More

    ವೃತ್ತದ ಮಧ್ಯೆ ಅಂಬೇಡ್ಕರ್ ಪ್ರತಿಮೆ ಇರಲಿ

    ಹನೂರು: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮಧ್ಯದಲ್ಲಿ ಪ್ರತಿಮೆ ಇರುವಂತೆ ರಸ್ತೆ ಕಾಮಗಾರಿ ನಡೆಸಬೇಕು. ಈ ಬಗ್ಗೆ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ದಲಿತ ಸಮುದಾಯದ ಮುಖಂಡರು ಭಾನುವಾರ ಶಾಸಕ ಎಂ.ಆರ್. ಮಂಜುನಾಥ್ ಅವರನ್ನು ಒತ್ತಾಯಿಸಿದರು.

    ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಕೆ.ಶಿಪ್ ಯೋಜನೆಯಡಿ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಶಾಸಕರು ಆಗಮಿಸಿದ್ದ ವೇಳೆ ಮುಖಂಡರು ಭೇಟಿಯಾಗಿ ಮಾತನಾಡಿ, ವೃತ್ತದ ಮಧ್ಯದಲ್ಲಿ ಅಂಬೇಡ್ಕರ್ ಪ್ರತಿಮೆ ಇರಬೇಕೆಂದು ಈಗಾಗಲೇ ಹಲವು ಬಾರಿ ತಿಳಿಸಲಾಗಿದೆ. ಆದರೆ ಪ್ರತಿಮೆ ಸಮೀಪ ರಸ್ತೆ ಕಾಮಗಾರಿ ಕೈಗೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಮನವಿ ಮಾಡಿದರು.
    ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ, ಪ್ರತಿಮೆಗೆ ಮಂಟಪ ನಿರ್ಮಿಸುವುದರ ಜತೆಗೆ ಎರಡು ಬದಿಯಲ್ಲೂ ರಸ್ತೆ ನಿರ್ಮಿಸಲಾಗುವುದು. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಹಾಗಾಗಿ, ಕಾಮಗಾರಿ ಪೂರ್ಣಗೊಳ್ಳುವವರೆಗೂ ಸಮಾಧಾನದಿಂದ ಇರುವಂತೆ ಭರವಸೆ ನೀಡಿದರು.

    ಒತ್ತುವರಿ ಬಿಡಿಸಿಕೊಡಿ: ಪ್ರತಿಮೆಯಿಂದ ಲೊಕ್ಕನಹಳ್ಳಿ ಮಾರ್ಗವಾಗಿ ತಟ್ಟೆಹಳ್ಳದವರೆಗೆ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ. ಆದರೆ ಕೆಲವರು ರಸ್ತೆ ಒತ್ತುವರಿ ಮಾಡಿಕೊಂಡಿದ್ದಾರೆ. ಕೂಡಲೇ ಇದನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಉತ್ತಮ ರಸ್ತೆ ನಿರ್ಮಿಸಿಕೊಡುವಂತೆ ಮುಖಂಡರು ಶಾಸಕರಲ್ಲಿ ಮನವಿ ಮಾಡಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಈ ಸಂಬಂಧ ಮುಖಂಡರೇ ಕಾಳಜಿ ವಹಿಸಿ, ಸಂಬಂಧಪಟ್ಟವರ ಮನವೊಲಿಸಿ ಒತ್ತುವರಿಯಾಗಿರುವ ರಸ್ತೆ ತೆರವು ಮಾಡಿಸಿ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.

    ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಗತ್ಯ ಚಿಕಿತ್ಸೆ ಸಿಗುತ್ತಿಲ್ಲ. ಇದರಿಂದ ಜನರು ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವುದರ ಜತೆಗೆ ಅಗತ್ಯ ವೈದ್ಯ, ಸಿಬ್ಬಂದಿ ನೇಮಕ ಮಾಡಬೇಕು ಎಂದು ಮುಖಂಡರು ಒತ್ತಾಯಿಸಿದರು. ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಸಂಬಂಧ ಈಗಾಗಲೇ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು. ಪಪಂ ಸದಸ್ಯರಾದ ಸಂಪತ್‌ಕುಮಾರ್, ಮಹೇಶ್, ಮುಖಂಡರಾದ ಸಿದ್ದಯ್ಯ, ಪ್ರಕಾಶ್, ಸಿದ್ದರಾಜು, ಇನ್ಸ್‌ಪೆಕ್ಟರ್ ವಿ.ಎಸ್.ಶಶಿಕುಮಾರ್, ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್‌ಪ್ರಸಾದ್ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts