More

    ತರಕಾರಿ, ಹಣ್ಣು ಸರಬರಾಜಿನಲ್ಲಿ ವ್ಯತ್ಯಯ ಸಂಭವ

    ಮಂಗಳೂರು: ಕರೋನಾ ಮುಂಜಾಗ್ರತಾ ಕ್ರಮವಾಗಿ ಸೆಂಟ್ರಲ್ ಮಾರುಕಟ್ಟೆಯ ಸಗಟು ವ್ಯಾಪಾರಿಗಳು ಬೈಕಂಪಾಡಿ ಎಪಿಎಂಸಿಗೆ ತಾತ್ಕಾಲಿಕವಾಗಿ ಸ್ಥಳಾಂತರವಾಗುವ ಜಿಲ್ಲಾಡಳಿತದ ಆದೇಶಕ್ಕೆ ವ್ಯಾಪಾರಿಗಳು ಹಿಂದೇಟು ಹಾಕಿದ್ದು, ನಗರದಲ್ಲಿ ಬೇರೆ ಕಡೆ ಅವಕಾಶ ಮಾಡಿಕೊಡುವಂತೆ ಮನವಿ ಸಲ್ಲಿಸಿದ್ದಾರೆ. ಯಾವುದೇ ಕಾರಣಕ್ಕೂ ಬೇರೆ ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸುವ ಮೂಲಕ ಮಾರುಕಟ್ಟೆ ಸಮಸ್ಯೆ ಜಟಿಲಗೊಂಡಿದ್ದು , ತರಕಾರಿ , ಹಣ್ಣು ಸರಬರಾಜಿನಲ್ಲಿ ವ್ಯತ್ಯಯಗಳಾಗುವ ಸಂಭವಿದೆ.

    ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸೆಂಟ್ರಲ್ ಮಾರುಕಟ್ಟೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಜನರು ಸೇರಿದರೆ ಸಾಮಾಜಿಕ ಅಂತರ ಕಾಪಾಡಲು ಕಷ್ಟ . ಹಾಗಾಗಿ ಮುಂಜಾಗೃತಾ ಕ್ರಮವಾಗಿ ಹಣ್ಣು ಹಾಗೂ ತರಕಾರಿ ಸಗಟು ವ್ಯಾಪಾರಸ್ಥರನ್ನು ಏ.2ರಂದು ಜಿಲ್ಲಾಧಿಕಾರಿ ಬೈಕಂಪಾಡಿಯ ಎಪಿಎಂಸಿಗೆ ಸ್ಥಳಾಂತರಿಸಿ ಆದೇಶಿಸಿದ್ದರು. ಆದರೆ ಶುಕ್ರವಾರ ಸಗಟು ವ್ಯಾಪಾರಸ್ಥರು ಅಲ್ಲಿ ಯಾವುದೇ ವ್ಯಾಪಾರ ವ್ಯವಹಾರವನ್ನು ಪ್ರಾರಂಭಿಸಿಲ್ಲ.

    ಶಾಸಕ ಡಾ.ವೈ.ಭರತ್ ಶೆಟ್ಟಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಪೊನ್ನುರಾಜ್, ಮನಪಾ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಅವರು ಬೈಕಂಪಾಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆ ಬಳಿಕ ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ, ಅಲ್ಲಿ ವ್ಯಾಪಾರಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದ್ದರೂ ಫಲಕಾರಿಯಾಗಲಿಲ್ಲ.

    ಸಂಘದ ಸದಸ್ಯರು ಶನಿವಾರ ಸಭೆ ನಡೆಸಿದ್ದು, ಬೈಕಂಪಾಡಿಯ ಎಪಿಎಂಸಿಯಲ್ಲಿ ಯಾವುದೇ ವ್ಯವಸ್ಥೆ ಇಲ್ಲದ ಕಾರಣದಿಂದಾಗಿ ಹಾಗೂ ಆ ಪ್ರದೇಶ ನಗರಕ್ಕೆ ಬಹಳಷ್ಟು ದೂರವಿರುವ ಹಿನ್ನೆಲೆಯಲ್ಲಿ ಅಲ್ಲಿಗೆ ರಿಟೇಲ್ ವ್ಯಾಪಾರಸ್ಥರು ಬರಲಾರರು. ಹಾಗಾಗಿ ಅಲ್ಲಿಗೆ ಹೋಗಲು ನಾವು ಸಿದ್ಧರಿಲ್ಲ ಎನ್ನುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎಂ.ಎಂ.ಕೆ. ಮುಸ್ತಫಾ ತಿಳಿಸಿದ್ದಾರೆ.

    ನಗರದಲ್ಲೇ ಅವಕಾಶ ಕಲ್ಪಿಸಲು ಮನವಿ: ಮಂಗಳೂರು ನಗರದ ನೆಹರೂ ಮೈದಾನ, ಕರಾವಳಿ ಮೈದಾನ, ಜಪ್ಪಿನಮೊಗರು ಮೊದಲಾದ ಕಡೆ ವಿಶಾಲ ಜಾಗ ಇರುವಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು. ಬೈಕಂಪಾಡಿಯಲ್ಲಿ ಪರಿಸರವೂ ಮಾಲಿನ್ಯದಿಂದ ಕೂಡಿದೆ. ವ್ಯಾಪಾರಿಗಳಿಗೂ ದೂರವಾಗುತ್ತದೆ. ಈ ಹಿನ್ನೆಲೆಯಲ್ಲಿ ನಗರದ ಒಳಗಡೆಯೇ ಅವಕಾಶ ಕಲ್ಪಿಸಿ ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ ಎಂದು ಪ್ಯಾಪಾರಸ್ಥರು ತಿಳಿಸಿದ್ದಾರೆ.

    ಸೆಂಟ್ರಲ್ ಮಾರುಕಟ್ಟೆಯ ಸಗಟು ವ್ಯಾಪಾರಿಗಳನ್ನು ಬೈಕಂಪಾಡಿ ಎಪಿಎಂಸಿಗೆ ತಾತ್ಕಾಲಿಕ ಸ್ಥಳಾಂತರ ಮಾಡಲು ಆದೇಶ ನೀಡಿದ್ದು, ಅದನ್ನು ಅವರು ಪಾಲಿಸಬೇಕಾಗಿದೆ. ಗುಂಪು ಸೇರುವುದನ್ನು ತಪ್ಪಿಸಲು ಈ ಸ್ಥಳಾಂತರ ಕ್ರಮ ಕೈಗೊಳ್ಳಲಾಗಿದೆ. ನಗರದಲ್ಲಿ ಎಲ್ಲಿ ಅವಕಾಶ ನೀಡಿದರೂ ಗುಂಪು ಸೇರುವ ಸಾಧ್ಯತೆ ಇದೆ.

    ಸಿಂಧೂ ಬಿ.ರೂಪೇಶ್ ಜಿಲ್ಲಾಧಿಕಾರಿ ದಕ್ಷಿಣ ಕನ್ನಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts