More

    ಬಸ್ಸೇ ಕಾಣದ ಬಾಲೇನಹಳ್ಳಿ

    ಕೊರ‌್ಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ: ಚಳ್ಳಕೆರೆ ಕೇಂದ್ರದಿಂದ 12 ಕಿಮೀ ದೂರದಲ್ಲಿರುವ ಬಾಲೇನಹಳ್ಳಿ ಐತಿಹಾಸಿಕ ಹಿನ್ನೆಲೆಯ ಊರು. 1500 ಜನಸಂಖ್ಯೆ ಹೊಂದಿರುವ ಗ್ರಾಮ. ಚಿತ್ರದುರ್ಗ-ಚಳ್ಳಕೆರೆ ರಾಜ್ಯ ಹೆದ್ದಾರಿ ಮಾರ್ಗದಲ್ಲಿದೆ.

    ಮುಖ್ಯರಸ್ತೆಯಿಂದ 1.6 ಕಿಮೀ ದೂರದಲ್ಲಿರುವ ಈ ಗ್ರಾಮ ಇಲ್ಲಿಯವರೆಗೂ ಬಸ್ಸನ್ನೇ ಕಂಡಿಲ್ಲ ಎಂಬುದು ಅಚ್ಚರಿ. ಇನ್ನೂ ಅನೈರ್ಮಲ್ಯದಿಂದ ರೋಗಗಳು ಜನರನ್ನು ಕಾಡುತ್ತಲೇ ಇರುತ್ತವೆ.

    ಇಲ್ಲಿನ ಬಹುತೇಕ ಜನ ಕೃಷಿಯನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ವಾಣಿಜ್ಯ ಬೆಳೆಗಳಾಗಿ ಕಡಲೆ, ಸೂರ್ಯಕಾಂತಿ, ಮೆಕ್ಕೆಜೋಳ, ಈರುಳ್ಳಿ, ಟೊಮೋಟೋ, ಹತ್ತಿ, ತೊಗರಿ ಬೆಳೆಯಲಾಗುತ್ತಿದೆ. ಹಿಂಗಾರು ಮಳೆ ಆಧಾರಿತ ಕೃಷಿ ಬೆಳೆಗಳಾಗಿರುವ ಕಾರಣ ಸಾಕಷ್ಟು ನಷ್ಟ ಅನುಭವಿಸುಲೇ ಇದ್ದಾರೆ ಇಲ್ಲಿನ ರೈತರು.

    ಸಮಸ್ಯೆ: ಗ್ರಾಮದಿಂದ ಪಟ್ಟಣದ ಕಡೆ ಹೋಗಿರುವ 40 ಕುಟುಂಬಗಳ ಮೂಲ ಮನೆಗಳು ಪಾಳುಬಿದ್ದಿವೆ. ಈ ಜಾಗದಲ್ಲಿ ಬೆಳೆದಿರುವ ಜಾಲಿ ಪೊದೆಗಳಿಂದ ಅನೈರ್ಮಲ್ಯ ತಾಂಡವವಾಡುತ್ತಿದೆ. ಸೊಳ್ಳೆ, ನಾಯಿ, ಕಾಡು ಪ್ರಾಣಿಗಳ ವಾಸಿಸುತ್ತಿವೆ. ಗ್ರಾಮ ಸಮೀಪದ ಅರಣ್ಯದಲ್ಲಿ ಈಚೆಗೆ ಕಾಣಿಸಿಕೊಂಡ ಚಿರತೆ ಗ್ರಾಮದ ಈ ಪೊದೆಗಳಲ್ಲೂ ಸೇರಿಕೊಂಡಿದ್ದು, ಜನರು ಭೀತಿಗೆ ಸಿಲುಕಿದ್ದಾರೆ. ಇನ್ನೂ ಅಸ್ವಚ್ಛತೆ ಕಾರಣಕ್ಕೆ ರೋಗಗಳು ಗ್ರಾಮಸ್ಥರನ್ನು ಕಾಡುತ್ತಲೇ ಇರುತ್ತವೆ.

    ಆಚರಣೆ: ಆಂಜನೇಯಸ್ವಾಮಿ, ಪೋಲೇರಮ್ಮ, ಮಾರಮ್ಮ, ದುರುಗಮ್ಮ, ಕೊಲ್ಲಾಪುರದಮ್ಮ ದೇವರುಗಳಿರುವ ಊರಲ್ಲಿ ಲೋಕಾನೂರೂಢಿ ಹಬ್ಬಗಳ ಜತೆಗೆ, ಜನವರಿ ತಿಂಗಳಲ್ಲಿ ವಿಶೇಷವಾಗಿ ಶೂನ್ಯದ ಅಮಾವಾಸ್ಯೆ ಆಚರಣೆ ಮಾಡಲಾಗುತ್ತದೆ. ಈ ಸಮಯದಲ್ಲಿ ಜಮೀನಿನಲ್ಲಿರುವ ಬೆಳೆಗೆ ಮುಸುರೆ ಹಾಕಿ ಕೃಷಿ ಭೂಮಿಗೆ ಪೂಜೆ ಮಾಡಿಕೊಳ್ಳುವ ರೈತರು ಇದೊಂದು ರೈತರ ಹಬ್ಬದಂತೆ ಸಂಭ್ರಮಿಸಿ ಸಿಹಿ ಊಟ ಮಾಡಿ ಖುಷಿಪಡುತ್ತಾರೆ. ಹಾಗೆ 10 ವರ್ಷಕ್ಕೊಮ್ಮೆ ಗ್ರಾಮ ದೇವತೆ ದುರುಗಮ್ಮನ ಜಾತ್ರೆ ನಾಲ್ಕು ದಿನಗಳ ಕಾಲ ನಡೆಯಲಿದೆ.

    ಹಿನ್ನೆಲೆ: ಒಂದು ಊರಿನ ಪಲಮೇರಿ (ಎಲ್ಲೆ ಅಥವಾ ಗಡಿ) ಗುರುತಿಗೆ ಹಿನ್ನೆಲೆ ಇದ್ದಂತೆ ಯಾದವ ಕುಲದ ಬಾಲಮ್ಮ ಎಂಬ ಹೆಣ್ಣು ಮಗಳು ಸೂಜಿ ಮೊನೆಯಷ್ಟು ರಂಧ್ರ ಮಾಡಿದ ಹಾಲು ತುಂಬಿದ ಕುಂಭ ಹೊತ್ತು ಊರಿನ ಪಲಮೇರಿ ಸುತ್ತು ಹಾಕಿದ್ದಾಳೆ. ಹೆಣ್ಣು ಮಗಳು ಆದ ಕಾರಣ ಜೋರಾಗಿ ನಡೆಯಲಾಗದೆ ಗ್ರಾಮಕ್ಕೆ ಚಿಕ್ಕ ಪಲಮೇರಿ ಸಿಕ್ಕಂತಾಗಿದೆ ಎನ್ನುವ ಗ್ರಾಮಸ್ಥರು, ಪಲಮೇರಿ ತುಳಿದ ಮಹಿಳೆ ಬಾಲಮ್ಮ ಎಂಬಾಕೆಯಿಂದ ಬಾಲೇನಹಳ್ಳಿ ಎಂಬ ಹೆಸರು ಬಂದಿದೆ ಎನ್ನುತ್ತಾರೆ.

              ಊರಿನ ಪ್ರಮುಖ ಬೇಡಿಕೆಗಳು

    • ಗ್ರಾಮದ ಸಮೀಪದಲ್ಲಿ ಹರಿಯುತ್ತಿರುವ ಹಳ್ಳಕ್ಕೆ ಚೆಕ್‌ಡ್ಯಾಂ ನಿರ್ಮಾಣ
    • ಸ್ಮಶಾನಕ್ಕೆ ಜಾಗದ ಸಮಸ್ಯೆ ಪರಿಹರಿಸಬೇಕು
    • ಚರಂಡಿ, ರಸ್ತೆ, ಸರ್ಕಾರಿ ಶಾಲೆಗೆ ಕಾಂಪೌಂಡ್ ನಿರ್ಮಾಣ
    • ಗ್ರಾಮಠಾಣಾ ಜಾಗದಲ್ಲಿ ಕಲ್ಯಾಣ ಮಂಟಪ ನಿರ್ಮಿಸಬೇಕು
    • ಅಂಗನವಾಡಿ ಕೇಂದ್ರಕ್ಕೆ ನೂತನ ಕಟ್ಟಡ ಆಗಬೇಕು
    • ಕೃಷಿ ನಷ್ಟ ತಪ್ಪಿಸಲು ತರಬೇತಿ ಅಗತ್ಯ
    • ಹೊರವಲಯದಲ್ಲಿ 30 ಕುಟುಂಬಗಳಿಗೆ ನಿವೇಶನ ಹಕ್ಕುಪತ್ರ ವಿತರಣೆ ಆಗಬೇಕು

    ಗ್ರಾಮದಲ್ಲಿನ ಪಾಳು ಬಿದ್ದ ಮನೆ, ಖಾಲಿ ನಿವೇಶನದಲ್ಲಿ ಸ್ವಚ್ಛತೆ ಕಾಪಾಡಲು ಸಂಬಂಧಿಸಿದವರಿಗೆ ಗ್ರಾಪಂ ವತಿಯಿಂದ ನೋಟೀಸ್ ನೀಡಲಾಗಿತ್ತು. ಆದರೆ, ಮಾಲೀಕರಿಂದ ಉತ್ತರ ಬಂದಿಲ್ಲ. ಈಗ ಲಾಯರ್ ಮೂಲಕ ನೋಟೀಸ್ ಜಾರಿ ಮಾಡಲಾಗುವುದು. ಬಳಿಕ ಪಂಚಾಯಿತಿ ವತಿಯಿಂದ ಸ್ವಚ್ಛತೆ ಕಾರ್ಯ ನಡೆಸಿ, ಮಾಲೀಕರಿಗೆ ದುಪ್ಪಟ್ಟು ದಂಡ ವಿಧಿಸಲಾಗುತ್ತದೆ.
    ಒ.ಟಿ.ರಾಜೇಶ್, ಗ್ರಾಪಂ ಸದಸ್ಯ

    ಗ್ರಾಮ ಪಂಚಾಯಿತಿ ನಿರ್ಲಕ್ಷ್ಯದಿಂದ ಸ್ವಚ್ಛತೆ ಕಣ್ಮರೆ ಆಗಿದೆ. ಜೆಜೆಎಂ ಯೋಜನೆಯಡಿ ಪೈಪ್‌ಲೈನ್ ಮಾಡುವ ನೆಪದಲ್ಲಿ ಸಿಸಿ ರಸ್ತೆಗಳನ್ನು ಅಗೆದು ಹಾಳು ಮಾಡಲಾಗಿದೆ.
    ಒ.ಟಿ.ತಿಪ್ಪೇಸ್ವಾಮಿ, ರೈತ ಮುಖಂಡ

    ಆಟೋ, ಬೈಕ್ ಇತರೆ ವಾಹನಗಳನ್ನು ಪ್ರಯಾಣಕ್ಕೆ ಊರಿನ ಜನ ಅವಲಂಭಿಸಿದ್ದಾರೆ. ಇದುವರೆಗೂ ಗ್ರಾಮಕ್ಕೆ ಬಸ್ ಸೌಕರ್ಯ ಕಲ್ಪಿಸಿಲ್ಲ. ಬೆಳಗೆರೆ ಮಾರ್ಗವಾಗಿ ಸಾಣೀಕೆರೆ, ಗಂಜಿಗುಂಟೆ, ಹಿರೇಮಧುರೆಯಿಂದ ಬಾಲೇನಹಳ್ಳಿ ಗ್ರಾಮಕ್ಕೆ ಬಂದು ಚಿತ್ರದುರ್ಗಕ್ಕೆ ಬಸ್ ಸಂಚರಿಸುವ ವ್ಯವಸ್ಥೆ ಮಾಡಬೇಕು. ಇದರಿಂದ ವೃದ್ಧಯರು, ವಿದ್ಯಾರ್ಥಿಗಳು, ಶ್ರಮಿಕ ವರ್ಗಕ್ಕೆ ಅನುಕೂಲ ಆಗಲಿದೆ.

    ಪಿ.ಟಿ.ಪ್ರಶಾಂತ್‌ಕುಮಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts