More

    ಪಟ್ಟಣದ ಅಭಿವೃದ್ಧಿಗೆ ಪೂರಕ ಬಜೆಟ್ ತಯಾರಿಸಿ

    ಯಳಂದೂರು: ಯಳಂದೂರು ಚಿಕ್ಕ ಪಟ್ಟಣವಾಗಿದ್ದು, ಇಲ್ಲಿನ ಪಟ್ಟಣ ಪಂಚಾಯಿತಿಯನ್ನು ಮಾದರಿಯಾಗಿಸುವ ನಿಟ್ಟಿನಲ್ಲಿ ಅಭಿವೃದ್ಧಿಗೆ ಪೂರಕವಾದ ಬಜೆಟ್ ತಯಾರಿಸಲು ಕ್ರಮ ವಹಿಸಬೇಕು ಎಂದು ನಾಗರಿಕರು ಆಗ್ರಹಿಸಿದರು.


    ಬಜೆಟ್ ತಯಾರಿಸುವ ಕುರಿತು ಪಟ್ಟಣ ಪಂಚಾಯಿತಿಯಲ್ಲಿ ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರು, ಸಂಘ ಸಂಸ್ಥೆಗಳ ಪ್ರತಿನಿಗಳು ಹಾಗೂ ಸಾರ್ವಜನಿಕರು ಈ ಬಗ್ಗೆ ಮಾಹಿತಿ ನೀಡಿದರು. ಪಟ್ಟಣದಲ್ಲಿ ಒಳಚರಂಡಿ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಹೈಮಾಸ್ಟ್ ದೀಪಗಳು ಕೆಟ್ಟಿವೆ. ಈ ಬಗ್ಗೆ ಕ್ರಮ ವಹಿಸಬೇಕು. ರಾಷ್ಟ್ರೀಯ ಹೆದ್ದಾರಿ 209ರ ರಸ್ತೆಯ ಪೆಟ್ರೋಲ್ ಬಂಕ್‌ನಿಂದ ನಾಡಮೇಗಲಮ್ಮ ದೇಗುಲದವರೆಗಿನ ರಸ್ತೆಯ ತನಕ ವಿದ್ಯುತ್ ದೀಪಗಳನ್ನು ಅಳವಡಿಸಬೇಕು. ಪಾರ್ಕಿಂಗ್ ಸಮಸ್ಯೆ ಹೆಚ್ಚಾಗಿದ್ದು, ಅಡ್ಡಾದಿಡ್ಡಿ ವಾಹನ ನಿಲುಗಡೆಯಾಗುತ್ತಿದೆ. ಇದಕ್ಕೆ ಸೂಕ್ತ ಸ್ಥಳವನ್ನು ನಿಗದಿ ಮಾಡಬೇಕು. ಪಟ್ಟಣ ಪಂಚಾಯಿತಿಯ ಹಳೆಯ ಕಟ್ಟಡ ಪಾಳು ಬಿದ್ದಿದ್ದು ಇದನ್ನು ದುರಸ್ತಿಗೊಳಿಸಿ ಇದರ ಸದ್ಬಳಕೆ ಮಾಡಿಕೊಳ್ಳುವುದೂ ಸೇರಿದಂತೆ ಅನೇಕ ವಿಷಯಗಳು ಚರ್ಚೆಯಾದವು.


    ಈ ಬಗ್ಗೆ ಪಟ್ಟಣ ಪಂಚಾಯಿತಿ ನೂತನ ಮುಖ್ಯಾಕಾರಿ ಮಹೇಶ್‌ಕುಮಾರ್ ಮಾತನಾಡಿ, ಹೈಮಾಸ್ಟ್ ದೀಪಗಳ ದುರಸ್ತಿಗೆ ಈಗಾಗಲೇ ಕ್ರಮವನ್ನು ವಹಿಸಲಾಗಿದೆ. ಒಳಚರಂಡಿ ನಿರ್ಮಾಣದ ಬಗ್ಗೆ ಸರ್ವೇ ಕಾರ್ಯ ನಡೆಯುತ್ತಿದ್ದು, ಸರ್ಕಾರದ ಮಟ್ಟದಲ್ಲಿ ಈ ಕೆಲಸವಾಗಬೇಕಿದೆ. ರಾಷ್ಟ್ರೀಯ ಹೆದ್ದಾರಿ 209ಕ್ಕೆ ವಿದ್ಯುತ್ ದೀಪಗಳನ್ನು ಅಳವಡಿಸುವ ಕುರಿತು ಟೆಂಡರ್ ಪ್ರಕ್ರಿಯೆಯನ್ನು ಜಿಲ್ಲಾಡಳಿದ ಮಾಡಲಿದ್ದು, ಆದಷ್ಟು ಬೇಗ ಈ ಕೆಲಸಗಳು ಮುಗಿಯಲಿದೆ ಎಂದರು.
    ಹಳೆಯ ಪಂಚಾಯಿತಿ ಕಚೇರಿ ದುರಸ್ತಿಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಜತೆಗೆ ಸಾರ್ವಜನಿಕರ ಕೊಂದುಕೊರತೆಗೆ ಕೂಡಲೇ ಪಂಚಾಯಿತಿ ನೌಕರರು ಸೂಕ್ತ ಸ್ಪಂದನೆ ನೀಡಬೇಕು, ಪಟ್ಟಣದ ಅಭಿವೃದ್ಧಿಗೆ ಅನುಕೂಲವಾಗುವಂತೆ, ಇಲ್ಲಿಗೆ ಹೆಚ್ಚಿನ ಆದಾಯ ಬರುವ ನಿಟ್ಟಿನಲ್ಲಿ ಬಜೆಟ್ ರೂಪಿಸಲಾಗುವುದು ಎಂದು ಭರವಸೆ ನೀಡಿದರು.

    ಪಪಂ ಅಧ್ಯಕ್ಷೆ ಪ್ರಭಾವತಿ ರಾಜಶೇಖರ್, ಉಪಾಧ್ಯಕ್ಷೆ ಲಕ್ಷ್ಮೀಮಲ್ಲು, ಸದಸ್ಯರಾದ ಮಹೇಶ್, ವೈ.ಜಿ.ರಂಗನಾಥ, ಮಹದೇವನಾಯಕ, ಸವಿತಾಬಸವರಾಜು, ಕೆ.ಮಲ್ಲಯ್ಯ, ಮಂಜು, ಶಾಂತಮ್ಮ ನಿಂಗರಾಜು, ಸುಶೀಲಾ ಪ್ರಕಾಶ್ ನಾಮನಿರ್ದೇಶಿತ ಸದಸ್ಯರಾದ ಮಹೇಶ್, ರಘು, ನಿಂಗರಾಜು ಜೆಇ ನಾಗೇಂದ್ರ, ರೇಖಾ, ಲಕ್ಷ್ಮಿ, ಜಯಲಕ್ಷ್ಮೀ ಸೇರಿದಂತೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts