More

    ಮಂಡ್ಯ ಜಿಲ್ಲೆಗೆ ಏನು ಕೊಡುಗೆ ನಿಮ್ಮದು?: ಮಾಜಿ ಸಿಎಂ ಎಚ್‌ಡಿಕೆಗೆ ಸಚಿವ ಚಲುವರಾಯಸ್ವಾಮಿ ಪ್ರಶ್ನೆ

    ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ನಾಯಕ ಅಲ್ಲ. ಬದಲಿಗೆ ಜಾತ್ಯಾತೀತವಾಗಿ ಎಲ್ಲ ಸಮುದಾಯಗಳಿಗೂ ಅನುದಾನ ನೀಡಿದ್ದಾರೆ. ಆದರೆ ಕುಮಾರಸ್ವಾಮಿ ಅವರನ್ನು ಜಿಲ್ಲೆಯ ಜನ ನಿಮ್ಮನ್ನು ಪ್ರೀತಿಸಿದ್ದಾರೆ. ಸಿಎಂ ಆಗಲು ಹೆಚ್ಚು ಸ್ಥಾನ ಗೆಲ್ಲಿಸಿದ್ದರು. 2 ಬಾರಿ ಮುಖ್ಯಮಂತ್ರಿಯಾದರೂ ಜಿಲ್ಲೆಗೆ ಏನು ಕೊಟ್ಟಿದ್ದೀರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಪ್ರಶ್ನಿಸಿದರು.
    ನಗರದ ಕುರುಬ ಸಮುದಾಯ ಭವನದಲ್ಲಿ ಸಮುದಾಯದ ಮುಖಂಡರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, 77 ವರ್ಷದ ನಂತರ ಜಿಲ್ಲೆಗೆ ಸವಾಲು ಎದುರಾಗಿದೆ. ಸಮರ್ಥವಾಗಿ ಸವಾಲು ಎದುರಿಸುವ ಶಕ್ತಿ ಮಂಡ್ಯ ಜನರಿಗೆ ಇದೆ. ಇದು ಹಲವು ಬಾರಿ ನಿರೂಪಣೆ ಆಗಿದೆ. ಘಟಾನುಘಟಿಗಳನ್ನ ಸೋಲಿಸುವುದು, ಗೆಲ್ಲಿಸುವುದು ಜಿಲ್ಲೆಯ ಜನರಿಗೆ ಹೊಸದಲ್ಲ. ಸ್ವಾಭಿಮಾನ ವಿಚಾರ ಬಂದಾಗ ಹಣ, ದೊಡ್ಡಸ್ತಿಕೆಯನ್ನು ಮಂಡ್ಯ ಜನ ನೋಡಲ್ಲ. ಬದಲಿಗೆ ನಿರ್ದಾಕ್ಷಿಣ್ಯವಾಗಿ ನಿರ್ಧಾರ ಮಾಡುತ್ತಾರೆ ಎಂದರು.
    ಗ್ಯಾರಂಟಿ ಯೋಜನೆ ಪ್ರಪಂಚದಲ್ಲೇ ಮೊದಲು. ಆದರೆ ಇಂತಹ ಗ್ಯಾರಂಟಿ ಯೋಜನೆ ವಿರೋಧಿಸುವವರು ಬಿಜೆಪಿ ಮತ್ತು ಜೆಡಿಎಸ್. ಇವುಗಳನ್ನು ನಿಲ್ಲಿಸಿ ಎನ್ನುವ ಬಿಜೆಪಿ ಮತ್ತು ಜೆಡಿಎಸ್‌ಗೆ ಮತ ಹಾಕಬೇಕಾ?. ಯೋಜನೆ ನಿಲ್ಲಿಸಲು ಸುಪ್ರೀಂ ಕೋರ್ಟ್ ಮುಂದೆ ಹೋಗಿದ್ದಾರೆ. ಬಡವರ ಕಾರ್ಯಕ್ರಮ ನಿಲ್ಲಿಸಿ ಎನ್ನುವವರಿಗೆ ನಾಚಿಕೆ ಆಗಬೇಕು ಎಂದು ವಾಗ್ದಾಳಿ ನಡೆಸಿದ ಸಚಿವ ಚಲುವರಾಯಸ್ವಾಮಿ, ಕುಮಾರಸ್ವಾಮಿ ಅವರೇ ಜಿಲ್ಲೆಗೆ ಹೊಸ ಸಕ್ಕರೆ ಕಾರ್ಖಾನೆ ಅಥವಾ ಕೃಷಿ ವಿವಿ ಮಾಡಿದ್ದಾರಾ?. ಸಮರ್ಥ ನಾಯಕರಿಲ್ಲವೆಂದು ಮಂಡ್ಯಕ್ಕೆ ಬಂದಿದ್ದೀನಿ ಎಂದು ಕುಮಾರಸ್ವಾಮಿ ಹೇಳುತ್ತಾರೆ. ಹಾಗಿದ್ದರೆ ಪಕ್ಷ ಕಟ್ಟುವ ಶಕ್ತಿ ಮಂಡ್ಯ ಜೆಡಿಎಸ್ ನಾಯಕರಿಗೆ ಇಲ್ವಾ?. ಜನ ಯಾವ ಕಾರಣಕ್ಕಾಗಿ ನಿಮಗೆ ಮತ ನೀಡಬೇಕು ಎಂದು ಪ್ರಶ್ನಿಸಿದರು.
    ಕ್ಷೇತ್ರದ ಜನರು ಯೋಚನೆ ಮಾಡಿ ಮತ ಚಲಾಯಿಸಬೇಕು. ನೀವೆ ಅಭ್ಯರ್ಥಿ ಎನ್ನುವ ರೀತಿ ಕೆಲಸ ಮಾಡಿ. ಕೇಂದ್ರ ಬಿಜೆಪಿ ಸರ್ಕಾರ ವಿರುದ್ಧದ ತೀರ್ಮಾನ ತೆಗೆದುಕೊಳ್ಳಿ. ಕುಮಾರಸ್ವಾಮಿಗೆ ನನ್ನ ವೈಯಕ್ತಿಕ ವಿರೋಧ ಅಲ್ಲ. ನಮಗಾಗಿರುವ ಅನ್ಯಾಯ, ಸಮಸ್ಯೆ ವಿರುದ್ಧ ನಮ್ಮ ಹೋರಾಟ. ಅಂಬರೀಷ್ ಅವರನ್ನು ಕೇಂದ್ರ, ರಾಜ್ಯದಲ್ಲಿ ಮಂತ್ರಿ ಮಾಡಿದ್ದು ಜೆಡಿಎಸ್ ಅಲ್ಲ ಕಾಂಗ್ರೆಸ್. ಮುಂದಿನ ಸರದಿ ಡಿ.ಕೆ.ಶಿವಕುಮಾರ್ ಅವರಿಗೂ ಇದೆ. ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಒಕ್ಕಲಿಗರಿಗೆ ಅವಕಾಶ ಇದ್ಯಾ?. ಪ್ರಜ್ವಲ್, ಕುಮಾರಸ್ವಾಮಿ, ಡಾ.ಮಂಜುನಾಥ್ ಎಲ್ಲದರೂ ಒಂದೇ ಕುಟುಂಬದವರು. ಬಿಜೆಪಿಯಲ್ಲಿ ಡಾ.ಸುಧಾಕರ್, ಶೋಭಾ ಕರಂದ್ಲಾಜೆ ಬಿಟ್ಟರೆ ಬೇರೆ ಯಾವ ಒಕ್ಕಲಿಗರಿಗೆ ಅವಕಾಶ ಸಿಕ್ಕಿದೆ. ಸಮುದಾಯ ನಮ್ಮ ಪರ ಇದ್ದಾರೆ ಎಂದರು.
    ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಸ್ಟಾರ್ ಚಂದ್ರು ಮೇಲೆ ಒಂದೇ ಒಂದು ಕಳಂಕ ಇಲ್ಲ. ಇವರು ನಮ್ಮ ಮಂಡ್ಯ ಜಿಲ್ಲೆಯವರು. ಎಚ್‌ಡಿಕೆ ಒಂದೊಂದು ಚುನಾವಣೆಯಲ್ಲಿ ಒಂದೊಂದು ಮಾತುಗಳನ್ನಾಡುತ್ತಾರೆ. ನಮ್ಮ ಕೈ ನಾಯಕರ ಬಗ್ಗೆ ನಿಷ್ಕೃಷ್ಟ ಮಾತುಗಳನ್ನಾಡುತ್ತಾರೆ. ಮಂಡ್ಯಕ್ಕೆ ನಿಮ್ಮ ಆಡಳಿತದ ಅವಧಿಯಲ್ಲಿ ಏನು ಮಾಡಿದ್ದೀರಿ. ಒಂದು ರಸ್ತೆ ಅಭಿವೃದ್ದಿ ಮಾಡುವುದಕ್ಕೂ ಆಗಲಿಲ್ಲ. ನಾಲೆ ಆಧುನೀಕರಣ ಮಾಡಲಿಲ್ಲ. ಮಾತೆತ್ತಿದ್ದರೇ ಒಕ್ಕಲಿಗ ಸಮುದಾಯವರು ಅಂತೀರಾ?. ಒಕ್ಕಲಿಗ ಸಮುದಾಯ ನನ್ನ ಪರ ನಿಲ್ಲಿ ಎಂದು ಕೇಳುತ್ತೀರಿ. ಎಷ್ಟು ಜನ ಒಕ್ಕಲಿಗ ನಾಯಕರನ್ನ ಬೆಳೆಸಿದ್ದೀರಾ ನೆನಪು ಮಾಡಿಕೊಳ್ಳಿ ಎಂದು ಟೀಕಿಸಿದರು.
    ಎಸ್.ಎಂ.ಕೃಷ್ಣ ಅವರು ಎರಡನೇ ಬಾರಿ ಸಿಎಂ ಆಗುವುದನ್ನು ತಪ್ಪಿಸಿದ್ದಿರಿ. ನಿಮ್ಮನ್ನ ಸಿಎಂ ಮಾಡಿದ್ದ ಚಲುವರಾಯಸ್ವಾಮಿ, ಬಾಲಕೃಷ್ಣರನ್ನ ಇವತ್ತು ತೆಗಳುತ್ತಿದ್ದೀರಾ. ಸ್ಟಾರ್ ಚಂದ್ರು ತನಗೆ ಸಾಟಿಯೆ ಎನ್ನುತ್ತೀರಿಲ್ಲ. ಮಂಡ್ಯದ ಮಣ್ಣಿನ ಗುಣ, ಮಂಡ್ಯದ ಸ್ವಾಭಿಮಾನವೇ ಉತ್ತರ. ಈ ಬಾರಿ ಮಂಡ್ಯದ ಹೃದಯ, ಮಂಡ್ಯದ ಸೊಗಡು ಮಾತನಾಡಬೇಕು. ನಮ್ಮ ಸ್ವಾಭಿಮಾನದ ಪ್ರತಿನಿಧಿ ಸ್ಟಾರ್ ಚಂದ್ರು ಸಂಸತ್‌ಗೆ ಹೋಗಲಿ ಎಂದರು.
    ಅಭ್ಯರ್ಥಿ ಸ್ಟಾರ್ ಚಂದ್ರು, ಶಾಸಕ ರವಿಕುಮಾರ್ ಗಣಿಗ, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಕೆಪಿಸಿಸಿ ಕಾರ್ಯದರ್ಶಿ ದಡದಪುರ ಶಿವಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ, ಕಾರ್ಯಾಧ್ಯಕ್ಷ ಚಿದಂಬರ್, ಕುರುಬರ ಸಂಘದ ಜಿಲ್ಲಾಧ್ಯಕ್ಷ ಸುರೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts