More

    ಇಂದಿನಿಂದ ಆಪರೇಷನ್ ತೆಂಗಿನಕಲ್ಲು ಪುಂಡಾನೆಗಳ ಸೆರೆಗೆ ಪಳಗಿದ ಆನೆಗಳ ಕಾರ್ಯಾಚರಣೆ

    ಅಭಿಲಾಷ್ ತಿಟ್ಟವಾರನಹಳ್ಳಿ ಚನ್ನಪಟ್ಟಣ
    ಆನೆ ಬಂತೊಂದಾನೆ.., ಯಾವೂರಾನೆ… ದುಬಾರೆ, ಮತ್ತಿಗೋಡು ಆನೆ… ಇಲ್ಲಿಗೇಕೆ ಬಂತು… ಪುಂಡಾನೆ ಹಿಡಿಯೋಕ್ ಬಂತು..
    ಇದು ಕಾಡಾನೆಗಳ ನಿರಂತರ ದಾಳಿಯಿಂದ ತತ್ತರಿಸಿರುವ ಗ್ರಾಮಗಳ ಪುಟಾಣಿಗಳು ಸದ್ಯಕ್ಕೆ ಗುನುಗುತ್ತಿರುವ ಹಾಡು.
    ಹೌದು, ತಾಲೂಕಿನ ತೆಂಗಿನಕಲ್ಲು ಹಾಗೂ ಕಬ್ಬಾಳು ಅರಣ್ಯ ಪ್ರದೇಶ ಸೇರಿ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಹೇಳತೀರದಾಗಿದೆ. ರೈತರು ಕಷ್ಟಪಟ್ಟು ಬೆಳೆದ ಬೆಳೆಗಳು ಕಾಡಾನೆಗಳ ಪಾಲಾಗುತ್ತಿವೆ. ಇಷ್ಟೇ ಅಲ್ಲದೇ ಅನ್ನದಾತರ ಜೀವ ಸಹ ಬಲಿಯಾಗುತ್ತಿವೆ. ಅದರಲ್ಲೂ ತೆಂಗಿನಕಲ್ಲು ಅರಣ್ಯಪ್ರದೇಶದ ಅಕ್ಕಪಕ್ಕದಲ್ಲಿ ಅಡ್ಡಾಡುತ್ತಿರುವ ಎರಡು ಕಾಡಾನೆಗಳು ಸಾಕಷ್ಟು ತಲೆಬಿಸಿ ಉಂಟುಮಾಡಿವೆ. ರಾತ್ರಿಯಾಗುತ್ತಲೇ ನಾಡಿನತ್ತ ನುಗ್ಗುತ್ತಿರುವ ಈ ಎರಡು ಒಂಟಿ ಸಲಗಗಳ ಅರ್ಭಟ ಹೇಳತೀರದಾಗಿದೆ.

    ಅಪರೇಷನ್ ತೆಂಗಿನಕಲ್ಲು
    ಕಾಡಾನೆಗಳ ದಾಳಿಗೆ ಶಾಶ್ವತ ಪರಿಹಾರ ಕಲ್ಪಿಸಿ ಎಂಬುದು ಈ ಭಾಗದ ಜನತೆಯ ಹಲವು ದಿನಗಳ ಬೇಡಿಕೆಯಾಗಿದೆ. ಅದರೊಂದಿಗೆ ಈ ಎರಡು ಪುಂಡಾನೆಗಳ ಉಪಟಳಕ್ಕೆ ಕೂಡಲೇ ಮುಕ್ತಿ ನೀಡಿ ಎಂಬುದು ಅನ್ನದಾತರ ಆಗ್ರಹವಾಗಿತ್ತು. ಅದರಂತೆ ಪುಂಡಾನೆಗಳ ಸೆರೆಗೆ ಕಾಲಕೂಡಿ ಬಂದಿದ್ದು, ಶನಿವಾರ ಅಪರೇಷನ್ ತೆಂಗಿನಕಲ್ಲು ಕಾರ್ಯಾಚರಣೆ ಆರಂಭವಾಗಲಿದೆ. ಸಾಕಷ್ಟು ಹಾವಳಿ ಇಡುತ್ತಿರುವ ಎರಡು ಒಂಟಿ ಸಲಗಗಳನ್ನು ಸೆರೆ ಹಿಡಿಯಲು ಕಾರ್ಯಾಚರಣೆಯಲ್ಲಿ ಪಳಗಿರುವ 5 ಸಾಕಾನೆಗಳನ್ನು ಕರೆಸಲಾಗಿದೆ. ಗುರುವಾರ ರಾತ್ರಿಯೇ ಈ ಆನೆಗಳು ಬಂದಿಳಿದಿದ್ದು, ಶುಕ್ರವಾರ ವಿಶ್ವ ಆನೆ ದಿನದ ಪ್ರಯುಕ್ತ ಕಾರ್ಯಾಚರಣೆಗೆ ಬಿಡುವು ನೀಡಲಾಗಿದ್ದು, ಶನಿವಾರ ಬೆಳಗ್ಗೆಯಿಂದಲೇ ಕಾರ್ಯಾಚರಣೆ ಆರಂಭವಾಗಲಿದೆ.

    ಹರ್ಷನ ನೇತೃತ್ವ
    ನಾಗರಹೊಳೆ ಅಭಯಾರಣ್ಯದ ವ್ಯಾಪ್ತಿಯಲ್ಲಿರುವ ಮತ್ತಿಗೋಡು ಆನೆ ಶಿಬಿರದಿಂದ ಭೀವಾ ಮತ್ತು ಗಣೇಶ ಎಂಬ ಎರಡು ಸಲಗಗಳು, ದುಬಾರೆ ಆನೆ ಶಿಬಿರದಿಂದ ಅಜೇಯ, ಹರ್ಷ ಮತ್ತು ಲಕ್ಷ್ಮಣ ಎಂಬ 3 ಸಲಗಗಳನ್ನು ಕಾರ್ಯಾಚರಣೆಗೆ ಕರೆಸಲಾಗಿದೆ. ದುಬಾರೆ ಶಿಬಿರದ ಹರ್ಷ ಈ ಕಾರ್ಯಾಚರಣೆಯ ನೇತೃತ್ವ ವಹಿಸಲಿದ್ದು, ಹರ್ಷನನ್ನು 1990ರಲ್ಲಿ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. ಸಾಕಷ್ಟು ಪಳಗಿರುವ ಹರ್ಷ ಹಾಸನ, ಸಕಲೇಶಪುರ ಸೇರಿ ಹಲವೆಡೆ ಪುಂಡಾನೆಗಳ ಸೆರೆ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದಾನೆ. ಹಲವು ಬಾರಿ ದಸರಾ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದಾನೆ. 25ಕ್ಕೂ ಹೆಚ್ಚು ವಾವುತರು, ಕಾವಾಡಿಗರು ಹಾಗೂ ಅರಣ್ಯ ಇಲಾಖೆಯ 50ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಲಿದ್ದಾರೆ.

    ಬಿ.ವಿ.ಹಳ್ಳಿಯಲ್ಲಿ ಬೀಡು
    ಕಾರ್ಯಾಚರಣೆಯಲ್ಲಿ ಭಾಗವಹಿಸಲು ಬಂದಿರುವ ಸಾಕಾನೆಗಳು ತಾಲೂಕಿನ ಬಿ.ವಿ.ಹಳ್ಳಿ ಗ್ರಾಮದ ಹೊರವಲಯದಲ್ಲಿ ಬೀಡುಬಿಟ್ಟಿವೆ. ಆ.1ರಿಂದಲೇ ಕಾರ್ಯಾಚರಣೆ ಆರಂಭಿಸಲು ಅರಣ್ಯ ಇಲಾಖೆ ಸಿದ್ಧತೆ ವಾಡಿಕೊಂಡಿತ್ತು. ಆದರೆ, ವಾವುತರು ಮತ್ತು ಕಾವಾಡಿಗಳ ಪ್ರತಿಭಟನೆ, ಮಳೆಯ ಕಾರಣದಿಂದ ಸಾಕಾನೆಗಳನ್ನು ಕರೆಸಲು ಸಾಧ್ಯವಾಗಿರಲಿಲ್ಲ. ಮಂಗಳವಾರ ಬೆಳಗ್ಗೆ ತಾಲೂಕಿನ ಚನ್ನಿಗನಹೊಸಹಳ್ಳಿ ಗ್ರಾಮದಲ್ಲಿ ಮಹಿಳೆಯನ್ನು ಪುಂಡಾನೆ ಸಾಯಿಸಿದ ನಂತರ ಗಂಭೀರತೆ ಅರಿತ ಅರಣ್ಯ ಇಲಾಖೆ ಕಾಡಾನೆ ಸೆರೆಗೆ ಕಾರ್ಯಾಚರಣೆ ಆರಂಭಿಸಲು ಸಿದ್ಧವಾಗಿತ್ತು. ಗುರುವಾರ ಮಧ್ಯಾಹ್ನದ ಸುವಾರಿಗೆ ನಾಗರಹೊಳೆಯಿಂದ ಹೊರಟ ಸಾಕಾನೆಗಳು ರಾತ್ರಿ 10 ಗಂಟೆ ಹೊತ್ತಿಗೆ ತಾಲೂಕಿಗೆ ಆಗಮಿಸಿದವು.

    ಸಹಕರಿಸುವಂತೆ ಮನವಿ
    ಈ ಕಾರ್ಯಾಚರಣೆ ಡಿಎಫ್‌ಒ ದೇವರಾಜು, ಎಸಿಎಫ್ ಸಯ್ಯದ್ ನಿಜಾಮುದ್ದೀನ್, ಆರ್‌ಎಫ್‌ಒ ದಿನೇಶ್ ನೇತೃತ್ವದಲ್ಲಿ ನಡೆಯುತ್ತಿದ್ದು, ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಈ ಭಾಗದ ಜನತೆ ಸಹಕರಿಸುವಂತೆ ಮನವಿ ವಾಡಿದ್ದಾರೆ. ಯಾರೂ ಕೂಡ ಜನವಸತಿ ಪ್ರದೇಶದಿಂದ ಹೊರಬರಬಾರದು, ಅರಣ್ಯ ಪ್ರದೇಶಕ್ಕೆ ದನಕುರಿ ಮೇಯಿಸಲು ಹೋಗಬಾರದು ಎಂದು ಸೂಚನೆ ನೀಡಿದ್ದಾರೆ. ಜತೆಗೆ, ಕಾರ್ಯಾಚರಣೆ ಪೂರ್ಣಗೊಳ್ಳುವವರೆಗೆ ಎಚ್ಚರಿಕೆಯಿಂದ ಇರುವಂತೆ ಮನವಿ ವಾಡಿದ್ದಾರೆ. ಮಹಿಳೆಯನ್ನು ಕೊಂದಿರುವ ಹಾಗೂ ಜಿಲ್ಲೆಯ ವಿವಿಧ ಭಾಗದ 50ಕ್ಕೂ ಹೆಚ್ಚು ಗ್ರಾಮಗಳಲ್ಲಿ ತೀವ್ರ ಹಾವಳಿ ವಾಡುತ್ತಿರುವ ಎರಡು ಒಂಟಿಸಲಗಗಳನ್ನು ಸೆರೆಹಿಡಿಯಲು ಕ್ಷಣಗಣನೆ ಆರಂಭವಾಗಿದೆ.

    ವಿಶ್ವ ಆನೆ ದಿನದಂದು ಸಾಕಾನೆಗಳಿಗೆ ಪೂಜೆ
    ಚನ್ನಪಟ್ಟಣ: ಪುಂಡಾನೆ ಸೆರೆಗೆ ಆಗಮಿಸಿರುವ 5 ಸಾಕಾನೆಗಳಿಗೆ ಶುಕ್ರವಾರ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ವಿಶ್ವ ಆನೆ ದಿನವನ್ನು ಆಚರಿಸಿದರು. ಬಿ.ವಿ. ಹಳ್ಳಿಯ ಮಹದೇಶ್ವರ ದೇವಾಲಯದ ಬಳಿ ಸಾಕಾನೆಗಳಿಗೆ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜು ಪೂಜೆ ಸಲ್ಲಿಸಿದರು. ಸಾಕಾನೆಗಳು ಸೊಂಡಿಲನ್ನು ಮೇಲೆತ್ತುವ ಮೂಲಕ ಅಧಿಕಾರಿಗಳಿಗೆ ಗೌರವ ಸಲ್ಲಿಸಿದವು. ಎಸಿಎಫ್ ನಿಜಾಮುದ್ದೀನ್, ಆರ್‌ಎಫ್‌ಒ ದಿನೇಶ್‌ಗೌಡ, ಇತರ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts