More

    ಮತದಾನ ಜಾಗೃತಿ ಜಾಥಾ

    ಗುಂಡ್ಲುಪೇಟೆ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪುರಸಭೆ ಹಾಗೂ ತಾಲೂಕು ಸ್ವೀಪ್ ಸಮಿತಿಯಿಂದ ಪಟ್ಟಣದ ನಾನಾ ಬಡಾವಣೆಗಳಲ್ಲಿ ಶನಿವಾರ ಮತದಾನ ಜಾಗೃತಿ ಜಾಥಾ ನಡೆಯಿತು.

    ಪುರಸಭೆ ಕಚೇರಿಯಿಂದ ಜಾಥಾ ಆರಂಭಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಕೆ.ಎಸ್.ನಾಗರತ್ನಮ್ಮ ಬಡಾವಣೆಯಲ್ಲಿ ಮತದಾನದ ಅರಿವು ಮೂಡಿಸಿದರು.

    ಪುರಸಭೆ ಮುಖ್ಯಾಧಿಕಾರಿ ವಸಂತಕುಮಾರಿ ಮಾತನಾಡಿ, ಯಾವುದೇ ಆಸೆ ಆಮಿಷಗಳಿಗೆ ಹಾಗೂ ಬೆದರಿಕೆಗಳಿಗೆ ಒಳಗಾಗದೆ ಪ್ರತಿಯೊಬ್ಬ ಮತದಾರ ಕೂಡ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕು. ಇದರಿಂದ ಮಾತ್ರ ಮುಂದಿನ ಪೀಳಿಗೆಗೆ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಮತದಾರರು ಕೂಡ ಯೋಚಿಸಿ ಮತ ಚಲಾಯಿಸಿ. ಮತದಾನದಿಂದ ದೂರ ಉಳಿಯುವುದು ಪ್ರಜಾಪ್ರಭತ್ವಕ್ಕೆ ನಾವು ಮಾಡಿದ ದ್ರೋಹವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಸಂವಿಧಾನ ಬದ್ಧವಾದ ಹಕ್ಕು ಚಲಾಯಿಸಬೇಕು. ಕಳೆದ ಚುನಾವಣೆಯಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ಉತ್ತಮ ಮತದಾನವಾಗಿದ್ದು, ಈ ಬಾರಿಯೂ ಸಹ ಹೆಚ್ಚಿನ ಜನರು ತಮ್ಮ ಹಕ್ಕು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ನೀಡಿದರು.

    ಸಾರ್ವಜನಿಕರಿಗೆ ಇದೇ ವೇಳೆ ಮತದಾನದ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಜಾಥಾದಲ್ಲಿ ಪುರಸಭೆಯ ಪರಿಸರ ಅಧಿಕಾರಿ ಗೋಪಿ, ಇಂಜಿನಿಯರ್ ಮಹೇಶ್ ಆರಾಧ್ಯ, ಬಿಲ್ ಕಲೆಕ್ಟರ್‌ಗಳಾದ ಪುಟ್ಟಸ್ವಾಮಿ, ಶಿವಕುಮಾರ್, ರವಿಕುಮಾರ್, ಪೌರ ಕಾರ್ಮಿಕರು, ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts