More

    ಕನ್ನಡದ ಖ್ಯಾತ ಕಾದಂಬರಿಕಾರ, ನಾಟಕಕಾರ ಚಂದ್ರಕಾಂತ ಕುಸನೂರ ನಿಧನ

    ಬೆಳಗಾವಿ: ಕನ್ನಡದ ಖ್ಯಾತ ಕಾದಂಬರಿಕಾರ ಚಂದ್ರಕಾಂತ ಕುಸನೂರ ಅವರು ಶನಿವಾರ ರಾತ್ರಿ ಇಲ್ಲಿ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಪತ್ನಿ, ನಾಲ್ವರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದಾರೆ.

    ಚಂದ್ರಕಾಂತ ಕುಸನೂರ ಅವರು ಕನ್ನಡದ ಖ್ಯಾತ ಸಾಹಿತಿ ಹಾಗೂ ರಂಗಕರ್ಮಿ. 1931ರಲ್ಲಿ ಕಲಬುರಗಿ ಜಿಲ್ಲೆಯ ಕುಸನೂರಲ್ಲಿ ಜನಿಸಿದ್ದ ಅವರು ಎಂ.ಎ; ಬಿ.ಇಡಿ ಪದವಿಗಳನ್ನು ಪಡೆದು ಕಲಬುರಗಿ ಹಿಂದಿ ಶಿಕ್ಷಣ ತರಬೇತಿ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು.

    ರಂಗ ಮಾಧ್ಯಮ ಎಂಬ ನಾಟಕ ಸಂಸ್ಥೆ ಸ್ಥಾಪಿಸಿದ್ದರು. ಕನ್ನಡದಲ್ಲಿ ಹಲವು ನಾಟಕಗಳನ್ನು ರಚಿಸಿದ್ದರು. ಅವರಿಗೆ 1975ರಲ್ಲಿ ಯಾತನಾ ಶಿಬಿರ ಕಾದಂಬರಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಲಭಿಸಿತ್ತು. 1992ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಗೌರವ ಪ್ರಶಸ್ತಿ ನೀಡಲಾಗಿತ್ತು. 2006ರಲ್ಲಿ ನಾಡೋಜ ಪ್ರತಿಷ್ಠಾನದ ಅರವಿಂದ ಪ್ರಶಸ್ತಿಗೂ ಅವರು ಪಾತ್ರರಾಗಿದ್ದರು. 2013ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು.

    ಕಳೆದ ಹಲವು ದಶಕಗಳಿಂದ ಬೆಳಗಾವಿಯನ್ನು ತಮ್ಮ ಕರ್ಮಭೂಮಿಯನ್ನಾಗಿಸಿಕೊಂಡಿದ್ದರು. ಕಲೆ ಮತ್ತು ಸಾಹಿತ್ಯ ಎರಡರಲ್ಲೂ ಸಿದ್ಧಹಸ್ತರಾಗಿದ್ದರು. ಉರ್ದು, ಕನ್ನಡ, ಮರಾಠಿ, ಹಿಂದಿ ಮತ್ತು ಇಂಗ್ಲಿಷ್ ಹೀಗೆ ಪಂಚಭಾಷಾ ಪಂಡಿತರಾಗಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ ನಿವೃತ್ತರಾಗಿದ್ದರು. ಇಳಿವಯಸ್ಸಿನಲ್ಲೂ ಸಾಹಿತ್ಯ ಮತ್ತು ಸಾಮಾಜಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಅವರ ಕಲಿಕೆ ಉರ್ದು ಮಾಧ್ಯಮದಲ್ಲಿ ಆಗಿದ್ದರಿಂದ ಪರ್ಶಿಯನ್ ಲಿಪಿಯಲ್ಲಿಯೂ ಬರೆಯುತ್ತಿದ್ದರು. ಒಮ್ಮೆ ಕಾರ‌್ಯಕ್ರಮವೊಂದರಲ್ಲಿ ಸಿಕ್ಕಿದ್ದ ಡಾ. ದ.ರಾ. ಬೇಂದ್ರೆ ಅವರು ಕುಸನೂರರ ಪ್ರೌಢಿಮೆ ಕಂಡು, ನೀವೇಕೆ ಕನ್ನಡದಲ್ಲಿ ಬರೆಯಬಾರದು ಎಂದು ಹುರಿದುಂಬಿಸಿದ್ದರು. 1954ರಿಂದ ಕನ್ನಡದಲ್ಲಿ ಬರೆಯತೊಡಗಿದ ಕುಸನೂರರು ಕನ್ನಡಿಗರು ಹೆಮ್ಮೆ ಪಡುವಂತಹ ಸಾಹಿತಿಯಾಗಿ ಬೆಳೆದಿದ್ದರು.

    ಅವರ ಕೃತಿಗಳು:
    ನಾಟಕ – ಆನಿ ಬಂತಾನಿ, ರಿಹರ್ಸಲ್, ರತ್ತೋ ರತ್ತೋ ರಾಯನ ಮಗಳೇ, ದಿಂಡಿ, ವಿದೂಷಕ, ಹಳ್ಳಾ ಕೊಳ್ಳಾ ನೀರು; ಕಾವ್ಯ- ನಂದಿಕೋಲು; ಕಾದಂಬರಿ – ಮಾಲತಿ ಮತ್ತು ನಾನು, ಯಾತನಾ ಶಿಬಿರ, ಗೋಹರಜಾನ್, ಕೆರೂರು ನಾಮ, ಚರ್ಚ್ ಗೇಟ್; ಹಿಂದಿಗೆ ಅನುವಾದ – ಸಂಸ್ಕಾರ (ಮೂಲ: ಯು.ಆರ್. ಅನಂತಮೂರ್ತಿ), ಕಾಡು (ಮೂಲ: ಶ್ರೀಕೃಷ್ಣ ಆಲನಹಳ್ಳಿ).

    ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ವಾಪಸ್ ಕಳಿಸಿದರೆ ಹುಷಾರ್! ಆಸ್ಪತ್ರೆಗಳಿಗೆ ಕೇಂದ್ರ ಸರ್ಕಾರದ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts