More

    ಪ್ರಯಾಣಿಕರ ರಕ್ಷಣೆಗೆ ನಿಂತ ಕೆಎಸ್ಸಾರ್ಟಿಸಿ

    ಚಾಮರಾಜನಗರ: ಬಸ್‌ಗಳ ಮೂಲಕ ಜಿಲ್ಲೆಯಲ್ಲಿ ಕರೊನಾ ವೈರಸ್ ಸೋಂಕು ಹರಡದಂತೆ ಮುಂಜಾಗ್ರತೆ ವಹಿಸಿರುವ ಕೆಎಸ್‌ಆರ್‌ಟಿಸಿ ನಿತ್ಯವೂ ಡೆಟಾಲ್‌ನಿಂದ ಬಸ್‌ಗಳನ್ನು ಸ್ವಚ್ಛಗೊಳಿಸುತ್ತಿದ್ದು, ವಿಭಾಗೀಯ ಕಾರ್ಯಾಗಾರದ ಮಹಿಳಾ ಸಿಬ್ಬಂದಿ ಮಾಸ್ಕ್ ತಯಾರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

    ರಾಜ್ಯದಲ್ಲೂ ಕರೊನಾ ಮಹಾಮಾರಿ ವ್ಯಾಪಿಸುತ್ತಿರುವ ಹಿನ್ನೆಲೆ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಿರುವ ಕೆಎಸ್‌ಆರ್‌ಟಿಸಿ, ಡಿಪೋನಲ್ಲಿ ಎಲ್ಲ ಬಸ್‌ಗಳ ಒಳಭಾಗಗಳನ್ನು ಡೆಟಾಲ್ ಹಾಕಿ ಸ್ವಚ್ಛಗೊಳಿಸಲಾಗುತ್ತಿದೆ. ಬಸ್‌ನ ಕಂಬಿಗಳು, ಸೀಟಿನ ಹಿಡಿಕೆ, ಕಿಟಿಕಿಯ ಗಾಜುಗಳನ್ನು ಡೆಟಾಲ್‌ನಿಂದ ತೊಳೆಯಾಗುತ್ತಿದೆ. ಜಿಲ್ಲೆಯಲ್ಲಿ ನಾಲ್ಕು ವಿಭಾಗಗಳಿದ್ದು, ಒಟ್ಟು 557 ಬಸ್‌ಗಳಿವೆ. ಕರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯವನ್ನು ಸ್ತಬ್ಧಗೊಳಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ ಬೆನ್ನಲ್ಲೇ ಕೆಎಸ್‌ಆರ್‌ಟಿಸಿಗೆ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿ ಆದಾಯವೂ ಖೋತಾ ಆಗಿದೆ. ಪರಿಣಾಮ ಹಲವು ಬಸ್‌ಗಳನ್ನು ಡಿಪೋನಲ್ಲೇ ನಿಲ್ಲಿಸಲಾಗಿದೆ. ಉಳಿದಂತೆ ಸಂಚರಿಸುತ್ತಿರುವ ಬಸ್‌ಗಳನ್ನು ಡೆಟಾಲ್‌ನಿಂದ ಸ್ವಚ್ಛಗೊಳಿಸಲಾಗುತ್ತಿದೆ.

    ನೌಕರರಿಗಾಗಿ ಮಾಸ್ಕ್ ತಯಾರಿಕೆ: ನಗರದಲ್ಲಿರುವ ಕೆಎಸ್‌ಆರ್‌ಟಿಸಿ ವಿಭಾಗೀಯ ಕಾರ್ಯಾಗಾರದಲ್ಲಿ (ತಾಂತ್ರಿಕ ವರ್ಗ) ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿ ಮಾಸ್ಕ್ ತಯಾರಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಕೊರನಾ ವೈರಸ್ ಹರಡಿರಲು ಮುಂಜಾಗ್ರತೆ ವಹಿಸುವ ಸಲುವಾಗಿ ಮಾಸ್ಕ್ ಧರಿಸಬೇಕೆನ್ನುವ ಸಲಹೆಗಳು ಎಲ್ಲೆಡೆ ದಟ್ಟವಾಗುತ್ತಿದ್ದಂತೆ ಎದುರಾದ ಮಾಸ್ಕ್ ಕೊರತೆಯನ್ನು ನೀಗಿಸಲು ಕೆಎಸ್‌ಆರ್‌ಟಿಸಿ ಮಹಿಳಾ ಸಿಬ್ಬಂದಿ ತೀರ್ಮಾನಿಸಿದ್ದಾರೆ. ಬಸ್‌ಗಳ ಸೀಟುಗಳನ್ನು ಹೊಲೆಯುವ ನೌಕರರು ಇದೀಗ ಮಾಸ್ಕ್‌ಗಳ ತಯಾರಿಕೆಲ್ಲೂ ತೊಡಗಿದ್ದಾರೆ. ಒಂದು ದಿನಕ್ಕೆ 1 ಸಾವಿರ ಮಾಸ್ಕ್ ಸಿದ್ಧಪಡಿಸಲಾಗುತ್ತಿದೆ. ಇವುಗಳನ್ನು ಇತರ ಸಿಬ್ಬಂದಿಗೆ ನೀಡಲು ತೀರ್ಮಾನಿಸಲಾಗಿದೆ.

    ಕೆಎಸ್‌ಆರ್‌ಟಿಸಿ ನೌಕರರರಿಗೆ ನಮ್ಮ ಸಂಸ್ಥೆಯಲ್ಲಿ ಟೈಲರಿಂಗ್ ಕಲಿತಿರುವ ಮಹಿಳಾ ನೌಕರರಿಂದ ದಿನಕ್ಕೆ 1 ಸಾವಿರ ಮಾಸ್ಕ್‌ಗಳನ್ನು ವಿಭಾಗೀಯ ಕಾರ್ಯಾಗಾರದಲ್ಲಿ ತಯಾರಿಸಲಾಗುತ್ತಿದೆ. ಪ್ರತಿಯೊಬ್ಬರ ಆರೋಗ್ಯದ ದೃಷ್ಟಿಯಿಂದ ಇಂತಹ ಕೆಲಸಗಳನ್ನು ಮಾಡಲಾಗುತ್ತಿದೆ. ಮಹಿಳಾ ನೌಕರರರು ತೊಡಗಿರುವ ಮಾಸ್ಕ್ ತಯಾರಿಕೆಗೆ ಪುರುಷ ನೌಕಕರು ಸಹ ಕೈಜೊಡಿಸಿ ಕೆಲಸ ನಿರ್ವಹಿಸುತ್ತಿದ್ದಾರೆ.
    ಕೆ.ಎಚ್.ಶ್ರೀನಿವಾಸ್, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ, ಚಾಮರಾಜನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts