More

    ಜಮೀನಿನಲ್ಲೇ ಕೊಳೆಯುತ್ತಿದೆ ಸಾಂಬಾರ್ ಸೌತೆಕಾಯಿ

    ಚನ್ನಗಿರಿ: ತಾಲೂಕಿನ ಕಾರಿಗನೂರಿನಲ್ಲಿ ಒಂದು ಎಕರೆಯಲ್ಲಿ ಬೆಳೆದ ಸಾಂಬಾರು ಸೌತೆಕಾಯಿಗೆ ಮಾರುಕಟ್ಟೆ ಇಲ್ಲದೆ ಜಮೀನಿನಲ್ಲೇ ಕೊಳೆತು ಹೋಗುತ್ತಿದೆ. ಹಾಕಿದ ಬಂಡವಾಳ ಕೈಗೆ ಸಿಗದೆ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ.

    ರೈತ ಹರೀಶ್ ಸಾವಿರಾರು ರೂ. ಖರ್ಚು ಮಾಡಿ ಬೆಳೆ ಬೆಳೆದಿದ್ದಾರೆ. ಆದರೆ, ಕೈಗೆ ಬರುವಷ್ಟರಲ್ಲಿ ಲಾಕ್‌ಡೌನ್ ಘೋಷಣೆಯಾದ ಕಾರಣ ಬಹುಬೇಡಿಕೆ ಇರುವ ಮಂಗಳೂರು, ದಾವಣಗೆರೆ, ಮುಂಬೈ ಮಾರುಕಟ್ಟೆಗೆ ಒಯ್ಯಲು ಸಾಧ್ಯವಾಗಿಲ್ಲ.

    ಹೀಗಾಗಿ ಕಟಾವು ಮಾಡಲು ಹೋದರೆ ಕೂಲಿ ಹಣವೂ ವ್ಯರ್ಥ ಎನ್ನುವ ಕಾರಣಕ್ಕೆ ಜಮೀನಿನಲ್ಲಿ ಹಾಗೇ ಬಿಡಲಾಗಿದೆ. ಎಕರೆಗೆ 3 ಟನ್ ಇಳುವರಿ ಬಂದಿದೆ. ಕೆಜಿಗೆ ಕನಿಷ್ಠ 8 ರೂ.ನಂತೆ ಮಾರಾಟವಾಗುತ್ತಿದ್ದ ಸೌತೆಕಾಯಿಯನ್ನು ಪುಕ್ಕಟೆ ಕೊಟ್ಟರು ತೆಗೆದುಕೊಳ್ಳುವರಿಲ್ಲ.
    ಪ್ರತಿವರ್ಷ ಸಾವಿರಾರು ರೂ. ಲಾಭ ಪಡೆಯುತ್ತಿದ್ದ ರೈತ ಈ ಸಲ ಹಾಕಿದ ಬಂಡವಾಳ ವಾಪಸ್ ಪಡೆಯಲು ಆಗದೆ ಕಣ್ಣೀರು ಹಾಕುವಂತಾಗಿದೆ. ಉತ್ತಮ ಫಸಲು ಬಂದಿದೆ. ಒಳ್ಳೆಯ ಆದಾಯ ಬರಲಿದೆ ಎಂದು ಕುಟುಂಬ ನಿರೀಕ್ಷೆ ಮಾಡಿತ್ತು. ಕರೊನಾ ಎಲ್ಲದಕ್ಕೂ ತಣ್ಣೀರು ಎರಚಿದೆ.

    ಸಾಂಬಾರು ಸೌತೆಯಲ್ಲಿ ಕಳೆದ ವರ್ಷ ಉತ್ತಮ ಲಾಭ ಬಂದಿತ್ತು. ಹೀಗಾಗಿ ಈ ಸಲವೂ ಅದನ್ನೇ ಬೆಳೆದೆವು. ಲಾಕ್‌ಡೌನ್ ಇರುವ ಕಾರಣ ಮಾರುಕಟ್ಟೆ ಇಲ್ಲ. ಬಹಳ ದಿನ ಈ ಬೆಳೆ ಸಂರಕ್ಷಿಸಿ ಇಡಲು ಬರುವುದಿಲ್ಲ. ಫಸಲನ್ನು ಕೈಯಾರೆ ನಾಶಪಡಿಸುವಂತಾಗಿದೆ ಎನ್ನುತ್ತಾರೆ ರೈತ ಹರೀಶ್.

    ಲಾಕ್‌ಡೌನ್ ಇದ್ದರೂ ಸರ್ಕಾರ ರೈತರಿಗೆ ಬೆಳೆ ಮಾರಾಟಕ್ಕೆ ಅವಕಾಶ ನೀಡಿದೆ. ಅನೇಕ ಮಾರುಕಟ್ಟೆಗಳು ತೆರೆದಿವೆ. ಅಲ್ಲದೆ ಸಂಬಂಧಿಸಿದ ಅಧಿಕಾರಿಗಳ ಸಲಹೆ ಪಡೆಯಬೇಕು. ಬೆಳೆಯನ್ನು ನಗರ ಪ್ರದೇಶಗಳಿಗೆ ವಾಹನದಲ್ಲಿ ತಂದು ಮನೆಗಳ ಬಳಿಗೆ ಹೋಗಿ ಮಾರಾಟ ಮಾಡಲು ಅವಕಾಶವಿದೆ ಎಂದು ಎಂ.ಜೆ.ರೋಹಿತ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ತಿಳಿಸಿದರು. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts