More

    ಕುಡಿವ ನೀರಿನ ಸಮಸ್ಯೆ ಉಲ್ಬಣ

    ಚಳ್ಳಕೆರೆ: ಕರೊನಾ ಪಾಸಿಟಿವ್ ಕಾರಣಕ್ಕೆ ಸೀಲ್‌ಡೌನ್ ಮಾಡಿರುವ ತಾಲೂಕಿನ ಕೋಡಿಹಳ್ಳಿ ಮತ್ತು ಚಿಕ್ಕಹಳ್ಳಿ ಗ್ರಾಮದ ಜನರ ಮೂಲ ಸೌಕರ್ಯಗಳ ಕೊರತೆಯಿಂದ ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸೀಲ್‌ಡೌನ್ ಮಾಡಿ 12 ದಿನ ಕಳೆದಿದೆ. ಕೋಡಿಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ತಾಲೂಕು ಪಂಚಾಯಿತಿ ವತಿಯಿಂದ ಬೋರ್ ಕೊರೆಸುವ ಭರವಸೆ ನೀಡಲಾಗಿತ್ತು. ಅದು ಇನ್ನೂ ಈಡೇರಿಸಿಲ್ಲ.

    ಬೇರೆ ಊರುಗಳಿಂದ ನೀರು ಸರಬರಾಜು ಮಾಡಲು ಜನ ನಿರಾಕರಣೆ ಮಾಡುತ್ತಾರೆ. ಸ್ಥಳೀಯ ಪಂಚಾಯಿತಿ ವತಿಯಿಂದ ಟ್ಯಾಂಕರ್ ಮೂಲಕ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಮೂರು ದಿನಕ್ಕೊಮ್ಮೆ ಒಂದು ಮನೆಗೆ ಒಂದು ಡ್ರಮ್ (100 ಲೀಟರ್) ನೀರು ಕೊಡಲಾಗುತ್ತಿದೆ.

    ಇದರಿಂದ ದಿನನಿತ್ಯದ ಕೆಲಸಕ್ಕೆ ಸಾಕಾಗುತ್ತಿಲ್ಲ. ಪ್ರತಿದಿನ ಒಂದು ಡ್ರಮ್ ನೀರಿನ ವ್ಯವಸ್ಥೆಗೆ ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

    ಗ್ರಾಮದ ಕೂಲಿ ಕಾರ್ಮಿಕರಿಗೆ ಹೊರಗಡೆ ಹೋಗಲು ಅವಕಾಶ ಕೊಡುತ್ತಿಲ್ಲ. ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಜೀವನ ಕಷ್ಟವಾಗಿದೆ. ಖಾತ್ರಿ ಯೋಜನೆಯಲ್ಲಿ ಕೆಲಸ ನೀಡುತ್ತಿಲ್ಲ ಎಂದಿದ್ದಾರೆ.

    ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಿಂದ ಬಡಕುಟುಂಬಗಳ ಸರ್ವೇ ಮಾಡಿಸಿ ಆಹಾರ ಕಿಟ್ ವಿತರಣೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಯಾವ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರಾದ ಸೋಮಶೇಖರ್, ವಿನಯ್‌ಕುಮಾರ್, ಮಂಜುನಾಥ, ಗುರುಮೂರ್ತಿ, ಅಂಜಿನಪ್ಪ, ಬಾಲಣ್ಣ, ಶ್ರೀಕಾಂತ್ ದೂರಿದ್ದಾರೆ.

    ಸಾವಿರ ಅಡಿ ವರೆಗೆ ಕೊಳವೆಬಾವಿ ಕೊರೆಯಿಸಿದರೂ ನೀರು ಲಭ್ಯವಾಗಿಲ್ಲ. ಆದ್ದರಿಂದ ಪ್ರತಿದಿನ ಐದು ಟ್ಯಾಂಕರ್ ಮೂಲಕ ನೀರು ಪೂರೈಸಲು ಸ್ಥಳೀಯ ಆಡಳಿತಕ್ಕೆ ಸೂಚಿಸಲಾಗಿತ್ತು. ನಿರ್ವಹಣೆ ಕುರಿತು ಪರಿಶೀಲನೆ ನಡೆಸಲಾಗುವುದು. ಮತ್ತೆ ಕೊಳವೆಬಾವಿ ಕೊರೆಯಿಸಲು ಕ್ರಮ ಕೈಗೊಳ್ಳಲಾಗುವುದು.
    ಎಂ.ಮಲ್ಲಿಕಾರ್ಜುನ್ ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts