More

    ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಗಂಭೀರ ಕ್ರಮ

    ಚಾಮರಾಜನಗರ: ಎಸ್ಸಿ, ಎಸ್ಟಿ ಅನುದಾನದಡಿ ನಿರ್ವಹಿಸಬೇಕಿರುವ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ಅನುಷ್ಠಾನ ಮಾಡಬೇಕು. ಅನುದಾನ ವಿನಿಯೋಗದಲ್ಲಿ ಉಲ್ಲಂಘನೆ, ಅಕ್ರಮ, ಲೋಪ ಎಸಗುವ ಅಧಿಕಾರಿಗಳ ವಿರುದ್ಧ ಗಂಭೀರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಎಚ್ಚರಿಸಿದರು.


    ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕುಂದುಕೊರತೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


    ಪರಿಶಿಷ್ಟರ ಭೂಮಿ ಮಂಜೂರು, ಸಾಗುವಳಿ ಪತ್ರ, ಇನ್ನಿತರ ಭೂ ಹಕ್ಕುಗಳ ಕುರಿತ ಮನವಿ ಆಲಿಸಿದ ಜಿಲ್ಲಾಧಿಕಾರಿ, ಪ್ರತಿ ಪ್ರಕರಣಗಳ ಬಗ್ಗೆಯೂ ಅಧಿಕಾರಿಗಳು ಪರಿಶೀಲಿಸಬೇಕು. ಭೂ ಒಡೆತನ ಯೋಜನೆಯಡಿ ಲಾನುಭವಿಗಳಿಗೆ ಭೂಮಿ ಖರೀದಿಸಿ ನೀಡುವ ಪ್ರಕ್ರಿಯೆಯನ್ನು ವಿಳಂಬ ಮಾಡದೇ ಕಾಲಮಿತಿಯೊಳಗೆ ಸೌಲಭ್ಯ ತಲುಪಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.


    ಜೀತ ವಿಮುಕ್ತರಿಗೆ ನೀಡಬೇಕಿರುವ ಗುರುತಿನ ಚೀಟಿ, ಬಿಡುಗಡೆ ಪತ್ರ, ಒದಗಿಸಬೇಕಿರುವ ಪರಿಹಾರ, ಕಲ್ಪಿಸಬೇಕಿರುವ ಸೌಲಭ್ಯಗಳ ಬಗ್ಗೆ ಶೀಘ್ರವೇ ಗಮನ ಹರಿಸಬೇಕು. ಉಪ ವಿಭಾಗಾಧಿಕಾರಿಗಳ ಸಭೆ ಕರೆದು ಜೀತ ವಿಮುಕ್ತರಿಗೆ ಸೌಕರ್ಯಗಳನ್ನು ಒದಗಿಸುವಲ್ಲಿ ಮುಂದಾಗಬೇಕು. ಮುಂದಿನ ಸಭೆಯ ವೇಳೆಗೆ ಅಧಿಕಾರಿಗಳು ಕೈಗೊಂಡ ಕ್ರಮಗಳ ಕುರಿತು ವರದಿ ನೀಡುವಂತೆ ಸೂಚನೆ ನೀಡಿದರು.

    ದೌರ್ಜನ್ಯಗಳ ವಿರುದ್ಧ ಕಠಿಣ ಕ್ರಮ: ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಲಾಗುತ್ತಿದೆ. ದೌರ್ಜನ್ಯ ದೂರುಗಳು ಸೇರಿದಂತೆ ಯಾವುದೇ ಸಮಸ್ಯೆಗಳಿದ್ದಲ್ಲಿ ನೇರವಾಗಿ ನನ್ನನ್ನು ಭೇಟಿ ಮಾಡಬಹುದು. ಜನರ ಸ್ಪಂದನೆಗೆ ನಾವು ಸದಾ ಸಿದ್ಧರಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್ ತಿಳಿಸಿದರು.


    ಸಭೆಯಲ್ಲಿ ಪರಿಶಿಷ್ಟ ಜಾತಿ, ವರ್ಗಗಳ ಗುತ್ತಿಗೆದಾರರಿಗೆ ಕಲ್ಪಿಸಬೇಕಾದ ಅನುಕೂಲ, ಆರೋಗ್ಯ ಕೇಂದ್ರಗಳ ಪರಿಸ್ಥಿತಿ, ನಗರಸಭೆ ವತಿಯಿಂದ ಮೂಲ ಸೌಕರ್ಯ, ಪರಿಶಿಷ್ಟರ ಮೇಲೆ ಹೂಡಲಾಗುತ್ತಿರುವ ದೂರು ಪ್ರಕರಣಗಳು ಸೇರಿದಂತೆ ಅನೇಕ ವಿಷಯಗಳ ಕುರಿತು ಚರ್ಚಿಸಲಾಯಿತು.

    ಸಿಇಒ ಹರ್ಷಲ್ ಬೋಯರ್ ನಾರಾಯಣರಾವ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೊನ್ನೇಗೌಡ, ಮುಖಂಡರಾದ ಎಂ. ನಂಜುಂಡಸ್ವಾಮಿ, ಸಿ.ಎಂ.ಕೃಷ್ಣಮೂರ್ತಿ, ವೆಂಕಟರಮಣ ಪಾಪು, ಅರಕಲವಾಡಿ ನಾಗೇಂದ್ರ, ಕೆ.ಎಂ.ನಾಗರಾಜು, ಶ್ರೀಕಂಠ, ಸಿ.ಎಂ.ಶಿವಣ್ಣ, ಆಲೂರು ನಾಗೇಂದ್ರ, ರವಿಕುಮಾರ್, ಸಿ.ಕೆ.ಮಂಜುನಾಥ್, ಜಿ.ಬಂಗಾರು, ಅಂಬರೀಷ್, ಸುರೇಶ್‌ನಾಯಕ, ಮುತ್ತಯ್ಯ, ಪಿ.ಸಂಘಸೇನಾ, ಕಾಂತರಾಜು, ಪರ್ವತರಾಜು, ಬ್ಯಾಡಮೂಡ್ಲು ಬಸವಣ್ಣ, ಚನ್ನಬಸವಯ್ಯ, ಅಣಗಳ್ಳಿ ಬಸವರಾಜು, ದೊಡ್ಡಿಂದುವಾಡಿ ಸಿದ್ದರಾಜು, ಕೆ.ಸಿದ್ದಯ್ಯ, ರಾಜಶೇಖರಮೂರ್ತಿ ಹಾಜರಿದ್ದರು.


    ಜಿಲ್ಲೆಯಲ್ಲಿ ಅಗತ್ಯವಿರುವ ಸ್ಮಶಾನಗಳಿಗೆ ಭೂಮಿ ಮಂಜೂರು, ಈಗಾಗಲೇ ಇರುವ ಸ್ಮಶಾನಗಳ ಅಭಿವೃದ್ಧಿ ಸಂಬಂಧ ಸಮಗ್ರ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಅಗತ್ಯ ಕ್ರಮ ವಹಿಸಲಾಗುವುದು.
    ಡಾ.ಎಂ.ಆರ್.ರವಿ, ಜಿಲ್ಲಾಧಿಕಾರಿ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts