More

    ಚನ್ನಪಟ್ಟಣದಲ್ಲಿ ಸಾಮಾನ್ಯ ರೋಗಿಗಳಿಗೆ ಕರೊನಾತಂಕ: ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ಕೇಂದ್ರ ಆರಂಭ ಒಳ, ಹೊರರೋಗಿಗಳಿಗೆ ಸೋಂಕು ಹರಡುವ ಭೀತಿ

    ಚನ್ನಪಟ್ಟಣ : ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಬರುವ ಒಳ ಮತ್ತು ಹೊರರೋಗಿಗಳಿಗೆ ಆತಂಕ ಮೂಡಿದೆ.
    ಕರೊನಾ ಸೋಂಕಿತರಿಗೆ ತಾಲೂಕಿನ ಹೊನ್ನಾನಾಯಕನಹಳ್ಳಿಯಲ್ಲಿನ ಕ್ವಾರಂಟೈನ್ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಹೆಚ್ಚಿನ ಆರೋಗ್ಯ ತೊಂದರೆಯುಳ್ಳವರನ್ನು ರಾಮನಗರದ ಕಂದಾಯ ಭವನದಲ್ಲಿರುವ ಕೋವಿಡ್ ಸೆಂಟರ್ ಅಥವಾ ಬೇರೆಡೆಗೆ ರವಾನಿಸಲಾಗುತ್ತಿದೆ. ಈ ಮಧ್ಯೆ ಕಳೆದ ಮೂರು ದಿನದಿಂದ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲೂ ಕರೊನಾ ಸೋಂಕಿತರನ್ನು ದಾಖಲಿಸಿಕೊಳ್ಳಲಾಗುತ್ತಿರುವುದರಿಂದ ಸಾಮಾನ್ಯ ರೋಗಿಗಳು ದಿಗಿಲುಗೊಂಡಿದ್ದಾರೆ.

    ಈ ಹಿಂದೆ ಆಸ್ಪತ್ರೆಯ ಎರಡು ವಾರ್ಡ್‌ಗಳನ್ನು ಕರೊನಾ ಸೋಕಿಂತರ ಚಿಕಿತ್ಸೆಗಾಗಿ ಜಿಲ್ಲಾಡಳಿತ ಮೀಸಲಿಟ್ಟಿತ್ತು. ಆದರೆ, ಇಲ್ಲಿ ಇದುವರೆಗೂ ಸೋಂಕಿತರನ್ನು ದಾಖಲಿಸಿಕೊಂಡಿರಲಿಲ್ಲ. ಇದೀಗ, ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲೂ ಸೋಂಕಿತರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.

    ಡಯಾಲಿಸಿಸ್ ರೋಗಿಗಳಿಗೆ ಎದೆಬಡಿತ ಹೆಚ್ಚಳ
    ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂರು ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಡಯಾಲಿಸಿಸ್ ಕೇಂದ್ರ ಆರಂಭಿಸಲಾಗಿದೆ. ಇದು ಕೋವಿಡ್ ಕೇರ್ ಸೆಂಟರ್ ಪಕ್ಕದ ಕೊಠಡಿಯಲ್ಲಿಯೇ ಇರುವುದು ಡಯಾಲಿಸಿಸಿಸ್ ರೋಗಿಗಳ
    ಎದೆಬಡಿತ ಹೆಚ್ಚಳವಾಗಲು ಕಾರಣವಾಗಿದೆ. ಇದರೊಂದಿಗೆ ಈ ಕೇರ್ ಸೆಂಟರ್ ಪಕ್ಕದಲ್ಲಿಯೇ ಲ್ಯಾಬ್ ಸಹ ಇದೆ. ಹಾಗಾಗಿ ಮೊದಲೇ ಕಿಡ್ನಿ ಸಮಸ್ಯೆಯಿಂದ ಬಳಲಿ ಬೆಂಡಾಗಿರುವ ರೋಗಿಗಳು ಇನ್ನಷ್ಟು ಆತಂಕಕ್ಕೆ ಒಳಗಾಗಿದ್ದು, ಈ ಬಗ್ಗೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಗಮನಹರಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.

    ಭಯದ ವಾತಾವರಣ: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರೊನಾ ಸೋಂಕಿತರನ್ನು ದಾಖಲಿಸಿಕೊಳ್ಳುತ್ತಿರುವುದು ಭಯದ ವಾತಾವರಣ ನಿರ್ಮಿಸಿದೆ. ಈ ಆಸ್ಪತ್ರೆಗೆ ಪ್ರತಿನಿತ್ಯ ನೂರಾರು ಹೊರರೋಗಿಗಳು ಆಗಮಿಸುತ್ತಾರೆ. ಇರುವ ಒಂದೇ ದ್ವಾರದಲ್ಲಿ ಹೊರರೋಗಿಗಳು ಮತ್ತು ಸೋಂಕಿತರು ತಿರುಗಾಡಬೇಕಿದೆ. ಆಸ್ಪತ್ರೆಯ ಕೆಳ ಅಂತಸ್ತಿನಲ್ಲಿ ಒಪಿಡಿ ಹಾಗೂ ಒಳರೋಗಿಗಳ ಜನರಲ್ ವಾರ್ಡ್‌ಗಳಿವೆ. ಇದರ ಮೇಲ್ಭಾಗದ ಅಂತಸ್ತಿನ ಎರಡು ವಾರ್ಡ್‌ಗಳಲ್ಲಿ ಸೋಂಕಿತರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿರುವುದರಿಂದ ಸಹಜವಾಗಿಯೇ ಭಯದ ವಾತಾವರಣ ನಿರ್ಮಿಸಿದೆ. ಹೇಳಿಕೇಳಿ ಈ ಆಸ್ಪತ್ರೆ ವಿಶಾಲವಾದ ವಾತಾವರಣವನ್ನು ಹೊಂದಿರದೆ ಇರುವುದು, ಪ್ರತ್ಯೇಕ ದ್ವಾರ ಇಲ್ಲದಿರುವುದು ಇರುವ ಅಲ್ಪ ಸ್ಥಳದಲ್ಲಿಯೇ ಕೋವಿಡ್ ನಿಗಾ ಘಟಕವನ್ನು ಸ್ಥಾಪಿಸಿರುವುದು ಸಹಜವಾಗಿಯೇ ಆತಂಕ ಸೃಷ್ಟಿಯಾಗಲು ಕಾರಣವಾಗಿದೆ.

    ಡಯಾಲಿಸಿಸ್ ರೋಗಿಗಳು ಬಹಳ ಸೂಕ್ಷ್ಮ. ಆದಾಗ್ಯೂ ಈ ಕೇಂದ್ರದ ಪಕ್ಕದಲ್ಲೇ ಕೋವಿಡ್ ಕೇರ್ ಸೆಂಟರ್ ಆರಂಭಿಸಿರುವುದರಿಂದ ಭಯದ ವಾತಾವರಣ ನಿರ್ಮಾಣವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸಲು ಸಾಧ್ಯವಿಲ್ಲದೇ, ಸಾರ್ವಜನಿಕ ಆಸ್ಪತ್ರೆಯನ್ನು ನೆಚ್ಚಿಕೊಂಡಿದ್ದೇವೆ. ನಮ್ಮ ತಂದೆಯನ್ನು ವಾರಕೊಮ್ಮೆ
    ಇಲ್ಲಿಗೆ ಕರೆ ತರುತ್ತೇನೆ. ಏನಾದರೂ ಹೆಚ್ಚು ಕಡಿಮೆಯಾದರೆ ಗತಿಯೇನು ಎಂಬ ಭಯ ಆವರಿಸಿದೆ. ಈ ಬಗ್ಗೆ ಸಂಬಂಧಪಟ್ಟವರು ದಯವಿಟ್ಟು ಗಮನಿಸಬೇಕು.
    ಮಹದೇವಪ್ರಸಾದ್ ಡಯಾಲಿಸಿಸ್ ರೋಗಿಯ ಪುತ್ರ.

    ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲೂ ಸೋಂಕಿತರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದೇವೆ. ಈ ಸೆಂಟರ್‌ಗೆ
    ಪ್ರತ್ಯೇಕ ದ್ವಾರ ಇಲ್ಲ. ಇರುವುದರಲ್ಲಿಯೆ ಮುಂಜಾಗ್ರತೆ ವಹಿಸಿಕೊಂಡು ಸೋಂಕಿತರ ಆರೋಗ್ಯದ ಮೇಲೆ ನಿಗಾವಹಿಸುತ್ತಿದ್ದೇವೆ. ಇದರಿಂದ ಡಯಾಲಿಸಿಸ್ ರೋಗಿಗಳು ಹೆಚ್ಚಿನ ಆತಂಕಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಹಿರಿಯ
    ಅಧಿಕಾರಿಗಳ ಜತೆ ಚರ್ಚೆ ನಡೆಸುತ್ತೇನೆ.
    ಡಾ. ವಿಜಯನರಸಿಂಹ ಆಸ್ಪತ್ರೆಯ ಅಧೀಕ್ಷಕ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts