More

    ಎರಡೂವರೆ ಗಂಟೆ ವಿಳಂಬವಾಯ್ತು ಪ್ರಗತಿ ಪರಿಶೀಲನಾ ಸಭೆ

    ಚಳ್ಳಕೆರೆ: ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಬೆಳಗ್ಗೆ 10.30 ಕ್ಕೆ ನಿಗದಿಯಾದ ಪ್ರಗತಿ ಪರಿಶೀಲನಾ ಸಭೆ ಎರಡೂವರೆ ಗಂಟೆ ತಡವಾಗಿ ಶುರುವಾಯಿತು.

    ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅಧ್ಯಕ್ಷತೆಯಲ್ಲಿ ಸಭೆ ನಡೆಯಬೇಕಿತ್ತು. ಅಧಿಕಾರಿಗಳು ಬೆಳಗ್ಗೆಯಿಂದಲೇ ಸಚಿವರಿಗಾಗಿ ಕಾದು ಕುಳಿತಿದ್ದರು. ಈ ಹಿಂದೆ ಎರಡು ಬಾರಿ ನಿಗದಿಯಾಗಿದ್ದ ಸಭೆ ದಿಢೀರ್ ರದ್ದಾಗಿತ್ತು. ಹೀಗಾಗಿ ಈ ಸಭೆಯೂ ನಡೆಯುವ ಬಗ್ಗೆ ಅಧಿಕಾರಿಗಳು ಅನುಮಾನದಲ್ಲಿದ್ದರು.

    ಆದರೆ, ಸಚಿವರು ಚಳ್ಳಕೆರೆ ಮಾರ್ಗವಾಗಿ ಕಾಲುವೇಹಳ್ಳಿ ಜಾತ್ರೆಗೆ ಹೋದ ವಿಷಯ ತಿಳಿದ ನಂತರ ಅಧಿಕಾರಿಗಳು ಕಚೇರಿಗೆ ಹೋಗದೆ ತಾಲೂಕು ಪಂಚಾಯಿತಿಯಲ್ಲೇ ಉಳಿದುಕೊಂಡರು. ಮಧ್ಯಾಹ್ನ 1 ಗಂಟೆ ಹೊತ್ತಿಗೆ ಸಭೆ ಶುರುವಾಯಿತು.

    ವಿವಿಧ ಇಲಾಖೆ ಅನುದಾನಗಳಡಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಪೂರ್ಣ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಾಪಂ ಇಒ ಶ್ರೀಧರ್ ಬಾರಿಕರ್ ಅವರಿಗೆ ಸೂಚಿಸಿದರು.

    ಮಂಜೂರಾದ 28 ಕಾಮಗಾರಿಗಳ ನಿರ್ವಹಣೆ ವಿಳಂಬ ಕುರಿತು ಜಿಪಂ ಉಪವಿಭಾಗದ ಎಇಇ ಬಸವರಾಜ್, ಇಂಜಿನಿಯರ್ ಪ್ರಕಾಶ್ ಮಾಹಿತಿ ನೀಡುವಾಗ ಸಚಿವರು ಕೆಂಡಾಮಂಡಲರಾದರು.

    ಫೆಬ್ರವರಿ ತಿಂಗಳೊಳಗೆ ಬಾಕಿ ಕೆಲಸ ಪೂರೈಸಿಕೊಡುತ್ತೇವೆ. ಉಳಿದ ಕಾಮಗಾರಿಗಳ ಟೆಂಡರ್ ಆರಂಭಿಸಿ ನಿಯೋಜನೆಯಾಗಿರುವ ಅನುದಾನ ಸದ್ಬಳಕೆ ಮಾಡುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದರು.

    ನಾಯಕನಹಟ್ಟಿ ಮತ್ತು ತಳಕು ಭಾಗದ ಬಹಳಷ್ಟು ರೈತರಿಗೆ ಬೆಳೆವಿಮೆ ಸಂದಾಯವಾಗಿಲ್ಲ ಎಂಬ ದೂರುಗಳ ಬಗ್ಗೆ ಚರ್ಚೆಯಾಯಿತು. ಕಂದಾಯ ಇಲಾಖೆ ವರದಿ ನೀಡುವಲ್ಲಿ ಲೋಪ ಮಾಡಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮೋಹನ್‌ಕುಮಾರ್ ಸಮಜಾಯಿಷಿ ನೀಡಿದರು.

    ಸ್ಥಳದಲ್ಲಿದ್ದ ತಹಸೀಲ್ದಾರ್ ಎಂ. ಮಲ್ಲಿಕಾರ್ಜುನ, ಗ್ರಾಮ ಲೆಕ್ಕಾಧಿಕಾರಿ ಮತ್ತು ಸಹಾಯಕರು ಜಿಪಿಎಸ್ ಮಾಡುವಾಗ ಕೃಷಿಯೇತರ ಭೂಮಿ ಎಂದು ನಮೂದಿಸಿದ್ದರಿಂದ ರೈತರಿಗೆ ತೊಂದರೆ ಆಗಿದೆ. ಈಗಾಗಲೇ ಕೆಲ ದಾಖಲೆ ಸರಿಪಡಿಸಿ ಕೃಷಿ ಇಲಾಖೆಗೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

    ಕುಡಿವ ನೀರು ಸರಬರಾಜು ನಿರ್ವಹಣೆ ಇಂಜಿನಿಯರ್ಸ್ ಕಿರಣ್ ಹಾಗೂ ಕಾವ್ಯ ಮಾತನಾಡಿ, ಗಿಡ್ಡಾಪುರ, ಹೊನ್ನೂರು ಮತ್ತು ಓಬಳಾಪುರ ಭಾಗದಲ್ಲಿ ಆರ್‌ಒ ಪ್ಲಾಂಟ್ ಕಾಮಗಾರಿಗಳಿಗೆ ಅರಣ್ಯ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಜಾಗದಲ್ಲಿ ಪೈಪ್‌ಲೈನ್ ಅಳವಡಿಕೆಗೆ ತೊಂದರೆಯಾಗುತ್ತಿದೆ ಎಂದರು.

    ಸಭೆಯಲ್ಲಿ ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ, ಉಪಾಧ್ಯಕ್ಷೆ ತಿಪ್ಪಮ್ಮ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts