More

    ಮೂರನೇ ದಿನವೂ ಕಾರ್ಯಾಚರಣೆ ವಿಫಲ

    ಗುಂಡ್ಲುಪೇಟೆ: ತಾಲೂಕಿನ ಹಸಗೂಲಿ ಗ್ರಾಮದಲ್ಲಿ ತೆರೆದ ಬಾವಿಯೊಳಗೆ ಬಿದ್ದಿರುವ ಚಿರತೆ ಮೇಲೆತ್ತಲು ಅರಣ್ಯ ಇಲಾಖೆ ಮೂರನೇ ದಿನವೂ ಕಾರ್ಯಾಚರಣೆ ನಡೆಸಿದರೂ ಯಾವುದೇ ಉಪಯೋಗವಾಗಿಲ್ಲ.
    ಜೂ.16ರಂದು ಗ್ರಾಮದ ಲಿಂಗರಾಜಪ್ಪ ಎಂಬುವರಿಗೆ ಸೇರಿದ ಜಮೀನಿನ ತೆರೆದ ಬಾವಿಯೊಳಗೆ ಬಿದ್ದಿದ್ದ ಚಿರತೆಯನ್ನು ಹೊರತೆಗೆಯಲು ಅರಣ್ಯ ಇಲಾಖೆ ಮೂರು ದಿನಗಳಿಂದಲೂ ಕಾರ್ಯಾಚರಣೆ ನಡೆಸುತ್ತಿದೆ. ಆದರೆ ಇನ್ನೂ ಚಿರತೆ ಮೇಲೆತ್ತಲು ಸಾಧ್ಯವಾಗಿಲ್ಲ. ಚಿರತೆ ಪೊಟರೆಯೊಳಗೆ ಸೇರಿಕೊಂಡಿರುವ ಕಾರಣ ಹಾಗೂ ಬಾವಿಗೆ ಅಳವಡಿಸಿರುವ ಸಿಮೆಂಟ್ ರಿಂಗ್‌ಗಳನ್ನು ಹತ್ತಿ ಮೇಲೇರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಎರಡನೇ ದಿನ ಅರಿವಳಿಕೆ ಮದ್ದು ನೀಡಲು ಪ್ರಯತ್ನಿಸಿದರೂ ಉಪಯೋಗವಾಗಿಲ್ಲ. ಬಾವಿಯೊಳಗೆ ಬೋನನ್ನು ಇರಿಸಿದ್ದರೂ ಚಿರತೆ ಪತ್ತೆಯಾಗಿಲ್ಲ.
    ಮೂರನೇ ದಿನವಾದ ಗುರುವಾರ ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಟಿ.ಬಾಲಚಂದ್ರ ನೇತೃತ್ವದಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿತು. ಬಾವಿಗೆ ಅಳವಡಿಸಿದ ಸಿಮೆಂಟ್ ರಿಂಗ್ ಕಟ್ ಮಾಡಿ ಪೊಟರೆಗೆ ನೀರು ಹಾಯಿಸಿ ಚಿರತೆ ಹೊರಬರುವಂತೆ ಮಾಡಿದರೂ ಪ್ರಯೋಜನವಾಗಲಿಲ್ಲ. ಸಂಜೆಯಾದ ಹಿನ್ನೆಲೆಯಲ್ಲಿ ಬಾವಿಗೆ ಬಲೆಯನ್ನು ಮುಚ್ಚಿ ಕಾರ್ಯಾಚರಣೆಯನ್ನು ಶುಕ್ರವಾರಕ್ಕೆ ಮುಂದೂಡಲಾಯಿತು.
    ‘ಬಹುಷಃ ಮೊದಲ ದಿನ ರಾತ್ರಿಯೇ ಚಿರತೆ ಬಾವಿಗೆ ಮುಚ್ಚಿದ್ದ ಬಲೆಯನ್ನೇರಿ ಪರಾರಿಯಾಗಿರಬಹುದು. ಇಲ್ಲವೇ ಸುಸ್ತಾಗಿ ಪೊಟರೆಯಲ್ಲಿ ಮಲಗಿರಬಹುದು. ಚಿರತೆ ಚಲನವಲನ ಪತ್ತೆಗೆ ಕ್ಯಾಮೆರಾ ಅಳವಡಿಸಲಾಗಿದೆ’ ಎಂದು ಬಫರ್ ವಲಯದ ಆರ್ ಎಫ್ ಒ ಡಾ.ಲೋಕೇಶ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts