More

    ನನ್ನ ಚಿಂತನೆಗಳಲ್ಲಿ ಗಿಮಿಕ್ ಇಲ್ಲ

    ಚಾಮರಾಜನಗರ: ಸಣ್ಣಪುಟ್ಟ ವೈಮನಸ್ಸುಗಳನ್ನು ಮರೆತು ಅಭಿವೃದ್ಧಿ ಶಕೆಯನ್ನು ಆರಂಭಿಸೋಣ. ನನ್ನ ಚಿಂತನೆಗಳಲ್ಲಿ ರಾಜಕೀಯ ಗಿಮಿಕ್ ಇಲ್ಲ ಎಂದು ವಸತಿ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು.


    ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಮಂಗಳವಾರ ಆಯೋಜಿಸಿದ್ದ ರೈತ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಾಲೂಕಿನ ಆನೆಮಡುವಿನ ಕೆರೆ ನೀರು ಒದಗಿಸಲು ಕ್ರಮಕೈಗೊಂಡಿದ್ದೇನೆ. ನನ್ನ ಚಿಂತನೆಗಳು ಜಿಲ್ಲೆಯ ಅಭಿವೃದ್ಧಿಗಾಗಿಯೇ ಹೊರತು ರಾಜಕೀಯ ಗಿಮಿಕ್ ಅಲ್ಲ. ತಾಲೂಕಿನಂತಿರುವ ಚಾಮರಾಜನಗರವನ್ನು ಅಭಿವೃದ್ಧಿ ಮಾಡಬೇಕಿದೆ. ಈ ಸಲ ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲೂ ಬಿಜೆಪಿ ಬರಲಿದ್ದು, ಈ ಸಂದೇಶ ರಾಜ್ಯಕ್ಕೆ ತಲುಪಬೇಕಿದೆ ಎಂದರು.


    ರೈತರನ್ನು ಉದ್ಯಮಿಗಳನ್ನಾಗಿಸಬೇಕೆಂಬುದು ಪ್ರಧಾನಮಂತ್ರಿ ನರೇಂದ್ರಮೋದಿ ಆಶಯ. ಭಾಗಶಃ ಅರಣ್ಯ ಪ್ರದೇಶದಿಂದ ಕೂಡಿರುವ ಜಿಲ್ಲೆ ಚಾಮರಾಜನಗರ. ಹಾಗಾಗಿ ಜಮೀನು ದ್ವಿಗುಣ ಮಾಡಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಸರ್ಕಾರದಲ್ಲಿ ನೀರಾವರಿ ಸಚಿವರಾಗಿದ್ದರು. ಆ ಸಂದರ್ಭದಲ್ಲಿ ಜಿಲ್ಲೆಯ ಕೆರೆಗಳಿಗೆ ನದಿ ಮೂಲದಿಂದ ನೀರು ತುಂಬಿಸಿದರು. ಬಂಡೀಪುರಕ್ಕೆ ಮೋದಿ ಬಂದು ಹೋಗಿರುವುದು ಜಿಲ್ಲೆಯ ಅಭಿವೃದ್ಧಿಗೆ ಉತ್ತಮ ಕಾಲ ಎನಿಸಿದೆ. ರೈತರ ಕಲ್ಯಾಣಕ್ಕಾಗಿ 2023ರ ಚುನಾವಣೆ ಮಹತ್ವಪೂರ್ಣವಾಗಿದೆ ಎಂದು ತಿಳಿಸಿದರು.


    ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಎಲ್ಲ ಉದ್ಯಮಗಳೂ ಬಂದ್ ಆಗಿದ್ದವು. ಆದರೆ ಕೃಷಿ ಕಾಯಕ ಮಾತ್ರ ಮುಂದುವರಿಯಿತು. ಪ್ರಧಾನಮಂತ್ರಿ ನರೇಂದ್ರಮೋದಿ ರೈತರ ಪರವಾಗಿ ಚಿಂತಿಸುತ್ತಾರೆ. ರೈತರ ಮಕ್ಕಳಿಗೆ ಹೆಣ್ಣು ಸಿಗುವುದಿಲ್ಲ ಎನ್ನುವುದು ಕೇಳುವುದಕ್ಕೆ ಹಾಸ್ಯ ಎನಿಸಿದರೂ ಗಂಭೀರ ವಿಚಾರ. ರೈತರ ಆದಾಯ ದ್ವಿಗುಣಗೊಳಿಸುವುದು ಪಿಎಂ ಮೋದಿ ಚಿಂತನೆಯಾಗಿದೆ. ಈ ಹಿನ್ನೆಲೆಯಲ್ಲಿ ತನ್ನ ಮೊದಲ ಪ್ರಯತ್ನದಲ್ಲಿ ದಲ್ಲಾಳಿಗಳ ಪಾಲಾಗುತ್ತಿದ್ದ ಹಣ ನೇರವಾಗಿ ರೈತರ ಅಕೌಂಟ್‌ಗೆ ಹೋಗುತ್ತಿದೆ ಎಂದು ಹೇಳಿದರು.


    ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ಕಾರ್ಯಕಾರಿಣಿ ಸದಸ್ಯ ಎಚ್.ಎಂ.ಬಸವಣ್ಣ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್, ಕಾಡಾ ಅಧ್ಯಕ್ಷ ನಿ.ನಿಜಗುಣರಾಜು, ಕೇಂದ್ರ ಪರಿಹಾರ ಸಮಿತಿ ಮಾಜಿ ಎಂ.ರಾಮಚಂದ್ರ, ಎಪಿಎಂಸಿ ಅಧ್ಯಕ್ಷ ಮನೋನ್ ಪಟೇಲ್, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪ್ರೊ.ಮಲ್ಲಿಕಾರ್ಜುನಪ್ಪ, ನಗರಸಭೆ ಅಧ್ಯಕ್ಷೆ ಆಶಾ ನಟರಾಜು, ಚುನಾವಣೆ ಉಸ್ತುವಾರಿ ಎಂ.ಶಿವಣ್ಣ(ಕೋಟೆ), ಜಿಲ್ಲಾಧ್ಯಕ್ಷ ನಾರಾಯಣಪ್ರಸಾದ್, ಪ್ರಧಾನ ಕಾರ್ಯದರ್ಶಿ ನಾಗಶ್ರೀ ಪ್ರತಾಪ್, ಜಿಪಂ ಮಾಜಿ ಸದಸ್ಯ ಸಿ.ಎನ್.ಬಾಲರಾಜು, ಮಾಜಿ ಜಿಲ್ಲಾಧ್ಯಕ್ಷ ಆರ್.ಸುಂದರ್, ಜಿಲ್ಲಾ ಕೋರ್ ಕಮಿಟಿ ಸದಸ್ಯ ಡಾ.ಬಾಬು ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts