More

    ಖಾತ್ರಿ ಯೋಜನೆ ನೀಡಲಿದೆ ಬದುಕು

    ಚಳ್ಳಕೆರೆ: ಗ್ರಾಮೀಣರು ಉದ್ಯೋಗ ಖಾತ್ರಿ ಯೋಜನೆಯ ಸದುಪಯೋಗ ಪಡೆದು ಉತ್ತಮ ಬದುಕು ಕಟ್ಟಿಕೊಳ್ಳಬೇಕೆಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಜೆ.ಎಸ್.ಮುತ್ತುರಾಜ್ ಹೇಳಿದರು.

    ತಾಲೂಕಿನ ಪಗಡಲಬಂಡೆ ಪಂಚಾಯಿತಿ ವ್ಯಾಪ್ತಿಯ ಕೊರ‌್ಲಕುಂಟೆ ಕೆರೆಗೆ ನೀರು ಹರಿದು ಬರುವ ಹಳ್ಳದ ದಂಡೆಯ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದರು.

    ಲಾಕ್‌ಡೌನ್‌ನಿಂದ ದುಡಿವ ಕೈಗಳಿಗೆ ಕೆಲಸವಿಲ್ಲದೆ ಜೀವನ ನಿರ್ವಹಣೆ ಕಷ್ಟವಾಗಿದೆ. ದಿನಗೂಲಿ ಮಾಡುವವರ ಬದುಕಿನ ಆಶ್ರಯಕ್ಕೆ ಪಂಚಾಯಿತಿ ಹಂತದಲ್ಲಿ ಖಾತ್ರಿ ಯೋಜನೆಯಡಿ ಸ್ಥಳೀಯವಾಗಿ ಉದ್ಯೋಗ ನೀಡಲಾಗುತ್ತಿದೆ.

    ಪ್ರತಿ ಕಾರ್ಮಿಕನಿಗೆ ದಿನಕ್ಕೆ 274 ರೂ. ನಂತೆ ಕೂಲಿ ನೀಡಲಾಗುವುದು. ದೈಹಿಕ ಅಂತರ ಕಾಪಾಡಿಕೊಂಡು ನಿಗದಿತ ಕೆಲಸ ಮಾಡಬೇಕು. ಹಳ್ಳದ ಅಭಿವೃದ್ಧಿ ಕಾರ್ಯಕ್ಕೆ 10 ಜನರ ಒಂದು ಗುಂಪಿಗೆ 12 ಅಡಿ ಉದ್ದ, 6 ಅಡಿ ಅಗಲದಂತೆ 2 ಅಡಿ ಆಳದ ಗುಂಡಿ ತೋಡುವ ಕೆಲಸ ವಹಿಸಲಾಗಿದೆ. ನಿಗದಿತ ಕೆಲಸ ಮುಗಿಸಿ ಮನೆಗೆ ಹೋಗಬಹುದು ಎಂದರು.

    7 ದಿನಕ್ಕೊಮ್ಮೆ ಕಾರ್ಮಿಕರ ಬ್ಯಾಂಕ್ ಖಾತೆಗೆ ಕೂಲಿ ಹಣವನ್ನು ಜಮೆ ಮಾಡಲಾಗುವುದು. ಪಂಚಾಯಿತಿ ವ್ಯಾಪ್ತಿಯ ಹರವಿಗೊಂಡನಹಳ್ಳಿ ಕೆರೆಯಲ್ಲಿ ಕಳೆದ ವರ್ಷ ಸಾಮೂಹಿಕ ನಿರ್ವಹಣೆ ಅಡಿ ಅಭಿವೃದ್ಧಿ ಮಾಡಲಾಗಿದೆ. ಈಗ ಕೊರ‌್ಲಕುಂಟೆ ಮತ್ತು ಪಗಡಲಬಂಡೆ ಗ್ರಾಮದ ಕೆರೆ ಅಭಿವೃದ್ಧಿ ಕಾರ್ಯ ಆರಂಭಿಸಲಾಗಿದೆ. ಸಮೀಪದ ಹಳ್ಳಿಗಳ ಕೂಲಿ ಕಾರ್ಮಿಕರು ಈ ಯೋಜನೆ ಸದುಪಯೋಗ ಪಡಿಸಿಕೊಳ್ಳುವ ಜಾಣ್ಮೆ ಪ್ರದರ್ಶಿಸಬೇಕು ಎಂದು ಕಿವಿಮಾತು ಹೇಳಿದರು.

    ಇಂಜಿನಿಯರ್ ಮಲ್ಲಿಕಾರ್ಜುನ್, ಪಂಚಾಯಿತಿ ಸಿಬ್ಬಂದಿ ಟಿ.ದೇವರಾಜ್, ಗ್ರಾಮಸ್ಥರಾದ ವಿ.ವೀರೇಂದ್ರ, ಕೆ.ಎಂ.ಹರೀಶ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts