More

    ಸೋಂಕು ಎದುರಿಸಲು ಧೈರ್ಯವೇ ಪ್ರಬಲ ಅಸ : ಚನ್ನಪಟ್ಟಣದ ಕೋವಿಡ್ ಕೇಂದ್ರಗಳಲ್ಲಿ ಸೋಂಕಿತರ ಆರೋಗ್ಯ ವಿಚಾರಿಸಿದ ಸಂಸದ ಡಿ.ಕೆ. ಸುರೇಶ್

    ಚನ್ನಪಟ್ಟಣ : ಅನಗತ್ಯ ಆತಂಕದಿಂದ ಆರೋಗ್ಯ ಹದಗೆಡಲಿದೆ. ಕರೊನಾ ಬಗ್ಗೆ ಯಾವುದೇ ಆತಂಕಬೇಡ. ಧೈರ್ಯವೇ ಈ ಸೋಂಕನ್ನು ಅಡಗಿಸುವ ಪ್ರಬಲ ಅಸ ಎಂದು ಸಂಸದ ಡಿ.ಕೆ. ಸುರೇಶ್ ಕರೊನಾ ಸೋಂಕಿತರಿಗೆ ಆತ್ಮವಿಶ್ವಾಸ ತುಂಬಿದರು.
    ತಾಲೂಕಿನಲ್ಲಿರುವ ಕೋವಿಡ್ ಕೇರ್ ಸೆಂಟರ್‌ಗಳಿಗೆ ಸೋಮವಾರ ಭೇಟಿ ನೀಡಿ ಸೋಂಕಿತರ ಆರೋಗ್ಯ ವಿಚಾರಿಸಿ, ವ್ಯವಸ್ಥೆ ಹಾಗೂ ಅವ್ಯವಸ್ಥೆಗಳ ಬಗ್ಗೆ ರೋಗಿಗಳಿಂದ ಮಾಹಿತಿ ಪಡೆದರು.

    ಈ ವೇಳೆ ಮಾತನಾಡಿದ ಅವರು, ನಿಮಗೆ ಉತ್ತಮ ವೈದ್ಯಕೀಯ ವ್ಯವಸ್ಥೆ ಕಲ್ಪಿಸಲಾಗಿದೆ. ಸೋಂಕು ಕಾಣಿಸಿಕೊಂಡ ನಂತರ ಮನೆಯಲ್ಲಿ ಇರುವುದಕ್ಕಿಂತ ಕೇರ್ ಸೆಂಟರ್‌ನಲ್ಲಿರುವುದು ಒಳ್ಳೆಯದು. ನಿಮ್ಮ ಸೇವೆಗೆ ನಾವು ಸಿದ್ಧ ವಾಗಿದ್ದೇವೆ. ಅನಗತ್ಯ ಆತಂಕ,ಇನ್ನಿತರ ಚಿಂತೆಗಳನ್ನು ಬಿಟ್ಟು, ಶೀಘ್ರವಾಗಿ ಗುಣಮುಖರಾಗಿ ಹೊರಬನ್ನಿ ಎಂದು ಶುಭ ಕೋರಿದರು.

    ಕೆಪಿಎಸ್‌ಸಿ ಮಾಜಿ ಸದಸ್ಯ ರಘುನಂದನ್ ರಾಮಣ್ಣ, ಪಕ್ಷದ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಎಸ್.ಆರ್.ಪ್ರಮೋದ್, ಎಚ್.ಎಸ್.ಸುನೀಲ್‌ಕುಮಾರ್, ಯುವಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಚಿನ್‌ಗೌಡ, ಹಾಪಾಕಾಮ್ಸ್ ನಿರ್ದೇಶಕ ಶಿವಮಾದು, ಕಾಂಗ್ರೆಸ್ ಮುಖಂಡರಾದ ಡಿ.ಕೆ.ಕಾಂತರಾಜು, ಬೋರ್‌ವೆಲ್ ರಂಗನಾಥ್, ನಿಜಾಮುದ್ದೀನ್ ಪೌಜ್ದಾರ್, ಪಿ.ಡಿ.ರಾಜು ಹಾಗೂ ಯುವಕಾಂಗ್ರೆಸ್ ಪದಾಧಿಕಾರಿಗಳು ಇತರರಿದ್ದರು.

     

    ಅಧಿಕಾರಿಗಳಿಗೆ ಸುರೇಶ್ ಕ್ಲಾಸ್ :  ಸರ್.., ನಾಲ್ಕು ದಿನಗಳ ಹಿಂದೆ ಕರೊನಾ ಚಿಕಿತ್ಸೆಗೆ ದಾಖಲಾಗಿದ್ದೇವೆ. ಊಟ, ವಸತಿ ಎಲ್ಲವೂ ಸರಿಯಿದೆ. ಆದರೆ, ಇದುವರೆಗೂ ನರ್ಸ್ ಗಳನ್ನು ಬಿಟ್ಟರೆ ವೈದ್ಯರು ನಮ್ಮತ್ತ ಸುಳಿದಿಲ್ಲ. ಏನಾದರೂ ಸಮಸ್ಯೆಯಾದರೆ ನಮ್ಮ ಗತಿಯೇನು ಎಂದು ಸೋಂಕಿತರೊಬ್ಬರು ಚಕ್ಕೆರೆ ಗ್ರಾಮದ ಕೇರ್ ಸೆಂಟರ್‌ಗೆ ಭೇಟಿ ನೀಡಿದ್ದ ಸಂಸದ ಸುರೇಶ್ ಬಳಿ ಅಳಲು ತೋಡಿಕೊಂಡರು. ಇದರಿಂದ ಕೆರಳಿದ ಸುರೇಶ್, ಉಪವಿಭಾಗಾಧಿಕಾರಿ ಹಾಗೂ ತಾಲೂಕು ಆರೋಗ್ಯಾಧಿಕಾರಿಗೆ ದೂರವಾಣಿ ಮಾಡಿ ಕ್ಲಾಸ್ ತೆಗೆದುಕೊಂಡರು.

    ಸಂಪನ್ಮೂಲ ವ್ಯಕ್ತಿಗಳಾಗಿ : 
    ಚನ್ನಪಟ್ಟಣದ ಮಹದೇಶ್ವರ ನಗರ ಹಾಗೂ ಚಕ್ಕೆರೆ ಹಾಗೂ ಹೊನ್ನಾನಾಯಕ್ಕನಹಳ್ಳಿ ಗ್ರಾಮಗಳಲ್ಲಿನ ಕೋವಿಡ್ ಕೇಂದ್ರಗಳಿಗೆ ಭೇಟಿ ನೀಡಿದ ಅವರು, ಸೋಂಕಿತರ ಚಿಕಿತ್ಸೆ ಹಾಗೂ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದ ಡಿ.ಕೆ. ಸುರೇಶ್, ಕ್ವಾರಂಟೈನ್ ಸೆಂಟರ್ ಎಂದರೆ ಮೂಗು ಮುರಿಯುತ್ತಿದ್ದ ಸ್ಥಿತಿಯಿತ್ತು. ಆದರೆ ಇಂದು ಅಂತಹ ಪರಿಸ್ಥಿತಿ ಇಲ್ಲ. ಇಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಹೊರಬಂದ ಮೇಲೆ ಇತರರಿಗೆ ಜಾಗೃತಿ ಮೂಡಿಸುವ ಸಂಪನ್ಮೂಲ ವ್ಯಕ್ತಿಗಳಾಗಬೇಕು. ಕೇರ್ ಸೆಂಟರ್‌ಗಳ ಬಗ್ಗೆ ಸಮಾಜಕ್ಕೆ ಒಳ್ಳೆಯ ಅಭಿಪ್ರಾಯಗಳನ್ನು ತಿಳಿಸಬೇಕು ಎಂದು ಸೋಂಕಿತರಿಗೆ ತಿಳಿಸಿದರು.

    ಟಿಎಚ್‌ಒಗೆ ಆಕ್ಸಿಜನ್ ಕಾನ್ಸನ್‌ಟ್ರೇಟರ್ ಹಸ್ತಾಂತರ

    ಚನ್ನಪಟ್ಟಣ : ಕರೊನಾ ಸೋಂಕು ನಿಯಂತ್ರಣಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಒಟ್ಟಾಗಿ ಹೋರಾಡಬೇಕಿದೆ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದರು.
    ನಗರದ ಮಹದೇಶ್ವರ ನಗರದ ಕೋವಿಡ್ ಕೇರ್ ಸೆಂಟರ್ ಬಳಿ ಸೋಂಕಿತರ ಚಿಕಿತ್ಸೆಗಾಗಿ ಯುವ ಕಾಂಗ್ರೆಸ್ ಹಾಗೂ ಕೋವಿಡ್ ಇಂಡಿಯಾ ಕ್ಯಾಂಪೇನ್ ಮತ್ತು ಸೈಜೋನ್ ಸಂಸ್ಥೆಯ ವತಿಯಿಂದ ನೀಡಲಾದ 10 ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳನ್ನು ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೋಮವಾರ ಹಸ್ತಾಂತರಿಸಿ ಮಾತನಾಡಿದರು.

    ರಾಜ್ಯದಲ್ಲೆಡೆ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಆದರೆ, ಸರ್ಕಾರ ಸೋಂಕು ಪರೀಕ್ಷೆಯನ್ನು ಕಡಿಮೆಗೊಳಿಸಿರುವ ಕಾರಣದಿಂದ ಸೋಂಕು ಕಡಿಮೆಯಾಗಿದೆ ಎಂಬ ವಾತಾವರಣ ನಿರ್ಮಾಣವಾಗಿದೆ. ಈಗಾಗಲೇ ಜಿಲ್ಲಾ ಕೋವಿಡ್ ಉಸ್ತುವಾರಿ ಕಾರ್ಯದರ್ಶಿ ತುಷಾರ್ ಗಿರಿನಾಥ್, ಜಿಲ್ಲೆಯಲ್ಲಿ ಪ್ರತಿನಿತ್ಯ 2 ಸಾವಿರ ಸೋಂಕು ಪರೀಕ್ಷೆ ನಡೆಸುವಂತೆ ಸೂಚಿಸಿದ್ದಾರೆ. ಆದರೆ, ಜಿಲ್ಲೆಯಲ್ಲಿ ಇದನ್ನು ಪಾಲಿಸುತ್ತಿಲ್ಲ. ಅಧಿಕಾರಿಗಳು ಕಾಲಹರಣ ಮಾಡದೆ, ಪರೀಕ್ಷೆಯನ್ನು ಹೆಚ್ಚು ನಡೆಸಬೇಕು. ಲಾಕ್‌ಡೌನ್ ಸಮಯದಲ್ಲೇ ಸೋಂಕು ನಿಯಂತ್ರಣ ಮಾಡುವುದು ಒಳ್ಳೆಯದು ಎಂದು ತಿಳಿಸಿದರು.

    ಜಿಲ್ಲೆಯಲ್ಲಿ 19 ಕೋವಿಡ್ ಕೇರ್ ಸೆಂಟರ್‌ಗಳು ಕಾರ್ಯನಿರ್ವಹಿಸುತ್ತಿವೆ. ಎಲ್ಲ ಕೇಂದ್ರಗಳಿಗೂ ಭೇಟಿ ನೀಡುತ್ತಿದ್ದೇನೆ. ಸೋಂಕಿತರಿಗೆ ಮೆಡಿಕಲ್ ಕಿಟ್ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ಪಕ್ಷದ ಪದಾಧಿಕಾರಿಗಳು ಸಹ, ಕೋವಿಡ್ ನಿರ್ವಹಣೆಯಲ್ಲಿ ತೊಡಗಿಕೊಂಡಿದ್ದಾರೆ ಎಂದರು.ತಹಸೀಲ್ದಾರ್ ಎಲ್. ನಾಗೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಕೆ.ಪಿ.ರಾಜು, ತಾಪಂ ಇಒ ಚಂದ್ರು ಹಾಗೂ ಕಾಂಗ್ರೆಸ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts