತ ಸಮುದಾಯದ ಕೋರಿಕೆಯಾಗಿದೆ.

    ಉಳುಮೆಗಾಗಿ ಭೂಮಿ ಬೇಡ..,, ಕನಿಷ್ಠ ಹೂಳುವುದಕ್ಕಾದರೂ ಭೂಮಿ ನೀಡಿ. ಸಾವಿಗೆ ಹೆಚ್ಚಿನ ಘನತೆಯಿದೆ. ಹೂಳಲು ಜಾಗವಿಲ್ಲದೆ, ಶವವಿಟ್ಟುಕೊಂಡು ಪ್ರತಿಭಟನೆ ನಡೆಸಲು ಅವಕಾಶ ಮಾಡಿಕೊಡಬಾರದು. ತಾಲೂಕು ಆಡಳಿತ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕು.
    ಪಟ್ಲು ಗೋವಿಂದರಾಜು ದಲಿತಪರ ಹೋರಾಟಗಾರ

    ತಾಲೂಕಿನಲ್ಲಿ ಸ್ಮಶಾನ ಇಲ್ಲದ ಹಾಗೂ ಸಮಸ್ಯೆ ಇರುವ ಗ್ರಾಮಗಳ ಪಟ್ಟಿ ಪರಿಶೀಲಿಸಿದ್ದೇನೆ. ನಿಯಮದ ಪ್ರಕಾರ ಜಾತಿಗಳಿಗೆ ಪ್ರತ್ಯೇಕ ಸ್ಮಶಾನ ಮಂಜೂರಾತಿಗೆ ಅವಕಾಶವಿಲ್ಲ. ಸಾರ್ವಜನಿಕ ರುದ್ರಭೂಮಿಗಳಿಗೆ ಸರ್ಕಾರಿ ಜಾಗ ಹಾಗೂ ಖಾಸಗಿಯಾಗಿ ಖರೀದಿಸುವ ಅವಕಾಶವಿದೆ. ತಾಲೂಕಿನ ಯಾವ ಗ್ರಾಮದಲ್ಲೂ ದಲಿತ ಸಮುದಾಯಕ್ಕೆ ಅಂತ್ಯಸಂಸ್ಕಾರಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು.
    ಎಲ್.ನಾಗೇಶ್ ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts