More

    ಈಶ್ವರಿ ಸಂಸ್ಥೆಯಿಂದ ನಿರಂತರ ಕಲಾ ಸೇವೆ

    ಚಾಮರಾಜನಗರ: ಸುಮಾರು 20 ವರ್ಷಗಳ ಹಿಂದೆ ಸ್ಥಾಪನೆಯಾಗಿರುವ ಸಂಗೀತ ಶಾಲೆಯೊಂದು ನಿರಂತರವಾಗಿ ಕಲಾ ಸೇವೆ ಮಾಡಿಕೊಂಡು ಬರುತ್ತಿದ್ದು, ಸಾವಿರಾರು ಗಾಯಕರು ಮತ್ತು ಸಂಗೀತಗಾರರನ್ನು ಹುಟ್ಟು ಹಾಕುತ್ತಿದೆ.

    ನಗರದ ಪರಿಸರ ಪ್ರೇಮಿ, ಸಾಲುಮರದ ವೆಂಕಟೇಶ್ ಎಂದೇ ಜನಪ್ರಿಯವಾಗಿರುವ ಸಿ.ಎಂ.ವೆಂಕಟೇಶ್ ಅವರು ಕಲಾಕ್ಷೇತ್ರದಲ್ಲಿ ಅಪಾರವಾದ ನಂಬಿಕೆಯನ್ನು ಇಟ್ಟುಕೊಂಡು 2005 ರಲ್ಲಿ ಈಶ್ವರಿ ಸಂಗೀತ ಶಾಲೆಯನ್ನು ಪ್ರಾರಂಭಿಸಿದರು. ಈ ವರೆಗೂ ಸಾವಿರಾರು ವಿದ್ಯಾರ್ಥಿಗಳು ಈಶ್ವರಿ ಸಂಗೀತ ಶಾಲೆಯಲ್ಲಿ ತರಬೇತಿ ಪಡೆದು ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡುತ್ತಿದ್ದಾರೆ.

    ಈ ಹಿಂದೆ ತಬಲಾ ತರಬೇತಿಯನ್ನು ರಘುನಾಥ್, ಕೀಬೋರ್ಡ್ ತರಬೇತಿಯನ್ನು ಪುರುಷೋತ್ತಮ್, ಗಿಟಾರ್ ತರಬೇತಿಯನ್ನು ಗಣೇಶ್ ಪ್ರಸಾದ್, ಸುಗಮ ಸಂಗೀತ ತರಬೇತಿಯನ್ನು ಖ್ಯಾತ ಗಾಯಕ ಆರ್.ಮಹೇಂದ್ರ ನೀಡುತ್ತಿದ್ದರು. ಅದಲ್ಲದೇ ಹಾರ್ಮೋನಿಯಂ, ವೀಣೆ, ಕೊಳಲು ಹಾಗೂ ಇನ್ನಿತರೆ ಸಂಗೀತ ಪರಿಕರಗಳ ತರಬೇತಿಯನ್ನು ನೀಡಲಾಗುತ್ತಿತ್ತು. ಪ್ರಸ್ತುತ ಶಾಲೆಯಲ್ಲಿ 20 ಮಕ್ಕಳು ಸಂಗೀತ ತರಬೇತಿ ಪಡೆಯುತ್ತಿದ್ದು, ಹಾರ್ಮೋನಿಯಂ, ಕೀಬೋರ್ಡ್ ಹಾಗೂ ಸುಗಮ ಸಂಗೀತ ತರಬೇತಿ ನೀಡಲಾಗುತ್ತಿದೆ. ಪ್ರತಿ ಭಾನುವಾರ ಆರ್.ಮಹೇಂದ್ರ ಅವರು ಸುಗಮ ಸಂಗೀತ ತರಗತಿ ತೆಗೆದುಕೊಳ್ಳುತ್ತಿದ್ದಾರೆ. ಪ್ರತಿನಿತ್ಯವೂ ಸಂಗೀತಗಾರ ಏಕನಾಥ್ ಅವರು ಕೀಬೋರ್ಡ್ ಮತ್ತು ಹಾರ್ಮೋನಿಯಂ ತರಬೇತಿ ನೀಡುತ್ತಿದ್ದಾರೆ. ಈಶ್ವರಿ ಸಂಸ್ಥೆ ಮಕ್ಕಳಿಗೆ ಸಂಗೀತ ತರಬೇತಿಯನ್ನು ನೀಡುವುದರ ಜತೆಗೆ ಹಲವಾರು ಭಕ್ತಿಗೀತೆಗಳನ್ನು ಹೊರತಂದಿದೆ. ಈ ಶಾಲೆಯಲ್ಲಿ ತರಬೇತಿ ಪಡೆದ ಮಕ್ಕಳಿಗೆ ಧ್ವನಿಸುರುಳಿಗಳಲ್ಲಿ ಅವಕಾಶ ಮಾಡಿಕೊಟ್ಟಿದೆ. ಸಂಸ್ಥೆಯ ವತಿಯಿಂದ ವಿಶೇಷವಾಗಿ ಡಾ.ರಾಜ್‌ಕುಮಾರ್ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡು ಬಂದಿದ್ದಾರೆ. ಅದಲ್ಲದೇ, ಅನೇಕ ಜನಪರವಾದ ಕೆಲಸಗಳನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದು, ಇಂದಿಗೂ ಪ್ರಾಮಾಣಿಕವಾಗಿ ಕಲಾಕೈಂಕರ್ಯ ಮಾಡುತ್ತಾ ಬರುತ್ತಿದ್ದಾರೆ.

    ಸಂಸ್ಥೆಯಿಂದ ಹಲವು ಧ್ವನಿಮುದ್ರಿಕೆ:
    ಈಶ್ವರಿ ಸಂಸ್ಥೆ ವತಿಯಿಂದ 2008ರಲ್ಲಿ ‘ಕರುಣಿಸು ಬಾರೋ ಮಾದೇವ’ ಭಕ್ತಿ ಗೀತೆಗಳು ಧ್ವನಿ ಮುದ್ರಿಕೆ ಹೊರ ತಂದಿದ್ದಾರೆ. ಈ ಧ್ವನಿ ಮುದ್ರಿಕೆಯಲ್ಲಿ ಗಾನ ಗಂಧರ್ವ ಎಸ್.ಪಿ.ಬಾಲಸುಬ್ರಮ್ಮಣ್ಯಂ ಧ್ವನಿಯಾಗಿದ್ದಾರೆ. ಅದಲ್ಲದೇ ಪುರುಷೋತ್ತಮ್ ಮತ್ತು ಇನ್ನಿತರ ಹೊಸ ಗಾಯಕರಿಗೆ ಅವಕಾಶ ನೀಡಲಾಗಿದೆ. 2011ರಲ್ಲಿ ‘ಕರುಣಾ ಸಾಗರ ಮಾದೇವ’ ಧ್ವನಿ ಸುರುಳಿ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಖ್ಯಾತ ಜಾನಪದ ಗಾಯಕ ಡಾ.ಮಳವಳ್ಳಿ ಮಹದೇವಸ್ವಾಮಿ ಧ್ವನಿಯಾಗಿದ್ದಾರೆ. 2017 ರಲ್ಲಿ ‘ರಾಜ ಋಷಿ ಭಗೀರಥ’ ಭಕ್ತಿಗೀತೆಗಳನ್ನು ಹೊರತಂದಿದ್ದಾರೆ. ಈ ಧ್ವನಿ ಸುರುಳಿಗೆ ಎಸ್.ಬಿ.ಬಾಲಸುಬ್ರಹ್ಮಣ್ಯಂ ಅಮೆರಿಕದಿಂದಲೇ ಧ್ವನಿ ನೀಡಿರುವುದು ವಿಶೇಷವಾಗಿದೆ. 2020 ರಲ್ಲಿ ‘ಕರುಣಾಮಯಿ ಮಾದೇಶ್ವರ’ ಧ್ವನಿ ಸುರುಳಿ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ರಾಜೇಶ್ ಕೃಷ್ಣನ್ ಹಾಡಿದ್ದಾರೆ. ಅವರಲ್ಲದೇ ಎಲ್ಲ ಧ್ವನಿಸುರುಳಿಗಳಲ್ಲೂ ಖ್ಯಾತ ಗಾಯಕರಾದ ಮಂಜುಳಾ ಗುರುರಾಜ್, ಬಿ.ಆರ್.ಛಾಯಾ ಇನ್ನಿತರರುಹಾಡಿದ್ದಾರೆ.

    ತರಬೇತಿ ಮಕ್ಕಳಿಗೆ ಹಲವು ಅವಕಾಶ
    ಈಶ್ವರಿ ಸಂಗೀತ ಶಾಲೆಯಲ್ಲಿ ತರಬೇತಿ ಪಡೆದಿರುವ ಹಲವು ಮಕ್ಕಳಿಗೆ ರೆಕಾರ್ಡಿಂಗ್‌ನಲ್ಲಿ ಹಾಡುವ ಅವಕಾಶವನ್ನು ಕಲ್ಪಿಸಲಾಗಿದೆ. ಯುವಗಾಯಕರಾದ ಗುಂಡ್ಲುಪೇಟೆ ಮೈತ್ರಿ, ಚರಣ್, ಜಸ್ವಂತ್ ಹಾಗೂ ಇನ್ನಿತರ ವಿದ್ಯಾರ್ಥಿಗಳು ಹಲವಾರು ಭಕ್ತಿ ಗೀತೆಗಳಿಗೆ ಧ್ವನಿಯಾಗಿದ್ದಾರೆ. ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಹಲವಾರು ಖಾಸಗಿ ವಾಹಿನಿಯ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಗಾಯಕರಾಗಿ ಹೊರಹೊಮ್ಮಿದ್ದಾರೆ. ಹಲವರು ಸ್ವಂತ ಸ್ಟುಡಿಯೋಗಳನ್ನು ತೆರೆದಿದ್ದಾರೆ. ಈ ಮೂಲಕ ಈಶ್ವರಿ ಸಂಸ್ಥೆ ಅನೇಕ ಪ್ರತಿಭೆಗಳನ್ನು ಇಂದಿಗೂ ಗುರುತಿಸಿ ಬೆಳೆಕಿಗೆ ತರುತ್ತಿದೆ. ಸಂಸ್ಥೆಯ ಅಧ್ಯಕ್ಷರಾದ ಸಿ.ಎಂ.ವೆಂಕಟೇಶ್ ಅವರ ದೂರದೃಷ್ಟಿ ಹಾಗೂ ಸಮಾಜಮುಖಿ ಚಿಂತನೆಗಳು ಇದಕ್ಕೆ ಸಹಕಾರಿಯಾಗಿದೆ.

    ಸಂಗೀತ ಶಾಲೆಗೆ ದಿಗ್ಗಜರ ಭೇಟಿ:
    ನಗರದ ಈಶ್ವರಿ ಸಂಗೀತ ಶಾಲೆಗೆ ಸಂಗೀತ ಕ್ಷೇತ್ರದ ಹಲವಾರು ದಿಗ್ಗಜರು ಚಿತ್ರರಂಗದವರು ಭೇಟಿ ನೀಡಿದ್ದಾರೆ. ಖ್ಯಾತ ಚಿತ್ರ ನಿರ್ದೇಶಕರಾದ ದೊರೆ-ಭಗವಾನ್, ಸಂಗೀತ ನಿರ್ದೇಶಕ ರಾಜನ್-ನಾಗೇಂದ್ರ, ಸುಗಮ ಸಂಗೀತ ಗಾಯಕ ರಾಜು ಅನಂತಸ್ವಾಮಿ, ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ಹಾಗೂ ಮನೋರಂಜನ್ ಪ್ರಭಾಕರ್ ಭೇಟಿ ನೀಡಿದ್ದಾರೆ. ವಿಶೇಷವಾಗಿ ರಾಜನ್-ನಾಗೇಂದ್ರ ಅವರಿಗೆ ಸಂಸ್ಥೆಯ ವತಿಯಿಂದ ಮೆಲೋಡಿ ಕಿಂಗ್ ಎಂಬ ಬಿರುದು ನೀಡಿ ಗೌರವಿಸಲಾಗಿದೆ. ಇವರಲ್ಲದೇ ಮತ್ತಷ್ಟು ಸಂಗೀತ ಕ್ಷೇತ್ರದ ಸಾಧಕರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಗಿದೆ.

    ಮುತ್ತುರಾಜ್ ಹೆಸರಿನಲ್ಲಿ ಪ್ರಶಸ್ತಿ:
    ವರನಟ ಡಾ.ರಾಜ್‌ಕುಮಾರ್ ಅವರ ಮೇಲೆ ವಿಶೇಷ ಅಭಿಮಾನವನ್ನು ಹೊಂದಿರುವ ಸಿ.ಎಂ.ವೆಂಕಟೇಶ್ ಅವರು ಮುತ್ತುರಾಜ್ ಹೆಸರಿನಲ್ಲಿ ಪ್ರತಿವರ್ಷವೂ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ. ಗಾಜನೂರಿನಲ್ಲಿ ಡಾ.ರಾಜ್ ಕುಮಾರ್ ಜನ್ಮದಿನ ಆಚರಿಸುವ ಮೂಲಕ ಇಂದಿಗೂ ಅದನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಇವರ ಕಾರ್ಯಕ್ರಮದಲ್ಲಿ ಡಾ.ಶಿವರಾಜ್ಕುಮಾರ್, ಪುನೀತ್ ರಾಜ್ಕುಮಾರ್ ಕೂಡ ಭಾಗವಹಿಸಿರುವುದು ವಿಶೇಷವಾಗಿದೆ. ಅಲ್ಲದೇ ಸಂಸ್ಥೆಯಿಂದ ನಿರಂತರವಾಗಿ ಗಿಡಗಳನ್ನು ನೆಡುವುದು, ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡುವುದು ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ವೆಂಕಟೇಶ್ ಕಲಾಸೇವೆಯಲ್ಲಿ ನಿರತರಾಗಿದ್ದಾರೆ.

    ಕಲಾಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡರೆ ಮನಸ್ಸಿಗೆ ಸಂತೋಷ ದೊರಕುತ್ತದೆ ಎಂಬುದನ್ನು ಕಂಡುಕೊಂಡಿದ್ದೇನೆ. ಈ ನಿಟ್ಟಿನಲ್ಲಿ ಇಂದಿಗೂ ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಂಡು ಬರಲಾಗುತ್ತಿದೆ. ಯಾವುದೇ ಲಾಭದ ಬಗ್ಗೆ ಯೋಚಿಸದೆ ಸಂಸ್ಥೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಅಭಿಲಾಷೆ ಇದೆ.
    ಸಿ.ಎಂ.ವೆಂಕಟೇಶ್, ಅಧ್ಯಕ್ಷ, ಈಶ್ವರಿ ಸಂಗೀತ ಸಂಸ್ಥೆ, ಚಾಮರಾಜನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts